ವಿಶ್ವಬ್ಯಾಂಕ್ ನೆರವಿನೊಂದಿಗೆ 150 ಕೋಟಿ ರೂ. ವೆಚ್ಚದಲ್ಲಿ 500 ಕೆರೆಗಳ ಪುನಶ್ಚೇತನ
x

ವಿಶ್ವಬ್ಯಾಂಕ್ ನೆರವಿನೊಂದಿಗೆ 150 ಕೋಟಿ ರೂ. ವೆಚ್ಚದಲ್ಲಿ 500 ಕೆರೆಗಳ ಪುನಶ್ಚೇತನ

ಕೆರೆಗಳ ಪುನಶ್ಚೇತನ ಯೋಜನೆ ಕೇವಲ ದುರಸ್ತಿಗಷ್ಟೇ ಸೀಮಿತವಲ್ಲ, ಬದಲಾಗಿ ಕೆರೆಗಳನ್ನು ಮರುಜೀವಗೊಳಿಸುವ ಸಮಗ್ರ ಪ್ರಯತ್ನವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್‌ ಖಂಡ್ರೆ ಹೇಳಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರಗಾಲದ ಹಿನ್ನೆಲೆಯಲ್ಲಿ, ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವವನ್ನು ನೀಗಿಸಲು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ವಿಶ್ವಬ್ಯಾಂಕ್‌ನ ಆರ್ಥಿಕ ನೆರವಿನೊಂದಿಗೆ ರಾಜ್ಯದ 7 ಜಿಲ್ಲೆಗಳಲ್ಲಿ 500 ಕೆರೆಗಳನ್ನು ಪುನಶ್ಚೇತನಗೊಳಿಸಲು 150 ಕೋಟಿ ರೂಪಾಯಿಗಳ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದ್ದು, ಕೂಡಲೇ ಕಾಮಗಾರಿ ಆರಂಭಿಸುವಂತೆ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಚಿವ ಈಶ್ವರ ಖಂಡ್ರೆ, ಯೋಜನೆಯ ಅನುಷ್ಠಾನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಈ 500 ಕೆರೆಗಳನ್ನು ವಿಶ್ವಬ್ಯಾಂಕ್‌ನ ಆರ್ಥಿಕ ಸಹಯೋಗದೊಂದಿಗೆ ಹಾಗೂ ವಿವಿಬಿ ರಾಮ್‌ಜಿ ಸಂಸ್ಥೆಯ ತಾಂತ್ರಿಕ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾಗುವುದು. ತುಮಕೂರು - 96 ಕೆರೆಗಳು, ಚಿಕ್ಕಬಳ್ಳಾಪುರ - 90 ಕೆರೆಗಳು, ಕೋಲಾರ - 86 ಕೆರೆಗಳು, ಬೆಂಗಳೂರು ಗ್ರಾಮಾಂತರ - 68 ಕೆರೆಗಳು, ಬೆಂಗಳೂರು ನಗರ - 67 ಕೆರೆಗಳು, ಕಲಬುರಗಿ - 49 ಕೆರೆಗಳು, ಬೀದರ್ - 44 ಕೆರೆಗಳು ಇವೆ ಎಂದು ಹೇಳಿದರು.

ಕಾಮಗಾರಿಗಳ ಸ್ವರೂಪ

ಈ ಯೋಜನೆ ಕೇವಲ ದುರಸ್ತಿಗಷ್ಟೇ ಸೀಮಿತವಲ್ಲ, ಬದಲಾಗಿ ಕೆರೆಗಳನ್ನು ಮರುಜೀವಗೊಳಿಸುವ ಸಮಗ್ರ ಪ್ರಯತ್ನವಾಗಿದೆ. ವರ್ಷಗಳ ಕಾಲ ಕೆರೆಗಳಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಯುವ ಮೂಲಕ ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವುದು. ಕೆರೆಯ ಏರಿಗಳು ಭದ್ರವಾಗಿಲ್ಲದಿದ್ದರೆ ಅವುಗಳನ್ನು ದುರಸ್ತಿ ಮಾಡುವುದು ಮತ್ತು ಏರಿಯ ಎತ್ತರವನ್ನು ಹೆಚ್ಚಿಸುವುದು. ಕೆರೆಯ ಅಂಗಳವನ್ನು ಸುಂದರಗೊಳಿಸಿ, ಸ್ಥಳೀಯ ಪರಿಸರಕ್ಕೆ ಪೂರಕವಾದ ಸಸ್ಯಗಳನ್ನು ನೆಡುವುದು. ಕೆರೆಗೆ ನೀರು ಬರುವ ಹಾದಿಯಲ್ಲಿರುವ ಕಾಲುವೆಗಳನ್ನು ಸ್ವಚ್ಛಗೊಳಿಸಿ, ನೀರು ವ್ಯರ್ಥವಾಗದಂತೆ ಸುಗಮವಾಗಿ ಕೆರೆ ತಲುಪುವಂತೆ ಮಾಡುವುದಾಗಿದೆ. ಪ್ರಸ್ತುತ ಮಳೆಯಿಲ್ಲದೆ ಕೆರೆಗಳು ಸಂಪೂರ್ಣ ಬತ್ತಿರುವುದು ಕೆರೆಗಳ ಅಭಿವೃದ್ಧಿಗೆ ಸೂಕ್ತ ಸಮಯ. ಹೂಳು ತೆಗೆಯಲು ಮತ್ತು ಏರಿ ದುರಸ್ತಿಗೆ ಇದುವೇ ಸಕಾಲ. ಮುಂದಿನ ದಿನಗಳಲ್ಲಿ ಹಿಂಗಾರು ಮಳೆಯಾದರೆ ಈ ಕೆರೆಗಳು ಭರ್ತಿಯಾಗುತ್ತವೆ, ಇದರಿಂದ ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುವುದಿಲ್ಲ. ಅಲ್ಲದೆ, ಇದರಿಂದ ಭೂಮಿಯ ತೇವಾಂಶ ಹೆಚ್ಚಾಗಿ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕುಡಿಯುವ ನೀರಿನ ಪೂರೈಕೆಯಲ್ಲಿ ರಾಜಿಯಿಲ್ಲ

ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಶುದ್ಧತೆಯ ಬಗ್ಗೆಯೂ ಸಚಿವರು ಗಂಭೀರ ಎಚ್ಚರಿಕೆ ನೀಡಿದರು. "ಪ್ರತಿಯೊಂದು ಗ್ರಾಮದಲ್ಲೂ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸಿಇಒಗಳು ಮತ್ತು ಪಿಡಿಓಗಳ ಜವಾಬ್ದಾರಿ. ನಿಯಮಿತವಾಗಿ ನೀರಿನ ಪರೀಕ್ಷೆ ನಡೆಸಬೇಕು. ಒಂದು ವೇಳೆ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂದು ದೂರು ಬಂದರೆ, ಜಲಮೂಲದಿಂದ ಹಿಡಿದು ನಲ್ಲಿಯವರೆಗೆ ಪರಿಶೀಲನೆ ನಡೆಸಬೇಕು. ಕಲುಷಿತ ನೀರು ಸೇರದಂತೆ ತಡೆಗಟ್ಟಲು ಕಠಿಣ ಕ್ರಮ ಜರುಗಿಸಬೇಕು" ಎಂದು ಸೂಚನೆ ನೀಡಿದರು.

ಉದ್ಯೋಗ ಖಾತ್ರಿ ಯೋಜನೆ ಬಳಕೆ

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಸಚಿವರು ತಾಕೀತು ಮಾಡಿದರು. ಈಗ ವಸತಿ ಯೋಜನೆಗಳನ್ನೂ ಉದ್ಯೋಗ ಖಾತ್ರಿ ವ್ಯಾಪ್ತಿಗೆ ತಂದಿರುವುದರಿಂದ, ಕೆಲಸದ ದಿನಗಳ ಸೃಜನೆ ಹೆಚ್ಚಿಸಬೇಕು. ಮುಖ್ಯವಾಗಿ, ಬರಗಾಲದ ಪರಿಸ್ಥಿತಿಯಲ್ಲಿ ಜನರು ಉದ್ಯೋಗ ಅರಸಿ ಗುಳೆ ಹೋಗದಂತೆ ತಡೆಯಲು ಈ ಯೋಜನೆಗಳನ್ನು ಸಮರ್ಥವಾಗಿ ಬಳಸಬೇಕು. ಬೆಂಗಳೂರು, ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಮತ್ತು ಕೊಡಗಿನಂತಹ ಜಿಲ್ಲೆಗಳಲ್ಲಿ ಮಾನವ ದಿನಗಳ ಸೃಜನೆ ಕಡಿಮೆ ಇರುವುದನ್ನು ಸಚಿವರು ಗಮನಕ್ಕೆ ತಂದರು. ಉದ್ಯೋಗ ಖಾತ್ರಿ ಯೋಜನೆಯ ಯಶಸ್ಸು ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಕೂಲಿ ಹಣ ಸಿಗುವುದರ ಮೇಲೆ ಅವಲಂಬಿತವಾಗಿದೆ. ಕೆಲಸ ಮಾಡಿದ 15 ದಿನಗಳ ಒಳಗಾಗಿ ಕೂಲಿ ಹಣ ಕಾರ್ಮಿಕರ ಖಾತೆಗೆ ಜಮೆಯಾಗಬೇಕು. ಒಂದು ವೇಳೆ ತಿಂಗಳು ಕಳೆದರೂ ಹಣ ಸಿಗದಿದ್ದರೆ ಕಾರ್ಮಿಕರು ಕೆಲಸಕ್ಕೆ ಬರುವುದಿಲ್ಲ, ಆಗ ಯೋಜನೆಯ ಮೂಲ ಉದ್ದೇಶವೇ ವಿಫಲವಾಗುತ್ತದೆ. ಈ ಬಗ್ಗೆ ಸಿಇಒಗಳು ಖಜಾನೆ ಅಧಿಕಾರಿಗಳು ಮತ್ತು ಪಿಡಿಓಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ತಿಳಿಸಿದರು. ಸರ್ಕಾರದ ಯೋಜನೆಗಳು ಕಾಗದದ ಮೇಲಿರದೆ ಜನರ ಬದುಕಿನಲ್ಲಿ ಬದಲಾವಣೆ ತರಬೇಕು. ವಿಶೇಷವಾಗಿ ಬರ ಪರಿಸ್ಥಿತಿಯಲ್ಲಿ ನೀರಿನ ಸಮಸ್ಯೆ ಮತ್ತು ಉದ್ಯೋಗದ ಸಮಸ್ಯೆಗಳು ಉಲ್ಬಣವಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಪ್ರಮುಖ ಕರ್ತವ್ಯ ಎಂದರು.

Read More
Next Story