600 ಅಕೌಂಟ್‌, 89 ಕೋಟಿ ರೂ. ಲೂಟಿ; ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಏನಿದೆ ?
x

ಸಾಂದರ್ಭಿಕ ಚಿತ್ರ

600 ಅಕೌಂಟ್‌, 89 ಕೋಟಿ ರೂ. ಲೂಟಿ; ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಏನಿದೆ ?

ಪರಿಶಿಷ್ಟ ಪಂಗಡಗಳ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ವಾಲ್ಮೀಕಿ ನಿಗಮದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದು ಈ ಪ್ರಕರಣದ ಪ್ರಮುಖ ಆರೋಪವಾಗಿದೆ.


Click the Play button to hear this message in audio format

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬರೋಬ್ಬರಿ 89.63 ಕೋಟಿ ರೂಪಾಯಿಗಳ ಬೃಹತ್ ಹಗರಣ ಇದೀಗ ರಾಜ್ಯ ರಾಜಕಾರಣದಲ್ಲಿ ಮಹಾ ಭೂಕಂಪ ಸೃಷ್ಟಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮೂರು ಪ್ರತ್ಯೇಕ ಚಾರ್ಜ್‌ಶೀಟ್‌ಗಳನ್ನು (ಆರೋಪಪಟ್ಟಿ) ಸಲ್ಲಿಕೆ ಮಾಡಿದ್ದು, ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿದೆ.

ಇತ್ತ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಈ ಹಗರಣ ಮುನ್ನೆಲೆಗೆ ಬಂದಿರುವುದು ಹೊಸ ಸರ್ಕಾರಕ್ಕೆ ಮೊದಲ ದಿನವೇ ಭಾರಿ ತಲೆನೋವಾಗಿ ಪರಿಣಮಿಸಿದ್ದು, ಪರಿಶಿಷ್ಟ ಪಂಗಡಗಳ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ವಾಲ್ಮೀಕಿ ನಿಗಮದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದು ಈ ಪ್ರಕರಣದ ಪ್ರಮುಖ ಆರೋಪವಾಗಿದೆ.

ಬಡ ವಿದ್ಯಾರ್ಥಿಗಳ ಶಿಕ್ಷಣ ಸಾಲ, ಸ್ವಯಂ ಉದ್ಯೋಗದ ಸಬ್ಸಿಡಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಬಳಕೆಯಾಗಬೇಕಿದ್ದ ಕೋಟ್ಯಂತರ ರೂಪಾಯಿ ಹಣ ಅಕ್ರಮವಾಗಿ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ. ಇದು ಸಾಮಾನ್ಯ ಸರ್ಕಾರಿ ಕಚೇರಿಯಲ್ಲ, ಸಾವಿರಾರು ಬಡ ಕುಟುಂಬಗಳ ಭವಿಷ್ಯದೊಂದಿಗೆ ಸಂಬಂಧ ಹೊಂದಿರುವ ಸಂಸ್ಥೆ ಎಂಬುದೇ ಇಲ್ಲಿ ಅತ್ಯಂತ ವಿಷಾದನೀಯ ಸಂಗತಿ.

ಅಧಿಕಾರಿ ಆತ್ಮಹತ್ಯೆ ತಂದಿಟ್ಟ ಆಪತ್ತು

2024ರ ಮೇ ತಿಂಗಳಲ್ಲಿ ನಿಗಮದ ಅಧೀಕ್ಷಕ ಪಿ. ಚಂದ್ರಶೇಖರನ್ ಎಂಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಾಗ ಈ ಪ್ರಕರಣ ಬಯಲಿಗೆ ಬಂತು. ಅವರು ಬರೆದಿದ್ದ 6 ಪುಟಗಳ ಡೆತ್‌ನೋಟ್‌ನಲ್ಲಿ ಇಲಾಖೆಯ ಉನ್ನತ ಮಟ್ಟದ ಒತ್ತಡ ಹಾಗೂ ಅಕ್ರಮ ಹಣ ವರ್ಗಾವಣೆಯ ಸ್ಫೋಟಕ ಸತ್ಯಗಳು ಅಡಗಿದ್ದವು. ಪೊಲೀಸರಿಂದ ಆರಂಭವಾದ ತನಿಖೆ ಎಸ್‌ಐಟಿ, ಜಾರಿ ನಿರ್ದೇಶನಾಲಯ ದಾಟಿಕೊಂಡು ಅಂತಿಮವಾಗಿ ಕೇಂದ್ರೀಯ ತನಿಖಾ ದಳ ಕೈ ಸೇರಿದೆ.

ಸಿಬಿಐ ಚಾರ್ಜ್‌ಶೀಟ್‌ನಲ್ಲೇನಿದೆ?

ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಒಟ್ಟು 30ಕ್ಕೂ ಹೆಚ್ಚು ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಅದರಲ್ಲಿ ಇ.ಡಿ. ಹಗರಣದ ಪ್ರಮುಖ ಸೂತ್ರದಾರ ಮಾಜಿ ಸಚಿವ ಬಿ. ನಾಗೇಂದ್ರ, ಮಾಜಿ ಸಚಿವರ ಆಪ್ತ ಸಹಾಯಕ ಹಾಗೂ ಸಹಚರ ನೆಕ್ಕಂಟಿ ನಾಗರಾಜ್‌, ಹೈದರಾಬಾದ್ ಮೂಲದ ಉದ್ಯಮಿ ಹಾಗೂ ಅಕ್ರಮ ಹಣ ವರ್ಗಾವಣೆಯ ಮಾಸ್ಟರ್‌ಮೈಂಡ್ ಸತ್ಯನಾರಾಯಣ ವರ್ಮಾ, ನಿಗಮದ ಅಂದಿನ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಜಿ.ಜಿ., ಯೂನಿಯನ್ ಬ್ಯಾಂಕ್ ಹಾಗೂ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಕೆಲವು ಭ್ರಷ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ದವೂ ಚಾರ್ಜ್‌ಶೀಟ್‌ ದಾಖಲಿಸಲಾಗಿದೆ.

ಅಕ್ರಮ ನಡೆದಿದ್ದು ಹೇಗೆ?

ನಿಗಮದ ಯೂನಿಯನ್ ಬ್ಯಾಂಕ್ ಖಾತೆಯಲ್ಲಿದ್ದ 187 ಕೋಟಿ ರೂ. ಪೈಕಿ 89.63 ಕೋಟಿ ರೂ.ಗಳನ್ನು ನಕಲಿ ಕೆವೈಸಿ, ನಕಲಿ ರಬ್ಬರ್ ಸ್ಟಾಂಪ್ ಹಾಗೂ ಫೋರ್ಜರಿ ಚೆಕ್‌ಗಳನ್ನು ಬಳಸಿ 18 ಬೋಗಸ್ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ನಂತರ ಹಣದ ಮೂಲ ಪತ್ತೆಯಾಗದಿರಲು ಬರೋಬ್ಬರಿ 600ಕ್ಕೂ ಹೆಚ್ಚು ಖಾತೆಗಳಿಗೆ ಅದನ್ನು ವಿಭಜಿಸಿ ವರ್ಗಾವಣೆ ಮಾಡಲಾಗಿತ್ತು!

ಚಿನ್ನ, ಐಷಾರಾಮಿ ಕಾರುಗಳ ಖರೀದಿ!

ಸಿಬಿಐ ವರದಿಯ ಪ್ರಕಾರ, ಈ ಅಕ್ರಮ ಹಣವನ್ನು ಕೇವಲ ನಗದು ರೂಪದಲ್ಲಿ ಮಾತ್ರ ಇಡಲಾಗಿಲ್ಲ. ಬದಲಿಗೆ ಭಾರಿ ಪ್ರಮಾಣದ ಚಿನ್ನದ ಬಿಸ್ಕತ್‌ಗಳಾಗಿ ಪರಿವರ್ತಿಸಲಾಗಿದೆ. ಅಷ್ಟೇ ಅಲ್ಲದೆ, ಮಾಜಿ ಸಚಿವ ಬಿ. ನಾಗೇಂದ್ರ ಅವರಿಗಾಗಿ ಬೇನಾಮಿ ಹೆಸರಿನಲ್ಲಿ ಐಷಾರಾಮಿ ಕಾರನ್ನು ಖರೀದಿಸಲಾಗಿದೆ ಎಂದು ತಿಳಿದುಬಂದಿದೆ.

ಟೆಂಡರ್ ದಂಧೆಯಲ್ಲೂ ಭ್ರಷ್ಟಾಚಾರ

13.95 ಕೋಟಿ ರೂ. ಮೌಲ್ಯದ ಸ್ಮಾರ್ಟ್ ಕಂಪ್ಯೂಟರ್ ಲ್ಯಾಬ್ ಮತ್ತು ರೊಟ್ಟಿ ಮಾಡುವ ಯಂತ್ರಗಳ ಟೆಂಡರ್ ನೀಡಲು ನಾಗೇಂದ್ರ ಅವರು 1.20 ಕೋಟಿ ರೂ. ಲಂಚ ಪಡೆದಿದ್ದಾರೆ. ಈ ಹಣ ಅವರ ಸಹೋದರಿ, ಭಾವ ಹಾಗೂ ಆಪ್ತರ ಖಾತೆಗಳಿಗೆ ಜಮೆಯಾಗಿದೆ. 4.90 ಕೋಟಿ ರೂ.ಗಳ ಕೌಶಲ್ಯಾಭಿವೃದ್ಧಿ ತರಬೇತಿ ಗುತ್ತಿಗೆಯನ್ನು ಯಾವುದೇ ಟೆಂಡರ್ ಇಲ್ಲದೆ ಅಕ್ರಮವಾಗಿ ನೀಡಿ, ಅದಕ್ಕಾಗಿ ನೆಕ್ಕಂಟಿ ನಾಗರಾಜ್ ಕುಟುಂಬಕ್ಕೆ 64 ಲಕ್ಷ ರೂ. ಹಾಗೂ ಕಲ್ಯಾಣ ಇಲಾಖೆಯ ಸೆಕ್ಷನ್ ಅಧಿಕಾರಿಗೆ 15.50 ಲಕ್ಷ ರೂ. ಲಂಚ ಪಾವತಿಯಾಗಿದೆ. ಈ ಲೂಟಿ ಮಾಡಿದ ಹಣದ ಒಂದು ಭಾಗವನ್ನು ಚುನಾವಣಾ ಚಟುವಟಿಕೆಗಳಿಗೂ ಬಳಸಲಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ಸರ್ಕಾರಕ್ಕೆ ಮೊದಲ ದಿನವೇ 'ಅಗ್ನಿಪರೀಕ್ಷೆ'

ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಈ ಹಗರಣವು ಮೊದಲ ದಿನವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದು ಪರಿಶಿಷ್ಟ ಪಂಗಡದ (ಎಸ್‌ಟಿ) ಹಣವಾಗಿರುವುದರಿಂದ ಸಾರ್ವಜನಿಕರಲ್ಲಿ ಭಾರಿ ಆಕ್ರೋಶವಿದೆ. ಕಾಂಗ್ರೆಸ್ ಪಕ್ಷದ ಇಮೇಜ್ ಅನ್ನು ಕಾಪಾಡಿಕೊಳ್ಳುವುದು ಸರ್ಕಾರಕ್ಕೆ ಸುಲಭವಲ್ಲ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವು ಈ ಹಗರಣವನ್ನು ಮುಂದಿಟ್ಟುಕೊಂಡು ಸದನದ ಒಳಗೂ ಮತ್ತು ಸಾರ್ವಜನಿಕವಾಗಿ ಬೃಹತ್ ಹೋರಾಟ, ಪಾದಯಾತ್ರೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ.

Read More
Next Story