
ಗ್ಯಾರಂಟಿಗಳಿಂದ ಖಜಾನೆ ಖಾಲಿ; ಶ್ವೇತಪತ್ರ ಹೊರಡಿಸುವಂತೆ ಬಿ.ವೈ.ವಿಜಯೇಂದ್ರ ಆಗ್ರಹ
ಬರಪೀಡಿತ ರೈತರಿಗೆ ಒಂದು ಹೆಕ್ಟೇರ್ಗೆ ಕೇವಲ 2,500 ರೂ. ಪರಿಹಾರ ಘೋಷಿಸಿರುವುದು ಅತ್ಯಂತ ಅವಹೇಳನಕಾರಿ. ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ, ಬರ ನಿರ್ವಹಣೆಯಲ್ಲಿನ ವೈಫಲ್ಯ ಹಾಗೂ ಆರ್ಥಿಕ ದಿವಾಳಿತನದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಾಗಲವಾಡಿ ಜುಂಜಪ್ಪನ ಹಟ್ಟಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವಾ ಜೀವನದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ‘ಸೇವಾ ಸಂಕಲ್ಪ’ ಅಭಿಯಾನಕ್ಕೆ ಚಾಲನೆ ನೀಡುತ್ತಲೇ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಕಾಲು ಶತಮಾನದಿಂದ ದೇಶವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಈ ಸೇವಾ ಸಂಕಲ್ಪವನ್ನು ಮಾದರಿಯಾಗಿಟ್ಟುಕೊಂಡು, ದೇಶಾದ್ಯಂತ ಬಿಜೆಪಿ ‘ಸೇವಾ ಸಂಕಲ್ಪ ಅಭಿಯಾನ’ವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಅಂಗವಾಗಿ ಸಮಾಜಮುಖಿ ಚಟುವಟಿಕೆಗಳು ಹಾಗೂ ಬೂತ್ ಮಟ್ಟದ ಬಲವರ್ಧನೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ವಿಜಯೇಂದ್ರ ತಿಳಿಸಿದರು. ಕಾಡುಗೊಲ್ಲರ ಜುಂಜಪ್ಪನ ಹಟ್ಟಿಯಲ್ಲಿ ದೇವರ ಪೂಜೆಯೊಂದಿಗೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಅರ್ಥಪೂರ್ಣವಾಗಿದೆ ಎಂದು ಬಣ್ಣಿಸಿದರು.
ಬರ ಪರಿಹಾರ: ಸರ್ಕಾರದ ವಿರುದ್ಧ ಗಂಭೀರ ಆರೋಪ
ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ರೈತರು ಬೆಳೆ ಇಲ್ಲದೆ, ನೀರಿಲ್ಲದೆ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಬೆನ್ನಿಗೆ ನಿಲ್ಲಬೇಕಾದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಕಾಯುತ್ತಾ ಕಾಲಹರಣ ಮಾಡುತ್ತಿದೆ ಎಂದು ವಿಜಯೇಂದ್ರ ಕಿಡಿಕಾರಿದರು. "ಬರಪೀಡಿತ ರೈತರಿಗೆ ಒಂದು ಹೆಕ್ಟೇರ್ಗೆ ಕೇವಲ 2,500 ರೂ. ಪರಿಹಾರ ಘೋಷಿಸಿರುವುದು ಅತ್ಯಂತ ಅವಹೇಳನಕಾರಿ. ಇದು ಗಾಯದ ಮೇಲೆ ಬರೆ ಎಳೆದಂತೆ. ಬಿಜೆಪಿ ವತಿಯಿಂದ ನಾವು ಈಗಾಗಲೇ ಒತ್ತಾಯಿಸಿರುವಂತೆ, ರೈತರಿಗೆ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ಆದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರೈತರ ಸಂಕಷ್ಟಕ್ಕಿಂತ ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆಯೇ ಹೆಚ್ಚು ಕಾಳಜಿ ಇದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ" ಎಂದು ಟೀಕಿಸಿದರು. ಬರ ಪರಿಹಾರ ನೀಡಲು ಹಣವಿಲ್ಲದ ಕಾರಣ ಸ್ವತಃ ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ರಾಜೀನಾಮೆಯ ಮಾತುಗಳನ್ನಾಡುತ್ತಿದ್ದಾರೆ ಎಂದರು.
ಗ್ಯಾರಂಟಿಗಳ ಭರಾಟೆಯಲ್ಲಿ ಖಜಾನೆ ಖಾಲಿ
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳೇ ರಾಜ್ಯದ ಆರ್ಥಿಕತೆಗೆ ಮುಳುವಾಗಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಗ್ಯಾರಂಟಿಗಳಿಗೆ ಹಣ ಹೊಂದಿಸುವ ಭರದಲ್ಲಿ ರಾಜ್ಯದ ಖಜಾನೆ ಬರಿದಾಗಿದೆ. ಪರಿಣಾಮವಾಗಿ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಕೂಡ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ. "ಪೊಲೀಸ್ ಇಲಾಖೆ ಹಾಗೂ ನೀರಾವರಿ ಇಲಾಖೆಯಂತಹ ಅತ್ಯಗತ್ಯ ಸೇವೆಗಳ ಸಿಬ್ಬಂದಿಗೂ ವೇತನ ನೀಡಲು ಸರ್ಕಾರ ಪರದಾಡುತ್ತಿದೆ. ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ತಲುಪಿದೆ. ರಾಜ್ಯದ ನೈಜ ಹಣಕಾಸು ಪರಿಸ್ಥಿತಿಯನ್ನು ಜನರ ಮುಂದಿಡಲು ಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಅಧಿಕಾರ ದುರುಪಯೋಗ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ನೇರ ವಾಗ್ದಾಳಿ ನಡೆಸಿದ ವಿಜಯೇಂದ್ರ, "ಅಧಿಕಾರದ ಮದ ನೆತ್ತಿಗೇರಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು. ನೈಸ್ ಯೋಜನೆ, ಬಿಡದಿ ಟೌನ್ಶಿಪ್ ಸೇರಿದಂತೆ ಹಲವು ಯೋಜನೆಗಳಲ್ಲಿ ಅಧಿಕಾರ ದುರುಪಯೋಗ ನಡೆಯುತ್ತಿದೆ. ಸ್ಥಳೀಯರ ವಿರೋಧವನ್ನೂ ಲೆಕ್ಕಿಸದೆ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಮುಂದುವರಿಸಿದೆ ಎಂದು ಆರೋಪಿಸಿದರು. ಅಷ್ಟೇ ಅಲ್ಲದೆ, ಲಿಂಗಾಯತ-ವೀರಶೈವ ಸ್ವಾಮೀಜಿಗಳ ಸಭೆಯಲ್ಲಿ ಸಿಎಂ ಬಳಸಿದ ಭಾಷೆಯನ್ನೂ ಅವರು ತೀವ್ರವಾಗಿ ಖಂಡಿಸಿದರು. "ಮಠಗಳ ಸಂಖ್ಯೆಯನ್ನು ಉಲ್ಲೇಖಿಸುವಾಗ ಅತ್ಯಂತ ಅಸಭ್ಯವಾಗಿ ಮಾತನಾಡಿದ್ದಾರೆ. ಮೂರು ಸಾವಿರವೋ, ಆರು ಸಾವಿರವೋ ಮಠಗಳಿವೆ ಎಂಬ ಅವರ ಹೇಳಿಕೆ ಮಠಾಧೀಶರ ಭಾವನೆಗಳಿಗೆ ನೋವುಂಟು ಮಾಡಿದೆ. ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅವರು ಮರೆಯಬಾರದು" ಎಂದು ಎಚ್ಚರಿಸಿದರು.
ಫಾರಂ-7 - ರಾಜಕೀಯ ತಂತ್ರಗಾರಿಕೆ
ಚುನಾವಣಾ ಆಯೋಗದ ನಿಯಮದಂತೆ ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸಲು ಫಾರಂ-7 ಸಲ್ಲಿಸುವುದು ನಾಗರಿಕರ ಹಕ್ಕು. ಇದನ್ನು ಬಳಸಿ ಬಿಜೆಪಿ ಕಾರ್ಯಕರ್ತರು ಅರ್ಜಿ ಸಲ್ಲಿಸಿದ್ದರೆ, ಅದು ನಿಯಮಬದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕಾದವರು ಅಧಿಕಾರಿಗಳು. ಆದರೆ, ಅದನ್ನು ರಾಜಕೀಯಕ್ಕೆ ಬಳಸಿಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಿಸುತ್ತಿರುವುದು ದಬ್ಬಾಳಿಕೆಯ ಪರಾಕಾಷ್ಠೆ ಎಂದು ಆಕ್ಷೇಪಿಸಿದರು.

