
ಸಂಘಟಿತ ಹೋರಾಟಕ್ಕೆ ನಾಂದಿ: 'ವಿಮುಕ್ತ ದೇವದಾಸಿ ತಾಯಂದಿರ ಮಹಾಒಕ್ಕೂಟ' ಅಸ್ತಿತ್ವ
ದೇವದಾಸಿ ಮಹಿಳೆಯರ ಆತ್ಮಗೌರವ, ನ್ಯಾಯಬದ್ಧ ಹಕ್ಕುಗಳಿಗಾಗಿ ರಾಜ್ಯದ ವಿವಿಧ ಜಿಲ್ಲೆಗಳ 15ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಕೈಜೋಡಿಸಿ, ವಿಮುಕ್ತ ದೇವದಾಸಿ ತಾಯಂದಿರ ಮಹಾಒಕ್ಕೂಟವನ್ನು ಘೋಷಿಸಿವೆ.
ದಶಕಗಳಿಂದಲೂ ಸಾಮಾಜಿಕ ಕಳಂಕ, ಅಜ್ಞಾನ ಮತ್ತು ಶೋಷಣೆಯ ಸುಳಿಯಲ್ಲಿ ಸಿಲುಕಿರುವ ದೇವದಾಸಿ ಸಮುದಾಯದ ಮಹಿಳೆಯರು, ಇದೀಗ ತಮ್ಮ ಹಕ್ಕುಗಳಿಗಾಗಿ ಒಂದಾಗಿ ನಿಂತಿದ್ದಾರೆ. ದೇವದಾಸಿ ಮಹಿಳೆಯರ ಆತ್ಮಗೌರವ, ನ್ಯಾಯಬದ್ಧ ಹಕ್ಕುಗಳು ಮತ್ತು ಪುನರ್ವಸತಿಗಾಗಿ ರಾಜ್ಯದ ವಿವಿಧ ಜಿಲ್ಲೆಗಳ 15ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಕೈಜೋಡಿಸಿ, ಬೆಂಗಳೂರಿನಲ್ಲಿ ವಿಮುಕ್ತ ದೇವದಾಸಿ ತಾಯಂದಿರ ಮಹಾಒಕ್ಕೂಟವನ್ನು ಅಧಿಕೃತವಾಗಿ ಘೋಷಿಸಿವೆ.
ನಗರದಲ್ಲಿ ಆಯೋಜಿಸಲಾಗಿದ್ದ 'ವಿಮುಕ್ತ ಸಂಗಮ' ಎಂಬ ಎರಡು ದಿನಗಳ ಸಮಾಲೋಚನಾ ಸಭೆಯು ದೇವದಾಸಿ ಸಮುದಾಯದ ಹೋರಾಟದಲ್ಲಿ ಹೊಸ ಅಧ್ಯಾಯವೊಂದನ್ನು ತೆರೆದಿದೆ. ಇದುವರೆಗೆ ಚದುರಿಹೋಗಿದ್ದ ದೇವದಾಸಿ ಸಮುದಾಯದ ಧ್ವನಿಯನ್ನು ಒಗ್ಗೂಡಿಸಿ, ಸರ್ಕಾರದ ಮೇಲೆ ಬಲವಾದ ಒತ್ತಡ ಹೇರಲು ಈ ಮಹಾಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ.
ಅಧಿಕಾರಶಾಹಿಯ ತಾತ್ಸಾರಕ್ಕೆ ಲೇಖಕಿ ದು. ಸರಸ್ವತಿ ಆಕ್ರೋಶ
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಲೇಖಕಿ ದು. ಸರಸ್ವತಿ ಅವರು, ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ತೀವ್ರವಾಗಿ ಟೀಕಿಸಿದರು. ದೇವದಾಸಿ ತಾಯಂದಿರ ಬದುಕಿನ ನೈಜ ವಾಸ್ತವ, ಅವರ ನೋವು ಮತ್ತು ಹೋರಾಟಗಳನ್ನು ಅಧಿಕಾರದಲ್ಲಿರುವವರು ಕೇವಲ ಸಂಖ್ಯೆಗಳಾಗಿ ನೋಡುತ್ತಿದ್ದಾರೆಯೇ ಹೊರತು, ಮನುಷ್ಯರಾಗಿ ಅರ್ಥಮಾಡಿಕೊಳ್ಳುತ್ತಿಲ್ಲ. ದಲಿತರು ಮತ್ತು ದೇವದಾಸಿ ಮಹಿಳೆಯರ ಬಗ್ಗೆ ಆಡಳಿತ ವ್ಯವಸ್ಥೆಯಲ್ಲಿರುವ ತಾತ್ಸಾರ ಮನೋಭಾವ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಅಡ್ಡಿಯಾಗಿದೆ ಎಂದು ವಿಷಾದಿಸಿದರು. ಜಾತಿ ವ್ಯವಸ್ಥೆ ಮತ್ತು ಧಾರ್ಮಿಕ ಮೌಢ್ಯಗಳು ಇಂದಿಗೂ ದೇವದಾಸಿ ಪದ್ಧತಿಯನ್ನು ಜೀವಂತವಾಗಿಟ್ಟಿವೆ ಎಂಬುದನ್ನು ಒತ್ತಿ ಹೇಳಿದ ಅವರು, ಶಿಕ್ಷಣ ಮತ್ತು ಸಂಘಟಿತ ಹೋರಾಟವೇ ಇದಕ್ಕೆ ಏಕೈಕ ಮದ್ದು ಎಂದರು. ಮಾಜಿ ದೇವದಾಸಿ ಮಹಿಳೆಯರಿಗೆ ಭೂಮಿ ಹಕ್ಕು, ಗೌರವಯುತ ಪುನರ್ವಸತಿ ಮತ್ತು ಅವರ ಮಕ್ಕಳಿಗೆ ಸಮಾನ ಉದ್ಯೋಗಾವಕಾಶ ಸಿಗದ ಹೊರತು ಸಾಮಾಜಿಕ ನ್ಯಾಯ ಎಂಬುದು ಕೇವಲ ಕಾಗದದ ಮೇಲಿನ ಕನಸು ಎಂದು ಅಭಿಪ್ರಾಯಪಟ್ಟರು.
ಸರ್ಕಾರದ ಮರುಸಮೀಕ್ಷೆ ಮೇಲೆ ಅನುಮಾನ: ಆರ್. ಮಾನಸಯ್ಯ
ಸಿಪಿಎಂಎಲ್ ರೆಡ್ ಸ್ಟಾರ್ ಪಕ್ಷದ ಸ್ಥಾಪಕ ಆರ್. ಮಾನಸಯ್ಯ ಸರ್ಕಾರದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿದ್ದ 46 ಸಾವಿರ ಮಾಜಿ ದೇವದಾಸಿ ಮಹಿಳೆಯರ ಸಂಖ್ಯೆಯನ್ನು ಇತ್ತೀಚಿನ ಮರುಸಮೀಕ್ಷೆಯಲ್ಲಿ 23 ಸಾವಿರಕ್ಕೆ ಇಳಿಸಿರುವುದನ್ನು ಅವರು ಅತಿದೊಡ್ಡ ಅನ್ಯಾಯ. ಪಾರದರ್ಶಕವಲ್ಲದ ಸಮೀಕ್ಷೆ ನಡೆಸಿ ಅರ್ಹರನ್ನು ಕೈಬಿಡುವ ಮೂಲಕ ಸರ್ಕಾರ ದೇವದಾಸಿ ಸಮುದಾಯದ ಗಾಯದ ಮೇಲೆ ಬರೆ ಎಳೆಯುತ್ತಿದೆ. ತಕ್ಷಣವೇ ಪಾರದರ್ಶಕವಾದ ಮರುಸಮೀಕ್ಷೆ ನಡೆಸಿ, ಪ್ರತಿಯೊಬ್ಬರಿಗೂ ಭೂಮಿ ಮತ್ತು ಸೂರು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮಹಾಒಕ್ಕೂಟದ ಪ್ರಮುಖ ಬೇಡಿಕೆಗಳು
ಸಭೆಯಲ್ಲಿ ಭಾಗವಹಿಸಿದ್ದ ಸಮುದಾಯದ ಮುಖಂಡ ಚಂದಾಲಿಂಗ ಕಲಲಾಬಂಡಿ ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಒಕ್ಕೂಟದ ಮೂಲಕ ಕೆಲವು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ. ಮಾಜಿ ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿಯನ್ನು ಗೌರವಯುತವಾಗಿ ಹೆಚ್ಚಳ ಮಾಡಬೇಕು. ಪ್ರತಿ ಕುಟುಂಬಕ್ಕೂ ಕೃಷಿ ಯೋಗ್ಯ ಭೂಮಿ ಹಾಗೂ ಸೂರು ಕಲ್ಪಿಸಬೇಕು. ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ, ಉಚಿತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ವಿಶೇಷ ಆದ್ಯತೆ ನೀಡಬೇಕು. ಆರೋಗ್ಯ ವಿಮೆ ಜಾರಿಯೊಂದಿಗೆ ಕೌಶಲ್ಯ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಹೊಸದಾಗಿ ರಚನೆಗೊಂಡಿರುವ ಮಹಾಒಕ್ಕೂಟವು ಮುಂಬರುವ ದಿನಗಳಲ್ಲಿ ಸರ್ಕಾರದ ವಿಶೇಷ ಅನುದಾನಗಳು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಕಟ್ಟಕಡೆಯ ಮಹಿಳೆಯರಿಗೆ ತಲುಪುವುದನ್ನು ಖಚಿತಪಡಿಸಲಿದೆ. ಜಿಲ್ಲಾ ಮಟ್ಟದ ಸಂಘಟನೆಗಳು ಚದುರಿಹೋಗದೆ, ಇನ್ನು ಮುಂದೆ ಈ ಮಹಾಒಕ್ಕೂಟದ ಅಡಿಯಲ್ಲಿ ಒಂದು ಶಕ್ತಿಯುತ ಶಕ್ತಿಯಾಗಿ ಹೋರಾಡಲಿವೆ. ದೇವದಾಸಿ ಪದ್ಧತಿಯನ್ನು ರಾಜ್ಯದಿಂದಲೇ ನಿರ್ಮೂಲನೆ ಮಾಡುವ ಗುರಿಯನ್ನು ಒಕ್ಕೂಟ ಹೊಂದಿದೆ.
ವಿಮುಕ್ತ ದೇವದಾಸಿ ಮಹಿಳಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಜಿ. ಎಸ್. ಶರಣು ಮಾತನಾಡಿ, ಈ ಒಕ್ಕೂಟವು ದೇವದಾಸಿ ತಾಯಂದಿರ ಬದುಕಿನ ಕತ್ತಲೆಯನ್ನು ಸೀಳುವ ಬೆಳಕಾಗಲಿದೆ. ಇದು ಕೇವಲ ವೇದಿಕೆಯಲ್ಲ, ರಾಜ್ಯದಾದ್ಯಂತ ಒಂದು ಮಹಾಕ್ರಾಂತಿಯನ್ನೇ ಮಾಡಲಿರುವ ಗಟ್ಟಿ ಧ್ವನಿ. ನಮಗೆ ಭೂಮಿ, ವಸತಿ, ಗೌರವ ಮತ್ತು ನಮ್ಮ ಮಕ್ಕಳ ಉನ್ನತ ಶಿಕ್ಷಣ ದೊರೆಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.

