
ಕೊಡಗು ಎಸ್ಪಿಗೆ ಪತ್ರ ಬರೆದಿರುವ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ
ತೈಲ ಉಳಿತಾಯಕ್ಕೆ ಪ್ರಧಾನಿ ಕರೆ: ಪೊಲೀಸ್ ಬೆಂಗಾವಲು ಪಡೆ ಕಡಿತಗೊಳಿಸುವಂತೆ ಶಾಸಕ ಎ.ಎಸ್. ಪೊನ್ನಣ್ಣ ಪತ್ರ
ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದ ಬಿಕ್ಕಟ್ಟಿನ ಸಮಯದಲ್ಲಿ ಜನಪ್ರತಿನಿಧಿಗಳು ಇಂತಹ ಮಿತವ್ಯಯದ ಕ್ರಮಗಳ ಮೂಲಕ ಸಾರ್ವಜನಿಕರಿಗೆ ಮಾದರಿಯಾಗಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ದೇಶದಲ್ಲಿ ಎದುರಾಗಬಹುದಾದ ತೈಲ ಬಿಕ್ಕಟ್ಟಿನ ಆತಂಕ ಹಾಗೂ ಪರಿಸರ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ತಮಗೆ ನೀಡಲಾಗಿದ್ದ ಪೊಲೀಸ್ ಬೆಂಗಾವಲು ಪಡೆಯನ್ನು ಕಡಿತಗೊಳಿಸುವಂತೆ ಕೋರಿ ಪತ್ರ ಬರೆದಿದ್ದಾರೆ.
ಜಾಗತಿಕ ಮಟ್ಟದಲ್ಲಿ ತಲೆದೋರಿರುವ ಆರ್ಥಿಕ ಅಸ್ಥಿರತೆ ಹಾಗೂ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಸಂರಕ್ಷಣೆ ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು ಸಾರ್ವಜನಿಕ ಪ್ರತಿನಿಧಿಗಳು ಸಹಕರಿಸಬೇಕು ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಮನವಿ ಮಾಡಿದ್ದರು. ಈ ಕರೆಗೆ ಸ್ಪಂದಿಸಿರುವ ಕಾಂಗ್ರೆಸ್ ಶಾಸಕ ಪೊನ್ನಣ್ಣ, ತಮಗೆ ನೀಡಲಾಗಿರುವ ಬೆಂಗಾವಲು ವಾಹನಗಳ ಬಳಕೆಯನ್ನು ಕಡಿತಗೊಳಿಸಲು ಮುಂದಾಗಿದ್ದಾರೆ.
ಕೊಡಗು ಎಸ್ಪಿಗೆ ಪತ್ರ ಬರೆದ ಶಾಸಕ
ಕ್ಯಾಬಿನೆಟ್ ದರ್ಜೆಯ ಭದ್ರತೆಗೆ ಅರ್ಹರಾಗಿದ್ದರೂ, ತಮ್ಮ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸುವಾಗ ಭದ್ರತೆಗಾಗಿ ಒದಗಿಸಲಾಗಿರುವ ಬೆಂಗಾವಲು ಪಡೆಯನ್ನು ಹಿಂಪಡೆಯುವಂತೆ ಕೋರಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪೊನ್ನಣ್ಣ ಅಧಿಕೃತ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
"ನನ್ನ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಭದ್ರತೆಗೆ ಬೆಂಗಾವಲು ಪಡೆಯನ್ನು ಒದಗಿಸಲಾಗಿದೆ. ಆದರೆ, ಸದ್ಯದ ಜಾಗತಿಕ ಪರಿಸ್ಥಿತಿಯಲ್ಲಿ ತೈಲ ಬಿಕ್ಕಟ್ಟು ಸೃಷ್ಟಿಯಾಗುವ ಆತಂಕವಿದ್ದು, ಜೊತೆಗೆ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ನಿರ್ಮಾಣವಾಗಿರುವ ಸನ್ನಿವೇಶವನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕಿದೆ. ಹೀಗಾಗಿ ನನ್ನ ಭದ್ರತೆಯ ಬೆಂಗಾವಲು ಪಡೆಯನ್ನು ಕಡಿತಗೊಳಿಸಬೇಕು" ಎಂದು ಶಾಸಕರು ಪತ್ರದಲ್ಲಿ ವಿನಂತಿಸಿದ್ದಾರೆ.
ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದ ಬಿಕ್ಕಟ್ಟಿನ ಸಮಯದಲ್ಲಿ ಜನಪ್ರತಿನಿಧಿಗಳು ಇಂತಹ ಮಿತವ್ಯಯದ ಕ್ರಮಗಳ ಮೂಲಕ ಸಾರ್ವಜನಿಕರಿಗೆ ಮಾದರಿಯಾಗಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ವಿರೋಧ ಪಕ್ಷದ ಶಾಸಕರಾಗಿದ್ದರೂ, ದೇಶದ ಹಿತದೃಷ್ಟಿಯಿಂದ ಪ್ರಧಾನಿ ಮೋದಿಯವರ ಕರೆಗೆ ಓಗೊಟ್ಟು ಬೆಂಗಾವಲು ಪಡೆ ವಾಪಸ್ ಪಡೆದ ಪೊನ್ನಣ್ಣ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

