
ಯೋಗೇಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು
ವಿಧಾನಸಭಾ ಸಚಿವಾಲಯಕ್ಕೆ ಶಿಕ್ಷೆಯ ಪ್ರಮಾಣ ಪ್ರಕಟದ ತೀರ್ಪಿನ ಪ್ರತಿ ತಡವಾಗಿ ತಲುಪಿರುವ ಕಾರಣ ವಿನಯ್ ಕುಲಕರ್ಣಿ ಶಾಸಕತ್ವವನ್ನು ಕಾನೂನು ವಿಭಾಗವು ಪರಿಶೀಲಿಸಿ ರದ್ದುಗೊಳಿಸಿದೆ.
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಹಿನ್ನೆಲೆ ಶಾಸಕ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ರದ್ದುಗೊಳಿಸಿ, ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏ.15 ರಂದು ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿತ್ತು. ವಿಶೇಷ ನ್ಯಾಯಾಲಯವು 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿದೆ. ನ್ಯಾಯಾಲಯದ ಆದೇಶವು ವಿಧಾನಸಭಾ ಸಚಿವಾಲಯಕ್ಕೆ ತಡವಾಗಿ ತಲುಪಿರುವ ಕಾರಣ ವಿನಯ್ ಕುಲಕರ್ಣಿ ಶಾಸಕತ್ವವನ್ನು ಈಗ ರದ್ದುಗೊಳಿಸಲಾಗಿದೆ. ಇದಕ್ಕೂ ಮುನ್ನ ನ್ಯಾಯಾಲಯದ ಆದೇಶವನ್ನು ಸಚಿವಾಲಯದ ಕಾನೂನು ವಿಭಾಗವು ಕೂಲಂಕಷವಾಗಿ ಪರಿಶೀಲಿಸಿ ಈ ಆದೇಶ ಹೊರಡಿಸಿದೆ.
ಅನರ್ಹತೆಯ ಅವಧಿ
ಪ್ರಜಾಪ್ರತಿನಿಧಿ ಕಾಯ್ದೆ 1951 ರ ಸೆಕ್ಷನ್ 8 ರ ಪ್ರಕಾರ, ಯಾವುದೇ ಒಬ್ಬ ಜನಪ್ರತಿನಿಧಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆಯಾದರೆ, ತಮ್ಮ ಸ್ಥಾನ ಕಳೆದುಕೊಳ್ಳುತ್ತಾರೆ. ವಿನಯ್ ಕುಲಕರ್ಣಿ ಅವರು ಶಿಕ್ಷೆ ಘೋಷಣೆಯಾದ ದಿನದಿಂದ ಅನರ್ಹಗೊಂಡಿದ್ದಾರೆ. ಇಷ್ಟೇ ಅಲ್ಲದೆ, ಜೈಲು ಶಿಕ್ಷೆ ಪೂರೈಸಿ ಬಿಡುಗಡೆಯಾದ ನಂತರದ ಆರು ವರ್ಷಗಳ ಕಾಲ ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಇದು ವಿನಯ್ ಕುಲಕರ್ಣಿ ರಾಜಕೀಯ ಜೀವನಕ್ಕೆ ದೀರ್ಘಕಾಲದ ವಿರಾಮ ನೀಡುವ ಸಾಧ್ಯತೆ ಇದೆ. ಈಗಾಗಲೇ ಹೈಕೋರ್ಟ್‌ಗೆ ವಿನಯ್ ಕುಲಕರ್ಣಿ ಅವರು ಮೇಲ್ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಹೈಕೋರ್ಟ್ ಶಿಕ್ಷೆಗೆ ತಡೆ ನೀಡದಿದ್ದರೆ ಅಥವಾ ಅವರನ್ನು ದೋಷಮುಕ್ತಗೊಳಿಸದಿದ್ದರೆ ಈ ಅನರ್ಹತೆ ಮುಂದುವರಿಯಲಿದೆ.
ಧಾರವಾಡ ಕ್ಷೇತ್ರದ ಮೇಲೆ ಪರಿಣಾಮ
ವಿನಯ್ ಕುಲಕರ್ಣಿ ಅನರ್ಹತೆಯಿಂದಾಗಿ ಧಾರವಾಡ ವಿಧಾನಸಭಾ ಕ್ಷೇತ್ರವು ಈಗ ಅಧಿಕೃತವಾಗಿ ಖಾಲಿ ಎಂದು ಘೋಷಿಸಲ್ಪಟ್ಟಿದೆ. ಸ್ಥಾನ ಖಾಲಿಯಾದ ಆರು ತಿಂಗಳೊಳಗೆ ಕೇಂದ್ರ ಚುನಾವಣಾ ಆಯೋಗವು ಉಪಚುನಾವಣೆಯನ್ನು ನಡೆಸಬೇಕಾಗುತ್ತದೆ. ಇದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮತ್ತೊಂದು ಬಲಪ್ರದರ್ಶನಕ್ಕೆ ವೇದಿಕೆಯಾಗಲಿದೆ. ವಿನಯ್ ಕುಲಕರ್ಣಿ ಅವರು ಉತ್ತರ ಕರ್ನಾಟಕದ ಪ್ರಬಲ ಪಂಚಮಸಾಲಿ ಲಿಂಗಾಯತ ನಾಯಕರಾಗಿದ್ದರು. ಅವರ ಅನುಪಸ್ಥಿತಿಯು ಕ್ಷೇತ್ರದಲ್ಲಿ ಅವರ ಪಕ್ಷಕ್ಕೆ ನಾಯಕತ್ವದ ಶೂನ್ಯತೆಯನ್ನು ತಂದೊಡ್ಡಬಹುದು.
ಈ ಅನರ್ಹತೆಯು ರಾಜ್ಯದ ಪ್ರಮುಖ ಪಕ್ಷಗಳ ಮೇಲೆ ಭಿನ್ನ ರೀತಿಯ ಪರಿಣಾಮಗಳನ್ನು ಬೀರಲಿದೆ. ವಿನಯ್ ಕುಲಕರ್ಣಿ ಆಡಳಿತ ಪಕ್ಷದ ಪ್ರಮುಖ ಸಂಘಟಕರಾಗಿದ್ದರು. ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ಅವರ ಪಾತ್ರ ದೊಡ್ಡದಾಗಿತ್ತು. ಅವರ ಅನರ್ಹತೆಯು ಒಂದು ಸಮುದಾಯದ ಮತಬ್ಯಾಂಕ್ ಮೇಲೆಯೂ ಪರಿಣಾಮ ಬೀರಬಹುದು. ಈ ಬೆಳವಣಿಗೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ವಿರೋಧ ಪಕ್ಷಗಳು ಸಜ್ಜಾಗಿವೆ. ಆಡಳಿತ ಪಕ್ಷದ ನಾಯಕರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಮುಂದಿಟ್ಟುಕೊಂಡು ನೈತಿಕತೆಯ ಪ್ರಶ್ನೆಯನ್ನು ಎತ್ತುವ ಸಾಧ್ಯತೆ ಇದೆ.
ಶಾಸಕತ್ವ ರದ್ದುಗೊಳಿಸಲು ಸಭಾಧ್ಯಕ್ಷರಿಗೆ ಪತ್ರ
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಿಕ್ಷೆವಿಧಿಸಲಾಗಿದ್ದು, ಈ ಬೆಳವಣಿಗೆಯ ನಂತರ ಅವರನ್ನು ಶಾಸಕ ಸ್ಥಾನದಿಂದ ಅನರ್ಹತೆ ಮಾಡಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೆ ಕೊರವರ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದರು.
ಭಾರತೀಯ ಸಂವಿಧಾನದ ಪರಿಚ್ಛೇದ 191(1)(e) ಮತ್ತು 1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8(3) ರ ಪ್ರಕಾರ, ಯಾವುದೇ ಶಾಸಕರು ಕ್ರಿಮಿನಲ್ ಪ್ರಕರಣದಲ್ಲಿ ದೋಷಿಯಾಗಿ ಸಾಬೀತಾಗಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆಗೆ ಗುರಿಯಾದರೆ, ಅವರು ತಕ್ಷಣವೇ ತಮ್ಮ ಸ್ಥಾನದಿಂದ ಅನರ್ಹರಾಗುತ್ತಾರೆ. ಸುಪ್ರೀಂ ಕೋರ್ಟ್‌ನ 'ಲಿಲಿ ಥಾಮಸ್ ಮತ್ತು ಕೇಂದ್ರ ಸರ್ಕಾರ' ತೀರ್ಪಿನನ್ವಯ, ಶಿಕ್ಷೆಯಾದ ತಕ್ಷಣವೇ ಅನರ್ಹತೆ ಜಾರಿಗೆ ಬರುತ್ತದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ವಿನಯ್ ಕುಲಕರ್ಣಿ ಶಾಸಕತ್ವವನ್ನು ಅನರ್ಹಗೊಳಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

