
ವಿಜಯಪುರ ವಿಮಾನ ನಿಲ್ದಾಣದಲ್ಲಿ ವೈಮಾನಿಕ ತರಬೇತಿ ಅಕಾಡೆಮಿ: ಸಚಿವ ಎಂ.ಬಿ. ಪಾಟೀಲ್
ವಿಜಯಪುರ ವಿಮಾನ ನಿಲ್ದಾಣದ ಪರಿಸರ, ರನ್-ವೇ ಸೌಲಭ್ಯ ಮತ್ತು ತರಬೇತಿ ಅಕಾಡೆಮಿಗೆ ಅಗತ್ಯವಿರುವ ಮೂಲಸೌಕರ್ಯಗಳ ಕುರಿತುಕಾರ್ವರ್ ಏವಿಯೇಷನ್ ಸಂಸ್ಥೆ ಜತೆ ಸಚಿವರು ಮಹತ್ವದ ಮಾತುಕತೆ ನಡೆಸಿದರು.
ವಿಜಯಪುರದಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣವು ಕೇವಲ ಪ್ರಯಾಣಿಕರ ಸಾಗಾಟಕ್ಕೆ ಮಾತ್ರವಲ್ಲದೆ, ಉತ್ತರ ಕರ್ನಾಟಕದ ಯುವಜನತೆಯ ಪಾಲಿಗೆ ವೈಮಾನಿಕ ಕನಸುಗಳನ್ನು ನನಸಾಗಿಸುವ ಕೇಂದ್ರವಾಗಿ ಹೊರಹೊಮ್ಮಲಿದೆ. ಮಹಾರಾಷ್ಟ್ರದ ಬಾರಾಮತಿಯಲ್ಲಿ ಸುದೀರ್ಘ ಕಾಲದಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಕಾರ್ವರ್ ಏವಿಯೇಷನ್ ಸಂಸ್ಥೆಯು ವಿಜಯಪುರದಲ್ಲಿ ತನ್ನ ಸ್ಯಾಟಲೈಟ್ ಫ್ಲೈಯಿಂಗ್ ಟ್ರೈನಿಂಗ್ ಅಕಾಡೆಮಿಯನ್ನು ಸ್ಥಾಪಿಸಲು ಮುಂದಾಗಿದೆ. ಈ ಮಹತ್ವದ ಬೆಳವಣಿಗೆಯನ್ನು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಖಚಿತಪಡಿಸಿದ್ದಾರೆ.
ಬೆಂಗಳೂರಿನ ಖನಿಜ ಭವನದಲ್ಲಿ ಕಾರ್ವರ್ ಏವಿಯೇಷನ್ ಸಂಸ್ಥೆಯ ನಿರ್ದೇಶಕ ನೆವಿಲ್ ಭರೂಚ ಮತ್ತು ವ್ಯವಸ್ಥಾಪಕ ಪರಮೇಶ್ ಪಾರೀಖ್ ಅವರು ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿ ಸವಿಸ್ತಾರವಾದ ಚರ್ಚೆ ನಡೆಸಿದರು. ವಿಜಯಪುರ ವಿಮಾನ ನಿಲ್ದಾಣದ ಪರಿಸರ, ರನ್-ವೇ ಸೌಲಭ್ಯ ಮತ್ತು ತರಬೇತಿ ಅಕಾಡೆಮಿಗೆ ಅಗತ್ಯವಿರುವ ಮೂಲಸೌಕರ್ಯಗಳ ಕುರಿತು ಈ ವೇಳೆ ಮಹತ್ವದ ಮಾತುಕತೆ ನಡೆಯಿತು.
ಯೋಜನೆಯ ಸ್ವರೂಪ ಮತ್ತು ಸೌಲಭ್ಯಗಳು
ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಕಾರ್ವರ್ ಏವಿಯೇಷನ್ ಸಂಸ್ಥೆಯು ತಮ್ಮ ಅಕಾಡೆಮಿ ಸ್ಥಾಪನೆಗಾಗಿ ವಿಮಾನ ನಿಲ್ದಾಣದ ಆವರಣಕ್ಕೆ ಹೊಂದಿಕೊಂಡಂತೆ ಸುಮಾರು 2.5 ಎಕರೆ ಜಮೀನನ್ನು ಕೋರಿದೆ. ಈ ಯೋಜನೆ ಜಾರಿಗೆ ಬಂದರೆ, ವಿಜಯಪುರ ವಿಮಾನ ನಿಲ್ದಾಣದಲ್ಲಿ ಕೇವಲ ವಿಮಾನ ಹಾರಾಟದ ತರಬೇತಿಯಷ್ಟೇ ಅಲ್ಲದೆ, ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಚಟುವಟಿಕೆಗಳು ಆರಂಭವಾಗಲಿವೆ. ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಮತ್ತು ಪ್ರೈವೇಟ್ ಪೈಲಟ್ ಲೈಸೆನ್ಸ್ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತರಬೇತಿ ಲಭ್ಯವಾಗಲಿದೆ. ವಿಮಾನಗಳ ನಿರ್ವಹಣೆ, ರಿಪೇರಿ ಮತ್ತು ಓವರ್‌ಹಾಲ್ ಕೇಂದ್ರಗಳು ಸ್ಥಾಪನೆಯಾಗಲಿವೆ. ವಿಮಾನಯಾನಕ್ಕೆ ಬೇಕಾದ ತಾಂತ್ರಿಕ ಪೂರಕ ಚಟುವಟಿಕೆಗಳಿಗೆ ಇದು ಪ್ರಮುಖ ಕೇಂದ್ರವಾಗಲಿದೆ. 2.5 ಎಕರೆ ಜಾಗದಲ್ಲಿ ಸುಸಜ್ಜಿತ ಹ್ಯಾಂಗರ್‌ಗಳು, ತರಬೇತಿ ಕೊಠಡಿಗಳು ಮತ್ತು ನಿರ್ವಹಣಾ ಸೌಲಭ್ಯಗಳು ನಿರ್ಮಾಣವಾಗಲಿವೆ ಎಂದಿದ್ದಾರೆ.
ಉತ್ತರ ಕರ್ನಾಟಕದ ಪಾಲಿಗೆ ಹೊಸ ಅವಕಾಶ
ಈ ಅಕಾಡೆಮಿಯು ಉತ್ತರ ಕರ್ನಾಟಕದ ವಾಯುಯಾನ ಸಂಪರ್ಕ ವ್ಯವಸ್ಥೆಗೆ ಹೊಸ ಬಲ ನೀಡಲಿದೆ. ಸಚಿವ ಎಂ.ಬಿ. ಪಾಟೀಲ್ ಅವರ ಪ್ರಕಾರ, ಈ ಯೋಜನೆ ಜಾರಿಗೆ ಬಂದರೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೂರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಜತೆಗೆ, ಇಲ್ಲಿನ ಸ್ಥಳೀಯ ಯುವಕರಿಗೆ ವಿಮಾನಯಾನ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯಲು ಬೆಂಗಳೂರು ಅಥವಾ ದೆಹಲಿಯಂತಹ ನಗರಗಳಿಗೆ ಹೋಗುವ ಅನಿವಾರ್ಯತೆ ತಪ್ಪಲಿದೆ. ಅಲ್ಲದೆ, ಸ್ಥಳೀಯ ವಿದ್ಯಾರ್ಥಿಗಳಿಗೆ ಈ ಅಕಾಡೆಮಿಯಲ್ಲಿ ಪ್ರವೇಶ ಪಡೆಯುವಾಗ ಶುಲ್ಕದಲ್ಲಿ ಆಕರ್ಷಕ ರಿಯಾಯಿತಿ ನೀಡುವುದಾಗಿ ಕಂಪನಿ ಭರವಸೆ ನೀಡಿದೆ. ಇದು ಆರ್ಥಿಕವಾಗಿ ಹಿಂದುಳಿದ ಆದರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ ಎಂದು ಹೇಳಿದ್ದಾರೆ.
ಕಾರ್ವರ್ ಏವಿಯೇಷನ್ ಹಿನ್ನೆಲೆ
1995ರಿಂದ ಕಾರ್ಯನಿರ್ವಹಿಸುತ್ತಿರುವ ಕಾರ್ವರ್ ಏವಿಯೇಷನ್, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಪೈಲಟ್ ತರಬೇತಿಯಲ್ಲಿ ಈ ಸಂಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರು ಗಳಿಸಿದೆ. ಸ್ವಂತ ಸಿಂಗಲ್ ಎಂಜಿನ್ ಮತ್ತು ಮಲ್ಟಿ-ಎಂಜಿನ್ ವಿಮಾನಗಳನ್ನು ಹೊಂದಿರುವ ಈ ಸಂಸ್ಥೆ, ಸಾವಿರಾರು ಪೈಲಟ್‌ಗಳನ್ನು ದೇಶದ ವಾಯುಯಾನ ಕ್ಷೇತ್ರಕ್ಕೆ ನೀಡಿದೆ. ಅಂತಹ ಅನುಭವಿ ಸಂಸ್ಥೆ ವಿಜಯಪುರಕ್ಕೆ ಬರುತ್ತಿರುವುದು ಇಲ್ಲಿನ ವಿಮಾನ ನಿಲ್ದಾಣದ ಉಪಯುಕ್ತತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಸಚಿವ ಎಂ.ಬಿ. ಪಾಟೀಲ್ ಅವರು ಈ ಯೋಜನೆಯ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಮತ್ತೊಂದು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಯೋಜನೆಯ ವಿಸ್ತೃತ ರೂಪುರೇಷೆ, ಜಮೀನಿನ ಹಸ್ತಾಂತರ, ತಾಂತ್ರಿಕ ಅನುಮತಿಗಳು ಮತ್ತು ವಿಮಾನ ನಿಲ್ದಾಣದ ರನ್-ವೇ ಬಳಕೆಯ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಕಾರ್ಯಾರಂಭಕ್ಕೆ ವೇಗ
ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಈ ರೀತಿಯ ಟ್ರೈನಿಂಗ್ ಅಕಾಡೆಮಿಗಳು ವಿಮಾನ ನಿಲ್ದಾಣದ ಸುತ್ತ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುತ್ತವೆ. ವಿಮಾನ ನಿಲ್ದಾಣವು ತ್ವರಿತವಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರೆ, ಇಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದು ಸುಲಭವಾಗುತ್ತದೆ. ಉತ್ತರ ಕರ್ನಾಟಕದಲ್ಲಿ ವಿಮಾನಯಾನ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರವು ನಡೆಸುತ್ತಿರುವ ಪ್ರಯತ್ನಗಳಿಗೆ ಈ ಯೋಜನೆಯು ಒಂದು ಕಿರೀಟಪ್ರಾಯವಾದ ಸಾಧನೆಯಾಗಲಿದೆ ಎಂದಿದ್ದಾರೆ.

