ಜೇವರ್ಗಿ, ರಾಯಚೂರಿನ ಕುಡಿಯುವ ನೀರಿಗೆ ಆದ್ಯತೆ ಅಗತ್ಯ: ಅಜಯ್ ಧರ್ಮಸಿಂಗ್ ಒತ್ತಾಯ
x

ಜೇವರ್ಗಿ, ರಾಯಚೂರಿನ ಕುಡಿಯುವ ನೀರಿಗೆ ಆದ್ಯತೆ ಅಗತ್ಯ: ಅಜಯ್ ಧರ್ಮಸಿಂಗ್ ಒತ್ತಾಯ

ಯುಕೆಪಿ ವ್ಯಾಪ್ತಿಯ ಜಿಲ್ಲೆಗಳ ರೈತರಿಗೆ ಸಮರ್ಪಕ ನೀರು ತಲುಪಿಸುವ ನಿಟ್ಟಿನಲ್ಲಿ ನೀರಿನ ಮಿತವ್ಯಯ, ವೈಜ್ಞಾನಿಕ ಹಂಚಿಕೆಯ ಕುರಿತು ನೀರಾವರಿ ಸಲಹಾ ಸಮಿತಿಯು ಕೂಲಂಕಷವಾಗಿ ಚರ್ಚೆ ನಡೆಸಿತು.


Click the Play button to hear this message in audio format

ಕೃಷ್ಣಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಯಲ್ಲಿರುವ ಜಿಲ್ಲೆಗಳ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸುವ ನಿಟ್ಟಿನಲ್ಲಿ ಮತ್ತು ಮುಂಬರುವ ಬೇಸಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ನೀರಿನ ಮಿತವ್ಯಯ ಹಾಗೂ ವೈಜ್ಞಾನಿಕ ಹಂಚಿಕೆಯ ಕುರಿತು ವಿಕಾಸಸೌಧದಲ್ಲಿ ಮಹತ್ವದ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ್ ವಹಿಸಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ರಾಯಚೂರು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಡಾ. ಅಜಯ್ ಧರ್ಮಸಿಂಗ್ ಅವರು, ಜೇವರ್ಗಿ ಮತ್ತು ರಾಯಚೂರು ಭಾಗದ ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ವಿಶೇಷ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಸಚಿವ ಡಾ. ಅಜಯ್ ಧರ್ಮಸಿಂಗ್, ಜೇವರ್ಗಿ ವಿಧಾನಸಭಾ ಕ್ಷೇತ್ರದ ನೀರಿನ ಕೊರತೆಯ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸಿದರು. "ಜೇವರ್ಗಿ ಕ್ಷೇತ್ರದ ಜೆಬಿಸಿ, ಐಬಿಸಿ ಹಾಗೂ ಎಂಬಿಸಿ ಕಾಲುವೆಗಳ ಅಂತಿಮ ಹಂತದ ಗ್ರಾಮಗಳಿಗೆ ನೀರು ತಲುಪುತ್ತಿಲ್ಲ. ಇದರಿಂದಾಗಿ ಜನರು ಮಾತ್ರವಲ್ಲದೆ ಜಾನುವಾರುಗಳೂ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಕಾಲುವೆಗಳ ಕಿ.ಮೀ. 40ರಿಂದ 86.36ರವರೆಗಿನ 50,425 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ವಿನ್ಯಾಸದ ಪ್ರಕಾರ 1,033 ಕ್ಯೂಸೆಕ್ಸ್ ನೀರು ಹರಿಯಬೇಕಿದೆ. ಆದರೆ, ಪ್ರಸ್ತುತ ಕೇವಲ 500 ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಸುಮಾರು 533 ಕ್ಯೂಸೆಕ್ಸ್ ಕೊರತೆಯಿದೆ. ಈ ಸಮಸ್ಯೆಯನ್ನು ನಿವಾರಿಸಲು ಮುಂಬರುವ ಬೇಸಿಗೆಯವರೆಗೆ ಜೇವರ್ಗಿ ಕ್ಷೇತ್ರಕ್ಕೆ ಕನಿಷ್ಠ 2.5 ಟಿಎಂಸಿ ನೀರನ್ನು ಮೀಸಲಿಡಬೇಕು" ಎಂದು ಒತ್ತಾಯಿಸಿದರು. ಜೊತೆಗೆ, 25-30 ವರ್ಷಗಳಷ್ಟು ಹಳೆಯದಾದ ಜೇವರ್ಗಿ ಮತ್ತು ಮುದಬಾಳ ಶಾಖಾ ಕಾಲುವೆಗಳಲ್ಲಿ ಸೋರಿಕೆ ಉಂಟಾಗುತ್ತಿರುವುದನ್ನು ಗಮನಿಸಿದ ಸಚಿವರು, ತುರ್ತಾಗಿ ಇಆರ್‌ಎಂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಕೆಂಬಾವಿ ಹೆಡ್ ರೆಗುಲೇಟರ್ ಬಳಿಯ ತಡೆಗೋಡೆಯ ತಾಂತ್ರಿಕ ದೋಷಗಳನ್ನು ಸರಿಪಡಿಸುವಂತೆ ಸೂಚನೆ ನೀಡಿದರು.

ರಾಯಚೂರಿನ ಕುಡಿಯುವ ನೀರಿಗೆ 3 ಟಿಎಂಸಿ ಮೀಸಲು

ರಾಯಚೂರಿನಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು ಮುಂಚಿತವಾಗಿಯೇ ಸಿದ್ಧತೆ ಅಗತ್ಯ. ರಾಯಚೂರು ನಗರಕ್ಕೆ 3 ಟಿಎಂಸಿ ನೀರನ್ನು ಕಾಯ್ದಿರಿಸುವಂತೆ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿದರು. "ಬೇಸಿಗೆಯ ತೀವ್ರತೆ ಹೆಚ್ಚಾದ ಮೇಲೆ ಕ್ರಮ ಕೈಗೊಳ್ಳುವ ಬದಲು, ಈಗಿನಿಂದಲೇ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುವುದು ನಮ್ಮ ಕರ್ತವ್ಯ" ಎಂದು ತಿಳಿಸಿದರು. ನಾರಾಯಣಪುರ ಬಲದಂಡೆ ಕಾಲುವೆಯ ಕೊನೆಯಂಚಿನ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸಲು ಗೇಟ್‌ಗಳ ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ಮಾಡಬೇಕು. ವಿಶೇಷವಾಗಿ, ವಿತರಣಾ ಕಾಲುವೆ 1 ರಿಂದ 14ರ ವರೆಗೆ ನಡೆಯುತ್ತಿರುವ ಎಸ್‌ಸಿಎಡಿಎ ಗೇಟ್ ಅಳವಡಿಕೆಯ ಜೊತೆಗೆ, 15 ರಿಂದ 18ರ ವರೆಗಿನ ಎರಡನೇ ಹಂತದ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು. ಇದು ನೀರಿನ ವೈಜ್ಞಾನಿಕ ಹಂಚಿಕೆ ಮತ್ತು ಉಳಿತಾಯಕ್ಕೆ ಅತೀ ಅಗತ್ಯ ಎಂದು ಪ್ರತಿಪಾದಿಸಿದರು.

ಸಭೆಯ ಪ್ರಮುಖ ನಿರ್ಧಾರಗಳು

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಲಭ್ಯವಿರುವ 85.61 ಟಿಎಂಸಿ ಜೀವಜಲವನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಸಭೆ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ನೀರು ಹರಿವಿನ ವೇಳಾಪಟ್ಟಿ: ಪ್ರಸ್ತುತ ನಡೆಯುತ್ತಿರುವ ನೀರು ಬಿಡುಗಡೆಯನ್ನು ಅಕ್ಟೋಬರ್ 25ರವರೆಗೆ ವಿಸ್ತರಿಸಲಾಗಿದೆ. ಅಕ್ಟೋಬರ್ 26ರಿಂದ ನವೆಂಬರ್ 2ರವರೆಗೆ ಕಾಲುವೆಗಳನ್ನು ನಿರ್ವಹಣೆಗಾಗಿ ಬಂದ್ ಮಾಡಲಾಗುವುದು. ನವೆಂಬರ್ 3ರಿಂದ 12ರವರೆಗೆ ಮತ್ತೆ 10 ದಿನ ನೀರು ಹರಿಸಲು ತೀರ್ಮಾನಿಸಲಾಗಿದೆ. ಹಿಂಗಾರು ಹಂಗಾಮಿಗೆ ಅಗತ್ಯವಿರುವಷ್ಟು ನೀರು ಲಭ್ಯವಿಲ್ಲದ ಕಾರಣ, ಈ ಬಾರಿ ಹಿಂಗಾರು ನೀರಾವರಿ ಪೂರೈಕೆ ಸಾಧ್ಯವಿಲ್ಲ ಎಂದು ಸಭೆ ನಿರ್ಧರಿಸಿದೆ. ಲಭ್ಯವಿರುವ ನೀರನ್ನು ಕೇವಲ ಕುಡಿಯುವ ನೀರು, ಕೆರೆ ತುಂಬಿಸುವಿಕೆ ಹಾಗೂ ತುರ್ತು ಅಗತ್ಯಗಳಿಗೆ ಮಾತ್ರ ಬಳಸಲು ಸೂಚಿಸಲಾಗಿದೆ. ಕೊನೆಯಂಚಿನ ರೈತರಿಗೆ ನೀರು ಸಿಗದಂತೆ ತಡೆಯುತ್ತಿರುವ ಅನಧಿಕೃತ ಪಂಪ್‌ಸೆಟ್‌ಗಳು ಮತ್ತು ಅಕ್ರಮ ನೀರೆತ್ತುವಿಕೆಯನ್ನು ತಡೆಯಲು ಕಂದಾಯ, ಪೊಲೀಸ್ ಮತ್ತು ನೀರಾವರಿ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಲಾಯಿತು.

"ನೀರಿನ ಪ್ರತಿಯೊಂದು ಹನಿಯೂ ರೈತರ ಪಾಲಿಗೆ ಅಮೃತ. ಹಳೆಯ ಪದ್ಧತಿಗಳನ್ನು ಕೈಬಿಟ್ಟು, ಎಸ್‌ಸಿಎಡಿಎನಂತಹ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀರಿನ ನಿರ್ವಹಣೆಯನ್ನು ದಕ್ಷಗೊಳಿಸಬೇಕು. ಜೇವರ್ಗಿ ಮತ್ತು ರಾಯಚೂರು ಭಾಗದ ಜನರು ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವುದು ನಮ್ಮ ಪ್ರಥಮ ಆದ್ಯತೆ" ಎಂದು ಸ್ಪಷ್ಟಪಡಿಸಿದರು.

Read More
Next Story