
ವಿಎಒ ಭುವನಾ ಸಾವು; 1 ಕೋಟಿ ರೂ.ವಿಮೆ ಭರವಸೆ, ಪ್ರತಿಭಟನೆ ವಾಪಸ್
ಭುವನಾ ನಿಧನದ ಸುದ್ದಿ ಹರಡುತ್ತಿದ್ದಂತೆ ಆಕ್ರೋಶಗೊಂಡ ಕರ್ನಾಟಕ ರಾಜ್ಯ ಗ್ರಾಮಾಡಳಿತ ಅಧಿಕಾರಿಗಳ ಸಂಘ ಹಾಗೂ ಕಂದಾಯ ನೌಕರರು ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಆರಂಭಿಸಿದ್ದರು. ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ನಡೆಸಿದ ಸಂಧಾನ ಸಭೆಯೂ ವಿಫಲವಾಗಿತ್ತು.
ಎಸ್‌ಐಆರ್ ಕರ್ತವ್ಯಕ್ಕೆ ತೆರಳುವಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ತುಮಕೂರಿನ ಗೂಳೂರು ವೃತ್ತದ ಗ್ರಾಮ ಆಡಳಿತಾಧಿಕಾರಿ ಭುವನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಗ್ರಾಮಾಡಳಿತ ಅಧಿಕಾರಿಗಳು ಪ್ರತಿಭಟನೆ ಹಿಂಪಡೆದಿದ್ದಾರೆ.
ಮೇಲಧಿಕಾರಿಗಳ ಒತ್ತಡ ಹಾಗೂ ಕಿರುಕುಳವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿ ಗ್ರಾಮಾಡಳಿತ ಅಧಿಕಾರಿಗಳ ಸಂಘ ಹಾಗೂ ಕಂದಾಯ ಇಲಾಖೆಯ ನೂರಾರು ಸಿಬ್ಬಂದಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಭಾನುವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಸಚಿವ ಡಾ.ಜಿ. ಪರಮೇಶ್ವರ್ ಅವರು, ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದ್ದಾರೆ.
ಮೃತ ಭುವನಾ ಅವರ ಕುಟುಂಬಕ್ಕೆ ರಾಜ್ಯ ಚುನಾವಣಾ ಆಯೋಗದಿಂದ 30 ಲಕ್ಷ ರೂ. ಪರಿಹಾರ, ಕುಟುಂಬದ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ, ಒಂದು ಕೋಟಿ ರೂ. ವಿಮೆ ಪರಿಹಾರ ನೀಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಈ ವೇಳೆ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಮನವಿಗೆ ಸ್ಪಂದಿಸಿದ ಸಚಿವರು, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಮೃತ ಭುವನಾ ಅವರು ಇತ್ತೀಚೆಗಷ್ಟೇ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಒಂದು ತಿಂಗಳ ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ಪ್ರತಿದಿನದಂತೆ ಬಸ್ ಮೂಲಕ ತುಮಕೂರಿಗೆ ಬಂದು ಅಲ್ಲಿಂದ ಬೈಕ್ನಲ್ಲಿ ಗೂಳೂರು ಹೋಬಳಿಯ ಮನೆ ಮನೆಗೆ ತೆರಳಿ ಎಸ್ಐಆರ್ ಪರಿಶೀಲನಾ ಕಾರ್ಯಕ್ಕೆ ತೆರಳುತ್ತಿದ್ದರು. ಜುಲೈ 4ರ ಶನಿವಾರ ಮುಂಜಾನೆ ಗೂಳೂರು ಸಮೀಪದ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.
ಭುವನಾ ನಿಧನದ ಸುದ್ದಿ ಹರಡುತ್ತಿದ್ದಂತೆ ಆಕ್ರೋಶಗೊಂಡ ಕರ್ನಾಟಕ ರಾಜ್ಯ ಗ್ರಾಮಾಡಳಿತ ಅಧಿಕಾರಿಗಳ ಸಂಘ ಹಾಗೂ ಕಂದಾಯ ನೌಕರರು ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಆರಂಭಿಸಿದ್ದರು. ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ನಡೆಸಿದ ಸಂಧಾನ ಸಭೆಯೂ ವಿಫಲವಾಗಿತ್ತು.
ʼನಾನು ನೌಕರರ ಪರʼ ಎಂದ ಡಿಸಿಎಂ
"ನನ್ನ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ತಕ್ಷಣ ಬರಲು ಸಾಧ್ಯವಾಗಲಿಲ್ಲ. ಆದರೆ, ನಿಮ್ಮನ್ನು ನಿರ್ಲಕ್ಷಿಸಲು ಎಂದಿಗೂ ಬಿಡುವುದಿಲ್ಲ. ಕಳೆದ 8 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಗ್ರೇಡ್-2 ತಹಶೀಲ್ದಾರ್ ಬಡ್ತಿ ಪ್ರಕ್ರಿಯೆಯನ್ನು ನಾನು ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಆರಂಭಿಸಿದ್ದೇನೆ. ನಾನು ಸದಾ ನೌಕರರ ಪರವಾಗಿ ಇರುವವನು" ಎಂದು ಕಂದಾಯ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
"ಎಸ್ಐಆರ್ ಭೂತ ನಮ್ಮ ಮುಂದಿದೆ"
"ಎಸ್ಐಆರ್ ಪ್ರಕ್ರಿಯೆಗೆ ಕನಿಷ್ಠ ಎರಡು ತಿಂಗಳ ಸಮಯಾವಕಾಶ ನೀಡಬೇಕಿತ್ತು. ಆದರೆ ಮೇಲಧಿಕಾರಿಗಳು ಕೇವಲ ಒಂದು ತಿಂಗಳ ಗಡುವು ನೀಡಿ ಸಿಬ್ಬಂದಿಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಮೃತ ಭುವನಾ ಅವರ ಕುಟುಂಬಕ್ಕೆ ಮುಂದಿನ 15 ದಿನಗಳಲ್ಲಿ 1 ಕೋಟಿ ರೂ. ಇನ್ಶೂರೆನ್ಸ್ ಹಣ ಸಿಗುವಂತೆ ಕ್ರಮ ವಹಿಸಲಾಗುವುದು. ಇದರೊಂದಿಗೆ ಚುನಾವಣಾ ಆಯೋಗದಿಂದ 30 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ನೀಡಲಾಗುವುದು" ಎಂದು ಡಿಸಿಎಂ ಭರವಸೆ ನೀಡಿದ್ಧಾರೆ.

