ಬರಪೀಡಿತ ಪ್ರದೇಶದಲ್ಲಿ 28.52 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆಗೆ ಸರ್ಕಾರ ಆದೇಶ
x

ಬರಪೀಡಿತ ಪ್ರದೇಶದಲ್ಲಿ 28.52 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆಗೆ ಸರ್ಕಾರ ಆದೇಶ

ರಾಜ್ಯದ 31 ಜಿಲ್ಲೆಗಳ ಪೈಕಿ 178 ತಾಲೂಕುಗಳಲ್ಲಿ ಮಳೆ ಅಭಾವವಿದ್ದು, ಕೃಷಿ ಚಟುವಟಿಕೆಗಳಿಗೆ ಭಾರಿ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಮೋಡಬಿತ್ತನೆಗೆ ಚಾಲನೆ ನೀಡಲು ಸರ್ಕಾರ ಆದೇಶಿಸಿದೆ.


Click the Play button to hear this message in audio format

ರಾಜ್ಯದಲ್ಲಿ ಭೀಕರ ಮಳೆ ಕೊರತೆ ಮತ್ತು ಬರಗಾಲದ ಪರಿಸ್ಥಿತಿಯನ್ನು ಎದುರಿಸಲು, ರಾಜ್ಯ ಸರ್ಕಾರವು ಪ್ರತಿಷ್ಠಿತ ವರ್ಷಧಾರೆ ಕೃತಕ ಮಳೆ (ಮೋಡಬಿತ್ತನೆ )ಯೋಜನೆಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಿದೆ. 2026-27ನೇ ಸಾಲಿನಲ್ಲಿ ರಾಜ್ಯದಲ್ಲಿ ಮಳೆ ಕೊರತೆಯಿರುವ ಪ್ರದೇಶಗಳಲ್ಲಿ ಕೃತಕ ಮಳೆ ಸುರಿಸುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಬರೋಬ್ಬರಿ 28.52 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರವು ಆದೇಶವನ್ನು ಹೊರಡಿಸಿದೆ.

ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮಳೆ ಕೊರತೆ ತೀವ್ರವಾಗಿ ಕಾಡುತ್ತಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಪ್ರಕಾರ, ಜೂನ್ ತಿಂಗಳಲ್ಲಿ ಶೇ.42 ಮತ್ತು ಜುಲೈ ತಿಂಗಳಲ್ಲಿ ಶೇ.29 ರಷ್ಟು ಮಳೆ ಕೊರತೆಯಾಗಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ 178 ತಾಲೂಕುಗಳಲ್ಲಿ ಮಳೆ ಅಭಾವವಿದ್ದು, ಕೃಷಿ ಚಟುವಟಿಕೆಗಳಿಗೆ ಭಾರಿ ಹಿನ್ನಡೆಯಾಗಿದೆ. ಕಲಬುರಗಿ, ಬೆಳಗಾವಿ ಹಾಗೂ ಬೆಂಗಳೂರು ಪ್ರಾದೇಶಿಕ ವಿಭಾಗಗಳ ಮಟ್ಟದಲ್ಲಿ ನಡೆದ ಸಭೆಗಳಲ್ಲಿ ಜನಪ್ರತಿನಿಧಿಗಳು ಮಳೆ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೃತಕ ಮಳೆ ಯೋಜನೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಗಿದೆ.

ಏನಿದು ವರ್ಷಧಾರೆ ಯೋಜನೆ?

ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ನಡೆಸಿದ ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯ ಒಟ್ಟು ವೆಚ್ಚ 28.52 ಕೋಟಿ ರೂಪಾಯಿಗಳದ್ದಾಗಿದೆ. ಇದರಲ್ಲಿ 27.52 ಕೋಟಿ ರೂಪಾಯಿ ಸ್ಥಿರ ವೆಚ್ಚ ಮತ್ತು 1 ಕೋಟಿ ರೂಪಾಯಿ ಬದಲಾಗುವ ವೆಚ್ಚ ಸೇರಿದೆ.

ಈ ಯೋಜನೆಯು 60 ದಿನಗಳ ಅವಧಿಗೆ ನಡೆಯಲಿದ್ದು, ಇದಕ್ಕಾಗಿ 200 ಗಂಟೆಗಳ ಕಾಲ ವಿಮಾನದ ಮೂಲಕ ಹಾರಾಟ ನಡೆಸಿ ಮೋಡ ಬಿತ್ತನೆ ಮಾಡಲಾಗುತ್ತದೆ. ಈ ಯೋಜನೆಯ ಆಡಳಿತಾತ್ಮಕ ಜವಾಬ್ದಾರಿಯನ್ನು ಜಲಸಂಪನ್ಮೂಲ ಇಲಾಖೆಯು ಹೊತ್ತುಕೊಂಡಿದೆ. ತಾಂತ್ರಿಕ ವಿಷಯಗಳು, ಮೌಲ್ಯಮಾಪನ ಮತ್ತು ಮೇಲ್ವಿಚಾರಣೆಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ವಹಿಸಲಿದೆ. ಜಲಸಂಪನ್ಮೂಲ ಇಲಾಖೆಗೆ ಒದಗಿಸಲಾಗುವ ವಿಶೇಷ ಅನುದಾನದಿಂದ ಈ ಯೋಜನೆಗೆ ಹಣ ಬಿಡುಗಡೆ ಮಾಡಲಾಗುತ್ತದೆ. ಮೋಡ ಬಿತ್ತನೆಯ ಯಶಸ್ವಿ ಅನುಷ್ಠಾನಕ್ಕೆ ಅಗತ್ಯವಾದ ವೈಜ್ಞಾನಿಕ ಪರಿಶೀಲನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನವನ್ನು ಕೆಎಸ್‌ಎನ್‌ಡಿಎಂಸಿ ಸಂಸ್ಥೆಯು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ವಹಿಸಲಿದೆ.

ಯೋಜನೆಯ ಮಹತ್ವ

ಕೃತಕ ಮಳೆ ಬಿತ್ತನೆಯು ವೈಜ್ಞಾನಿಕ ಪ್ರಕ್ರಿಯೆಯಾಗಿದ್ದು, ಇದಕ್ಕಾಗಿ ವಿಶೇಷ ವಿಮಾನವನ್ನು ಬಳಸಲಾಗುತ್ತದೆ. ಇದು ಕೇವಲ ಮಳೆ ತರುವ ಪ್ರಯತ್ನ ಮಾತ್ರವಲ್ಲ, ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಮತ್ತು ಬೆಳೆಗಳನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ತುರ್ತು ಕ್ರಮವಾಗಿದೆ. ತಾಂತ್ರಿಕ ಪರಿಣಿತಿ ಮತ್ತು ವೈಜ್ಞಾನಿಕ ನಿಖರತೆಗಾಗಿ ಕರ್ನಾಟಕ ನೀರಾವರಿ ನಿಗಮವು ಈ ಯೋಜನೆಯ ಮೇಲ್ವಿಚಾರಣೆಯನ್ನು ತಜ್ಞರ ತಂಡಕ್ಕೆ ವಹಿಸಿದೆ. ಯೋಜನೆಯ ಯಶಸ್ಸಿಗೆ ಹವಾಮಾನದ ಸ್ಥಿತಿ ಬಹಳ ಮುಖ್ಯ. ಮೇಘಸ್ಫೋಟ ಅಥವಾ ಅತಿಯಾದ ಮಳೆಯ ಪರಿಸ್ಥಿತಿ ಇಲ್ಲದ, ಆದರೆ ಮಳೆ ಅಗತ್ಯವಿರುವ ಮೋಡಗಳನ್ನು ಗುರುತಿಸುವುದು ಈ ಯೋಜನೆಯ ತಾಂತ್ರಿಕ ಸವಾಲಾಗಿದೆ. ವೈಜ್ಞಾನಿಕ ದೃಷ್ಟಿಕೋನದೊಂದಿಗೆ, ನಿಗದಿತ ಅವಧಿಯಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮೂಲಕ ಮಳೆಯ ಕೊರತೆಯನ್ನು ನೀಗಿಸಲು ಸರ್ಕಾರ ಕಟಿಬದ್ಧವಾಗಿದೆ. ಈ ಯೋಜನೆಯು ರಾಜ್ಯದ ಕೃಷಿ ಉತ್ಪಾದನೆ ಮತ್ತು ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.

Read More
Next Story