ಗಂಗಾವತಿ ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷರ ಕೊಲೆ; ಆರು ಮಂದಿ ಅಪರಾಧಿಗಳಿಗೆ ಮರಣದಂಡನೆ
x
ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಗಳು

ಗಂಗಾವತಿ ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷರ ಕೊಲೆ; ಆರು ಮಂದಿ ಅಪರಾಧಿಗಳಿಗೆ ಮರಣದಂಡನೆ

ವೆಂಕಟೇಶ ಅವರ ಮೇಲೆ 2025 ಅ.8 ರಂದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವದಿಂದಾಗಿ ವೆಂಕಟೇಶ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.


Click the Play button to hear this message in audio format

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದ್ದ ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಒಂದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಆರು ಮಂದಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹಾಗೂ ತಲಾ 3 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

ಗುರುವಾರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಈ ಮಹತ್ವದ ಆದೇಶ ನೀಡಿದ್ದಾರೆ. ಅಪರಾಧಿಗಳಾದ ರವಿ (ಎ1), ವಿಜಯ್ ಅಲಿಯಾಸ್ ಮೈಲಾರಿ, ಧನರಾಜ್, ಭೀಮ್ ಅಲಿಯಾಸ್ ಭರತ್, ಸಲೀಂ ಮಹಮ್ಮದ್ ರಫೀಕ್, ಗಂಗಾಧರ ಗೌಳಿ ಎಂಬುವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ನ್ಯಾಯಾಲಯದ ವಿಚಾರಣೆ ವೇಳೆ ಕೊಲೆಗೆ ಪ್ರಮುಖ ಕಾರಣ ಹಳೆಯ ದ್ವೇಷ ಎಂಬುದು ಸಾಬೀತಾಗಿದೆ. ಈ ಹಿಂದೆ ಗಂಗಾವತಿ ರೈಲ್ವೆ ನಿಲ್ದಾಣದ ಬಳಿ ನಡೆದಿದ್ದ ಮಾರುತಿ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ವೆಂಕಟೇಶ ಕುರುಬರ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಅಷ್ಟೇ ಅಲ್ಲದೆ, ಗಾಯಾಳು ಮಾರುತಿಯ ಚಿಕಿತ್ಸೆಗಾಗಿ ಕೊನೆಯವರೆಗೂ ಬೆಂಬಲವಾಗಿ ನಿಂತಿದ್ದರು. ಇದೇ ಕಾರಣಕ್ಕೆ ದ್ವೇಷ ಕಾರಿದ ಆರೋಪಿಗಳು ವೆಂಕಟೇಶನನ್ನು ಮುಗಿಸಲು ಸಂಚು ರೂಪಿಸಿದ್ದರು.

ಘಟನೆಯ ಹಿನ್ನೆಲೆ ಏನು?

2025ರ ಅಕ್ಟೋಬರ್ 8ರ ಮಧ್ಯರಾತ್ರಿ, ವೆಂಕಟೇಶ ಕುರುಬರ್ ಅವರು ಊಟ ಮುಗಿಸಿ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ರಾಣಾ ಪ್ರತಾಪ್ ಸಿಂಗ್ ವೃತ್ತದ ಬಳಿ ಕಾರಿನಲ್ಲಿ ಬಂದ ಆರೋಪಿಗಳು ವೆಂಕಟೇಶನ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ವೆಂಕಟೇಶ ಕೆಳಗೆ ಬೀಳುತ್ತಿದ್ದಂತೆ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವದಿಂದಾಗಿ ವೆಂಕಟೇಶ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಏಳೇ ತಿಂಗಳಲ್ಲಿ ಪ್ರಕರಣಕ್ಕೆ ಮುಕ್ತಿ

ಬಿಜೆಪಿ ಎಸ್ಟಿ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದೆ.

ಒಂದನೇ ಆರೋಪಿ ರವಿ ಮೇಲೆ 17ಕ್ಕೂ ಹೆಚ್ಚು ಪ್ರಕರಣಗಳು ಹಾಗೂ ಗಂಗಾಧರ ಮೇಲೆ 4 ಪ್ರಕರಣಗಳು ದಾಖಲಾಗಿದ್ದವು. ಸಮಾಜದಲ್ಲಿ ಶಾಂತಿ ಕದಡುವ ಇಂತಹ ಕ್ರಿಮಿನಲ್ಗಳ ವರ್ತನೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ನಾಗರಿಕ ಸಮಾಜವು ಬರ್ಬರ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ತಿಳಿಸಿರುವ ನ್ಯಾಯಾಲಯ, ಅಪರಾಧಿಗಳ ಕ್ರೂರತೆಯನ್ನು ಗಮನಿಸಿ ಗಲ್ಲು ಶಿಕ್ಷೆ ನೀಡಿದೆ.

ಪೊಲೀಸರ ಶ್ರಮಕ್ಕೆ ಸಂದ ಜಯ

ಕೊಪ್ಪಳ ಎಸ್ಪಿ ರಾಮ್ ಎಲ್. ಅರಸಿದ್ದಿ ಅವರು ಪ್ರತಿಕ್ರಿಯಿಸಿ, "ಇದು ಪೊಲೀಸರಿಗೆ ಅತ್ಯಂತ ಸವಾಲಿನ ಪ್ರಕರಣವಾಗಿತ್ತು. ಸುಮಾರು 927 ಪುಟಗಳ ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಕೆ ಮಾಡಲಾಗಿತ್ತು. 12 ಜನರನ್ನು ಬಂಧಿಸಲಾಗಿತ್ತು. ಇಂದು ನ್ಯಾಯಾಲಯವು ಆರು ಜನರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಪೊಲೀಸ್ ಇಲಾಖೆಯ ತನಿಖೆಗೆ ನ್ಯಾಯ ಒದಗಿಸಿದೆ," ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

"ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಸಹಾಯ ಮಾಡಿದ್ದನ್ನೇ ದ್ವೇಷಿಸಿ, ಬರ್ಬರವಾಗಿ ಕೊಲೆ ಮಾಡಿರುವುದು ಕ್ಷಮಾರ್ಹವಲ್ಲ. ಈ ತೀರ್ಪು ಸಮಾಜದಲ್ಲಿ ಅಪರಾಧ ಎಸಗುವವರಿಗೆ ಎಚ್ಚರಿಕೆಯ ಗಂಟೆಯಾಗಲಿದೆ." ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.

Read More
Next Story