ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರೆಸ್ಟ್‌ಗೇಟ್‌ಗಳ ಅಳವಡಿಕೆ ಯಶಸ್ವಿ
x

ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ. ರೆಡ್ಡಿ ಅವರು ಈ ಸಾಧನೆಯನ್ನು ಸಂಭ್ರಮಿಸಿದ್ದು, "ಅಣೆಕಟ್ಟೆಯ ಪ್ರಮುಖ ಕಾಮಗಾರಿಗಳು ಈಗಾಗಲೇ ಮುಕ್ತಾಯಗೊಂಡಿವೆ. 

ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರೆಸ್ಟ್‌ಗೇಟ್‌ಗಳ ಅಳವಡಿಕೆ ಯಶಸ್ವಿ

ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ. ರೆಡ್ಡಿ ಅವರು ಈ ಸಾಧನೆಯನ್ನು ಸಂಭ್ರಮಿಸಿದ್ದು, "ಅಣೆಕಟ್ಟೆಯ ಪ್ರಮುಖ ಕಾಮಗಾರಿಗಳು ಈಗಾಗಲೇ ಮುಕ್ತಾಯಗೊಂಡಿವೆ.


Click the Play button to hear this message in audio format

ಐತಿಹಾಸಿಕ ತುಂಗಭದ್ರಾ ಅಣೆಕಟ್ಟೆಗೆ ಒಟ್ಟು 33 ನೂತನ ಕ್ರೆಸ್ಟ್‌ಗೇಟ್‌ಗಳನ್ನು ಅಳವಡಿಸುವ ಮಹತ್ವದ ಕಾಮಗಾರಿ ಶನಿವಾರ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕೇವಲ ನಾಲ್ಕು ತಿಂಗಳ ದಾಖಲೆ ಅವಧಿಯಲ್ಲಿ ಸುಮಾರು 52 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಬೃಹತ್ ಕಾರ್ಯವನ್ನು ಮುಗಿಸಲಾಗಿದ್ದು, ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಜಲಾಶಯ ಭರ್ತಿಯಾದರೆ ಸುಮಾರು 15 ಲಕ್ಷ ಎಕರೆ ಕೃಷಿ ಭೂಮಿಗೆ ನಿರಾತಂಕವಾಗಿ ನೀರು ಒದಗಿಸುವ ಭರವಸೆ ಮೂಡಿದೆ.

ಅಂತಿಮ ಹಂತದ ಕಾಮಗಾರಿಗಳು: ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ. ರೆಡ್ಡಿ ಅವರು ಈ ಸಾಧನೆಯನ್ನು ಸಂಭ್ರಮಿಸಿದ್ದು, "ಅಣೆಕಟ್ಟೆಯ ಪ್ರಮುಖ ಕಾಮಗಾರಿಗಳು ಈಗಾಗಲೇ ಮುಕ್ತಾಯಗೊಂಡಿವೆ. ಸದ್ಯ ವೆಲ್ಡಿಂಗ್ ಮತ್ತು ಪೇಂಟಿಂಗ್‌ನಂತಹ ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಉಳಿದಿವೆ. ಮೇ ತಿಂಗಳ ಎರಡನೇ ವಾರದಲ್ಲಿ ಗೇಟ್‌ಗಳ ನಿರ್ವಹಣೆಗೆ ಅಗತ್ಯವಿರುವ 'ಚೈನ್‌ಲಿಂಕ್'ಗಳು ತಲುಪಲಿದ್ದು, ಮೇ ಅಂತ್ಯದ ವೇಳೆಗೆ ಅಣೆಕಟ್ಟೆಯು ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹಿಸಲು ಸಜ್ಜಾಗಲಿದೆ" ಎಂದು ಮಾಹಿತಿ ನೀಡಿದ್ದಾರೆ.

2024ರ ಆತಂಕಕಾರಿ ಘಟನೆಯ ಹಿನ್ನೆಲೆ

2024ರ ಆಗಸ್ಟ್ 10ರಂದು ಜಲಾಶಯವು ತನ್ನ ಗರಿಷ್ಠ ಮಟ್ಟವಾದ 1,633 ಅಡಿ (105.75 ಟಿಎಂಸಿ) ತಲುಪಿದ್ದಾಗ, 19ನೇ ಕ್ರೆಸ್ಟ್‌ಗೇಟ್ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಭಾರೀ ಆತಂಕ ಸೃಷ್ಟಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಅಣೆಕಟ್ಟೆ ತಜ್ಞ ಕನ್ಹಯ್ಯ ನಾಯ್ಡು ಅವರ ಮಾರ್ಗದರ್ಶನದಲ್ಲಿ ಕೇವಲ ಒಂದು ವಾರದಲ್ಲಿ ತಾತ್ಕಾಲಿಕ 'ಸ್ಟಾಪ್‌ಲಾಗ್ ಗೇಟ್' ಅಳವಡಿಸಿ, ಲಕ್ಷಾಂತರ ಕ್ಯೂಸೆಕ್ ನೀರು ಪೋಲಾಗುವುದನ್ನು ಯಶಸ್ವಿಯಾಗಿ ತಡೆದಿದ್ದರು. ಆನಂತರ ಸುರಿದ ಉತ್ತಮ ಮಳೆಯಿಂದಾಗಿ ಜಲಾಶಯ ಮತ್ತೆ ಭರ್ತಿಯಾಗಿ, ರೈತರ ಎರಡನೇ ಬೆಳೆಗೂ ನೀರು ಲಭ್ಯವಾಗಿತ್ತು. ಆ ಘಟನೆಯ ಬಳಿಕ ಎಚ್ಚೆತ್ತ ಆಡಳಿತ ಮತ್ತು ಸರ್ಕಾರಗಳು, ಎಲ್ಲಾ ಹಳೆಯ ಗೇಟ್‌ಗಳನ್ನು ಬದಲಾಯಿಸುವ ದಿಟ್ಟ ನಿರ್ಧಾರ ಕೈಗೊಂಡಿದ್ದವು.

ಅಣೆಕಟ್ಟಿಗೆ ಅಪಾಯ ಇಲ್ಲ

ಹೊಸ ಗೇಟ್‌ಗಳ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ ಸೆಕ್ಷನ್ ಎಂಜಿನಿಯರ್ ಕಿರಣ್, "ಈಗ ಹೊಸ ಗೇಟ್‌ಗಳನ್ನು ಅಳವಡಿಸಿರುವುದರಿಂದ ನದಿಯಲ್ಲಿ ಎಷ್ಟೇ ಪ್ರಮಾಣದ ಮಳೆ ನೀರು ಹರಿದು ಬಂದರೂ ಅಣೆಕಟ್ಟೆಗೆ ಯಾವುದೇ ಅಪಾಯವಿಲ್ಲ. ಜಲಾಶಯದ ಗರಿಷ್ಠ ಮಟ್ಟದವರೆಗೆ ನೀರನ್ನು ಅತ್ಯಂತ ಸುರಕ್ಷಿತವಾಗಿ ಹಿಡಿದಿಡಬಹುದು. ಬಾಕಿ ಉಳಿದಿರುವ ಚೈನ್‌ಲಿಂಕ್ ಅಳವಡಿಕೆ ಕಾರ್ಯವೇನೂ ದೊಡ್ಡ ಸವಾಲಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ತುಂಗಭದ್ರಾ ಅಣೆಕಟ್ಟೆಯು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ರೈತರ ಜೀವನಾಡಿಯಾಗಿದೆ. ನಿರ್ಮಾಣಗೊಂಡು ಏಳು ದಶಕಗಳೇ ಕಳೆದಿದ್ದರಿಂದ ಹಳೆಯ ಗೇಟ್‌ಗಳ ತುಕ್ಕು ಹಿಡಿಯುವಿಕೆ ದೊಡ್ಡ ಸಮಸ್ಯೆಯಾಗಿತ್ತು. ಕರ್ನಾಟಕದ ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ರೈತರು ಈ ಅಣೆಕಟ್ಟೆಯನ್ನೇ ಅವಲಂಬಿಸಿದ್ದಾರೆ. ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಹೊಸ ಗೇಟ್‌ಗಳ ಅಳವಡಿಕೆಯಿಂದಾಗಿ ಕಳೆದ ವರ್ಷ ಎದುರಾಗಿದ್ದ ಭೀತಿ ಸಂಪೂರ್ಣವಾಗಿ ದೂರವಾಗಿದೆ. ಭವಿಷ್ಯದಲ್ಲಿ ನೀರು ಪೋಲಾಗುವ ಆತಂಕವಿಲ್ಲದೆ ಅನ್ನದಾತರು ನೆಮ್ಮದಿಯಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.

Read More
Next Story