ರಾಜ್ಯದ ರೈತರ 5 ಲಕ್ಷ ರೂ.ವರೆಗಿನ ಕೃಷಿ ಸಾಲ ಮನ್ನಾ ಮಾಡುವಂತೆ ವಿಜಯೇಂದ್ರ ಆಗ್ರಹ
x

ರಾಜ್ಯದ ರೈತರ 5 ಲಕ್ಷ ರೂ.ವರೆಗಿನ ಕೃಷಿ ಸಾಲ ಮನ್ನಾ ಮಾಡುವಂತೆ ವಿಜಯೇಂದ್ರ ಆಗ್ರಹ

ನವಲಿ ಸಮಾನಾಂತರ ಜಲಾಶಯ ಯೋಜನೆಗೆ ಆದ್ಯತೆ ನೀಡಬೇಕು ಮತ್ತು ನಂದವಡಿ ಏತ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದು ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.


Click the Play button to hear this message in audio format

ರಾಜ್ಯ ಕಾಂಗ್ರೆಸ್ ಸರ್ಕಾರವು ಕೇವಲ ಪಂಚ ಗ್ಯಾರಂಟಿ ಯೋಜನೆಗಳ ಪ್ರಚಾರದಲ್ಲಿ ಮಗ್ನವಾಗಿದ್ದು, ನಾಡಿನ ಅನ್ನದಾತನ ಸಂಕಷ್ಟವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದ ರೈತರ 5 ಲಕ್ಷ ರೂಪಾಯಿವರೆಗಿನ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಆಗ್ರಹಿಸಿದ್ದಾರೆ.

'ಬಳ್ಳಾರಿ ಚಲೋ' ಪಾದಯಾತ್ರೆ ಅಂಗವಾಗಿ ಗುಡದೂರಿನಲ್ಲಿ ರೈತರೊಂದಿಗೆ ಸಂವಾದ ನಡೆಸಿದ ಅವರು, ರಾಜ್ಯದ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದರು. ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದ ರೈತರ 5 ಲಕ್ಷ ರೂಪಾಯಿವರೆಗಿನ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ರೈತರ ಆತ್ಮಹತ್ಯೆ ಮತ್ತು ಭೀಕರ ಬರಗಾಲದ ಪರಿಸ್ಥಿತಿಯನ್ನು ಚರ್ಚಿಸಲು ರಾಜ್ಯ ಸರ್ಕಾರ ತಕ್ಷಣವೇ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಬೇಕು. ನವಲಿ ಸಮಾನಾಂತರ ಜಲಾಶಯ ಯೋಜನೆಗೆ ಆದ್ಯತೆ ನೀಡಬೇಕು ಮತ್ತು ನಂದವಡಿ ಏತ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹೊಸಪೇಟೆ ಡ್ಯಾಂ - ಹೂಳಿನ ಸಮಸ್ಯೆ

ಹೊಸಪೇಟೆ (ತುಂಗಭದ್ರಾ) ಜಲಾಶಯದ ಹೂಳಿನ ಸಮಸ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಜಯೇಂದ್ರ, ತುಂಗಭದ್ರಾ ಡ್ಯಾಂನಲ್ಲಿ ಸುಮಾರು 31 ಟಿಎಂಸಿ ಹೂಳು ತುಂಬಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ನವಲಿ ಜಲಾಶಯದ ಡಿಪಿಆರ್‌ಗಾಗಿ ಅನುದಾನ ನೀಡಿದ್ದರು. ಆದರೆ, ಈಗಿನ ಸರ್ಕಾರ ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಟೀಕಿಸಿದರು. ರಾಜ್ಯದ 190ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಅವರು ಒತ್ತಾಯಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರೈತರ ಸಂಕಷ್ಟದ ಅರಿವಿಲ್ಲ. ಅವರು ಬೆಂಗಳೂರು ಅಭಿವೃದ್ಧಿ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ರಿಯಲ್ ಎಸ್ಟೇಟ್ ಕಡೆಗೆ ನೀಡುವ ಗಮನದಲ್ಲಿ ಶೇ. 25ರಷ್ಟನ್ನು ರೈತರ ಸಮಸ್ಯೆಗಳಿಗೆ ಮೀಸಲಿಟ್ಟರೂ ಅನ್ನದಾತನಿಗೆ ನೆಮ್ಮದಿ ಸಿಗುತ್ತದೆ ಎಂದು ವ್ಯಂಗ್ಯವಾಡಿದರು.

ಆತ್ಮಹತ್ಯೆಗಳ ಸರಮಾಲೆ, ಸರ್ಕಾರದ ನಿರ್ಲಕ್ಷ್ಯ

ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 3,655 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 937 ರೈತರು ಸಾವನ್ನಪ್ಪಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯಲ್ಲೇ ಹೆಚ್ಚಿನ ಸಾವುಗಳು ಸಂಭವಿಸುತ್ತಿದ್ದರೂ, ಅವರು ಮೌನ ವಹಿಸಿರುವುದು ದುರದೃಷ್ಟಕರ ಎಂದು ಟೀಕಿಸಿದರು. ರಾಯಚೂರು ಭಾಗದಲ್ಲಿ ಸರ್ಕಾರ ಖರೀದಿ ಮಾಡಿದ ಜೋಳಕ್ಕೆ 145 ಕೋಟಿ ರೂಪಾಯಿ ಪಾವತಿಸಬೇಕಿದೆ. ರೈತರ ಹಣವನ್ನು ಸಕಾಲದಲ್ಲಿ ನೀಡದ ಸರ್ಕಾರ ಅವರ ಪಾಲಿಗೆ ಮಾರಕವಾಗಿದೆ. ಹಿಂದೆ ಬಿಜೆಪಿ ಸರ್ಕಾರ ಹೈನುಗಾರರಿಗೆ ನೀಡುತ್ತಿದ್ದ ಸಹಾಯಧನವನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದೆ. ಇದು ಸಂಕಷ್ಟದಲ್ಲಿರುವ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ದಲಿತರ ಅಭಿವೃದ್ಧಿಗಾಗಿ ಮೀಸಲಾದ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಹಣವನ್ನು ಸರ್ಕಾರ ಬೇರೆ ಇಲಾಖೆಗಳಿಗೆ ವರ್ಗಾಯಿಸಿ ದಲಿತ ಸಮುದಾಯಕ್ಕೂ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

Read More
Next Story