
ಕಡಲನಗರಿ ಉಡುಪಿಯಲ್ಲಿ ಶೂಟೌಟ್; ಕಾಂಗ್ರೆಸ್ ಮುಖಂಡನ ಹ*ತ್ಯೆ
ಕಡಲನಗರಿ ಉಡುಪಿಯಲ್ಲಿ ಸ್ಥಳೀಯ ಉದ್ಯಮಿ ಹಾಗೂ ಪ್ರಭಾವಿ ಕಾಂಗ್ರೆಸ್ ಮುಖಂಡನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮುದರಂಗಡಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾಗಿದ್ದ ಉದ್ಯಮಿ ಡೇವಿಡ್ ಡಿಸೋಜಾ ಕೊಲೆಯಾದ ದುರ್ದೈವಿ. ದುಷ್ಕರ್ಮಿಗಳು ಹತ್ತಿರದಿಂದ ಡೇವಿಡ್ ಡಿಸೋಜಾ ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಡೇವಿಡ್ ಡಿಸೋಜಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಶೂಟೌಟ್ಗೆ ನಿಖರ ಕಾರಣವೇನು ಎಂಬುದು ಇನ್ನೂ ಬಯಲಾಗಿಲ್ಲ. ವೈಯಕ್ತಿಕ ದ್ವೇಷ ಅಥವಾ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೃತ್ಯ ಎಸಗಿ ತಲೆಮರೆಸಿಕೊಂಡಿರುವ ಹಂತಕರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳು ಬಲೆ ಬೀಸಿವೆ.
ಉಡುಪಿ ಜಿಲ್ಲೆಯ ಕುಂದಾಪುರದ ಹೋಲಿ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ಶೂಟೌಟ್ ಪ್ರಕರಣದಲ್ಲಿ ಉದ್ಯಮಿ ಐವನ್ ರೀಚರ್ಡ್ ಮಸ್ಕರೇನಸ್ (45) ಹತ್ಯೆಗೀಡಾಗಿದ್ದರು.
ಆರೋಪಿ ಡೆರಿಕ್ ಎಂಬಾತ ನೀಡಬೇಕಿದ್ದ 1.5 ಲಕ್ಷ ರೂ. ಬಾಕಿ ಹಣದ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ಕ್ಷುಲ್ಲಕ ಕಾರಣದಿಂದಲೇ ಡೆರಿಕ್, ನಾಡಪಿಸ್ತೂಲಿನಿಂದ ಐವನ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದ. ಕರಾವಳಿಯಲ್ಲಿ ಶೂಟೌಟ್ ಪ್ರಕರಣಗಳು ಮರುಕಳುಹಿಸಿರುವುದು ಜನರನ್ನು ಆತಂಕಕ್ಕೆ ದೂಡಿದೆ.

