ಪ್ರಧಾನಿ ವಿರುದ್ಧ ನಸೀರ್ ಅಹಮದ್ ಅವಹೇಳನಕಾರಿ ಪದಬಳಕೆ: ಬಿಜೆಪಿಯಿಂದ ಆಕ್ರೋಶ
x

ವಿಧಾನ ಪರಿಷತ್‌ನಲ್ಲಿ ನಸೀರ್ ಅಹಮದ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ

ಪ್ರಧಾನಿ ವಿರುದ್ಧ ನಸೀರ್ ಅಹಮದ್ ಅವಹೇಳನಕಾರಿ ಪದಬಳಕೆ: ಬಿಜೆಪಿಯಿಂದ ಆಕ್ರೋಶ

ವಿಧಾನ ಪರಿಷತ್ ಕಲಾಪದಲ್ಲಿ ಪ್ರಧಾನಿ ಮೋದಿ ವಿರುದ್ಧ ಅಸಂವಿಧಾನಿಕ ಪದಬಳಕೆ ಮಾಡಿದ ಕಾಂಗ್ರೆಸ್ ಸದಸ್ಯ ನಸೀರ್ ಅಹಮದ್ ವಿರುದ್ಧ ಬಿಜೆಪಿ ಸದಸ್ಯರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


Click the Play button to hear this message in audio format

ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಪ್ರಧಾನಮಂತ್ರಿಗಳ ಬಗ್ಗೆ ಅಸಂವಿಧಾನಿಕ ಪದ ಬಳಕೆ ಮಾಡಿದ ಕಾಂಗ್ರೆಸ್ ಸದಸ್ಯ ನಸೀರ್ ಅಹಮದ್ ಅವರ ವಿರುದ್ಧ ಪ್ರತಿಪಕ್ಷ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿಯವರನ್ನು ಅವಮಾನಿಸಿರುವ ನಸೀರ್ ಅಹಮದ್ ಅವರನ್ನು ಕೂಡಲೇ ಸದನದಿಂದ ಅಮಾನತುಗೊಳಿಸಬೇಕು ಇಲ್ಲವೇ ಅವರು ಬೇಷರತ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ದೇಶದ ಪ್ರಧಾನಿ ಹುದ್ದೆಗೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ. ಈ ಹುದ್ದೆಯು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದುದಲ್ಲ. ಪ್ರಧಾನಿ ಹುದ್ದೆಗೆ ಅವಮಾನ ಮಾಡುವುದು ಇಡೀ ಸದನಕ್ಕೆ ಮಾಡಿದ ಅವಮಾನವಾಗಿದೆ. ಸದನವು ಸುಗಮವಾಗಿ ನಡೆಯಬೇಕಾದರೆ ಸದಸ್ಯರು ಬೇಷರತ್ ಕ್ಷಮೆಯಾಚಿಸುವುದು ಸೂಕ್ತ ಎಂದು ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯ ಕೆ. ಶಿವಕುಮಾರ್ ಅವರು, ಕಳೆದ ಕೆಲವು ದಿನಗಳಿಂದ ಸದನದಲ್ಲಿ ಸಂವಿಧಾನ ಮತ್ತು ರಾಷ್ಟ್ರೀಯತೆಯ ವ್ಯಾಖ್ಯಾನಗಳ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ. ಸಂವಿಧಾನ ಮತ್ತು ರಾಷ್ಟ್ರೀಯತೆಯ ವಿಷಯದಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ ಮತ್ತು ಇದರಲ್ಲಿ ಯಾವುದೇ ರಾಜಿ ಇಲ್ಲ. ಸದಸ್ಯರು ಪ್ರಚೋದನೆಗೆ ಒಳಗಾಗಿ ಮಾತಿನ ಭರದಲ್ಲಿ ಮಿತಿ ಮೀರಿರಬಹುದು, ಆದರೆ ಸದನದ ಗೌರವವನ್ನು ಕಾಪಾಡಿಕೊಂಡು ಕಲಾಪ ನಡೆಸಬೇಕಾದ ಅಗತ್ಯವಿದೆ ಎಂದು ಸಮರ್ಥಿಸಿಕೊಂಡರು.

ಎಸ್.ಎಲ್. ಭೋಜೇಗೌಡ ಅವರು ಮಾತನಾಡಿ, ಪ್ರಧಾನಿಯವರ ಬಗ್ಗೆ ಅಸಂವಿಧಾನಿಕ ಪದ ಬಳಸುವುದು ಅಕ್ಷಮ್ಯ ಅಪರಾಧವಾಗಿದೆ. ಸದಸ್ಯರು ಪದೇ ಪದೇ ಇಂತಹ ಮಾತುಗಳನ್ನು ಪುನರುಚ್ಚರಿಸುವ ಮೂಲಕ ಪ್ರಧಾನಿ ಹುದ್ದೆಗೆ ಅಗೌರವ ತೋರಿದ್ದಾರೆ. ಅವರು ತಕ್ಷಣ ಕ್ಷಮೆಯಾಚಿಸಿದರೆ ಮಾತ್ರ ಪ್ರಧಾನಮಂತ್ರಿಗಳಿಗೆ ಮತ್ತು ಈ ಸದನಕ್ಕೆ ಗೌರವ ನೀಡಿದಂತಾಗುತ್ತದೆ ಎಂದು ಒತ್ತಾಯಿಸಿದರು.

ಈ ವಿಷಯವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ಗದ್ದಲ ಮತ್ತು ವಾಗ್ವಾದ ಏರ್ಪಟ್ಟಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಸಭಾಪತಿಯವರು ಸದನವನ್ನು ಕೆಲಕಾಲ ಮುಂದೂಡಿದರು.

Read More
Next Story