ಮಗ್ಗೂರು ಅರಣ್ಯದಲ್ಲಿ ಬ್ಯಾರಿಕೇಡ್‌ ಮಧ್ಯೆ ಸಿಲುಕಿದ ಕಾಡಾನೆ; ರಕ್ಷಣಾ ಕಾರ್ಯಾಚರಣೆ ಚುರುಕು
x
ರೈಲ್ವೆ ಬ್ಯಾರಿಕೇಡ್‌ ಮಧ್ಯೆ ಸಿಲುಕಿರುವ ಕಾಡಾನೆ

ಮಗ್ಗೂರು ಅರಣ್ಯದಲ್ಲಿ ಬ್ಯಾರಿಕೇಡ್‌ ಮಧ್ಯೆ ಸಿಲುಕಿದ ಕಾಡಾನೆ; ರಕ್ಷಣಾ ಕಾರ್ಯಾಚರಣೆ ಚುರುಕು

ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಆನೆಗೆ ಯಾವುದೇ ರೀತಿಯ ಗಾಯಗಳಾಗದಂತೆ ಸುರಕ್ಷಿತವಾಗಿ ಹೊರತೆಗೆಯಲು ಇಲಾಖೆ ಕಾರ್ಯಾಚರಣೆ ಆರಂಭಿಸಲಾಗಿದೆ.


Click the Play button to hear this message in audio format

ಆಹಾರ ಮತ್ತು ನೀರು ಅರಸಿ ಕಾಡಿನಿಂದ ನಾಡಿಗೆ ಬರಲು ಯತ್ನಿಸಿದ ಕಾಡಾನೆಯೊಂದು ರೈಲ್ವೆ ಬ್ಯಾರಿಕೇಡ್ ನ ಕಬ್ಬಿಣದ ಕಂಬಗಳ ಮಧ್ಯೆ ಸಿಲುಕಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲ್ಲೂಕಿನ ಅರೆಕೊಪ್ಪ ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಕಾವೇರಿ ವನ್ಯಜೀವಿ ವಲಯದ ಮಗ್ಗೂರು ಅರಣ್ಯ ಪ್ರದೇಶದಿಂದ ಹೊರಬರಲು ಯತ್ನಿಸಿದ ಕಾಡಾನೆಯು, ರೈಲ್ವೆ ಬ್ಯಾರಿಕೇಡ್ ತಡೆಗೋಡೆ ದಾಟಲು ಪ್ರಯತ್ನಿಸಿದೆ. ಬ್ಯಾರಿಕೇಡ್‌ನ ಕಂಬಗಳ ನಡುವೆ ತೂರಿ ಹೋಗಲು ಯತ್ನಿಸಿದಾಗ, ಆನೆಯ ಬೃಹತ್ ದೇಹವು ಕಬ್ಬಿಣದ ಕಂಬಗಳ ಮಧ್ಯೆ ಸಿಲುಕಿಕೊಂಡಿದೆ.

ಆನೆಯು ಮುಂದೆ ಹೋಗಲೂ ಆಗದೇ, ವಾಪಸ್‌ ಬರಲೂ ಆಗದೇ ನೋವಿನಿಂದ ಚೀರುತ್ತಿದೆ. ಕಾಡಾನೆಯ ಈ ಆಕ್ರಂದನ ಕೇಳಿದ ಗ್ರಾಮಸ್ಥರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ಘಟನೆಯನ್ನು ಕಂಡು ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಆನೆಗೆ ಯಾವುದೇ ರೀತಿಯ ಗಾಯಗಳಾಗದಂತೆ ಸುರಕ್ಷಿತವಾಗಿ ಹೊರತೆಗೆಯಲು ಇಲಾಖೆ ಕಾರ್ಯಾಚರಣೆ ಆರಂಭಿಸಲಾಗಿದೆ.

ಬ್ಯಾರಿಕೇಡ್ನ ಬಲವಾದ ಕಬ್ಬಿಣದ ಕಂಬಗಳನ್ನು ಗ್ಯಾಸ್ ಕಟರ್‌ಗಳ ಸಹಾಯದಿಂದ ಕತ್ತರಿಸಿ, ಜೆಸಿಬಿ ಯಂತ್ರ ಬಳಸಿ ಆನೆಯನ್ನು ಕಬ್ಬಿಣದಿಂದ ಹೊರತೆಗೆಯಲು ಸಿದ್ಧತೆ ನಡೆಸಲಾಗಿದೆ. ಆನೆಗೆ ಯಾವುದೇ ರೀತಿಯ ಆತಂಕವಾಗದಂತೆ ಅರಣ್ಯ ಸಿಬ್ಬಂದಿ ನಿಗಾ ವಹಿಸಿದ್ದಾರೆ.

ಕಬ್ಬಿಣದ ಬ್ಯಾರಿಕೇಡ್‌ ಮಧ್ಯೆ ಕಾಡಾನೆ ಸಿಲುಕಿರುವ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರು ಕಾಡಂಚಿನತ್ತ ಜಮಾಯಿಸುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಜನದಟ್ಟಣೆ ನಿಯಂತ್ರಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಬ್ಯಾರಿಕೇಡ್ ಮರುವಿನ್ಯಾಸಕ್ಕೆ ಆಗ್ರಹ

ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳು ಆಹಾರ ಅರಸಿ ನಾಡಿಗೆ ಬರುವುದನ್ನು ತಡೆಯಲು ರೈಲ್ವೆ ಹಳಿಗಳ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಈ ತಡೆಗೋಡೆಗಳ ವಿನ್ಯಾಸ ಹಾಗೂ ಕಂಬಗಳ ನಡುವಿನ ಅಂತರದ ಬಗ್ಗೆ ವನ್ಯಜೀವಿ ಪ್ರೇಮಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಡೆಗೋಡೆಗಳ ನಡುವಿನ ಅಂತರ ಮರುಪರಿಶೀಲಿಸಿ ಸೂಕ್ತ ಬದಲಾವಣೆ ಮಾಡದಿದ್ದರೆ ಇಂತಹ ಘಟನೆಗಳು ಮರುಕಳಿಸಿ ಮೂಕ ಪ್ರಾಣಿಗಳ ಜೀವಕ್ಕೆ ಕುತ್ತು ಬರಬಹುದು. ವನ್ಯಜೀವಿಗಳ ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸಿ ತಜ್ಞರ ಸಲಹೆಯೊಂದಿಗೆ ಬ್ಯಾರಿಕೇಡ್‌ಗಳನ್ನು ಮರುವಿನ್ಯಾಸಗೊಳಿಸಬೇಕು" ಸ್ಥಳೀಯರು ಆಗ್ರಹಿಸಿದ್ದಾರೆ.

Read More
Next Story