ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ: ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ
x

'ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆ'ಗೆ ಅರ್ಜಿ ಆಹ್ವಾನ: ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ

ರಾಜ್ಯದಲ್ಲಿನ ಬ್ರಾಹ್ಮಣ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ, ಅವರಿಗೆ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕೆ ಬೆಂಬಲ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರ ಏಳಿಗೆಗಾಗಿ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಜಾರಿಗೆ ತಂದಿರುವ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯ 2026-27ನೇ ಸಾಲಿನ ಅರ್ಜಿ ಆಹ್ವಾನದ ಕರಪತ್ರವನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಡಾ. ಜಿ. ಪರಮೇಶ್ವರ, ಸಮಾಜದ ಎಲ್ಲ ವರ್ಗದ ಬಡವರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು. ರಾಜ್ಯದಲ್ಲಿರುವ ಬ್ರಾಹ್ಮಣ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ, ಅವರಿಗೆ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗದಂತಹ ಕ್ಷೇತ್ರಗಳಲ್ಲಿ ಬೆಂಬಲ ನೀಡುವ ಉದ್ದೇಶದಿಂದ ಈ ಮಂಡಳಿಯನ್ನು ಸ್ಥಾಪಿಸಲಾಗಿದೆ. ಬ್ರಾಹ್ಮಣ ಸಮುದಾಯದ ಬಡವರ ಸರ್ವತೋಮುಖ ಅಭಿವೃದ್ಧಿಯೇ ಮಂಡಳಿಯ ಮುಖ್ಯ ಗುರಿ ಎಂದು ವಿವರಿಸಿದರು. ಸರ್ಕಾರವು 2025-26ನೇ ಸಾಲಿನಲ್ಲಿ ಈ ನೂತನ ಯೋಜನೆಯನ್ನು ಪರಿಚಯಿಸಿತು. ಬ್ರಾಹ್ಮಣ ಸಮುದಾಯದ ಬಡವರು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು, ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಈ ಯೋಜನೆ ವರದಾನವಾಗಿದೆ. ಗುಡಿ ಕೈಗಾರಿಕೆಗಳು, ಸಣ್ಣ ಕೈಗಾರಿಕೆಗಳು, ಹೋಟೆಲ್ ಉದ್ಯಮ, ಹಸು ಸಾಕಾಣಿಕೆ ಸೇರಿದಂತೆ ವಿವಿಧ ಸ್ವಯಂ ಉದ್ಯೋಗಗಳಿಗೆ ಈ ಯೋಜನೆಯಡಿ ಆರ್ಥಿಕ ನೆರವು ಒದಗಿಸಲಾಗುತ್ತದೆ.

ಯೋಜನೆಯ ಮುಖ್ಯ ಉದ್ದೇಶಗಳು

ಕನಿಷ್ಠ 1 ಲಕ್ಷದಿಂದ ಗರಿಷ್ಠ 2 ಲಕ್ಷ ರೂಪಾಯಿಗಳವರೆಗೆ ಸಾಲ-ಸಹಾಯಧನ ನೀಡಲಾಗುತ್ತದೆ. ಮಂಜೂರಾದ ಸಾಲದ ಮೊತ್ತದಲ್ಲಿ ಶೇ. 20ರಷ್ಟು ಸಹಾಯಧನ ನೀಡಲಾಗುತ್ತದೆ. ಉಳಿದ ಶೇ. 80ರಷ್ಟು ಸಾಲದ ಮೊತ್ತಕ್ಕೆ ಕೇವಲ ಶೇ. 4ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಇದನ್ನು ಒಟ್ಟು 34 ಕಂತುಗಳಲ್ಲಿ ಮರುಪಾವತಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕಳೆದ ವರ್ಷದ (2025-26) ಸಾಧನೆಯನ್ನು ವಿವರಿಸಿದ ಪರಮೇಶ್ವರ್‌ ಅವರು, ಯೋಜನೆಗೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯನ್ನು ಶ್ಲಾಘಿಸಿದರು. ಕಳೆದ ಸಾಲಿನಲ್ಲಿ ಒಟ್ಟು 1333 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 20.60 ಕೋಟಿ ರೂ. ವೆಚ್ಚದಲ್ಲಿ 1048 ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಲಾಗಿದೆ. ವಿಶೇಷವಾಗಿ, ಸಾಲ ಮರುಪಾವತಿಯಲ್ಲಿ ಶೇ. 98ರಷ್ಟು ಯಶಸ್ಸನ್ನು ಸಾಧಿಸಿರುವುದು ಮಂಡಳಿಯ ಪಾಲಿಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು. ಫಲಾನುಭವಿಗಳು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವುದರಿಂದ, ಹೆಚ್ಚಿನ ಸಂಖ್ಯೆಯ ಬಡವರಿಗೆ ನೆರವು ನೀಡಲು ಮಂಡಳಿಗೆ ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

2026-27ನೇ ಸಾಲಿಗೆ ಅರ್ಜಿ ಆಹ್ವಾನ

ಈಗ ಮುಂಬರುವ 2026-27ನೇ ಸಾಲಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದೆ. ಅರ್ಹರು ನಿಗದಿತ ದಿನಾಂಕದೊಳಗೆ ಮಂಡಳಿಯ ಅಧಿಕೃತ ವೆಬ್‌ಸೈಟ್ ಅಥವಾ ನಿಗದಿತ ಕಚೇರಿಗಳ ಮೂಲಕ ಅರ್ಜಿ ಸಲ್ಲಿಸಬೇಕು. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಆರ್ಥಿಕವಾಗಿ ಹಿಂದುಳಿದವರು ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಈ ಸೌಲಭ್ಯವನ್ನು ಬ್ರಾಹ್ಮಣ ಸಮುದಾಯದ ಪ್ರತಿ ಬಡ ಕುಟುಂಬವೂ ಬಳಸಿಕೊಳ್ಳಬೇಕೆಂದು ಡಾ. ಜಿ. ಪರಮೇಶ್ವರ ಕರೆ ನೀಡಿದರು. ಸಾಲ ಪಡೆದವರು ಉದ್ಯಮಶೀಲತೆಯನ್ನು ಬೆಳೆಸಿಕೊಂಡು, ಆರ್ಥಿಕವಾಗಿ ಸಬಲರಾಗಬೇಕು. ಮಂಡಳಿಯು ನೀಡುವ ಆರ್ಥಿಕ ನೆರವು ಬದುಕಿನ ಬುನಾದಿಯಾಗಲಿ ಎಂದು ಆಶಿಸಿದರು. ಬ್ರಾಹ್ಮಣ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಈ ‘ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆ’ ಅತ್ಯಂತ ಮಹತ್ವದ್ದಾಗಿದೆ. ಕಳೆದ ವರ್ಷದ ಶೇ. 98ರಷ್ಟು ಮರುಪಾವತಿಯೇ ಈ ಯೋಜನೆಯ ಜನಪ್ರಿಯತೆಗೆ ಮತ್ತು ಫಲಾನುಭವಿಗಳ ಜವಾಬ್ದಾರಿಯುತ ನಡವಳಿಕೆಗೆ ಸಾಕ್ಷಿಯಾಗಿದೆ.

Read More
Next Story