ವಾಲ್ಮೀಕಿ ಹಗರಣದ ಚರ್ಚೆಗೆ ಸರ್ಕಾರ ಸಿದ್ಧವಿದ್ದರೂ ವಿಪಕ್ಷಗಳ ಮೊಂಡುತನ; ಬಿ.ನಾಗೇಂದ್ರ ಕಿಡಿ
x

ವಾಲ್ಮೀಕಿ ಹಗರಣದ ಚರ್ಚೆಗೆ ಸರ್ಕಾರ ಸಿದ್ಧವಿದ್ದರೂ ವಿಪಕ್ಷಗಳ ಮೊಂಡುತನ; ಬಿ.ನಾಗೇಂದ್ರ ಕಿಡಿ

ತೆಲಂಗಾಣ ಸೇರಿದಂತೆ ವಿವಿಧೆಡೆ ಸುಮಾರು 800 ಖಾತೆಗಳಿಗೆ ವರ್ಗಾವಣೆ ಆಗಿದ್ದ 87 ಕೋಟಿ ರೂ.ಗಳಲ್ಲಿ 84.68 ಕೋಟಿ ರೂ.ಗಳನ್ನು ಕೆಲವೇ ದಿನಗಳಲ್ಲಿ ವಾಪಸ್ ತಂದಿದೆ. ಈ ಅಕ್ರಮದ ಒಂದೇ ಒಂದು ರೂಪಾಯಿ ಕೂಡ ನನ್ನ ಖಾತೆಗೆ ಬಂದಿಲ್ಲ ಎಂದು ನಾಗೇಂದ್ರ ಹೇಳಿದ್ದಾರೆ.


ವಿಧಾನಸಭೆ ಅಧಿವೇಶನದಲ್ಲಿ ರಾಜ್ಯದ ಅಭಿವೃದ್ಧಿ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಬೇಕೆಂಬ ಸರ್ಕಾರದ ಆಶಯವನ್ನು ವಿಪಕ್ಷಗಳು ಮಣ್ಣು ಪಾಲು ಮಾಡುತ್ತಿವೆ. ಮಹರ್ಷಿ ವಾಲ್ಮೀಕಿ ನಿಗಮದ ಹಗರಣದಲ್ಲಿ ವೃಥಾ ತಮ್ಮ ರಾಜೀನಾಮೆಗೆ ಪಟ್ಟು ಹಿಡಿದು, ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ಸಚಿವ ಬಿ.ನಾಗೇಂದ್ರ ದೂರಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿರೋಧ ಪಕ್ಷಗಳು ಕೇವಲ ಗಲಾಟೆ ನಡೆಸುತ್ತಾ, ತಮ್ಮ ರಾಜೀನಾಮೆಗೆ ಪಟ್ಟು ಹಿಡಿದು ಕಲಾಪ ನಡೆಯದಂತೆ ತಡೆಯುತ್ತಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಸಿಎಂ ಸೇರಿದಂತೆ ಎಲ್ಲಾ ಸಚಿವರು ಸದನದಲ್ಲಿ ಉತ್ತರ ನೀಡಲು ಸಂಪೂರ್ಣ ಸಿದ್ಧರಾಗಿದ್ದಾರೆ. ಆದರೆ, ಸತ್ಯ ಎದುರಿಸಲು ಭಯಪಡುತ್ತಿರುವ ವಿಪಕ್ಷಗಳು ಚರ್ಚೆಯಿಂದ ಓಡಿಹೋಗಿ ಕಲಾಪವನ್ನು ವ್ಯರ್ಥ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ವಾಲ್ಮೀಕಿ ನಿಗಮದ ಪ್ರಕರಣದ ಹಿನ್ನೆಲೆ ಸ್ಪಷ್ಟಪಡಿಸಿದ ಅವರು, ಯಾವುದೇ ಬೋರ್ಡ್ ಮೀಟಿಂಗ್, ಅಧ್ಯಕ್ಷರು ಅಥವಾ ಸಚಿವರ ಗಮನಕ್ಕೆ ಬಾರದಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ 187 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿತ್ತು. ಇದು ಸರ್ಕಾರದ ಗಮನಕ್ಕೆ ಬರುತ್ತಿದ್ದಂತೆ 100 ಕೋಟಿ ರೂ.ಗಳ ವಹಿವಾಟನ್ನು ತಕ್ಷಣ ಫ್ರೀಜ್ ಮಾಡಲಾಯಿತು. ಉಳಿದ 87 ಕೋಟಿ ರೂ.ಗಳನ್ನು ಒಟ್ಟು 800 ಖಾತೆಗಳಿಗೆ ವರ್ಗಾವಣೆಯಾಗಿತ್ತು. ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಸರ್ಕಾರ ತಕ್ಷಣವೇ ಎಸ್ಐಟಿ ರಚಿಸಿತು ಎಂದು ವಿವರಿಸಿದ್ದಾರೆ.

ಸ್ವಇಚ್ಛೆಯಿಂದ ರಾಜೀನಾಮೆ

ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆಗೆ ನೆರವಾಗುವ ಉದ್ದೇಶದಿಂದ ತಾವು ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಪ್ರಕರಣದ ತನಿಖೆ ಆರಂಭಿಸಿದ ತನಿಖಾ ತಂಡವು ತಕ್ಷಣವೇ ಸ್ಪಂದಿಸಿ ತೆಲಂಗಾಣ ಸೇರಿದಂತೆ ವಿವಿಧೆಡೆ ಸುಮಾರು 800 ಖಾತೆಗಳಿಗೆ ವರ್ಗಾವಣೆ ಆಗಿದ್ದ 87 ಕೋಟಿ ರೂ.ಗಳಲ್ಲಿ 84.68 ಕೋಟಿ ರೂ.ಗಳನ್ನು ಕೆಲವೇ ದಿನಗಳಲ್ಲಿ ವಾಪಸ್ ತಂದಿದೆ. ಈ ಅಕ್ರಮದ ಒಂದೇ ಒಂದು ರೂಪಾಯಿ ಕೂಡ ನನ್ನ ಖಾತೆಗೆ ಬಂದಿಲ್ಲ ಎಂಬುದನ್ನು ಅತ್ಯಂತ ಧೈರ್ಯವಾಗಿ ಹೇಳುತ್ತೇನೆ ಎಂದು ಹೇಳಿದ್ದಾರೆ.

ತನಿಖೆ ಹೆಸರಿನಲ್ಲಿ ಇಡಿ ಅಧಿಕಾರಿಗಳು ನನಗೆ ಹೇಗೆ ಧಮಕಿ ಹಾಕಿದರು ಎಂಬುದನ್ನು ಈಗಾಗಲೇ ಬಹಿರಂಗಪಡಿಸಿದ್ದೇನೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಆದರೂ ಸಂವಿಧಾನ ನಮಗೆ ಸಂಪೂರ್ಣ ರಕ್ಷಣೆ ನೀಡಿದೆ ಎಂದಿದ್ದಾರೆ.

'ಮನುವಾದಿ'ಗಳ ಷಡ್ಯಂತ್ರ

ದಲಿತ ಸಮುದಾಯದ ನಾಯಕನೊಬ್ಬ ಮಂತ್ರಿಯಾಗಿರುವುದನ್ನು ಸಹಿಸಕೊಳ್ಳಲಾಗದೆ ಮನುವಾದಿ ಮನಸ್ಥಿತಿಯ ವಿಪಕ್ಷಗಳು ಈ ಷಡ್ಯಂತ್ರ ರೂಪಿಸುತ್ತಿವೆ. ವಿಪಕ್ಷಗಳು ಸತ್ಯವನ್ನು ಮುಚ್ಚಿಟ್ಟು ಸದನದಲ್ಲಿ ನೂರು ಬಾರಿ ಸುಳ್ಳು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿವೆ. ರಾಜ್ಯಸಭೆಯ ವಿಪಕ್ಷ ನಾಯಕರನ್ನು ಹೇಗೆ ನಡೆಸಿಕೊಳ್ಳಲಾಯಿತು ಎಂಬುದು ಇಡೀ ದೇಶಕ್ಕೆ ತಿಳಿದಿದೆ. 'ಶುದ್ಧೀಕರಣ'ದ ಹೆಸರಿನಲ್ಲಿ ಬಿಜೆಪಿ ನಾಯಕರು ಮಾಡುತ್ತಿರುವ ಕೆಲಸಗಳು ಸಮಾಜದಲ್ಲಿ ಇಂದಿಗೂ ವರ್ಣ ವ್ಯವಸ್ಥೆ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ನಾಗೇಂದ್ರ ಕಿಡಿಕಾರಿದ್ದಾರೆ.

ಜನತಾ ನ್ಯಾಯಾಲಯದಲ್ಲಿ ತಕ್ಕ ಪಾಠ

ಅಖಂಡ ವಾಲ್ಮೀಕಿ ಸಮುದಾಯ ಮತ್ತು ದಲಿತ ನಾಯಕರ ಮೇಲೆ ಬಿಜೆಪಿ ನಡೆಸುತ್ತಿರುವ ಈ 'ಗದಾ ಪ್ರಹಾರ'ವನ್ನು ಸಮಾಜ ಸೂಕ್ಷ್ಮವಾಗಿ ಗಮನಿಸುತ್ತಿದೆ. ಬರಲಿರುವ ಚುನಾವಣೆಗಳಲ್ಲಿ ಜನತಾ ನ್ಯಾಯಾಲಯವೇ ಬಿಜೆಪಿಗೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದ್ದಾರೆ.

"ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ನಮಗೆ ಶ್ರೀರಕ್ಷೆಯಾಗಿದೆ. ಒಂದು ವೇಳೆ ಸಂವಿಧಾನ ಇರದೇ ಹೋಗಿದ್ದರೆ ದಲಿತರಾದ ನಾವೆಲ್ಲ ಎಲ್ಲಿರುತ್ತಿದ್ದೆವೋ ಗೊತ್ತಿಲ್ಲ. ಸಂವಿಧಾನದ ಬಲದಿಂದಲೇ ನಾವು ಸತ್ಯದ ಪರ ಹೋರಾಟ ಮುಂದುವರಿಸುತ್ತೇವೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read More
Next Story