ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ರಾಜ್ಯದ ಪ್ರಮುಖ ಸುದ್ದಿಗಳು
x

ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಚಾಲನೆ, ತುಮಕೂರು ಕಾರ್ ಸ್ಫೋಟದ ತನಿಖೆಯಲ್ಲಿ ಸಿಕ್ಕ ರೋಚಕ ಟ್ವಿಸ್ಟ್

ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ರಾಜ್ಯದ ಪ್ರಮುಖ ಸುದ್ದಿಗಳು

ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಚಾಲನೆ, ತುಮಕೂರು ಕಾರ್ ಸ್ಫೋಟದ ತನಿಖೆಯಲ್ಲಿ ಸಿಕ್ಕ ರೋಚಕ ಟ್ವಿಸ್ಟ್ ಹಾಗೂ ಶಾಸಕ ಸುರೇಶ್ ಆಣೆ ಪ್ರಮಾಣದ ಇಂದಿನ ಪ್ರಮುಖ ಸುದ್ದಿಗಳು.


Click the Play button to hear this message in audio format

ರಾಜ್ಯದಲ್ಲಿ ಇಂದಿನಿಂದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 29ರವರೆಗೆ ಒಂದು ತಿಂಗಳ ಕಾಲ ನಡೆಯಲಿದೆ. ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆ ಅರ್ಜಿಗಳನ್ನು ಭರ್ತಿ ಮಾಡಿಕೊಳ್ಳಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದಾಶಿವನಗರದ ತಮ್ಮ ನಿವಾಸದಲ್ಲಿ ಅರ್ಜಿ ಭರ್ತಿ ಮಾಡಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ನಾಗರಿಕರು ಮತದಾನದ ಹಕ್ಕನ್ನು ಕಳೆದುಕೊಂಡರೆ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಇನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ತಮ್ಮ ನಿವಾಸಗಳಲ್ಲಿ ಫಾರ್ಮ್ ಭರ್ತಿ ಮಾಡಿ ಸಾರ್ವಜನಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ. ಈ ಪ್ರಕ್ರಿಯೆಗೆ ಪೂರಕವಾಗಿ ಕಂದಾಯ ಇಲಾಖೆ ವತಿಯಿಂದ ಶಾಶ್ವತ ನಿವಾಸ ಪ್ರಮಾಣ ಪತ್ರವನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ನೀಡಲು ಸರ್ಕಾರ ನಿರ್ಧರಿಸಿದೆ.

ತುಮಕೂರು ಕಾರ್ ಸ್ಫೋಟ ಪ್ರಕರಣಕ್ಕೆ ಭೀಕರ ಟ್ವಿಸ್ಟ್

ಇತ್ತೀಚಿಗೆ ತುಮಕೂರಿನ ಹೈವೇ ಬಳಿ ನಾಗೇಂದ್ರ ಎಂಬ ಯುವಕ ಗೆಳತಿಯೊಂದಿಗೆ ಗಲಾಟೆ ಮಾಡಿಕೊಂಡು, ಕಾರಿನಲ್ಲಿ ಪೆಟ್ರೋಲ್ ಬಾಂಬ್ ಸಿಡಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಈಗ ಭೀಕರ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮಲೆನಾಡು ಮತ್ತು ಕರಾವಳಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್ ಅಪರಾಧ ಜಾಲವನ್ನು ಪತ್ತೆಹಚ್ಚಿದ್ದಾರೆ. ಕಾಡುಪ್ರಾಣಿಗಳ ಶಿಕಾರಿಗೆ ಹಾಗೂ ಇನ್ನಿತರ ದುಷ್ಕೃತ್ಯಗಳಿಗೆ ಕೇವಲ ನೂರು-ಮುನ್ನೂರು ರೂಪಾಯಿಗಳಿಗೆ ನಾಡಬಾಂಬ್, ಪೆಟ್ರೋಲ್ ಬಾಂಬ್ ಹಾಗೂ ಕಳ್ಳ ಬಂದೂಕುಗಳನ್ನು ತಯಾರಿಸಿಕೊಡುತ್ತಿದ್ದ ಜಾಲವನ್ನು ಭೇದಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ಜಾಲದ ಹಿಂದೆ ಬೇರೆ ಯಾವುದಾದರೂ ವಿಧ್ವಂಸಕ ಕೃತ್ಯಗಳ ಉದ್ದೇಶವಿತ್ತೇ ಎಂಬ ಆಯಾಮದಲ್ಲಿ ಪೊಲೀಸರು ಆಳವಾದ ತನಿಖೆ ನಡೆಸುತ್ತಿದ್ದಾರೆ.

ಅಡ್ಡ ಮತದಾನ ವಿವಾದ: ದೇವಸ್ಥಾನದಲ್ಲಿ ಶಾಸಕ ಸುರೇಶ್ ಆಣೆ

ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಶಾಸಕರ ಅಡ್ಡ ಮತದಾನದ ಬಿಸಿ ಇನ್ನೂ ಆರಿಲ್ಲ. ಈ ಅನುಮಾನದ ಪಟ್ಟಿಯಲ್ಲಿದ್ದ ಬೇಲೂರು ಕ್ಷೇತ್ರದ ಬಿಜೆಪಿ ಶಾಸಕ ಎಚ್.ಕೆ. ಸುರೇಶ್ ಅವರು ಪ್ರಸಿದ್ಧ ಬೇಲೂರು ಚೆನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ದೇವರ ಮುಂದೆ ನಿಂತು ನಾನು ಅಡ್ಡ ಮತದಾನ ಮಾಡಿಲ್ಲ ಎಂದು ಆಣೆ ಪ್ರಮಾಣ ಮಾಡಿದ್ದಾರೆ. ಅಷ್ಟೇ ಅಲ್ಲದೆ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಯ ಮುಂದೆಯೂ ತಾವು ನಿರಪರಾಧಿ ಎಂದು ಪ್ರಮಾಣ ಮಾಡುವುದಾಗಿ ಘೋಷಿಸಿದ್ದಾರೆ. ನರೇಂದ್ರ ಮೋದಿ ಅವರ ಪ್ರಚಾರದಿಂದ ತಾವು ಗೆದ್ದಿದ್ದು, ಪಕ್ಷಕ್ಕೆ ಎಂದಿಗೂ ಮೋಸ ಮಾಡುವುದಿಲ್ಲ ಎಂದು ಅವರು ರಾಜಕೀಯ ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಅಡ್ಡ ಮತದಾನದ ಗೊಂದಲ ತಾರ್ಕಿಕ ಅಂತ್ಯ ಕಾಣುವವರೆಗೂ ಈ ಆಣೆ ಪ್ರಮಾಣದ ರಾಜಕೀಯ ಮುಂದುವರಿಯುವ ಲಕ್ಷಣಗಳು ಕಾಣಿಸುತ್ತಿವೆ.

Read More
Next Story