
ಯುವಜನರ ಮಾನಸಿಕ ಆರೋಗ್ಯ ನೀತಿ ಶೀಘ್ರದಲ್ಲೇ ಜಾರಿ : ಸಚಿವ ಯು.ಟಿ.ಖಾದರ್ ಭರವಸೆ
ಯುವಜನರು ಕೇವಲ ಶಿಕ್ಷಣ ಮತ್ತು ಉದ್ಯೋಗದ ಓಟದಲ್ಲಿ ಮಗ್ನರಾಗದೆ, ಸಾಮಾಜಿಕವಾಗಿ ಕ್ರಿಯಾಶೀಲರಾದಾಗ ಮಾತ್ರ ಆರೋಗ್ಯಕರ ಸಮಾಜದ ನಿರ್ಮಾಣ ಸಾಧ್ಯ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ದೇಶದ ಪ್ರಗತಿಯ ಹರಿಕಾರರು ಯುವಜನರೇ ಆಗಿದ್ದು, ಅವರ ಸಬಲೀಕರಣವೇ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಮೂಲ ಮಂತ್ರ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಗಾಂಧಿ ಭವನದಲ್ಲಿ ನಡೆದ 'ಯುವಾಧಿವೇಶನ-2026' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಯುವಜನರ ಬಹುದಿನಗಳ ಬೇಡಿಕೆಯಾದ ಯುವಜನ ಆಯೋಗ ಸ್ಥಾಪನೆ ಮತ್ತು ಯುವಜನರ ಮಾನಸಿಕ ಆರೋಗ್ಯ ನೀತಿಯನ್ನು ಆದಷ್ಟು ಬೇಗ ಜಾರಿಗೆ ತರುವುದಾಗಿ ಭರವಸೆ ನೀಡಿದರು.
ಇಂದಿನ ಯುವ ಪೀಳಿಗೆ ಎದುರಿಸುತ್ತಿರುವ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಯುವಜನರು ಕೇವಲ ಶಿಕ್ಷಣ ಮತ್ತು ಉದ್ಯೋಗದ ಓಟದಲ್ಲಿ ಮಗ್ನರಾಗದೆ, ಸಾಮಾಜಿಕವಾಗಿ ಕ್ರಿಯಾಶೀಲರಾದಾಗ ಮಾತ್ರ ಆರೋಗ್ಯಕರ ಸಮಾಜದ ನಿರ್ಮಾಣ ಸಾಧ್ಯ ಎಂದು ಅವರು ಕಿವಿಮಾತು ಹೇಳಿದರು.
ಮಾನಸಿಕ ಆರೋಗ್ಯವೇ ಅಭಿವೃದ್ಧಿಯ ಅಡಿಪಾಯ
"ಯುವಜನರು ಬಲಿಷ್ಠರಾದಾಗ ಮಾತ್ರ ದೇಶ ಬಲಿಷ್ಠವಾಗಲು ಸಾಧ್ಯ. ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒತ್ತಡ, ಅನಿಶ್ಚಿತತೆ ಮತ್ತು ಸಾಮಾಜಿಕ ಸವಾಲುಗಳಿಂದಾಗಿ ಯುವಜನರ ಮಾನಸಿಕ ಆರೋಗ್ಯ ಕುಸಿಯುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರವು ರಾಜ್ಯಮಟ್ಟದ ಮಾನಸಿಕ ಆರೋಗ್ಯ ನೀತಿಯನ್ನು ರೂಪಿಸಲು ಬದ್ಧವಾಗಿದೆ" ಎಂದು ತಿಳಿಸಿದರು. "ಒಬ್ಬ ವ್ಯಕ್ತಿಯನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸಲು ಯಾವುದೇ ಸಾಂಪ್ರದಾಯಿಕ ಶಿಕ್ಷಣ ಸಂಸ್ಥೆಗಳು ಅಥವಾ ಕೋರ್ಸುಗಳಿಲ್ಲ. ಇಂತಹ ಜವಾಬ್ದಾರಿಯನ್ನು ಸಂವಾದದಂತಹ ಎನ್ಜಿಒ ಸಂಸ್ಥೆಗಳು ಹೊತ್ತುಕೊಂಡಿರುವುದು ಶ್ಲಾಘನೀಯ. ಸಂವಾದದಂತಹ ಸಂಸ್ಥೆಗಳು ಯುವಕರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಮತ್ತು ಸಮಾಜದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿವೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಯೋಗ ಮತ್ತು ನೀತಿಯ ಅನಿವಾರ್ಯತೆ
ಕಾರ್ಯಕ್ರಮದಲ್ಲಿ ಸಂವಾದ ಸಂಸ್ಥೆಯ ಯೋಗೇಶ್ ಮಲ್ಲಿಗೆಮಾಡು ಅವರು ಯುವಜನರ ಪರವಾಗಿ ಹಕ್ಕೊತ್ತಾಯ ಪತ್ರವನ್ನು ಸಚಿವರಿಗೆ ಸಲ್ಲಿಸಿದರು. ತಮ್ಮ ಬೇಡಿಕೆಗಳನ್ನು ಮಂಡಿಸುತ್ತಾ, "ರಾಜ್ಯದಲ್ಲಿ ಯುವಜನರ ಸಮಸ್ಯೆಗಳನ್ನು ಆಲಿಸಲು, ಅವರ ಹಕ್ಕುಗಳನ್ನು ರಕ್ಷಿಸಲು ಮತ್ತು ಸರ್ಕಾರದ ಯೋಜನೆಗಳನ್ನು ತಳಮಟ್ಟಕ್ಕೆ ಕೊಂಡೊಯ್ಯಲು ಒಂದು ಸಾಂವಿಧಾನಿಕ ಅಥವಾ ಕಾನೂನಾತ್ಮಕ ಚೌಕಟ್ಟಿನ ಯುವಜನ ಆಯೋಗದ ಅವಶ್ಯಕತೆಯಿದೆ. ಜೊತೆಗೆ, ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡವನ್ನು ಹೋಗಲಾಡಿಸಲು ಪ್ರತ್ಯೇಕ ನೀತಿ ಮತ್ತು ಕೌನ್ಸಿಲಿಂಗ್ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು" ಎಂದು ಆಗ್ರಹಿಸಿದರು.
ಈ ಬೇಡಿಕೆಗೆ ತಕ್ಷಣವೇ ಸ್ಪಂದಿಸಿದ ಸಚಿವ ಯು.ಟಿ. ಖಾದರ್, ಯುವಜನರ ಬೇಡಿಕೆಗಳು ನ್ಯಾಯಯುತವಾಗಿವೆ ಎಂದು ಒಪ್ಪಿಕೊಂಡರು. ಆಯೋಗದ ರಚನೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ಮಾನಸಿಕ ಆರೋಗ್ಯ ತಜ್ಞರ ಸಮಿತಿಯನ್ನು ರಚಿಸಿ ನೀತಿ ರೂಪಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಯುವಾಧಿವೇಶನ-2026ರಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಯುವಕರಿಗೆ ಮಾರ್ಗದರ್ಶನ ನೀಡಿದರು. ಜನಾರ್ದನ ಕೆಸರಗದ್ದೆ, ಸವಿತಾ ಸುರೇಶ್ ಬಾಬು, ಮುರಳಿ ಮೋಹನ್ ಕಾಟಿ, ಮಂಜುಳ ಸುನೀಲ್, ಇಳಂಗೋ ಸ್ಟಾನಿಸ್ಲಾಸ್ ಹಾಗೂ ದೇವರಾಜ್ ಪಾಟೀಲ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಗಣ್ಯರು ತಮ್ಮ ಅನುಭವದ ಮಾತುಗಳ ಮೂಲಕ ಯುವಜನರಲ್ಲಿ ಆತ್ಮವಿಶ್ವಾಸವನ್ನು ತುಂಬಿದರು.

