ಹನೂರು ಶೂಟೌಟ್‌; ಹತ್ತಿರದಿಂದಲೇ ಹಾರಿಸಿದ್ದ ಗುಂಡು - ವರದಿಯಲ್ಲಿ ಸ್ಫೋಟಕ ಅಂಶ
x

ಹನೂರು ಶೂಟೌಟ್‌; ಹತ್ತಿರದಿಂದಲೇ ಹಾರಿಸಿದ್ದ ಗುಂಡು - ವರದಿಯಲ್ಲಿ ಸ್ಫೋಟಕ ಅಂಶ

ಹನೂರು ಶೂಟೌಟ್‌ ಪ್ರಕರಣ ಸಂಬಂಧ ಅರಣ್ಯ ಇಲಾಖೆಯ ಸಿಬ್ಬಂದಿ ಬಳಸಿದ ಶಸ್ತ್ರಾಸ್ತ್ರಗಳು ಮತ್ತು ಗುಂಡು ಹಾರಿಸುವ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.


Click the Play button to hear this message in audio format

ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್‌ನಲ್ಲಿ ನಡೆದ ಅರಣ್ಯ ಸಿಬ್ಬಂದಿಯ ಶೂಟೌಟ್ ಪ್ರಕರಣವು ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಈ ಘಟನೆಯಲ್ಲಿ ಮೂವರು ಸ್ಥಳೀಯರು ಮೃತಪಟ್ಟಿದ್ದು, ಇದೀಗ ಅವರ ಮರಣೋತ್ತರ ಪರೀಕ್ಷಾ ವರದಿಯು ಬಹಿರಂಗಗೊಂಡಿದೆ. ಮೃತರ ದೇಹದಲ್ಲಿ ಹತ್ತಿರದಿಂದ ಗುಂಡು ಹಾರಿಸಿರುವುದು ಹಾಗೂ ನಾಡಬಂದೂಕಿಗೆ ಸಂಬಂಧಿಸಿದ ಸಾಕ್ಷಿಗಳು ಪತ್ತೆಯಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಆ.16ರಂದು ಮೃತಪಟ್ಟ ಕುಮಾರ್, ಅಂತೋಣಿ ಸಾಮಿ ಮತ್ತು ಪೀಟರ್ ಅವರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ವರದಿಗಳು ಪ್ರಕರಣದ ತನಿಖೆಗೆ ಹೊಸ ಆಯಾಮ ನೀಡಿವೆ. ಕುಮಾರ್ ಮರಣೋತ್ತರ ವರದಿಯಲ್ಲಿ ಮೃತ ಕುಮಾರ್‌ನ ಎದೆಗೆ ನೇರವಾಗಿ ಗುಂಡು ತಗುಲಿದ್ದು, ಇದು ಬಹಳ ಹತ್ತಿರದಿಂದ ಹಾರಿಸಲಾಗಿದೆ ಎಂದು ಹೇಳಿದೆ. ಇದಲ್ಲದೆ, ಆತನ ಬಲ ತೊಡೆಗೂ ಹತ್ತಿರದಿಂದಲೇ ಗುಂಡು ಹೊಕ್ಕಿದೆ. ಆತನ ಒಳ ಉಡುಪಿನಲ್ಲಿ ಹೆಡ್ ಟಾರ್ಚ್, ಬೆಂಕಿ ಪೊಟ್ಟಣ ಮತ್ತು ಬೀಡಿಗಳು ಪತ್ತೆಯಾಗಿವೆ. ಇವನ ದೇಹದಿಂದ ಪೆಲೆಟ್ಸ್ (ಗುಂಡುಗಳ ಸಣ್ಣ ಚೂರು)ಗಳನ್ನು ಸಂಗ್ರಹಿಸಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಅಂತೋಣಿ ಸಾಮಿ ಮರಣೋತ್ತರ ವರದಿಯಲ್ಲಿ ಮೃತ ಅಂತೋಣಿ ಸಾಮಿ ಅವರ ಎದೆ ಮತ್ತು ಕುತ್ತಿಗೆ ಭಾಗಕ್ಕೆ ಗುಂಡುಗಳು ತಗುಲಿವೆ. ಈತನ ಒಳ ಉಡುಪಿನಲ್ಲಿ ಅಲುಮಿನಿಯಂನ 9 ಪ್ರೈಮರ್ ಪತ್ತೆಯಾಗಿದೆ. ಇವು ನಾಡಬಂದೂಕಿಗೆ ಮದ್ದು ತುಂಬಿ ಬಳಸುವ ಮದ್ದುಗುಂಡುಗಳಾಗಿವೆ. ಪೀಟರ್‌ನ ಮರಣೋತ್ತರ ವರದಿಯಲ್ಲೂ ಎದೆ, ಕುತ್ತಿಗೆ ಮತ್ತು ತೊಡೆ ಭಾಗಕ್ಕೆ ಹತ್ತಿರದಿಂದಲೇ ಗುಂಡು ಹಾರಿಸಲಾಗಿರುವುದು ದೃಢಪಟ್ಟಿದೆ.

ಅರಣ್ಯ ಸಿಬ್ಬಂದಿಯ ವಿಚಾರಣೆ

ಶೂಟೌಟ್ ಘಟನೆಯು ನಡೆದಾಗ ಸ್ಥಳದಲ್ಲಿದ್ದ ಅರಣ್ಯ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಹೊಳೆಮುರಿದಟ್ಟಿ ಮತ್ತು ಬೇಟೆಗಾರರ ಗುಡ್ಡದ ಎಪಿಸಿ ಕ್ಯಾಂಪ್‌ನ ಒಟ್ಟು 12 ಮಂದಿ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಘಟನೆಯ ಸತ್ಯಾಸತ್ಯತೆಯನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಬಳಸಿದ ಶಸ್ತ್ರಾಸ್ತ್ರಗಳು ಮತ್ತು ಗುಂಡು ಹಾರಿಸುವ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ. ಈ ಪ್ರಕರಣದ ಪ್ರಮುಖ ತಿರುವು ಎಂದರೆ, ಶೂಟೌಟ್ ನಡೆದಾಗ ಸ್ಥಳದಿಂದ ಬದುಕುಳಿದು ಬಂದ ಮರಿಯಮಂಗಲದ ಮಹಿಮಾದಾಸ್ ಎಂಬುವರು ನೀಡಿದ ಹೇಳಿಕೆಯಾಗಿದೆ. ಆತ ಪ್ರಕರಣದ ಏಕೈಕ ಕಣ್ಣಾರೆ ಕಂಡ ಸಾಕ್ಷಿಯಾಗಿದ್ದಾರೆ. ವಿಶೇಷವೆಂದರೆ, ಅರಣ್ಯ ಇಲಾಖೆ ದಾಖಲಿಸಿರುವ ಪ್ರಕರಣದಲ್ಲಿ ಮಹಿಮಾದಾಸ್ ಅವರು ನಾಲ್ಕನೇ ಆರೋಪಿಯಾಗಿದ್ದಾರೆ, ಆದರೆ ಪೊಲೀಸರ ಮುಂದೆ ಅವರು ಕೊಲೆ ಪ್ರಕರಣದ ಸಾಕ್ಷಿ ಆಗಿದ್ದಾರೆ. ಅಂದು ನಡೆದ ಘಟನೆಯ ಸಂಪೂರ್ಣ ವಿವರವನ್ನು ಅವರು ತನಿಖಾಧಿಕಾರಿಗಳಿಗೆ ವಿವರಿಸಿದ್ದಾರೆ ಎನ್ನಲಾಗಿದೆ.

ಪ್ರತಿಭಟನೆ ಮತ್ತು ಮನವೊಲಿಕೆ

ಘಟನೆ ನಡೆದ ಬೆನ್ನಲ್ಲೇ ಮೃತರ ಕುಟುಂಬಸ್ಥರು ಮತ್ತು ಸ್ಥಳೀಯರು ಮರಣೋತ್ತರ ಪರೀಕ್ಷಾ ವರದಿಗೆ ಒಪ್ಪಿಗೆ ನೀಡಲು ನಿರಾಕರಿಸಿ, ಶವಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರು. ಮೃತಪಟ್ಟವರಿಗೆ ನ್ಯಾಯ ಒದಗಿಸಬೇಕು ಮತ್ತು ಸೂಕ್ತ ಪರಿಹಾರ ನೀಡಬೇಕೆಂದು ಧರಣಿ ನಡೆಸಿದ್ದರು. ನಂತರ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳ ತಂಡದ ಮನವೊಲಿಕೆಯ ನಂತರ ಕುಟುಂಬಸ್ಥರು ಶಾಂತರಾಗಿದ್ದರು. ಸರ್ಕಾರವು ಘೋಷಿಸಿದ ಪರಿಹಾರದ ನಂತರವೇ ಅಂತಿಮ ಸಂಸ್ಕಾರ ನೆರವೇರಿತು.

ಪ್ರಕರಣವು ಈಗ ಅರಣ್ಯ ಇಲಾಖೆಯ ಸಿಬ್ಬಂದಿಯ ಕರ್ತವ್ಯದ ಮಿತಿ ಮತ್ತು ಅತಿಯಾದ ಬಲ ಪ್ರಯೋಗದ ಸುತ್ತ ತಿರುಗುತ್ತಿದೆ. ಹತ್ತಿರದಿಂದಲೇ ಗುಂಡು ಹಾರಿಸಲಾಗಿದೆ ಎಂಬ ಮರಣೋತ್ತರ ವರದಿಯ ಅಂಶವು, ಎದುರಾಳಿಗಳು ದಾಳಿ ನಡೆಸಿದರಾ? ಅಥವಾ ಅರಣ್ಯ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಹತ್ತಿರಕ್ಕೆ ಬಂದು ಗುಂಡು ಹಾರಿಸಿದರಾ? ಎಂಬ ಪ್ರಶ್ನೆಗೆ ಎಡೆಮಾಡಿಕೊಟ್ಟಿದೆ. ಜತೆಗೆ ಮೃತರ ಬಳಿ ಸಿಕ್ಕಿರುವ ಮದ್ದುಗುಂಡುಗಳು ಮತ್ತು ನಾಡಬಂದೂಕಿನ ಪರಿಕರಗಳು, ಮೃತಪಟ್ಟವರು ಬೇಟೆಯಾಡಲು ತೆರಳಿದ್ದರೇ ಅಥವಾ ಬೇರೆಯದ್ದೇ ಉದ್ದೇಶವಿತ್ತೇ? ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

ಒಟ್ಟಾರೆ, ಈ ವರದಿಗಳು ಪೊಲೀಸ್ ತನಿಖೆಗೆ ನಿರ್ಣಾಯಕ ಸಾಕ್ಷಿಗಳಾಗಿವೆ. ಸದ್ಯ ತನಿಖಾ ತಂಡವು ಎಲ್ಲಾ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಸಿದ್ಧತೆಯಲ್ಲಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಬಳಸಿದ ಅಸ್ತ್ರಗಳ ಫಾರೆನ್ಸಿಕ್ ವರದಿ ಬಂದ ನಂತರ ಈ ಪ್ರಕರಣದಲ್ಲಿ ಯಾರನ್ನು ಬಂಧಿಸಬೇಕು ಮತ್ತು ಯಾರ ಮೇಲೆ ದೋಷಾರೋಪಣೆ ಮಾಡಬೇಕು ಎಂಬುದು ಸ್ಪಷ್ಟವಾಗಲಿದೆ.

Read More
Next Story