
9ನೇ ಶೆಡ್ಯೂಲ್‌ಗೆ ಮೀಸಲಾತಿ ಸೇರಿಸಿ: ರಾಜ್ಯ ಸರ್ಕಾರದ ಮೇಲೆ ಉಗ್ರಪ್ಪ ಒತ್ತಡ
ಮೀಸಲಾತಿ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು, ಎಸ್‌ಸಿ, ಎಸ್‌ಟಿ ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಬೇಕೆಂಬ ಬೇಡಿಕೆಯು ತೀವ್ರ ಸ್ವರೂಪ ಪಡೆದಿದೆ.
ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಮೀಸಲಾತಿ ವಿಚಾರವು ಮತ್ತೆ ಕಾವು ಪಡೆದುಕೊಂಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಬೇಕೆಂಬ ಬೇಡಿಕೆಯು ತೀವ್ರ ಸ್ವರೂಪ ಪಡೆದಿದೆ. ಈ ಸಂಬಂಧ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷರು ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮೀಸಲಾತಿ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮೀಸಲಾತಿ ಹೆಚ್ಚಳದ ಆದೇಶವನ್ನು ಹೊರಡಿಸಿದ್ದು ಬಿಜೆಪಿ ಸರ್ಕಾರವೇ ಆಗಿದ್ದರೂ, ಅದನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸುವ ಜವಾಬ್ದಾರಿಯನ್ನು ಅವರು ನಿರ್ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶೇ. 56ರಷ್ಟು ಮೀಸಲಾತಿ ಹೆಚ್ಚಳ ಮಾಡುವುದಾಗಿ ಆದೇಶ ಹೊರಡಿಸಿತು. ಆದರೆ, ಕಾನೂನುಬದ್ಧವಾಗಿ ಅದನ್ನು ರಕ್ಷಿಸಿಕೊಳ್ಳಲು ಮಾಡಬೇಕಾದ ಅಗತ್ಯ ಕೆಲಸವಾದ 9ನೇ ಶೆಡ್ಯೂಲ್ ಸೇರ್ಪಡೆಯನ್ನು ಮಾಡದೆ ಕೇವಲ ರಾಜಕಾರಣ ಮಾಡುತ್ತಿದೆ. ಈಗ ಮತ್ತೆ ಅಧಿಕಾರಕ್ಕೆ ಬಂದರೆ ಮೀಸಲಾತಿ ಹೆಚ್ಚಿಸುತ್ತೇವೆ ಎಂದು ಹೇಳುತ್ತಿರುವುದು ಜನರ ದಾರಿ ತಪ್ಪಿಸುವ ತಂತ್ರ ಎಂದು ಅವರು ಕಿಡಿಕಾರಿದರು.
ತಮ್ಮ ಸಮುದಾಯದ ಜನರನ್ನು ವೋಟ್ ಬ್ಯಾಂಕ್‌ಗಾಗಿ ಬಳಸಿಕೊಳ್ಳಬೇಡಿ. ನಮ್ಮ ಸಮುದಾಯದ ಜನರು ದಡ್ಡರಲ್ಲ, ಚುನಾವಣೆ ಬಂದಾಗ ಸರಿಯಾದ ಪಾಠ ಕಲಿಸುತ್ತಾರೆ. 2023ರ ಮಾ.23 ರಂದು ಅಂದಿನ ಬಿಜೆಪಿ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಾಗ ಯಾವುದೇ ಕಾನೂನು ತೊಡಕು ಇರಲಿಲ್ಲ. ಆಗಲೇ ಒತ್ತಡ ಹೇರಿ ಕೆಲಸ ಮುಗಿಸಬೇಕಿತ್ತು ಎಂದು ಹೇಳಿದರು.
ಪ್ರಧಾನಿ ಮೋದಿಯವರ ಮೇಲೆ ಒತ್ತಡ ಹೇರಲು ಆಗ್ರಹ
ತಮ್ಮ ಸಮುದಾಯಕ್ಕೆ ನ್ಯಾಯ ಒದಗಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಇಂದಿರಾ ಸಾನಿ ಪ್ರಕರಣದಲ್ಲಿ ಶೇ.56 ರಷ್ಟು ಮೀಸಲಾತಿಯನ್ನು ತಮಿಳುನಾಡಿನ ರೀತಿ ನಮ್ಮ ರಾಜ್ಯದ ಕಾನೂನನ್ನು ಶೆಡ್ಯೂಲ್ 9 ಗೆ ಸೇರಿಸಬೇಕು. ಶ್ರೀರಾಮುಲು ಬಹಳ ವೀರಾವೇಶದಿಂದ ಮಾತನಾಡಿದ್ದಾರೆ. ಈ ಸಮುದಾಯಕ್ಕೆ ನ್ಯಾಯ ಕೊಡಿಸುವ ವಿಚಾರದಲ್ಲಿ ರಾಜಕೀಯ ಮಾಡುವುದು ಬಿಡಿ. ಶ್ರೀರಾಮುಲು ಅವರೇ ಚುನಾವಣೆಗೆ ನಮ್ಮ ಜನರನ್ನು ಒಡೆಯುವ ಪ್ರಯತ್ನ ಮಾಡಬೇಡಿ. ಈಗ ಮತ್ತೆ ಅಧಿಕಾರಕ್ಕೆ ಬಂದ್ರೆ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದರಿಂದ ನಿಮ್ಮ ನಿಜ ಬಣ್ಣ ಬಯಲಾಗುತ್ತಿದೆ. ಪ್ರಧಾನಿ ಮೋದಿ ಮೇಲೆ ಒತ್ತಡ ತಂದು 2022 ರ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ ಶೆಡ್ಯೂಲ್ 9 ಗೆ ಸೇರಿಸಬೇಕು. ನಾಯಕ ಸಮುದಾಯದ ಓಲೈಕೆ ಮಾಡಲು ಹೋದರೆ ಇದು ನಿಮ್ಮ ದಡ್ಡತನ. ನಾನೂ ಕಾಂಗ್ರೆಸ್ ಪಕ್ಷದಲ್ಲಿ ಇದ್ರೂ ಕೂಡ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೂ ಪತ್ರ ಬರೆದಿದ್ದೇನೆ. ಪ್ರಧಾನಿ ಮೋದಿ ಬಳಿ ಸರ್ವಪಕ್ಷ ಸಭೆ ತೆಗೆದುಕೊಂಡು ಹೋಗಲು ಒತ್ತಡ ಹೇರಿದ್ದೇವೆ ಎಂದು ಹೇಳಿದರು.
ಜಾತಿ ರಾಜಕಾರಣ - ಇಚ್ಛಾಶಕ್ತಿಯ ಕೊರತೆ
ನ್ಯಾಯಮೂರ್ತಿ ನಾಗಮೋಹನ್ ದಾಸ್ ಹಾಗೂ ಸುಭಾಷ್ ಅಡಿ ಆಯೋಗಗಳ ಶಿಫಾರಸುಗಳನ್ನು ಜಾರಿಗೊಳಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ. ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿಯನ್ನು ಯಾವುದೇ ಅಡೆತಡೆಯಿಲ್ಲದೆ ನೀಡಿದ ಸರ್ಕಾರ, ತಳ ಸಮುದಾಯಗಳಿಗೆ ಬರುವಾಗ ಮಾತ್ರ ಇಚ್ಛಾಶಕ್ತಿಯ ಕೊರತೆ ತೋರುತ್ತಿದೆ ಎಂದು ದೂರಿದರು. ಜಾತಿಗಳನ್ನು ಒಡೆದಾಳುವ ಪ್ರವೃತ್ತಿ ಬಿಡಿ. ಮೀಸಲಾತಿ ವಿಚಾರದಲ್ಲಿ ನಾವು ಪ್ರಾಣ ಕೊಡಲೂ ಸಿದ್ಧ, ಆದರೆ ಈ ಹೋರಾಟವನ್ನು ಅರ್ಧಕ್ಕೆ ಬಿಡುವುದಿಲ್ಲ ಎಂದರು.
ಸಾಹಿತಿ ಕೆ.ಎಸ್. ಭಗವಾನ್ ವಿರುದ್ಧ ವಾಗ್ದಾಳಿ
ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಕೆ.ಎಸ್. ಭಗವಾನ್ ಅವರು ರಾಮಾಯಣ ಮತ್ತು ವಾಲ್ಮೀಕಿ ಮಹರ್ಷಿಗಳ ಕುರಿತು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಭಗವಾನ್ ಅವರ ಹೇಳಿಕೆಗಳನ್ನು ತಿಕ್ಕಲುತನ ಎಂದ ಅವರು, ವಾಲ್ಮೀಕಿಗಳು 700 ವರ್ಷಗಳ ಹಿಂದೆಯೇ ರಾಜಕೀಯ ವ್ಯವಸ್ಥೆ, ಮಂತ್ರಿಮಂಡಲ, ತೆರಿಗೆ ಪದ್ಧತಿ ಮತ್ತು ಸರ್‌ಪ್ಲಸ್ ಬಜೆಟ್‌ನಂತಹ ದೂರದೃಷ್ಟಿಯ ವಿಷಯಗಳನ್ನು ರಾಮಾಯಣದಲ್ಲಿ ಬರೆದಿದ್ದಾರೆ. ಅದರ ಅರಿವಿಲ್ಲದ ಭಗವಾನ್, ಶಂಬೂಕನ ಪ್ರಸಂಗವನ್ನು ಮುಂದಿಟ್ಟುಕೊಂಡು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೀತೆಯ ಜಾತಿ ಯಾವುದು ಎಂದು ಪ್ರಶ್ನಿಸುವ ಭಗವಾನ್ ಅವರಿಗೆ ವಾಲ್ಮೀಕಿ ಮಹರ್ಷಿಗಳು ಸಾರಿದ 'ಮನುಷ್ಯತ್ವವೇ ಮುಖ್ಯ' ಎಂಬ ಸಂದೇಶ ಅರ್ಥವಾಗಿಲ್ಲ ಎಂದು ಲೇವಡಿ ಮಾಡಿದರು. ತಕ್ಷಣವೇ ಅವರು ಮನುಕುಲದ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ರಾಜ್ಯ ಸರ್ಕಾರವು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಭಗವಾನ್ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

