ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಶಾಸಕ ವಿನಯ್‌ ಕುಲಕರ್ಣಿ, ಸಿಬಿಐಗೆ ನೋಟಿಸ್
x
ವಿನಯ್ ಕುಲಕರ್ಣಿ.

ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಶಾಸಕ ವಿನಯ್‌ ಕುಲಕರ್ಣಿ, ಸಿಬಿಐಗೆ ನೋಟಿಸ್

ವಿನಯ್‌ ಕುಲಕರ್ಣಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್‌ ಅವರು, "ಪ್ರಕರಣದಲ್ಲಿ ಯಾವುದೇ ಪ್ರಬಲ ಸಾಕ್ಷ್ಯಾಧಾರಗಳಿಲ್ಲದಿದ್ದರೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಹೈಕೋರ್ಟ್​ ಮುಂದೆ ವಾದಿಸಿದ್ದಾರೆ.


Click the Play button to hear this message in audio format

ಧಾರವಾಡದ ಜಿ.ಪಂ. ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ, ಜಾಮೀನು ನೀಡುವಂತೆ ಕೋರಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಹಾಗೂ ಚಂದ್ರಶೇಖರ್‌ ಇಂಡಿ ಅವರು ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೋಟಿಸ್‌ ಜಾರಿ ಮಾಡಿದೆ.

ಪ್ರಕರಣದಲ್ಲಿ ಅಪರಾಧಿಗಳಾಗಿ ಜೈಲು ಪಾಲಾಗಿರುವ ವಿನಯ್‌ ಕುಲಕರ್ಣಿ ಮತ್ತು ಚಂದ್ರಶೇಖರ್‌ ಇಂಡಿ (ಚಂದು ಮಾಮ) ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿಗಳ ವಿಚಾರಣೆಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಮೊಹಮ್ಮದ್‌ ನವಾಜ್‌ ಮತ್ತು ಟಿ.ವೆಂಟಕೇಶ್‌ ನಾಯಕ್‌ ಅವರನ್ನೊಳಗೊಂಡ ವಿಭಾಗೀಯ ಪೀಠವು ನಡೆಸಿತು.

ವಕೀಲರ ವಾದವೇನು?

ವಿನಯ್‌ ಕುಲಕರ್ಣಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್‌ ಅವರು, "ಪ್ರಕರಣದಲ್ಲಿ ಯಾವುದೇ ಪ್ರಬಲ ಸಾಕ್ಷ್ಯಾಧಾರಗಳಿಲ್ಲದಿದ್ದರೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ವಿಚಾರಣೆಯ ಹಂತದಲ್ಲಿ ವಿನಯ್‌ ಮತ್ತು ಚಂದ್ರಶೇಖರ್‌ ಜಾಮೀನಿನ ಮೇಲೆ ಹೊರಗಿದ್ದರು. ಮೆರಿಟ್‌ ಆಧರಿಸಿ ಸುಪ್ರೀಂ ಕೋರ್ಟ್‌ ಸಹ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಇದಲ್ಲದೆ, ಪ್ರಕರಣದ ಏಳು ಪ್ರತ್ಯಕ್ಷದರ್ಶಿಗಳು ಹಾಗೂ ಇತರೆಲ್ಲಾ ಪ್ರಾಸಿಕ್ಯೂಷನ್‌ ಸಾಕ್ಷಿಗಳು ಪ್ರತೀಕೂಲವಾಗಿವೆ. ಹೀಗಾಗಿ, ದಾಖಲೆಗಳನ್ನು ಪರಿಗಣಿಸಿ ಶಿಕ್ಷೆಯನ್ನು ಅಮಾನತುಗೊಳಿಸಬೇಕು," ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಚಂದ್ರಶೇಖರ್‌ ಇಂಡಿ ಪರ ಹಾಜರಾಗಿದ್ದ ಹಿರಿಯ ವಕೀಲ ಎಂ. ನಾಗಮುತ್ತು ಅವರು, "ಕೇವಲ ಪಿತೂರಿ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 16ನೇ ಆರೋಪಿಯಾಗಿರುವ ಚಂದ್ರಶೇಖರ್‌ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ. ಅಪ್ರೂವರ್‌ ಆಗಿದ್ದ ವ್ಯಕ್ತಿ ಕೂಡ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಿದ್ದಾರೆ. ಹೀಗಾಗಿ, ಶಿಕ್ಷೆ ಅಮಾನತು ಮಾಡಬೇಕು," ಎಂದು ಕೋರಿದರು.

ಸಿಬಿಐ ಆಕ್ಷೇಪಣೆ ಹಾಗೂ ಕೋರ್ಟ್ ಆದೇಶ

ವಾದ-ಪ್ರತಿವಾದ ಆಲಿಸಿದ ಪೀಠವು, "ಈ ಹಂತದಲ್ಲಿ ಮೆರಿಟ್‌ ಮೇಲೆ ನಾವು ಈಗಲೇ ವಿಚಾರಣೆ ನಡೆಸುವುದಿಲ್ಲ" ಎಂದು ಸ್ಪಷ್ಟಪಡಿಸಿ, ಸಿಬಿಐಗೆ ನೋಟಿಸ್‌ ಜಾರಿಗೊಳಿಸಿತು.

ಇದೇ ವೇಳೆ, ಮುಂಬರುವ ರಜಾಕಾಲದ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಮನವಿ ಮಾಡಲು ಸ್ವಾತಂತ್ರ್ಯ ನೀಡಬೇಕು ಎಂಬ ವಕೀಲ ಸಿ.ವಿ. ನಾಗೇಶ್‌ ಅವರ ಕೋರಿಕೆಯನ್ನು ನ್ಯಾಯಾಲಯ ಪುರಸ್ಕರಿಸಿತು. ಇದಕ್ಕೆ ಸಿಬಿಐ ಪರ ವಕೀಲ ರಾಹುಲ್‌ ಕೃಷ್ಣಾರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. "ವಿಚಾರಣಾಧೀನ ನ್ಯಾಯಾಲಯ ನೀಡಿರುವ ತೀರ್ಪು ಬರೋಬ್ಬರಿ 680 ಪುಟಗಳಿವೆ. ಇದನ್ನು ಅಧ್ಯಯನ ಮಾಡಿ ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ," ಎಂದು ಕೋರಿದರು. ಸಿಬಿಐನ ಈ ಆಕ್ಷೇಪಣೆಯನ್ನು ತನ್ನ ಆದೇಶದಲ್ಲಿ ದಾಖಲಿಸಿಕೊಂಡ ಹೈಕೋರ್ಟ್, ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ

2016ರಲ್ಲಿ ಧಾರವಾಡದಲ್ಲಿ ನಡೆದಿದ್ದ ಯೋಗೀಶ್‌ ಗೌಡ ಕೊಲೆ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು, 2026ರ ಏಪ್ರಿಲ್ 15ರಂದು 17 ಮಂದಿ ಆರೋಪಿಗಳನ್ನು ದೋಷಿಗಳು ಎಂದು ತೀರ್ಪು ನೀಡಿತ್ತು. ತದನಂತರ, ಏಪ್ರಿಲ್ 17ರಂದು ಶಾಸಕ ವಿನಯ್‌ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂಡಿ ಸೇರಿದಂತೆ ಒಟ್ಟು 16 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.

Read More
Next Story