ಅಮೆರಿಕ-ಇರಾನ್ ಯುದ್ಧ ಅಂತ್ಯ: ಜೂನ್ 19ಕ್ಕೆ ಮಹತ್ವದ ಶಾಂತಿ ಒಪ್ಪಂದ
x

ಅಮೆರಿಕ-ಇರಾನ್ ಜೂನ್ 19ಕ್ಕೆ ಜೆನಿವಾದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಮಾಡಲಿವೆ.

ಅಮೆರಿಕ-ಇರಾನ್ ಯುದ್ಧ ಅಂತ್ಯ: ಜೂನ್ 19ಕ್ಕೆ ಮಹತ್ವದ ಶಾಂತಿ ಒಪ್ಪಂದ

ಅಮೆರಿಕ-ಇರಾನ್ ಜೂನ್ 19ಕ್ಕೆ ಜೆನಿವಾದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಮಾಡಲಿವೆ. ಸ್ಟ್ರೈಟ್ ಆಫ್ ಹಾರ್ಮುಜ್ ಮುಕ್ತವಾಗಲಿದ್ದು, ತೈಲ ಬೆಲೆ ಇಳಿಕೆಯಿಂದ ಭಾರತದ ಆರ್ಥಿಕತೆಗೆ ದೊಡ್ಡ ರಿಲೀಫ್ ಸಿಗಲಿದೆ.


Click the Play button to hear this message in audio format

ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಮೂಡಿಸಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ರಾಜತಾಂತ್ರಿಕ ಹಾಗೂ ಮಿಲಿಟರಿ ಸಮರವು ಕೊನೆಗೂ ಅಂತ್ಯ ಕಾಣುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಉಭಯ ದೇಶಗಳ ನಡುವೆ ಮಹತ್ವದ ಶಾಂತಿ ಒಪ್ಪಂದವೊಂದು ಸಿದ್ಧಗೊಂಡಿದ್ದು, ಮುಂಬರುವ ಶುಕ್ರವಾರದ ವೇಳೆಗೆ ಇದಕ್ಕೆ ಅಧಿಕೃತವಾಗಿ ಸಹಿ ಬೀಳುವ ಸಾಧ್ಯತೆಯಿದೆ ಎಂದು ಅಂತರಾಷ್ಟ್ರೀಯ ವಿಚಾರಗಳ ಹಿರಿಯ ಪತ್ರಕರ್ತ ಹಾಗೂ ಫೆಡರಲ್‌ನ ಸಲಹಾ ಸಂಪಾದಕ ದಕ್ಷಿಣಮೂರ್ತಿ ಅವರು ತಿಳಿಸಿದ್ದಾರೆ. ʻದ ಫೆಡರಲ್‌ ಕರ್ನಾಟಕʼದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಒಪ್ಪಂದದ ಸಫಲತೆ, ಜಾಗತಿಕ ಆರ್ಥಿಕತೆಯ ಮೇಲಾಗುವ ಪರಿಣಾಮಗಳು ಹಾಗೂ ಇಸ್ರೇಲ್ ಮತ್ತು ಪಾಕಿಸ್ತಾನದ ಪಾತ್ರಗಳ ಕುರಿತು ಸುದೀರ್ಘವಾಗಿ ವಿಶ್ಲೇಷಿಸಿದ್ದಾರೆ.

ಭಾನುವಾರ ರಾತ್ರಿ ನಡೆದ ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ ಮತ್ತು ಇರಾನ್ ಒಪ್ಪಂದದ ಪ್ರಮುಖ ಅಂಶಗಳಿಗೆ ಸಮ್ಮತಿ ಸೂಚಿಸಿವೆ. ಇಂಟರ್ನ್ಯಾಷನಲ್ ಶಿಪ್ಪಿಂಗ್ ಕಾರಿಡಾರ್ ಎಂದೇ ಪ್ರಸಿದ್ಧವಾಗಿರುವ 'ಸ್ಟ್ರೈಟ್ ಆಫ್ ಹಾರ್ಮುಜ್' ಭಾಗದಲ್ಲಿ ಸಂಚರಿಸುವ ಹಡಗುಗಳಿಗೆ ಟೋಲ್ ಫೀ ವಿಧಿಸುವುದಾಗಿ ಇರಾನ್ ಈ ಹಿಂದೆ ಎಚ್ಚರಿಕೆ ನೀಡಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕವು ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಇರಾನ್ ಹಡಗುಗಳ ಸಂಚಾರಕ್ಕೆ ದಿಗ್ಬಂಧನ (ಬಾಕೇಡ್) ವಿಧಿಸಿತ್ತು. ಆದರೆ ಪ್ರಸ್ತುತ ಒಪ್ಪಂದದ ಪ್ರಕಾರ, ಇರಾನ್ ಟೋಲ್ ಫೀ ಸಂಗ್ರಹವನ್ನು ಕೈಬಿಡಲಿದ್ದು, ಅಮೆರಿಕವು ತನ್ನ ದಿಗ್ಬಂಧನವನ್ನು ಹಿಂಪಡೆಯಲಿದೆ. ಜೂನ್ 19ರ ಶುಕ್ರವಾರದಂದು ಜೆನಿವಾದಲ್ಲಿ ಈ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕುವ ಸಾಧ್ಯತೆಗಳಿವೆ.

ಈ ಮಾತುಕತೆಗಳು ಕೇವಲ ಅಮೆರಿಕ ಮತ್ತು ಇರಾನ್ ನಡುವೆ ನಡೆದಿರುವುದರಿಂದ ಇಸ್ರೇಲ್ ಈ ಒಪ್ಪಂದದಿಂದ ಹೊರಗುಳಿದಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಇರಾನ್‌ನ ಇಸ್ಲಾಮಿಕ್ ಸರ್ಕಾರವನ್ನು ಬದಲಾಯಿಸಿ ಲಿಬರಲ್ ಸರ್ಕಾರ ತರುವುದು ಹಾಗೂ ಅವರ ನ್ಯೂಕ್ಲಿಯರ್ ಪ್ರೋಗ್ರಾಮ್ ಅನ್ನು ತಡೆಯುವುದು ಮುಖ್ಯ ಉದ್ದೇಶವಾಗಿತ್ತು. ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ದಾಳಿಗಳನ್ನು ನಿಲ್ಲಿಸುವಂತೆ ಇಸ್ರೇಲ್‌ಗೆ ಸೂಚಿಸಿದ್ದರೂ, ನೆನ್ನೆ ಬೆಳಿಗ್ಗೆಯೂ ಬೈರೂತ್ ಮೇಲೆ ಇಸ್ರೇಲ್ ದೊಡ್ಡ ಮಟ್ಟದ ದಾಳಿ ನಡೆಸಿದೆ. ಇರಾನ್‌ನ ಆಪ್ತ ಮಿತ್ರನಾದ ಲೆಬನನ್‌ನ 'ಹೆಜ್ಬುಲ್ಲಾ' ಸಂಘಟನೆಯನ್ನು ಸಂಪೂರ್ಣವಾಗಿ ಮುಗಿಸಲು ಇಸ್ರೇಲ್ ಕಾಯುತ್ತಿದ್ದು, ಒಂದು ವೇಳೆ ನೆತನ್ಯಾಹು ಅವರು ಟ್ರಂಪ್ ಮಾತನ್ನು ಮೀರಿ ದಾಳಿ ಮುಂದುವರಿಸಿದರೆ ಈ ಶಾಂತಿ ಒಪ್ಪಂದಕ್ಕೆ ಹಿನ್ನಡೆಯಾಗುವ ಭೀತಿಯೂ ಇದೆ.

ಅರ್ಥಿಕ ನಿರ್ಬಂಧಗಳ ವಿಚಾರವಾಗಿ ಮಾತನಾಡಿದ ದಕ್ಷಿಣಮೂರ್ತಿ ಅವರು, ಇರಾನ್ ಮೇಲಿನ ಎಕನಾಮಿಕ್ ಸ್ಯಾಂಕ್ಷನ್‌ಗಳನ್ನು ಸಡಿಲಗೊಳಿಸಲು ಹಾಗೂ ವಿವಿಧ ದೇಶಗಳಲ್ಲಿ ಫ್ರೀಜ್ ಆಗಿರುವ ಇರಾನ್ ಆಸ್ತಿಗಳನ್ನು ಹಂತಹಂತವಾಗಿ ಬಿಡುಗಡೆ ಮಾಡಲು ಅಮೆರಿಕ ಒಪ್ಪಿಕೊಂಡಿದೆ ಎಂದಿದ್ದಾರೆ. ಆದರೆ ಇರಾನ್ ಹೊಂದಿರುವ ಎನ್ರಿಚ್ಡ್ ಯುರೇನಿಯಂ ಮತ್ತು ನ್ಯೂಕ್ಲಿಯರ್ ಪ್ರೋಗ್ರಾಮ್ ಕುರಿತು ಈ ಒಪ್ಪಂದದಲ್ಲಿ ಇನ್ನೂ ತೀರ್ಮಾನವಾಗಿಲ್ಲ. ಶುಕ್ರವಾರ ಸಹಿ ಬಿದ್ದ ನಂತರ ಮುಂದಿನ 60 ದಿನಗಳ ಕಾಲಾವಕಾಶದಲ್ಲಿ ಉಭಯ ದೇಶಗಳು ಜಂಟಿಯಾಗಿ ಕುಳಿತು ಈ ಪರಮಾಣು ವಿಚಾರದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿವೆ ಎಂದು ತಿಳಿಸಿದ್ದಾರೆ.

ಜಾಗತಿಕ ಕದನ ವಿರಾಮದಲ್ಲಿ ನೆರೆರಾಷ್ಟ್ರ ಪಾಕಿಸ್ತಾನದ ಪಾತ್ರದ ಕುರಿತು ಮಾತನಾಡಿದ ಅವರು, ಈ ಶಾಂತಿ ಸಂಧಾನದಲ್ಲಿ ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿ ದೇಶಗಳು ಪ್ರಮುಖ ಪಾತ್ರ ವಹಿಸಿದ್ದವು. ಇತ್ತೀಚಿನ ವಾರಗಳಲ್ಲಿ ಕತಾರ್ ಕೂಡ ಈ ಪ್ರಕ್ರಿಯೆಗೆ ಸೇರ್ಪಡೆಗೊಂಡು ಅಂತಿಮ ಒಪ್ಪಂದ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪಾಸಿಟಿವ್ ಪಬ್ಲಿಸಿಟಿ ಸಿಕ್ಕಿದೆ. ಭಾರತವು ಇರಾನ್, ಅಮೆರಿಕ ಮತ್ತು ಇಸ್ರೇಲ್ ಮೂರೂ ದೇಶಗಳೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿದ್ದರೂ, ಮೋದಿ ಸರ್ಕಾರವು ಇಂತಹ ಮಧ್ಯಸ್ಥಿಕೆ (ಮೀಡಿಯೇಷನ್) ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸದ ಕಾರಣ ಭಾರತಕ್ಕೆ ಸಿಗಬೇಕಾಗಿದ್ದ ಈ ರಾಜತಾಂತ್ರಿಕ ಅವಕಾಶವನ್ನು ಪಾಕಿಸ್ತಾನ ಸದುಪಯೋಗಪಡಿಸಿಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೊನೆಯದಾಗಿ ವಾಣಿಜ್ಯ ಮತ್ತು ಆರ್ಥಿಕ ಚೇತರಿಕೆಯ ಕುರಿತು ಮಾತನಾಡುತ್ತಾ, ಯುದ್ಧದ ಭೀತಿ ದೂರವಾಗುತ್ತಿದ್ದಂತೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಇಳಿಕೆ ಕಂಡಿದ್ದು ಸ್ಟಾಕ್ ಮಾರ್ಕೆಟ್ ಚೇತರಿಸಿಕೊಳ್ಳುತ್ತಿದೆ. ಕರ್ನಾಟಕದ ಮಂಗಳೂರಿನ ಎಂಆರ್‌ಪಿಎಲ್ ಸೇರಿದಂತೆ ಭಾರತದ ಇಂಧನ ವಲಯ ಹಾಗೂ ಇರಾನ್‌ಗೆ ಅಕ್ಕಿ ರಫ್ತು ಮಾಡುವ ಮುಂತಾದ ಉದ್ಯಮಗಳು ಈ ಯುದ್ಧದಿಂದಾಗಿ ತೀವ್ರ ನಷ್ಟ ಅನುಭವಿಸಿದ್ದವು. ಒಪ್ಪಂದದ ನಂತರ ಸ್ಟ್ರೈಟ್ ಆಫ್ ಹಾರ್ಮುಜ್ ಮುಕ್ತವಾಗಲಿದ್ದರೂ, ಅಲ್ಲಿ ಸಿಲುಕಿರುವ ನೂರಾರು ಹಡಗುಗಳ ಸಂಚಾರ ಸುಗಮವಾಗಲು ಮತ್ತು ಇರಾನ್ ಸಮುದ್ರದಡಿಯಲ್ಲಿ ಇಟ್ಟಿರುವ ಮೈನ್ಸ್ (ಬಾಂಬ್) ಗಳನ್ನು ತೆರವುಗೊಳಿಸಲು ಕನಿಷ್ಠ ಒಂದರಿಂದ ಎರಡು ತಿಂಗಳ ಸಮಯ ಬೇಕಾಗಬಹುದು. ಆದರೆ ಯುದ್ಧ ಕೊನೆಗೊಳ್ಳುತ್ತಿರುವ ಸೈಕಲಾಜಿಕಲ್ ಪರಿಣಾಮದಿಂದಾಗಿ ಭಾರತ ಸೇರಿದಂತೆ ಜಾಗತಿಕ ಆರ್ಥಿಕತೆಗೆ ಶೀಘ್ರದಲ್ಲೇ ದೊಡ್ಡ ರಿಲೀಫ್ ಸಿಗಲಿದೆ ಎಂದು ದಕ್ಷಿಣಮೂರ್ತಿ ಸ್ಪಷ್ಟಪಡಿಸಿದ್ದಾರೆ.

Read More
Next Story