ವಾಲ್ಮೀಕಿ ಹಗರಣದಲ್ಲಿ ʼಶಂಭೂಕʼನಾದರೆ ಬಿ.ನಾಗೇಂದ್ರ?, ಕಣ್ಣೀರು ಹಾಕುತ್ತಲೇ ರಾಜೀನಾಮೆ ನೀಡಿದ ಸಚಿವ
ನನ್ನಿಂದ ಪಕ್ಷಕ್ಕೆ ಮುಜುಗರ ಆಗಬಾರದು ಎಂದು ತೀರ್ಮಾನಿಸಿ ಮುಖ್ಯಮಂತ್ರಿಯವರಿಗೆ ನಾನೇ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ನಾಗೇಂದ್ರ ಗದ್ಗದಿತರಾಗಿಯೇ ಹೇಳಿದ್ದಾರೆ.
ವಾಲ್ಮೀಕಿ ಹಗರಣದಲ್ಲಿ ಕೊನೆಗೂ ಸಚಿವ ಬಿ. ನಾಗೇಂದ್ರ ಅವರು ತಮ್ಮ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೆಹಲಿಯಿಂದ ನೇರವಾಗಿ ವಿಧಾನಸೌಧಕ್ಕೆ ಬಂದು ಮಹತ್ವದ ಸುದ್ದಿಗೋಷ್ಠಿ ನಡೆಸಿದ ಅವರು, ನನ್ನಿಂದ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ಆಗಬಾರದು. ಸರ್ಕಾರದ ಅಭಿವೃದ್ಧಿ ಕುಂಠಿತವಾಗಬಾರದು, ರಾಜ್ಯದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಮುಜುಗರ ಆಗಬಾರದು ಎಂದು ಭಾವಿಸಿ ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ನಾಗೇಂದ್ರ ಘೋಷಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮನುವಾದಿಗಳು ಬಿಡಲಿಲ್ಲ, ಇನ್ನು ದಲಿತರು, ಅಲ್ಪಸಂಖ್ಯಾತರನ್ನು ನೀವು ಬಿಡುತ್ತೀರಾ ಎಂದು ಪ್ರಶ್ನಿಸಿದ ಅವರು, ನನಗೆ ಆಗಿರುವ ಅನ್ಯಾಯವನ್ನು ಎತ್ತಿ ಹಿಡಿಯುತ್ತೇನೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾದ 15 ಕ್ಷೇತ್ರಗಳಲ್ಲಿ ಓಡಾಡಿ, ಬಿಜೆಪಿ ವಿರುದ್ಧ ಜಾಗೃತಿ ಮೂಡಿಸುತ್ತೇನೆ. ನಾನು ಶಂಭುಕನಾಗಲು ತಯಾರಿಲ್ಲ ಎಂದು ಕಣ್ಣೀರು ಹಾಕುತ್ತಲೇ ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿಯವರು ಯಾವಾಗಲೂ ಹಿಂಬಾಗಿಲಿನಿಂದಲೇ ಅಧಿಕಾರಕ್ಕೆ ಬಂದಿದ್ದಾರೆ. ಬೇರೆ ಪಕ್ಷದಿಂದ ಗೆದ್ದವರನ್ನು ಕರೆದುಕೊಂಡು ಹೋಗಿ, ಅಧಿಕಾರ ನಡೆಸಿ ಶೇ 40 ರಷ್ಟು ಲೂಟಿ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್ ಅವರು ಸಿಎಲ್‌ಪಿಯಿಂದ ಹಿಡಿದು ದೆಹಲಿವರೆಗೂ ನಾನು ತಪ್ಪು ಮಾಡಿಲ್ಲ ಅಂತಲೇ ಮನವರಿಕೆ ಮಾಡಿಕೊಟ್ಟರು. ಆದರೆ, ನನ್ನಿಂದ ಪಕ್ಷಕ್ಕೆ ಮುಜುಗರ ಆಗಬಾರದು ಎಂದು ತೀರ್ಮಾನಿಸಿ ಮುಖ್ಯಮಂತ್ರಿಯವರಿಗೆ ನಾನೇ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಗದ್ಗದಿತರಾಗಿಯೇ ಹೇಳಿದ್ದಾರೆ.
ಇದೇ ವೇಳೆ ವರಿಷ್ಠರಿಗೆ ಮನವಿ ಮಾಡಿದ ಅವರು, ನನಗೆ ಒಂದೇ ಒಂದು ಅವಕಾಶ ಕೊಡಿ, ಇದನ್ನು ಬ್ಲಾಕ್‌ಮೇಲ್ ಎಂದು ಅಂದುಕೊಳ್ಳಬೇಡಿ. ನಾನು ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ಬರುತ್ತೇನೆ. ಮನುವಾದಿಗಳಿಗೆ ತಾಕತ್ತಿದ್ದರೆ ಜನತಾ ನ್ಯಾಯಾಲಯಕ್ಕೆ ಬನ್ನಿ ಎಂದು ಸವಾಲು ಹಾಕಿದ್ದಾರೆ. ಬಳ್ಳಾರಿಯ ಸೋ ಕಾಲ್ಡ್ ಮುಖಂಡರೇ ಬನ್ನಿ, ನನ್ನ ಕ್ಷೇತ್ರದಿಂದಲೇ ಮತ್ತೆ ಸ್ಪರ್ಧಿಸುತ್ತೇನೆ. ಜನತಾ ನ್ಯಾಯಾಲಯಕ್ಕೆ ಹೋಗೋಣ, ತಾಕತ್ತಿದ್ದರೆ ಕಾಂಗ್ರೆಸ್ ಪಕ್ಷವನ್ನು ಎದುರಿಸಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ವಾಲ್ಮೀಕಿ ಹಗರಣ ಸಂಬಂಧ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ನಾಗೇಂದ್ರ ಅವರು 2024 ಜೂನ್ 6ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಸಿಎಂ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಮತ್ತೆ ಮಂತ್ರಿಯಾಗಿ ಆಗಸ್ಟ್ 3, 2026ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಇದಕ್ಕೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಕೊನೆಗೂ ನಾಗೇಂದ್ರ ಹುದ್ದೆ ತೊರೆದಿದ್ದಾರೆ. ಆ ಮೂಲಕ ಒಂದೇ ಹಗರಣ ಸಂಬಂಧ ಅವರು ಎರಡು ಬಾರಿ ಸಚಿವ ಸ್ಥಾನ ಕಳೆದುಕೊಂಡಂತಾಗಿದೆ.
ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ನಾಸೀರ್ ಹುಸೇನ್, ಸಿಎಂ ರಾಜಕೀಯ ಸಲಹೆಗಾರ ಜಿ.ಸಿ.ಚಂದ್ರಶೇಖರ್, ಸಣ್ಣ ನೀರಾವರಿ ಖಾತೆ ಸಚಿವ ಡಾ.ಅಜಯ್ ಸಿಂಗ್, ಸಚಿವ ರಿಜ್ವಾನ್ ಅರ್ಷದ್ ಇದ್ದರು.

