ವಿಜಯಪುರ ಭೂತನಾಳ ಕೆರೆಯಲ್ಲಿ ಆರು ಜನರ ಮೃತದೇಹ ಪತ್ತೆ; ಬೆಚ್ಚಿಬಿದ್ದ ಗುಮ್ಮಟ ನಗರಿ
x

ವಿಜಯಪುರ ಭೂತನಾಳ ಕೆರೆಯಲ್ಲಿ ಆರು ಜನರ ಮೃತದೇಹ ಪತ್ತೆ; ಬೆಚ್ಚಿಬಿದ್ದ ಗುಮ್ಮಟ ನಗರಿ

ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಶೋಭಾ ಅವರು ಪತಿ ಮಲಕಾರಿ ಭೀಮರಾಯ ಜಾಲಗೇರಿ ಅವರೊಂದಿಗೆ ಜಗಳ ಮಾಡಿಕೊಂಡಿದ್ದರು. ಈಗ ಆರು ಮಂದಿಯ ಮೃತದೇಹಗಳು ಕೆರೆಯಲ್ಲಿ ಪತ್ತೆಯಾಗಿವೆ.


ವಿಜಯಪುರ ಹೊರವಲಯದಲ್ಲಿರುವ ಐತಿಹಾಸಿಕ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ ಆರು ಮಂದಿಯ ಮೃತದೇಹಗಳು ತೇಲಿ ಬಂದಿರುವ ಘಟನೆ ಇಡೀ ಜಿಲ್ಲೆಯನ್ನೇ ಆಘಾತಕ್ಕೆ ದೂಡಿದೆ. ಮೃತರಲ್ಲಿ ಇಬ್ಬರು ಬಾಲಕರು ಹಾಗೂ ನಾಲ್ವರು ಮಹಿಳೆಯರು ಇದ್ದಾರೆ.

ಕೆರೆ ಅಂಚಿನಲ್ಲಿ ಶವಗಳು ತೇಲುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣವೇ ಆದರ್ಶ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ನಗರ ಡಿವೈಎಸ್ಪಿ ನಾಗರಾಜ್ ಹಾಗೂ ಆದರ್ಶ ನಗರ ಪಿಎಸ್ಐ ಸೀತಾರಾಮ ಲಮಾಣಿ ಅವರು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿ ತಕ್ಷಣವೇ ಕಾರ್ಯಾಚರಣೆ ಕೈಗೊಂಡ ಮಂದಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಕಾಣೆಯಾಗಿದ್ದ ಕುಟುಂಬ

ಮೃತರನ್ನು ಶೋಭಾ ಜಾಲಗೇರಿ (45) ಹಾಗೂ ಆಕೆಯ ಮಕ್ಕಳಾದ ವಿದ್ಯಾ (16), ಸುವರ್ಣ (14), ಗೌಡೇಶ್ (10), ವಿಕಾಸ (5) ಮತ್ತು ಸಾನಿಕಾ (7) ಎಂದು ಗುರುತಿಸಲಾಗಿದೆ. ಈ ಕುಟುಂಬವು ಕಳೆದ ಆಗಸ್ಟ್ 24ರಿಂದ ಕಾಣೆಯಾಗಿತ್ತು ಎನ್ನಲಾಗಿದೆ.

ಕೌಟುಂಬಿಕ ಕಲಹದಿಂದ ಆತ್ಮಹತ್ಯೆ

ಪ್ರಾಥಮಿಕ ಮಾಹಿತಿ ಪ್ರಕಾರ, ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಶೋಭಾ ಅವರು ಪತಿ ಮಲಕಾರಿ ಭೀಮರಾಯ ಜಾಲಗೇರಿ ಅವರೊಂದಿಗೆ ಜಗಳ ಮಾಡಿಕೊಂಡಿದ್ದರು. ಆ ಬಳಿಕ ತಮ್ಮ ಐದೂ ಮಕ್ಕಳನ್ನು ಕರೆದುಕೊಂಡು ಹೊರಟು ಬಂದಿದ್ದರು. ಈಗ ಆರು ಮಂದಿಯ ಮೃತದೇಹಗಳು ಕೆರೆಯಲ್ಲಿ ಪತ್ತೆಯಾಗಿವೆ.

ಪೋಲಿಸ್ ತನಿಖೆ ಚುರುಕು

ಘಟನೆಗೆ ಸಂಬಂಧಿಸಿದಂತೆ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಸುತ್ತಲಿನ ಠಾಣೆಗಳಲ್ಲಿ ದಾಖಲಾಗಿರುವ ಕಾಣೆಯಾದ ಪ್ರಕರಣಗಳ ಮಾಹಿತಿ ಹಾಗೂ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಈ ಸರಣಿ ಸಾವಿನ ಹಿಂದಿನ ನೈಜ ಸತ್ಯಾಂಶ ಹೊರಬರಬೇಕಿದೆ.

Read More
Next Story