x

ಕೊಲೆ ಆರೋಪಿಯೂ ಸಾಕ್ಷಿಯಾಗಬಹುದಾ? ಅಪ್ರೂವರ್ ಆದ ತಕ್ಷಣ ಶಿಕ್ಷೆಯಿಂದ ಮುಕ್ತಿ ಸಿಗುತ್ತಾ?

ಹೈಪ್ರೊಫೈಲ್‌ ಕೇಸ್‌ಗಳಲ್ಲಿ ಅಪ್ರೂವರ್ ಎಂದರೇನು? ಆರೋಪಿಯೊಬ್ಬ ಅಪ್ರೂವರ್ ಆಗಲು ಅರ್ಜಿ ಸಲ್ಲಿಸಿದ ತಕ್ಷಣವೇ ಆತ ಮಾಫಿ ಸಾಕ್ಷಿಯಾಗುತ್ತಾನಾ? ಸಂಪೂರ್ಣ ಶಿಕ್ಷೆಯಿಂದ ಮುಕ್ತಿ ಸಿಗುತ್ತಾ? ಯಾವ ಸಂದರ್ಭದಲ್ಲಿ ಕ್ಷಮಾದಾನ ರದ್ದಾಗುತ್ತದೆ? ಅಪ್ರೂವರ್ ಹೇಳಿಕೆ ಪ್ರಕರಣದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ? ಇಲ್ಲಿದೆ ವಿವರ.


ಕರ್ನಾಟಕದ ಹೈಪ್ರೊಫೈಲ್ ಕ್ರಿಮಿನಲ್ ಪ್ರಕರಣಗಳಲ್ಲಿ ಇತ್ತೀಚೆಗೆ ‘ಅಪ್ರೂವರ್’ ಅಥವಾ ‘ಮಾಫಿ ಸಾಕ್ಷಿ’ ಎಂಬ ಪದ ಪದೇಪದೇ ಕೇಳಿಬರುತ್ತಿದೆ. ನಟ ದರ್ಶನ್ ಸೇರಿದಂತೆ ಹಲವರು ಆರೋಪಿಗಳಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಪ್ರದೋಷ್ ಅಪ್ರೂವರ್ ಆಗಲು ಮನವಿ ಮಾಡಿದ್ದಾರೆ ಎಂಬ ವಿಚಾರ ಚರ್ಚೆಗೆ ಬಂದಿದೆ. ಇದೇ ರೀತಿ ಬೆಂಗಳೂರಿನ ಕೆ.ಆರ್. ಪುರಂ ತ್ರಿವಳಿ ಕೊಲೆ ಪ್ರಕರಣದಲ್ಲೂ ಆರೋಪಿ ಶ್ವೇತಾ ತನ್ನ ಸಹ ಆರೋಪಿ ಕೆನ್ನೆತ್ ವಿರುದ್ಧ ಸತ್ಯಾಂಶಗಳನ್ನು ಬಹಿರಂಗಪಡಿಸಲು ಅಪ್ರೂವರ್ ಆಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂಬ ಬೆಳವಣಿಗೆ ನಡೆದಿದೆ. ಹೀಗಾಗಿ ಅಪ್ರೂವರ್ ಎಂದರೇನು, ಆರೋಪಿ ಅರ್ಜಿ ಸಲ್ಲಿಸಿದ ತಕ್ಷಣವೇ ಮಾಫಿ ಸಾಕ್ಷಿಯಾಗುತ್ತಾನಾ, ಶಿಕ್ಷೆಯಿಂದ ಸಂಪೂರ್ಣ ಮುಕ್ತಿ ಸಿಗುತ್ತಾ ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

ಮಾಫಿ ಸಾಕ್ಷಿ ಎಂದರೇನು?

ಸರಳವಾಗಿ ಹೇಳುವುದಾದರೆ, ಗಂಭೀರ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಲ್ಲಿ ಒಬ್ಬನು ಪ್ರಕರಣದ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಿ, ಇತರ ಸಹ ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ಪರವಾಗಿ ಸಾಕ್ಷಿ ನೀಡಲು ಮುಂದಾದಾಗ ಕಾನೂನಿನಡಿ ಆತನಿಗೆ ಕ್ಷಮಾದಾನ ನೀಡಿ ‘ಅಪ್ರೂವರ್’ ಅಥವಾ ‘ಮಾಫಿ ಸಾಕ್ಷಿ’ಯನ್ನಾಗಿ ಮಾಡಬಹುದು. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಇದಕ್ಕೆ ಕಾನೂನು ಪ್ರಕ್ರಿಯೆ ಇದೆ. ಆರೋಪಿಯು ತಾನು ತಿಳಿದಿರುವ ಅಪರಾಧದ ಸಂಪೂರ್ಣ ವಿವರ, ಸಂಚು, ಇತರ ಆರೋಪಿಗಳ ಪಾತ್ರ ಸೇರಿದಂತೆ ಪ್ರಮುಖ ಮಾಹಿತಿಯನ್ನು ಮುಚ್ಚಿಡದೆ ಬಹಿರಂಗಪಡಿಸಬೇಕಾಗುತ್ತದೆ. ಆದರೆ ಕೇವಲ ಅಪ್ರೂವರ್ ಆಗಲು ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಆತ ತಕ್ಷಣವೇ ಮಾಫಿ ಸಾಕ್ಷಿಯಾಗುವುದಿಲ್ಲ. ನ್ಯಾಯಾಲಯ ಕಾನೂನುಬದ್ಧ ಪ್ರಕ್ರಿಯೆಯ ಮೂಲಕ ಕ್ಷಮಾದಾನ ನೀಡಿದ ಬಳಿಕವೇ ಆತ ಪ್ರಾಸಿಕ್ಯೂಷನ್ ಸಾಕ್ಷಿದಾರನಾಗುತ್ತಾನೆ.

ಅಪ್ರೂವರ್ ಆದರೆ ಸಂಪೂರ್ಣ ಕ್ಷಮೆ ಸಿಗುತ್ತಾ?

ಇದು ಅಪ್ರೂವರ್ ವ್ಯವಸ್ಥೆಯ ಬಗ್ಗೆ ಇರುವ ಪ್ರಮುಖ ಪ್ರಶ್ನೆ. ಅಪ್ರೂವರ್ ಆಗುವುದೆಂದರೆ ಆರೋಪಿಯ ವಿರುದ್ಧದ ಎಲ್ಲ ಕಾನೂನು ಕ್ರಮಗಳು ಶಾಶ್ವತವಾಗಿ ಮುಕ್ತಾಯವಾಗುತ್ತವೆ ಎಂದರ್ಥವಲ್ಲ. ಕ್ಷಮಾದಾನ ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ. ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮತ್ತು ಸತ್ಯ ಮಾಹಿತಿಯನ್ನು ನೀಡಬೇಕು, ಪ್ರಮುಖ ಸಂಗತಿಗಳನ್ನು ಮರೆಮಾಚಬಾರದು ಹಾಗೂ ವಿಚಾರಣೆಯ ಸಂದರ್ಭದಲ್ಲಿ ಸಾಕ್ಷ್ಯ ನೀಡಬೇಕು. ಹೀಗಾಗಿ ಅಪ್ರೂವರ್ ಆಗುವುದು ಕಠಿಣ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇರುವ ಸರಳ ಮಾರ್ಗವಲ್ಲ.

ಅಪ್ರೂವರ್‌ಗೆ ಶಿಕ್ಷೆ ಕಡಿಮೆಯಾಗುತ್ತದೆಯೇ?

ಅಪ್ರೂವರ್ ವ್ಯವಸ್ಥೆಯ ಉದ್ದೇಶಗಳಲ್ಲಿ ಒಂದು ಪ್ರಕರಣದ ಸತ್ಯಾಂಶವನ್ನು ಹೊರತರುವುದಾಗಿದೆ. ಅದರ ಜೊತೆಗೆ ಕಾನೂನಿನಡಿ ಕ್ಷಮಾದಾನದ ಪ್ರಯೋಜನವೂ ದೊರೆಯಬಹುದು. ಆದರೆ ‘ಅಪ್ರೂವರ್ ಆದ ತಕ್ಷಣ ಶಿಕ್ಷೆ ಕಡಿಮೆಯಾಗುತ್ತದೆ’ ಎಂದು ನೇರವಾಗಿ ಹೇಳಲು ಸಾಧ್ಯವಿಲ್ಲ. ನ್ಯಾಯಾಲಯ ವಿಧಿಸಿರುವ ಕ್ಷಮಾದಾನದ ಷರತ್ತುಗಳನ್ನು ಆರೋಪಿ ಪಾಲಿಸಿದ್ದಾನೆಯೇ, ಸಂಪೂರ್ಣ ಸತ್ಯವನ್ನು ಹೇಳಿದ್ದಾನೆಯೇ ಮತ್ತು ವಿಚಾರಣೆಯಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದಾನೆಯೇ ಎಂಬುದು ಪ್ರಮುಖವಾಗುತ್ತದೆ.

ಮಾಫಿ ಸಾಕ್ಷಿಯಾಗಿ ಬದಲಾಗುತ್ತಾರೆ?

ಇದಕ್ಕೆ ಹಲವು ಕಾರಣಗಳಿರಬಹುದು. ಮೊದಲನೆಯದಾಗಿ, ತನ್ನದೇ ಕಾನೂನು ಸ್ಥಿತಿಯನ್ನು ಸುಧಾರಿಸಿಕೊಳ್ಳುವ ಪ್ರಯತ್ನವಾಗಿರಬಹುದು. ಎರಡನೆಯದಾಗಿ, ಪ್ರಕರಣದ ಒಳಗಿನ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸುವ ಮೂಲಕ ತನಿಖೆಗೆ ಸಹಾಯ ಮಾಡುವ ಉದ್ದೇಶ ಇರಬಹುದು. ಮೂರನೆಯದಾಗಿ, ಕಾನೂನಿನಡಿ ಸಿಗಬಹುದಾದ ಕ್ಷಮಾದಾನದ ಪ್ರಯೋಜನ ಪಡೆಯುವ ಉದ್ದೇಶವೂ ಇರಬಹುದು. ಆದರೆ ಪ್ರತಿಯೊಂದು ಪ್ರಕರಣದಲ್ಲೂ ಉದ್ದೇಶ ಒಂದೇ ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ ಆರೋಪಿ ಅಪ್ರೂವರ್ ಆಗಲು ಅರ್ಜಿ ಸಲ್ಲಿಸಿದ್ದಾನೆ ಎಂಬ ಕಾರಣಕ್ಕೇ ಪೊಲೀಸರು ಒತ್ತಡ ಹೇರಿದ್ದಾರೆ ಎಂದು ನಿರ್ಧರಿಸಲಾಗುವುದಿಲ್ಲ.

Read More
Next Story