
ವಿಧಾನಸೌಧ ಮೆಟ್ರೋದಲ್ಲಿ ಎಸ್ಕಲೇಟರ್ ಅಳವಡಿಕೆಗೆ ಒತ್ತಾಯ: ವಾರದ ಗಡುವು
ಹೈಕೋರ್ಟ್ ಕಡೆಗೆ ಹೋಗುವ ನಿರ್ಗಮನ ದ್ವಾರದಲ್ಲಿ ಎಸ್ಕಲೇಟರ್ ಅಳವಡಿಸಲು ಜಾಗವಿದ್ದರೂ, ಕಳೆದ 8 ವರ್ಷಗಳಿಂದ ಬಿಎಂಆರ್‌ಸಿಎಲ್ ತೋರುತ್ತಿರುವ ನಿರ್ಲಕ್ಷ್ಯದ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿದೆ.
ಬೆಂಗಳೂರು ನಗರದ ಅತ್ಯಂತ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಒಂದಾದ ಡಾ. ಬಿ.ಆರ್. ಅಂಬೇಡ್ಕರ್ (ವಿಧಾನಸೌಧ) ಮೆಟ್ರೋ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹೈಕೋರ್ಟ್ ಕಡೆಗೆ ನಿರ್ಗಮಿಸುವ ದಾರಿಯಲ್ಲಿ ಎಸ್ಕಲೇಟರ್ ಸೌಲಭ್ಯವಿಲ್ಲದ ಕಾರಣ, ವೃದ್ಧರು ಮತ್ತು ಅಂಗವಿಕಲರು ಸೇರಿದಂತೆ ದೈನಂದಿನ ಪ್ರಯಾಣಿಕರು ಬರೋಬ್ಬರಿ 71 ಮೆಟ್ಟಿಲುಗಳನ್ನು ಹತ್ತಬೇಕಾದ ಅನಿವಾರ್ಯತೆ ಎದುರಾಗಿದೆ. ಹೈಕೋರ್ಟ್ ಕಡೆಗೆ ಹೋಗುವ ನಿರ್ಗಮನ ದ್ವಾರದಲ್ಲಿ ಎಸ್ಕಲೇಟರ್ ಅಳವಡಿಸಲು ಜಾಗವಿದ್ದರೂ, ಕಳೆದ ಎಂಟು ವರ್ಷಗಳಿಂದ ಬಿಎಂಆರ್‌ಸಿಎಲ್ ತೋರುತ್ತಿರುವ ನಿರ್ಲಕ್ಷ್ಯದ ವಿರುದ್ಧ ಈಗ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ.
ಈ ಸಂಬಂಧ ಟಿ.ನರಸಿಂಹ ಮೂರ್ತಿ ಎಂಬುವವರು ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಮೆಟ್ರೋ ಆಡಳಿತ ಮಂಡಳಿ 7 ದಿನದೊಳಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮೆಟ್ರೋ ಬಳಿ ಹೋರಾಟ ನಡೆಸುವ ಎಚ್ಚರಿಕೆಯನ್ನು ಪತ್ರದಲ್ಲಿ ನೀಡಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರೋ ನಿಲ್ದಾಣದ ಹೈಕೋರ್ಟ್ ಹಾಗೂ ವಿಧಾನಸೌಧದ ಕಡೆಗೆ ನಿರ್ಗಮಿಸುವ ದಾರಿಯಲ್ಲಿ ಕೇವಲ ಒಂದು ಬದಿಯಲ್ಲಿ ಮಾತ್ರ ಎಸ್ಕಲೇಟರ್ ಅಳವಡಿಸಲಾಗಿದೆ. ಇನ್ನೊಂದು ಬದಿಯಲ್ಲಿ ಎಸ್ಕಲೇಟರ್ ಇಲ್ಲದ ಕಾರಣ, ಹೊರಬರಲು ಪ್ರಯಾಣಿಕರು ಬರೋಬ್ಬರಿ 71 ಮೆಟ್ಟಿಲುಗಳನ್ನು ಹತ್ತಬೇಕಿದೆ. ಯುವಕರಿಗೇ ಸುಸ್ತು ತರಿಸುವ ಈ ಮೆಟ್ಟಿಲುಗಳು, ಹಿರಿಯ ನಾಗರಿಕರು ಮತ್ತು ಅನಾರೋಗ್ಯ ಪೀಡಿತರಿಗೆ ನರಕಯಾತನೆಯನ್ನು ನೀಡುತ್ತಿವೆ. ಈ ಭಾಗದಲ್ಲಿ ಲಿಫ್ಟ್ ಸೌಲಭ್ಯವೂ ಸಮರ್ಪಕವಾಗಿ ಇಲ್ಲದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮೆಟ್ರೋ ನಿಲ್ದಾಣವು 2016ರ ಏಪ್ರಿಲ್ 30 ರಂದು ಉದ್ಘಾಟನೆಯಾಯಿತು. ನಿಲ್ದಾಣದ ವಿನ್ಯಾಸದ ಪ್ರಕಾರ, ಹೈಕೋರ್ಟ್ ಕಡೆಯ ನಿರ್ಗಮನ ದ್ವಾರದಲ್ಲಿ ಎಸ್ಕಲೇಟರ್ ಅಳವಡಿಸಲು ಬೇಕಾದ ಸ್ಥಳವನ್ನು ಈಗಾಗಲೇ ಮೀಸಲಿಡಲಾಗಿದೆ ಆದರೆ, ನಿಲ್ದಾಣ ಆರಂಭವಾಗಿ ಎಂಟು ವರ್ಷಗಳೇ ಕಳೆದರೂ, ಆ ಖಾಲಿ ಜಾಗದಲ್ಲಿ ಎಸ್ಕಲೇಟರ್ ಅಳವಡಿಸುವ ಮನಸ್ಸು ಮೆಟ್ರೋ ಅಧಿಕಾರಿಗಳಿಗೆ ಬಂದಿಲ್ಲ. ಸರ್ಕಾರದ ಶಕ್ತಿ ಕೇಂದ್ರವಾದ ವಿಧಾನಸೌಧ ಮತ್ತು ನ್ಯಾಯದ ದೇಗುಲವಾದ ಹೈಕೋರ್ಟ್‌ಗೆ ಸಾವಿರಾರು ಜನ ಹೋಗುತ್ತಾರೆ. ವಕೀಲರು, ಕಕ್ಷಿದಾರರು, ಹಿರಿಯ ನಾಗರಿಕರು ಮತ್ತು ದೈಹಿಕ ವಿಕಲಚೇತನರು ಪ್ರಯಾಣಿಸುತ್ತಾರೆ. ದೂರದ ಊರುಗಳಿಂದ ಬರುವವವರು 71 ಮೆಟ್ಟಿಲುಗಳನ್ನು ಹತ್ತಿ ವಿಧಾನಸೌಧ ಮತ್ತು ಹೈಕೋರ್ಟ್ ತಲುಪುವಷ್ಟರಲ್ಲಿ ಸುಸ್ತಾಗಿ ಹೋಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಗಂಭೀರ ಸಮಸ್ಯೆಯನ್ನು ಕುರಿತು ಅಧಿಕಾರಿಗಳಿಗೆ ಅಧಿಕೃತವಾಗಿ ಮನವಿ ಸಲ್ಲಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ, ಕೂಡಲೇ ಖಾಲಿ ಇರುವ ಜಾಗದಲ್ಲಿ ಎಸ್ಕಲೇಟರ್ ಅಥವಾ ಲಿಫ್ಟ್ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ. ಸಾರ್ವಜನಿಕರ ಈ ನ್ಯಾಯಸಮ್ಮತ ಬೇಡಿಕೆಗೆ ಸ್ಪಂದಿಸಲು ಅಧಿಕಾರಿಗಳಿಗೆ 7 ದಿನಗಳ ಕಾಲಾವಕಾಶ ನೀಡಲಾಗುತ್ತಿದೆ. ಒಂದು ವೇಳೆ ಒಂದು ವಾರದೊಳಗೆ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಅಥವಾ ಕಾಮಗಾರಿ ಆರಂಭವಾಗದಿದ್ದರೆ, ಮೆಟ್ರೋ ನಿಲ್ದಾಣದ ಮುಂಭಾಗದಲ್ಲೇ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.

