
ಭೀಮಾತೀರದಲ್ಲಿ ನೆತ್ತರು ಹರಿಸಿದ ಆಸ್ತಿ ವಿವಾದ; ಒಂದೇ ಕುಟುಂಬದ ನಾಲ್ವರು ಸೇರಿ ಆರು ಮಂದಿ ಬರ್ಬರ ಹತ್ಯೆ
ಶುಕ್ರವಾರ ವಿವಾದಿತ ಜಮೀನಿನ ಜಾಗದಲ್ಲಿ ಸಂಧಾನ ಮಾತುಕತೆಗಾಗಿ ನಿರಾಳೆ ಕುಟುಂಬದವರು ಮತ್ತು ಹಿತೈಷಿಗಳು ತೆರಳಿದ್ದರು. ಈ ವೇಳೆ ವಾಗ್ವಾದ ನಡೆದು ಅಪ್ಪುಗೌಡ ಪಾಟೀಲ್ ಬಣವು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ.
ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮಾರ್ದನಿಸಿದೆ. ದಶಕಗಳ ರಕ್ತಚರಿತ್ರೆಯ ಇತಿಹಾಸ ಹೊಂದಿರುವ ಭೀಮಾತೀರದ ವಿಜಯಪುರದಲ್ಲಿ ಇದೀಗ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಆರು ಜನರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಶುಕ್ರವಾರ ಈ ಘೋರ ಘಟನೆ ನಡೆದಿದ್ದು, ಜಿಲ್ಲೆಯನ್ನು ತಲ್ಲಣಗೊಳಿಸಿದೆ.
ನ್ಯಾಯ ಪಂಚಾಯಿತಿ ವೇಳೆಯೇ ಹತ್ಯೆ
ಗೋವಿಂದಪುರ ಗ್ರಾಮದ ಅಪ್ಪುಗೌಡ ಪಾಟೀಲ್ ಹಾಗೂ ರೇವಣಸಿದ್ದಪ್ಪ ನಿರಾಳೆ ಕುಟುಂಬಗಳ ಮಧ್ಯೆ ಕಳೆದ ಕೆಲ ದಿನಗಳಿಂದ ಜಮೀನು ವಿವಾದ ಏರ್ಪಟ್ಟಿತ್ತು. ಇತ್ತೀಚೆಗಷ್ಟೇ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯತಿ ನಡೆಸಿ ಸುಖಾಂತ್ಯಗೊಳಿಸುವ ಪ್ರಯತ್ನವೂ ನಡೆದಿತ್ತು.
ಇಂದೂ ಕೂಡ (ಶುಕ್ರವಾರ) ವಿವಾದಿತ ಜಮೀನಿನ ಜಾಗದಲ್ಲಿ ಮತ್ತೊಮ್ಮೆ ಅಂತಿಮ ಸಂಧಾನ ಹಾಗೂ ಮಾತುಕತೆಗಾಗಿ ನಿರಾಳೆ ಕುಟುಂಬದವರು ಮತ್ತು ಅವರ ಹಿತೈಷಿಗಳು ತೆರಳಿದ್ದರು. ಆದರೆ, ಮಾತುಕತೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಸಂಚು ರೂಪಿಸಿದ್ದ ಅಪ್ಪುಗೌಡ ಪಾಟೀಲ್ ಬಣವು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ.
ಘಟನೆಯಲ್ಲಿ ರೇವಣಸಿದ್ದಪ್ಪ ನಿರಾಳೆ, ಅವರ ಪುತ್ರರಾದ ದುಂಡಪ್ಪ ರೇವಣಸಿದ್ದಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಕುಟುಂಬದ ಮತ್ತೊಬ್ಬ ಸದಸ್ಯ ಚಂದ್ರಶೇಖರ್ ನಿರಾಳೆ, ಅವರೊಂದಿಗಿದ್ದ ಶಬ್ಬೀರ್ ನದಾಫ್ ಸೇರಿ ಒಟ್ಟು ಆರು ಮಂದಿ ಗುಂಡೇಟಿನಿಂದ ಬಲಿಯಾಗಿದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಅಪ್ಪುಗೌಡ ಪಾಟೀಲ್ ಕಡೆಯವರು ಮೊದಲು ನಿರಾಳೆ ಕುಟುಂಬದವರ ಮೇಲೆ ತಲ್ವಾರ್ ಹಾಗೂ ಕೊಡಲಿಗಳಿಂದ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ. ಈ ವೇಳೆ ತಪ್ಪಿಸಿಕೊಂಡು ಓಡಲು ಯತ್ನಿಸಿದವರನ್ನು ಅಟ್ಟಾಡಿಸಿ, ತಲೆಯ ಭಾಗಕ್ಕೆ ನೇರವಾಗಿ ಪಾಯಿಂಟ್ ಬ್ಲಾಂಕ್ ರೇಂಜ್ನಲ್ಲಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಘಟನಾ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಆರು ಜನರು ಪ್ರಾಣಬಿಟ್ಟಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಚಡಚಣ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋವಿಂದಪುರ ಗ್ರಾಮಕ್ಕೆ ಧಾವಿಸಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ತುಕಡಿಗಳನ್ನು ನಿಯೋಜಿಸಿ, ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಭೀಮಾತೀರದಲ್ಲಿ ಮಾಸದ ಕರಾಳ ನೆನಪುಗಳು
ಭೀಮಾತೀರದಲ್ಲಿ ಭೀಕರ ಕೊಲೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. 2025 ಸೆಪ್ಟೆಂಬರ್ ತಿಂಗಳಲ್ಲಿ ಭೀಮನಗೌಡ ಬಿರಾದಾರ್ ಹತ್ಯೆ ಎಂಬುವರನ್ನು ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಧರ್ಮರಾಜ್ - ಗಂಗಾಧರ ಚಡಚಣ ಸೋದರರ ನಿಗೂಢ ಕೊಲೆ ಹಾಗೂ ನಕಲಿ ಎನ್‌ಕೌಂಟರ್ ಪ್ರಕರಣ ರಾಜ್ಯಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿತ್ತು. ಇದರಲ್ಲಿ ಹಲವು ಪೊಲೀಸ್ ಅಧಿಕಾರಿಗಳೇ ಭಾಗಿಯಾಗಿ ಜೈಲು ಸೇರಿದ್ದರು.

