ಕರ್ನಾಟಕ ಬಂದ್-‌ ಪ್ರತಿಭಟನೆಯಲ್ಲಿ ಭಾಗವಹಿಸುವ ಮುನ್ನವೇ ವಾಟಾಳ್ ನಾಗರಾಜ್ ಪೊಲೀಸ್ ವಶಕ್ಕೆ
x

ವಾಟಾಳ್ ನಾಗರಾಜ್ ಅವರನ್ನು ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕ ಬಂದ್-‌ ಪ್ರತಿಭಟನೆಯಲ್ಲಿ ಭಾಗವಹಿಸುವ ಮುನ್ನವೇ ವಾಟಾಳ್ ನಾಗರಾಜ್ ಪೊಲೀಸ್ ವಶಕ್ಕೆ

ವಾಟಾಳ್‌ ನಾಗರಾಜ್‌ ಅವರು ಬೆಂಗಳೂರಿನ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ ನಡೆಸಿ, ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಯೋಜಿಸಿದ್ದರು.


Click the Play button to hear this message in audio format

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಹಾಗೂ ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಆದರೆ ಪ್ರತಿಭಟನೆಯಲ್ಲಿ ಭಾಗವಹಿಸುವ ಮುನ್ನವೇ ಪೊಲೀಸರು ವಾಟಾಳ್‌ ನಾಗರಾಜ್‌ ಅವರನ್ನು ಬೆಂಗಳೂರಿನ ಡಾಲರ್ಸ್‌ ಕಾಲೋನಿಯಲ್ಲಿರುವ ಅವರ ನಿವಾಸದಿಂದ ಪೊಲೀಸ್‌ ವಶಕ್ಕೆ ಪಡೆದಿದ್ದಾರೆ.

ಪೊಲೀಸರು ವಶಕ್ಕೆ ಪಡೆಯುತ್ತಿದ್ದ ವೇಳೆ ವಾಟಾಳ್‌ ನಾಗರಾಜ್‌ ಅವರು, ‘ನನ್ನನ್ನು ಯಾಕೆ ಅರೆಸ್ಟ್‌ ಮಾಡ್ತಿದ್ದೀರಿ?’ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಬಂದ್‌ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ವಾಟಾಳ್‌ ನಾಗರಾಜ್‌ ಅವರು ಬೆಂಗಳೂರಿನ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ ನಡೆಸಿ, ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಯೋಜಿಸಿದ್ದರು. ಸರ್ಕಾರ ಬಂದ್‌ ಹಿಂಪಡೆಯುವಂತೆ ಮನವಿ ಮಾಡಿದ್ದರೂ, ಬಂದ್‌ ಮುಂದುವರಿಸುವುದಾಗಿ ವಾಟಾಳ್‌ ನಾಗರಾಜ್‌ ಘೋಷಿಸಿದ್ದರು.

ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಕರ್ನಾಟಕ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಹಾಗೂ ಕೆಲವು ರೈತ ಸಂಘಟನೆಗಳು ಬೆಂಬಲ ಸೂಚಿಸಿವೆ. ಆದರೆ ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಬಣಗಳು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ, ಹಲವು ಆಟೋ ಮತ್ತು ಟ್ಯಾಕ್ಸಿ ಸಂಘಟನೆಗಳು, ಹೋಟೆಲ್‌ ಸಂಘಗಳು, ಶಾಲಾ-ಕಾಲೇಜುಗಳು, ಹಲವು ಸಂಘಟನೆಗಳು ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿಲ್ಲ. ಕೆಲವು ಸಂಘಟನೆಗಳು ನೈತಿಕ ಬೆಂಬಲವಷ್ಟೇ ವ್ಯಕ್ತಪಡಿಸಿವೆ.

ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಕಡಿಮೆ

ಬಂದ್‌ಗೆ ವ್ಯಾಪಕ ಬೆಂಬಲ ದೊರೆಯದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ನಾಗರಿಕರು ಎಂದಿನಂತೆ ತಮ್ಮ ಚಟುವಟಿಕೆಗಳನ್ನು ಮುಂದುವರಿಸುವಂತೆ ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.

ಶಾಲೆ, ಕಾಲೇಜು, ಆಸ್ಪತ್ರೆ ಸೇರಿ ಅಗತ್ಯ ಸೇವೆಗಳು ಎಂದಿನಂತೆ

ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಆಸ್ಪತ್ರೆಗಳು, ಔಷಧ ಅಂಗಡಿಗಳು ಹಾಗೂ ಇತರ ಅಗತ್ಯ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ಹಾಗೂ ನಮ್ಮ ಮೆಟ್ರೋ ಸೇವೆಗಳಲ್ಲೂ ಬಹುತೇಕ ಯಾವುದೇ ದೊಡ್ಡ ವ್ಯತ್ಯಯ ಉಂಟಾಗುವ ಸಾಧ್ಯತೆ ಇಲ್ಲ.

ಆದರೆ ಕೆಲವು ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆ, ಅಂಗಡಿ-ಮುಂಗಟ್ಟುಗಳ ಕಾರ್ಯಾಚರಣೆ ಹಾಗೂ ಗಡಿ ಭಾಗಗಳಲ್ಲಿ ವಾಹನ ಸಂಚಾರದ ಮೇಲೆ ಬಂದ್‌ ಪರಿಣಾಮ ಬೀರುವ ಸಾಧ್ಯತೆಯಿದೆ. ವಿಶೇಷವಾಗಿ ಅತ್ತಿಬೆಲೆ ಸೇರಿದಂತೆ ಕರ್ನಾಟಕ-ತಮಿಳುನಾಡು ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಹಿಂಸಾಚಾರಕ್ಕೆ ಅವಕಾಶವಿಲ್ಲ ಎಂದ ಪೊಲೀಸರು

ಬಂದ್‌ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರತಿಭಟನೆಯ ವೇಳೆ ಹಿಂಸಾಚಾರ ನಡೆಸುವುದು ಅಥವಾ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದನ್ನು ಸಹಿಸುವುದಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿಡಲು ಪ್ರಮುಖ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Read More
Next Story