Development? Forest destruction? The grim truth about the mega projects tearing apart the Western Ghats!
x

ಸಾಂದರ್ಭಿಕ ಚಿತ್ರ

ಅಭಿವೃದ್ಧಿಯೋ? ಅರಣ್ಯ ವಿನಾಶವೋ? ಪಶ್ಚಿಮ ಘಟ್ಟಗಳ ಒಡಲು ಸೀಳುತ್ತಿರುವ ಮೆಗಾ ಪ್ರಾಜೆಕ್ಟ್‌ಗಳ ಭೀಕರ ಸತ್ಯ!

ಶೆಟ್ಟಿಹಳ್ಳಿ, ಸೋಮೇಶ್ವರ, ಕುದುರೆಮುಖ ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಗಳಂತಹ ಅತ್ಯಂತ ಸಂವೇದನಾಶೀಲ ಪ್ರದೇಶಗಳಲ್ಲಿ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಯೋಜನೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ.


Click the Play button to hear this message in audio format

ಭಾರತದ ಜೀವನಾಡಿ ಹಾಗೂ ವಿಶ್ವದ ಅತ್ಯಂತ ಸೂಕ್ಷ್ಮ ಪರಿಸರ ವಲಯಗಳಲ್ಲಿ ಒಂದಾದ ಪಶ್ಚಿಮ ಘಟ್ಟಗಳು ಇಂದು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಯೋಜನೆಗಳ ಆರ್ಭಟಕ್ಕೆ ನಲುಗುತ್ತಿವೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ಸುರಂಗ ಮಾರ್ಗಗಳು, ರೈಲ್ವೆ ಯೋಜನೆಗಳು ಮತ್ತು ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಗಳ ಅಬ್ಬರದಿಂದಾಗಿ ಈ ಹಸಿರು ಹೊದಿಕೆ ವಿನಾಶದ ಅಂಚಿಗೆ ಬಂದು ನಿಂತಿದೆ.

ಲಕ್ಷಾಂತರ ಮರಗಳ ಮಾರಣಹೋಮ

ಶೆಟ್ಟಿಹಳ್ಳಿ, ಸೋಮೇಶ್ವರ, ಕುದುರೆಮುಖ ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಗಳಂತಹ ಅತ್ಯಂತ ಸಂವೇದನಾಶೀಲ ಪ್ರದೇಶಗಳಲ್ಲಿ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಯೋಜನೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ವರದಿಗಳ ಪ್ರಕಾರ, ಈ ಯೋಜನೆಗಳ ಅನುಷ್ಠಾನಕ್ಕಾಗಿ ಲಕ್ಷಾಂತರ ನಿತ್ಯಹರಿದ್ವರ್ಣ ಮರಗಳನ್ನು ಕಡಿಯಲಾಗುತ್ತಿದ್ದು, ಇದು ಪ್ರಕೃತಿಯ ಮೇಲೆ ಚೇತರಿಸಿಕೊಳ್ಳಲಾಗದಂತಹ ಗಾಯವನ್ನು ಉಂಟುಮಾಡುತ್ತಿದೆ.

ತಾರಕಕ್ಕೇರಿದ ಮಾನವ-ಪ್ರಾಣಿ ಸಂಘರ್ಷ

ಕಾಡಿನ ಮಧ್ಯೆ 30 ರಿಂದ 45 ಮೀಟರ್ ಅಗಲದ ಬೃಹತ್ ಹೆದ್ದಾರಿಗಳು ಮತ್ತು ರೈಲ್ವೆ ಹಳಿಗಳು ನಿರ್ಮಾಣವಾಗುವುದರಿಂದ ವನ್ಯಜೀವಿಗಳ ಸ್ವಾಭಾವಿಕ ವಲಸೆ ಮಾರ್ಗಗಳು ತುಂಡಾಗುತ್ತಿವೆ. ಇದು ಪ್ರಾಣಿಗಳು ನಾಡಿಗೆ ನುಗ್ಗಲು ಪ್ರಮುಖ ಕಾರಣವಾಗಿದ್ದು, ಆನೆ, ಚಿರತೆ ಹಾಗೂ ಕಾಡುಕೋಣಗಳ ದಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅತಿಯಾದ ಅಭಿವೃದ್ಧಿ ಯೋಜನೆಗಳೇ ಈ ಸಂಘರ್ಷಕ್ಕೆ ಮೂಲ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪರಿಸರವಾದಿಗಳ ಆತಂಕ

ಈ ಕುರಿತು ವಿಶೇಷವಾಗಿ ಮಾತನಾಡಿದ ಪರಿಸರವಾದಿ ಮತ್ತು ಹೋರಾಟಗಾರ ಅಖಿಲೇಶ್ ಚಿಪ್ಪಳಿ, "ಜಾಗತೀಕರಣದ ನಂತರ ಪಶ್ಚಿಮ ಘಟ್ಟಗಳ ಮೇಲೆ ದೊಡ್ಡ ದಾಳಿ ನಡೆಯುತ್ತಿದೆ. ಕನೆಕ್ಟಿವಿಟಿಯ ಹೆಸರಿನಲ್ಲಿ ಅನಗತ್ಯವಾಗಿ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಸ್ಥಳೀಯರಿಗೆ ಈ ಯೋಜನೆಗಳಿಂದ ಯಾವುದೇ ಲಾಭವಿಲ್ಲ. ಬದಲಾಗಿ, ಇದು ಕೇವಲ ಗುತ್ತಿಗೆ ಮಾಫಿಯಾಗಳ ಹಿತಾಸಕ್ತಿಗಾಗಿ ನಡೆಯುತ್ತಿರುವ ಕೆಲಸಗಳಾಗಿವೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

"ತೀರ್ಥಹಳ್ಳಿಯಿಂದ ಮಣಿಪಾಲಕ್ಕೆ ಹೋಗಲು 8,000 ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗ ಮಾರ್ಗ ಮಾಡುವ ಬದಲು, ಸ್ಥಳೀಯವಾಗಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿದರೆ ಜನರ ಜೀವ ಉಳಿಯುತ್ತದೆ. ಪರಿಸರವೂ ಉಳಿಯುತ್ತದೆ," ಎಂಬ ಪರ್ಯಾಯ ಮಾರ್ಗವನ್ನು ಅವರು ಸರ್ಕಾರದ ಮುಂದಿಟ್ಟಿದ್ದಾರೆ.

ಪರಿಸರ ಸಮತೋಲನಕ್ಕೆ ಧಕ್ಕೆ

ಪಶ್ಚಿಮ ಘಟ್ಟಗಳು ದಕ್ಷಿಣ ಭಾರತದ ಮಳೆಯನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ. ಇಲ್ಲಿನ ಮರಗಳನ್ನು ಕಡಿಯುವುದರಿಂದ ಹವಾಮಾನ ವೈಪರೀತ್ಯ ಉಂಟಾಗಿ, ಅತಿವೃಷ್ಟಿ ಅಥವಾ ಅನಾವೃಷ್ಟಿಯಂತಹ ಸಮಸ್ಯೆಗಳು ಎದುರಾಗುತ್ತಿವೆ. ಕಳೆದ ವರ್ಷಗಳಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತಗಳು ಇದಕ್ಕೆ ಮುನ್ಸೂಚನೆಯಾಗಿವೆ ಎಂದು ಪರಿಸರ ಪ್ರೇಮಿಗಳು ಎಚ್ಚರಿಸಿದ್ದಾರೆ.

ಮುಂದಿನ ಹೋರಾಟದ ಹಾದಿ

ಸರ್ಕಾರಗಳು ಪರಿಸರ ಸಂರಕ್ಷಣೆಯ ಮಾತುಗಳನ್ನಾಡುತ್ತಲೇ ಇಂತಹ ವಿನಾಶಕಾರಿ ಯೋಜನೆಗಳಿಗೆ ಅನುಮತಿ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಪರಿಸರವಾದಿಗಳು 'ಸಮಾಧಾನ-ಭೇದ-ದಂಡ' ನೀತಿಯಡಿ ಹೋರಾಟಕ್ಕೆ ಸಜ್ಜಾಗಿದ್ದಾರೆ. ಮೊದಲ ಹಂತದಲ್ಲಿ ಮನವಿ ಸಲ್ಲಿಕೆ, ನಂತರ ಬೃಹತ್ ಪ್ರತಿಭಟನೆ ಮತ್ತು ಅಂತಿಮವಾಗಿ ನ್ಯಾಯಾಂಗದ ಮೂಲಕ ಈ ಯೋಜನೆಗಳಿಗೆ ತಡೆ ನೀಡಲು ಹೋರಾಟಗಾರರು ನಿರ್ಧರಿಸಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನು ನಾಶಪಡಿಸಿದರೆ, ಮುಂದಿನ ಪೀಳಿಗೆಗೆ ನಾವು ನೀಡುವ ಕಾಣಿಕೆ ಏನು ಎಂಬ ಪ್ರಶ್ನೆ ಈಗ ಪ್ರತಿಯೊಬ್ಬರನ್ನೂ ಕಾಡುತ್ತಿದೆ.

Read More
Next Story