ತುಂಗಭದ್ರೆಯ ಒಡಲಲ್ಲಿ ಹೂಳಿನ ಜಾತ್ರೆ; ರೈತರಿಗೆ ಸ್ವಾಮೀಜಿಗಳೇ ಸಾಥ್
x

ತುಂಗಭದ್ರೆಯ ಒಡಲಲ್ಲಿ ಹೂಳಿನ ಜಾತ್ರೆ; ರೈತರಿಗೆ ಸ್ವಾಮೀಜಿಗಳೇ ಸಾಥ್

ದಶಕಗಳಿಂದ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳು ತೆಗೆಯುವಂತೆ ರೈತರು ಸರ್ಕಾರದ ಮುಂದೆ ಕಣ್ಣೀರು ಸುರಿಸಿದರು, ಅಧಿಕಾರಿಗಳ ಕಚೇರಿಗೆ ಅಲೆದರು. ಆದರೆ ಮಣ್ಣಿನ ಮಕ್ಕಳ ನೋವಿಗೆ ಯಾವ ಸರ್ಕಾರವೂ ಸ್ಪಂದಿಸಲಿಲ್ಲ.


ಮಣ್ಣಿನ ಭಾರಕ್ಕೆ ನದಿಯ ಒಡಲು ನಲುಗಿದಾಗ... ಜನಪ್ರತಿನಿಧಿಗಳ ಭರವಸೆ ಕೇವಲ ಕಾಗದದ ದೋಣಿಯಾದಾಗ... ಇಲ್ಲಿ ಅನ್ನದಾತನೇ ಭಗೀರಥನಾಗಬೇಕಾದ ಅನಿವಾರ್ಯತೆ ಎದುರಾಗುತ್ತದೆ!‌, ಹೌದು ವೀಕ್ಷಕರೇ, ಇಂತಹದ್ದೇ ಒಂದು ಅಭೂತಪೂರ್ವ ಹಾಗೂ ಐತಿಹಾಸಿಕ ಘಟನೆಗೆ ವಿಜಯನಗರ ಜಿಲ್ಲೆ ಸದ್ದಿಲ್ಲದೇ ಸಾಕ್ಷಿಯಾಗಿದೆ. ಸರ್ಕಾರ ಮಾಡಬೇಕಿದ್ದ ಕೆಲಸವನ್ನು ರೈತರೇ ತಮ್ಮ ಹೆಗಲಿಗೆ ಹಾಕಿಕೊಂಡಿದ್ದಾರೆ.

ದಶಕಗಳಿಂದ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳು ತೆಗೆಯುವಂತೆ ರೈತರು ಸರ್ಕಾರದ ಮುಂದೆ ಕಣ್ಣೀರು ಸುರಿಸಿದರು, ಅಧಿಕಾರಿಗಳ ಕಚೇರಿಗೆ ಅಲೆದರು. ಆದರೆ ಮಣ್ಣಿನ ಮಕ್ಕಳ ನೋವಿಗೆ ಯಾವ ಸರ್ಕಾರವೂ ಸ್ಪಂದಿಸಲಿಲ್ಲ. ಕೊನೆಗೆ ಬೇಸತ್ತ ರೈತರು, ಸರ್ಕಾರಕ್ಕೆ ನೇರ ಸೆಡ್ಡು ಹೊಡೆದು ನೂರಾರು ಟ್ರ್ಯಾಕ್ಟರ್ಗಳು ಹಾಗೂ ಜೆಸಿಬಿಗಳೊಂದಿಗೆ ತಾವೇ ಅಖಾಡಕ್ಕಿಳಿದಿದ್ದಾರೆ.

ಹೊಸಪೇಟೆ ಸಮೀಪದ ಗುಂಡಾ ಅರಣ್ಯದ ಡ್ಯಾಂ ಹಿನ್ನೀರು ಪ್ರದೇಶದಲ್ಲಿ ಸಾವಿರಾರು ರೈತರು ಒಗ್ಗೂಡಿ 'ಹೂಳಿನ ಜಾತ್ರೆ' ನಡೆಸಿದ್ದಾರೆ. ವಿಶೇಷ ಎಂದರೆ, ರೈತರ ಈ ದಿಟ್ಟ ನಡೆಗೆ ಮಠಾಧೀಶರು ಕೂಡ ಬೆಂಬಲ ಸೂಚಿಸಿದ್ದು, ಗಂಗಾ ಪೂಜೆ ನೆರವೇರಿಸುವ ಮೂಲಕ ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ.

ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಸೇರಿದಂತೆ ಆರು ಜಿಲ್ಲೆಗಳ ಸಾವಿರಾರು ರೈತರ ಜೀವನಾಡಿ ಈ ತುಂಗಭದ್ರಾ ಡ್ಯಾಂ. ಆದರೆ ಜಲಾಶಯದಲ್ಲಿ ಬರೋಬ್ಬರಿ 35 ಟಿಎಂಸಿ ಅಡಿಯಷ್ಟು ಬರೀ ಹೂಳೇ ತುಂಬಿಕೊಂಡಿದೆ. ಇದರಿಂದ ನೀರು ಸಂಗ್ರಹ ಸಾಮರ್ಥ್ಯ ಪಾತಾಳಕ್ಕಿಳಿದಿದ್ದು, ರೈತರಿಗೆ ಪ್ರತಿವರ್ಷ ಬೆಳೆ ಒಣಗುವ ಆತಂಕ ಎದುರಾಗಿದೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಡಾ. ಪುರುಷೋತ್ತಮ ಗೌಡ ಅವರು ಎಚ್ಚರಿಸಿದರು.

ಕೋಟ್ಯಂತರ ರೂಪಾಯಿ ಬಜೆಟ್ ಮಂಡಿಸುವ ಸರ್ಕಾರಗಳಿಗೆ, 'ಹೂಳೆತ್ತಲು 5 ಸಾವಿರ ಕೋಟಿ ವೆಚ್ಚವಾಗುತ್ತೆ, ಹೂಳು ಸುರಿಯಲು ಜಾಗವಿಲ್ಲ' ಅನ್ನೋ ತಾಂತ್ರಿಕ ನೆಪಗಳೇ ದೊಡ್ಡದಾಗಿವೆಯೇ ಹೊರತು, ಅನ್ನದಾತನ ಸಂಕಷ್ಟ ಬಗೆಹರಿಸುವ ಇಚ್ಛಾಶಕ್ತಿ ಇಲ್ಲವಾಗಿದೆ.

ಈ ಹಿಂದೆಯೂ ನಡೆದಿತ್ತು ಹೂಳಿನ ಕ್ರಾಂತಿ

2017 ಮೇ-ಜೂನ್ ತಿಂಗಳಲ್ಲಿ ಇದೇ ರೀತಿ ರೈತರು ಸಾಂಕೇತಿಕವಾಗಿ ಹೂಳೆತ್ತುವ ಕ್ರಾಂತಿ ಮಾಡಿದ್ದರು. ಅಂದೂ ಸಹ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಜಲಾಶಯದ ಹೂಳೆತ್ತುವ ಕಾರ್ಯಕ್ಕೆ ನೂರಾರು ಟ್ರ್ಯಾಕ್ಟರ್ಗಳು ಹಾಗೂ ಜೆಸಿಬಿ ಯಂತ್ರಗಳನ್ನು ಬಳಸಿಕೊಂಡಿದ್ದರು. ಹೂಳು ತೆಗೆಯುವಂತೆ ರೈತರಿಂದ ಒತ್ತಡ ಹೆಚ್ಚಿದಾಗ, ಇದು ಅಸಾಧ್ಯದ ಮಾತು, ತೆಗೆದ ಹೂಳನ್ನು ಸುರಿಯಲು ಪ್ರತ್ಯೇಕ ಜಾಗ ಬೇಕಾಗಬಹುದು ಎಂದು ತಾಂತ್ರಿಕ ಸಮಿತಿ ವರದಿ ನೀಡಿತ್ತು.

ಭಾರಿ ವೆಚ್ಚ ಮತ್ತು ಪರಿಸರ ಕಾಳಜಿಯ ಕಾರಣದಿಂದಾಗಿ ಸರ್ಕಾರವು ಜಲಾಶಯದ ಹೂಳೆತ್ತುವ ಕಾರ್ಯಕ್ಕೆ ಅಂದು ಹಿಂದೇಟು ಹಾಕಿತ್ತು. ಅಲ್ಲದೇ ತುಂಗಭದ್ರಾ ಮಂಡಳಿಯು ಜಲಾಶಯದ ಹೂಳಿನ ಪ್ರಮಾಣ ಅಳೆಯಲು 1963 ರಿಂದ 1993 ರವರೆಗೆ ಹಂತ ಹಂತವಾಗಿ ಹೈಡ್ರೋಗ್ರಾಫಿಕ್ ಸಮೀಕ್ಷೆಗಳನ್ನೂ ನಡೆಸಿತ್ತು.

ಇಷ್ಟಾದರೂ ಸರ್ಕಾರದಿಂದ ಹೂಳು ತೆಗೆಯುವ ಪ್ರಯತ್ನ ಮಾತ್ರ ಆರಂಭವಾಗಲೇ ಇಲ್ಲ. ಆದ್ದರಿಂದಲೇ ರೈತರು ಮತ್ತೊಮ್ಮೆ ತಮ್ಮ ಸ್ವಂತ ಖರ್ಚಿನಲ್ಲಿ ಟ್ರ್ಯಾಕ್ಟರ್, ಜೆಸಿಬಿ ತಂದು ಹೂಳೆತ್ತಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ರೈತರೇ ಮಾಡಿರುವುದು ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಶಾಶ್ವತ ಪರಿಹಾರ ಕಲ್ಪಿಸದಿದ್ದರೆ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಮಠಾಧೀಶರು ಎಚ್ಚರಿಕೆ ನೀಡಿದ್ದಾರೆ.

ಪ್ರತಿ ವರ್ಷ ಹೆಚ್ಚುತ್ತಿದೆ ಹೂಳು

ಜಲಾಶಯ ನಿರ್ಮಾಣವಾದ ಏಳು ದಶಕಗಳ ಇತಿಹಾಸದಲ್ಲಿ ಹೂಳು ತುಂಬುವ ಪ್ರಮಾಣ ನೋಡುವುದಾದರೆ ಮೊದಲ 10 ವರ್ಷಗಳಲ್ಲಿ ವಾರ್ಷಿಕ ಸರಾಸರಿ 1.78 ಟಿಎಂಸಿ ಹೂಳು ತುಂಬಿಕೊಳ್ಳುತ್ತಿತ್ತು. ನಂತರದ ವರ್ಷಗಳಲ್ಲಿ ಈ ಪ್ರಮಾಣ ವಾರ್ಷಿಕ 0.52 ಟಿಎಂಸಿಗೆ ಕುಸಿತ ಕಂಡಿದ್ದರೂ ಕಳೆದ 70 ವರ್ಷಗಳಲ್ಲಿ ಜಲಾಶಯವು ತನ್ನ ಒಟ್ಟು ಸಂಗ್ರಹ ಸಾಮರ್ಥ್ಯದಲ್ಲಿ ಬರೋಬ್ಬರಿ 35 ಟಿಎಂಸಿ ಅಡಿಯಷ್ಟು ಹೂಳಿನಿಂದ ಆವೃತವಾಗಿದೆ.

ಪ್ರಸ್ತುತ, ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿದ್ದಾರೆ. ಎರಡು ವರ್ಷದ ಹಿಂದೆ ಜಲಾಶಯದಲ್ಲಿ ಹೂಳು ತುಂಬಿದ ಹಿನ್ನೆಲೆ ಕೊಪ್ಪಳದ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ಪ್ರಸ್ತಾಪವನ್ನು ಡಿಕೆಶಿ ಮುಂದಿಟ್ಟಿದ್ದರು. ಆದರೆ, ಆಂಧ್ರಪ್ರದೇಶದ ತಗಾದೆಯಿಂದ ಅದು ಕೂಡ ಸ್ಥಗಿತವಾಗಿತ್ತು.

ಜಲಾಶಯದಲ್ಲಿ ಹೂಳು ತುಂಬಿರುವ ಕಾರಣ ರಾಜ್ಯದ ಪಾಲಿನ ಹಂಚಿಕೆಯ ನೀರು ಆಂಧ್ರಪ್ರದೇಶದ ಪಾಲಾಗುತ್ತಿದೆ. ಇದಕ್ಕೆ ಸಮಾನಾಂತರ ಜಲಾಶಯದ ಅಗತ್ಯವಿದೆ ಎಂಬುದು ರಾಜ್ಯ ಸರ್ಕಾರದ ವಾದವಾಗಿತ್ತು. ತುಂಗಭದ್ರಾ ಜಲಾಶಯದ ಈ ಹೂಳಿನ ಸಮಸ್ಯೆಗೆ ಈವರೆಗೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಇನ್ನಾದರೂ ರಾಜ್ಯ ಸರ್ಕಾರ ಹೂಳೆತ್ತುವ ಕಾರ್ಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.

Read More
Next Story