ರೈತರ ಸಂಕಷ್ಟ ಕುರಿತು ರಾಜ್ಯ ಸರ್ಕಾರಕ್ಕೆ ಕಾಳಜಿಯಿಲ್ಲ: ವಿಜಯೇಂದ್ರ ವಾಗ್ದಾಳಿ
x

ರೈತರ ಸಂಕಷ್ಟ ಕುರಿತು ರಾಜ್ಯ ಸರ್ಕಾರಕ್ಕೆ ಕಾಳಜಿಯಿಲ್ಲ: ವಿಜಯೇಂದ್ರ ವಾಗ್ದಾಳಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದಿದ್ದರೂ, ರೈತರು, ಬಡವರು, ಯುವಕರು ಮತ್ತು ಮಹಿಳೆಯರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಮೂರು ವರ್ಷಗಳೇ ಕಳೆದಿದ್ದರೂ, ರೈತರು, ಬಡವರು, ಯುವಕರು ಮತ್ತು ಮಹಿಳೆಯರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಟೀಕಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಜನವಿರೋಧಿ ನೀತಿಗಳು ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

"ಕಾಂಗ್ರೆಸ್ ಸರ್ಕಾರ ಕೇವಲ ಜಾಹೀರಾತುಗಳಿಗಷ್ಟೇ ಸೀಮಿತವಾಗಿದೆ. 'ನುಡಿದಂತೆ ನಡೆದಿದ್ದೇವೆ' ಎಂದು ಹೇಳಿಕೊಳ್ಳುವ ಸರ್ಕಾರ, ವಾಸ್ತವದಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರುವಲ್ಲಿ ಅಥವಾ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಧಿಕಾರಕ್ಕೆ ಬಂದ ವರ್ಷದೊಳಗೆ 2.5 ಲಕ್ಷ ಸರ್ಕಾರಿ ಹುದ್ದೆ ಭರ್ತಿ ಮಾಡುವ ಭರವಸೆ ನೀಡಿತ್ತು. ಆದರೆ ಈಗ ಸಾವಿರ ಹುದ್ದೆಗಳನ್ನು ತುಂಬಲು ಕೂಡ ಸಾಧ್ಯವಾಗಿಲ್ಲ. ಇದರಿಂದ ರಾಜ್ಯದ ಲಕ್ಷಾಂತರ ಯುವಕರ ಭವಿಷ್ಯ ಅತಂತ್ರವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ

ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ರೈತರು ಬೆಳೆ ನಷ್ಟ ಮತ್ತು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಅವರ ನೆರವಿಗೆ ಧಾವಿಸುವ ಬದಲು ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು. ಬಿಜೆಪಿ ವತಿಯಿಂದ ನಡೆಸಿದ ಬಳ್ಳಾರಿ ಚಲೋ ಪಾದಯಾತ್ರೆಯ ಮೂಲಕ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಸಲ್ಲಿಸಲಾಗಿತ್ತು. ಪ್ರತಿ ಹೆಕ್ಟೇರ್‌ಗೆ 50 ಸಾವಿರ ರೂ. ಪರಿಹಾರ, 5 ಲಕ್ಷ ರೂ.ವರೆಗೆ ಕೃಷಿ ಸಾಲ ಮನ್ನಾ ಮತ್ತು ದಿನಕ್ಕೆ 8 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆ ಮುಖ್ಯ ಬೇಡಿಕೆಗಳಾಗಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರ ಸಂಕಷ್ಟವನ್ನು ನೇರವಾಗಿ ಅರಿಯುವ ಬದಲು ಹೆಲಿಕಾಪ್ಟರ್‌ನಲ್ಲಿ ವೀಕ್ಷಣೆ ಮಾಡುವುದರಿಂದ ಪರಿಹಾರ ಸಿಗುವುದಿಲ್ಲ. ರಿಯಲ್ ಎಸ್ಟೇಟ್ ಮತ್ತು ಟೌನ್‌ಶಿಪ್‌ಗಳ ಮೇಲಿರುವ ಆಸಕ್ತಿಯನ್ನು ರೈತರ ಸಮಸ್ಯೆಯತ್ತ ತೋರಬೇಕು ಎಂದು ಒತ್ತಾಯಿಸಿದರು. ನೆರೆಯ ಮಹಾರಾಷ್ಟ್ರ ಸರ್ಕಾರ ರೈತಪರ ಕ್ರಮಗಳನ್ನು ಕೈಗೊಳ್ಳುತ್ತಿರುವಾಗ, ಕರ್ನಾಟಕ ಸರ್ಕಾರವೂ ರೈತರ ಸಾಲ ಮನ್ನಾ ಮಾಡಬೇಕು. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 5 ರೂ. ಪ್ರೋತ್ಸಾಹಧನ ನೀಡಿ ಅವರ ಬದುಕಿಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ನಾರಾಯಣಪುರ ನೀರಾವರಿ ವಿವಾದ

ರಾಜ್ಯದ ಜನತೆ ಕುಡಿಯುವ ನೀರಿಗಾಗಿ ಪರದಾಡುತ್ತಿರುವಾಗ, ನಾರಾಯಣಪುರ ಜಲಾಶಯದಿಂದ ತೆಲಂಗಾಣಕ್ಕೆ ಎರಡು ಟಿಎಂಸಿ ನೀರು ಹರಿಸುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು. "ತೆಲಂಗಾಣದಲ್ಲಿಯೂ ಕಾಂಗ್ರೆಸ್ ಸರ್ಕಾರವಿದ್ದು, ಅಲ್ಲಿನ ನಾಯಕರೊಂದಿಗಿನ ವೈಯಕ್ತಿಕ ಒಡನಾಟಕ್ಕಾಗಿ ಕರ್ನಾಟಕದ ರೈತರ ಹಿತಾಸಕ್ತಿಯನ್ನು ಬಲಿಕೊಡಲಾಗುತ್ತಿದೆ. ಯಾವ ಆಧಾರದ ಮೇಲೆ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು. ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಧೋರಣೆ ತೋರುತ್ತಿದೆ. "ಫಾರಂ-7 ಸಲ್ಲಿಕೆ ಎಂಬುದು ಚುನಾವಣಾ ಆಯೋಗದ ನಿಯಮದಡಿ ಬರುವ ಪ್ರಕ್ರಿಯೆ. ಇದನ್ನು ರಾಜಕೀಯ ಅಪರಾಧವೆಂದು ಬಿಂಬಿಸಿ ಕಾರ್ಯಕರ್ತರನ್ನು ಹೆದರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಬಿಜೆಪಿ ಕಾರ್ಯಕರ್ತರು ಇಂತಹ ಬೆದರಿಕೆಗಳಿಗೆ ಜಗ್ಗುವುದಿಲ್ಲ. ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಪ್ರತಿಪಕ್ಷಗಳನ್ನು ಗುರಿಯಾಗಿಸುತ್ತಿದೆ" ಎಂದು ಸ್ಪಷ್ಟಪಡಿಸಿದರು.

ಆರ್ಥಿಕ ಶಿಸ್ತಿನ ಕೊರತೆ

ರಾಜ್ಯದ ಒಟ್ಟು ಸಾಲದ ಹೊರೆ 9.5 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ವರದಿಯಾಗಿದ್ದು, ಇದು ಆತಂಕಕಾರಿ ವಿಷಯವಾಗಿದೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸರ್ಕಾರ ಬಡವರ ಸೌಲಭ್ಯಗಳಿಗೆ ಕತ್ತರಿ ಹಾಕುತ್ತಿದೆ. ಬಿಪಿಎಲ್ ಕಾರ್ಡ್ ರದ್ದು, ವಿಕಲಚೇತನರ ಪಿಂಚಣಿಯಲ್ಲಿ ವಿಳಂಬ ಮತ್ತು ಕೆಎಸ್‌ಆರ್‌ಟಿಸಿ ಸಂಸ್ಥೆಯ ಆರ್ಥಿಕ ಸಂಕಷ್ಟಕ್ಕೆ ಸರ್ಕಾರವೇ ನೇರ ಹೊಣೆ. ಅಭಿವೃದ್ಧಿ ಕಾರ್ಯಗಳ ಬದಲಾಗಿ ಮದ್ಯ ಮಾರಾಟದ ಮೇಲೆ ಸರ್ಕಾರ ಅವಲಂಬಿತವಾಗಿದೆ. ಅಬಕಾರಿ ಗುರಿಯನ್ನು ಹೆಚ್ಚಿಸುವ ಬದಲು ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ದಲಿತರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿದ್ದು, ಗೃಹ ಇಲಾಖೆ ಸಂಪೂರ್ಣ ಮಂಕಾಗಿದೆ. ಅಲ್ಲದೆ, ಸಚಿವರಿಗೆ ಮುಖ್ಯಮಂತ್ರಿಗಳೇ ಲಂಚ ಪಡೆಯುವಾಗ ಜಾಗರೂಕರಾಗಿರಲು ಎಚ್ಚರಿಕೆ ನೀಡಿದ್ದಾರೆ ಎಂಬ ವರದಿಗಳು ಸರ್ಕಾರದ ಭ್ರಷ್ಟ ಆಡಳಿತಕ್ಕೆ ಸಾಕ್ಷಿಯಾಗಿದೆ. "ನಿಮ್ಮ ಸಚಿವರು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ನೀವೇ ಒಪ್ಪಿಕೊಂಡಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾರದರ್ಶಕ ಆಡಳಿತ ನಿರೀಕ್ಷಿಸಲು ಸಾಧ್ಯವೇ?" ಎಂದು ಪ್ರಶ್ನಿಸಿದರು.

Read More
Next Story