ಹೆಣ್ಣುಮಕ್ಕಳ ನಾಪತ್ತೆ ಪ್ರಕರಣ: ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆಗೆ ಒತ್ತಾಯ
x

ಹೆಣ್ಣುಮಕ್ಕಳ ನಾಪತ್ತೆ ಪ್ರಕರಣ: ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆಗೆ ಒತ್ತಾಯ

ಸ್ವೀಕಾರ ಕೇಂದ್ರಗಳಿಂದ ಸುಮಾರು 1776 ಹೆಣ್ಣುಮಕ್ಕಳು ನಾಪತ್ತೆಯಾಗಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ನೈಜ ಹೋರಾಟ ಹೋರಾಟಗಾರರ ವೇದಿಕೆಯು ಮುಖ್ಯಮಂತ್ರಿಗೆ ಪತ್ರ ಬರೆದಿದೆ.


Click the Play button to hear this message in audio format

ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸ್ವೀಕಾರ ಕೇಂದ್ರಗಳಿಂದ ಸುಮಾರು 1776 ಹೆಣ್ಣುಮಕ್ಕಳು ನಾಪತ್ತೆಯಾಗಿರುವ ಪ್ರಕರಣವು ಬೆಚ್ಚಿಬೀಳಿಸಿದೆ. ಅನಾಥರು, ಬಡವರು ಮತ್ತು ಸಂಕಷ್ಟದಲ್ಲಿರುವ ಮುಗ್ಧ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಬೇಕಿದ್ದ ಸರ್ಕಾರಿ ಕೇಂದ್ರಗಳೇ ಇದೀಗ ಅಕ್ರಮ ಮತ್ತು ಶೋಷಣೆಯ ಕೂಪಗಳಾಗಿ ಪರಿವರ್ತನೆಗೊಂಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಈ ಗಂಭೀರ ಪ್ರಕರಣದಲ್ಲಿ ಉನ್ನತ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆಯ ಹಿರಿಯ ಹೋರಾಟಗಾರ ಎಚ್.ಎಂ. ವೆಂಕಟೇಶ್ ಆಗ್ರಹಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಟ್‌ ಅವರಿಗೆ ಪತ್ರ ಬರೆದಿದ್ದಾರೆ. ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯು ಈ ಪ್ರಕರಣದ ಜಾಡನ್ನು ಹಿಡಿದು ನಡೆಸಿದ ಪರಿಶೀಲನೆಯಲ್ಲಿ ಆತಂಕಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಸರ್ಕಾರದ ಸ್ವೀಕಾರ ಕೇಂದ್ರಗಳಿಗೆ ಆಶ್ರಯಕ್ಕಾಗಿ ಬರುವ ಅಪ್ರಾಪ್ತ ಮತ್ತು ಪ್ರಾಪ್ತ ವಯಸ್ಸಿನ 1776 ಹೆಣ್ಣುಮಕ್ಕಳನ್ನು, ಉನ್ನತ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳ ಮನೆಗಳಿಗೆ ಕೆಲಸದ ನೆಪದಲ್ಲಿ ಕಳುಹಿಸಿಕೊಡಲಾಗಿದೆ. ದುರದೃಷ್ಟವಶಾತ್, ಆ ಮನೆಗಳಿಗೆ ಹೋದ ಮಕ್ಕಳು ಮತ್ತೆ ವಾಪಸ್ ಕೇಂದ್ರಕ್ಕೆ ಬಂದಿಲ್ಲ. ಅವರು ಎಲ್ಲಿಗೆ ಹೋದರು? ಅವರ ಗತಿಯೇನಾಯಿತು? ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಶೋಷಣೆಯ ಕರಾಳ ಮುಖ

ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಂತಹ ಸ್ಥಳಗಳಲ್ಲಿ ಅಲೆದಾಡುವ ಮುಗ್ಧ ಹೆಣ್ಣುಮಕ್ಕಳನ್ನು ಪೊಲೀಸರು ರಕ್ಷಿಸಿ ಸ್ವೀಕಾರ ಕೇಂದ್ರಗಳಿಗೆ ಒಪ್ಪಿಸುತ್ತಾರೆ. ಆದರೆ, ಅಲ್ಲಿ ಅವರಿಗೆ ಸಿಗಬೇಕಾದ ರಕ್ಷಣೆಯ ಬದಲು ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದಂತಹ ಕ್ರೂರ ಹಿಂಸೆಗಳು ಎದುರಾಗಿವೆ ಎಂದು ದೂರಿನಲ್ಲಿ ಗಂಭೀರವಾಗಿ ಉಲ್ಲೇಖಿಸಲಾಗಿದೆ. ಸ್ವೀಕಾರ ಕೇಂದ್ರದ ಅಧಿಕಾರಿಗಳೇ ಈ ಅಕ್ರಮಗಳಿಗೆ ಪ್ರೇರಣೆ ನೀಡುತ್ತಿದ್ದಾರೆ ಮತ್ತು ಅಧಿಕಾರಿಗಳ ಮನೆಗಳಲ್ಲಿ ಹೆಣ್ಣುಮಕ್ಕಳನ್ನು ಗುಲಾಮರಂತೆ ದುಡಿಸಿಕೊಳ್ಳಲಾಗುತ್ತಿದೆ. ಇದು ಅಕ್ಷಮ್ಯ ಅಪರಾಧವಾಗಿದೆ. ಪ್ರಧಾನಿಯ ಬೇಟಿ ಬಚಾವೋ, ಬೇಟಿ ಪಡಾವೋ ಘೋಷಣೆಯು ಕರ್ನಾಟಕದಲ್ಲಿ ಕೇವಲ ಕಾಗದದ ಮೇಲಿನ ಅಕ್ಷರಗಳಾಗಿ ಉಳಿದಿವೆ. ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯು ಮುಖ್ಯ ಕಾರ್ಯದರ್ಶಿ, ಮಹಿಳಾ ಆಯೋಗ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದರೂ, ಈವರೆಗೂ ಯಾವುದೇ ಗಂಭೀರ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳೇ ಶಾಮೀಲಾಗಿರುವುದರಿಂದ, ರಾಜ್ಯ ಸರ್ಕಾರ ರಚಿಸುವ ಯಾವುದೇ ವಿಶೇಷ ತನಿಖಾ ತಂಡದಿಂದ ನ್ಯಾಯ ಸಿಗುವ ನಿರೀಕ್ಷೆಯಿಲ್ಲ. ಆರೋಪಿಗಳೇ ತನಿಖಾ ತಂಡವನ್ನು ಪ್ರಭಾವಿಸುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ, ನ್ಯಾಯಕ್ಕಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು

ಹೋರಾಟಗಾರರ ಪ್ರಮುಖ ಬೇಡಿಕೆಗಳು

1776 ಹೆಣ್ಣುಮಕ್ಕಳ ನಾಪತ್ತೆ ಪ್ರಕರಣವನ್ನು ತಕ್ಷಣ ಸಿಬಿಐಗೆ ವಹಿಸಬೇಕು, ತನಿಖೆ ಪೂರ್ಣಗೊಳ್ಳುವವರೆಗೆ ಆರೋಪಿತ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು, ನಾಪತ್ತೆಯಾದವರ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ಕೈಗೊಂಡು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ರಾಜ್ಯಪಾಲರ ನೇತೃತ್ವದಲ್ಲಿ ಪ್ರಕರಣದ ಮೇಲ್ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ಈ ವಿಚಾರವನ್ನು ನಿರ್ಲಕ್ಷಿಸಿದರೆ, ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Read More
Next Story