ತುಮಕೂರಲ್ಲಿ 7ಸಾವಿರ ಕೋಟಿ ರೂ. ಹೂಡಿಕೆ, 88 ಸಾವಿರ ಉದ್ಯೋಗ ಸೃಷ್ಟಿ - ಎಂ.ಬಿ. ಪಾಟೀಲ್
x

ತುಮಕೂರಲ್ಲಿ 7ಸಾವಿರ ಕೋಟಿ ರೂ. ಹೂಡಿಕೆ, 88 ಸಾವಿರ ಉದ್ಯೋಗ ಸೃಷ್ಟಿ - ಎಂ.ಬಿ. ಪಾಟೀಲ್

ತುಮಕೂರಿನಲ್ಲಿ ಕೈಗಾರಿಕಾ ಚಟುವಟಿಕೆಗಳಿಗಾಗಿ ರಾಜ್ಯ ಸರ್ಕಾರ 1,736 ಎಕರೆ ಭೂಮಿಯನ್ನು ಮೀಸಲಿಟ್ಟಿದೆ. ಸುಮಾರು 7 ಸಾವಿರ ಕೋಟಿ ರೂಪಾಯಿಗಳಷ್ಟು ಭಾರಿ ಹೂಡಿಕೆ ರಾಜ್ಯಕ್ಕೆ ಹರಿದು ಬರಲಿದೆ.


Click the Play button to hear this message in audio format

ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು ತುಮಕೂರಿನಲ್ಲಿ ಬೃಹತ್ ಕೈಗಾರಿಕಾ ಕೇಂದ್ರವನ್ನು ಸ್ಥಾಪಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಬೆಂಗಳೂರಿನ ನಂತರದ ಪ್ರಮುಖ ಕೈಗಾರಿಕಾ ಮತ್ತು ಉತ್ಪಾದನಾ ನಗರವನ್ನಾಗಿ ತುಮಕೂರಿನನ್ನು ರೂಪಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಅವರ ನೇತೃತ್ವದಲ್ಲಿ ನಡೆದ 'ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಮತ್ತು ಅನುಷ್ಠಾನ ಮಂಡಳಿ'ಯ 3ನೇ ಮೇಲುಸ್ತುವಾರಿ ಪ್ರಾಧಿಕಾರದ ಸಭೆಯಲ್ಲಿ ಸಚಿವ ಎಂ.ಬಿ. ಪಾಟೀಲ್ ವರ್ಚುಯಲ್ ಮೂಲಕ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ತುಮಕೂರು ಅಭಿವೃದ್ಧಿಯ ಪ್ರಗತಿ ಮತ್ತು ಭವಿಷ್ಯದ ಯೋಜನೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ತುಮಕೂರಿನಲ್ಲಿ ಕೈಗಾರಿಕಾ ಚಟುವಟಿಕೆಗಳಿಗಾಗಿ ರಾಜ್ಯ ಸರ್ಕಾರ 1,736 ಎಕರೆ ಭೂಮಿಯನ್ನು ಮೀಸಲಿಟ್ಟಿದೆ. ಈ ಯೋಜನೆಯ ಮೂಲಕ ಸುಮಾರು 7 ಸಾವಿರ ಕೋಟಿ ರೂಪಾಯಿಗಳಷ್ಟು ಭಾರಿ ಹೂಡಿಕೆ ರಾಜ್ಯಕ್ಕೆ ಹರಿದು ಬರಲಿದೆ. ತುಮಕೂರು ನೋಡ್ ಸಂಪೂರ್ಣವಾಗಿ ಅಭಿವೃದ್ಧಿಗೊಂಡ ನಂತರ ಸುಮಾರು 88 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯೋಜನೆಯ ಪ್ರಗತಿ ಮತ್ತು ಪ್ರಮುಖ ಹೂಡಿಕೆದಾರರು

ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್ ಯೋಜನೆಯಡಿ ತುಮಕೂರು ನೋಡ್‌ನಲ್ಲಿ ಈಗಾಗಲೇ ಶೇ. 30ರಷ್ಟು ಭೌತಿಕ ಮತ್ತು ಶೇ. 20ರಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದೆ. ಈ ಕೈಗಾರಿಕಾ ವಲಯದಲ್ಲಿ ಜಪಾನ್ ಟೌನ್‌ಶಿಪ್‌ಗಾಗಿ 300 ಎಕರೆ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 200 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಈ ಯೋಜನೆಯಲ್ಲಿ ಜಿಂದಾಲ್ ಅಲ್ಯೂಮಿನಿಯಂ ಪ್ರಧಾನ ಹೂಡಿಕೆದಾರ ಕಂಪನಿಯಾಗಿದ್ದು, ಈಗಾಗಲೇ ಅದಕ್ಕೆ 151 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ. ಜತೆಗೆ, 41 ಎಕರೆಯನ್ನು ಸಾಂಸ್ಥಿಕ ಬಳಕೆಗೆ ಮೀಸಲಿಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯು ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ಸಾಗುತ್ತಿದ್ದು, 2027ರ ವೇಳೆಗೆ ಯೋಜನೆ ಪೂರ್ಣಗೊಳ್ಳುವ ಗುರಿಯನ್ನು ರಾಜ್ಯ ಸರ್ಕಾರ ಹಾಕಿಕೊಂಡಿದೆ ಎಂದಿದ್ದಾರೆ.

ಯಾವೆಲ್ಲಾ ವಲಯಗಳಿಗೆ ಆದ್ಯತೆ?

ತುಮಕೂರು ಕೈಗಾರಿಕಾ ವಲಯವು ಬಹುಮುಖಿ ಬೆಳವಣಿಗೆಯನ್ನು ಹೊಂದಲಿದೆ. ಆಹಾರ ಮತ್ತು ಪಾನೀಯ ಸಂಸ್ಕರಣೆ, ಜವಳಿ ಮತ್ತು ಉಡುಪು ತಯಾರಿಕೆ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ, ರಾಸಾಯನಿಕ ಕೈಗಾರಿಕೆಗಳು, ಜನರಲ್ ಎಂಜಿನಿಯರಿಂಗ್, ಲಾಜಿಸ್ಟಿಕ್ಸ್ ಮತ್ತು ಸಾಗಾಣಿಕೆ ವಲಯ ವಲಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೇವಲ ತುಮಕೂರು ಮಾತ್ರವಲ್ಲದೆ, ರಾಜ್ಯದ ಇತರ ಭಾಗಗಳ ಕೈಗಾರಿಕಾ ಅಭಿವೃದ್ಧಿಗೂ ರಾಜ್ಯ ಸರ್ಕಾರ ಬದ್ಧವಾಗಿದೆ. ಕಲಬುರಗಿಗೆ ಮಂಜೂರಾಗಿರುವ ಪಿಎಂ ಮಿತ್ರ ಕೈಗಾರಿಕಾ ಪಾರ್ಕ್ ಮತ್ತು ರಾಜ್ಯಕ್ಕೆ ಸಿಕ್ಕಿರುವ ಭವ್ಯ ಯೋಜನೆಗಳನ್ನು ನಿಗದಿತ ಕಾಲಮಿತಿಯಲ್ಲಿ ಮುಗಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಈ ಯೋಜನೆಗಳಿಗೆ ಕೇಂದ್ರದಿಂದ ದೊರೆಯಬೇಕಾದ ಅಗತ್ಯ ಸಹಕಾರವನ್ನು ಪಡೆಯುತ್ತಿದ್ದು, ಕೇಂದ್ರದೊಂದಿಗೆ ಉತ್ತಮ ಸಮನ್ವಯದೊಂದಿಗೆ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ಕಾರಿಡಾರ್ ಅಭಿವೃದ್ಧಿ

ಕೇಂದ್ರ ಸರ್ಕಾರದ ಈ ಬೃಹತ್ ಕೈಗಾರಿಕಾ ಕಾರಿಡಾರ್ ಯೋಜನೆಯಡಿ ದೇಶದ 13 ರಾಜ್ಯಗಳಲ್ಲಿ 11 ಕೈಗಾರಿಕಾ ಕಾರಿಡಾರ್‌ಗಳು ಮತ್ತು 20 ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ 4 ಸ್ಮಾರ್ಟ್ ಸಿಟಿ ಯೋಜನೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಉಳಿದ 16 ಯೋಜನೆಗಳು ವಿವಿಧ ಹಂತಗಳಲ್ಲಿ ಅನುಷ್ಠಾನಗೊಳ್ಳುತ್ತಿವೆ. ತುಮಕೂರಿನ ಈ ಕೈಗಾರಿಕಾ ನೋಡ್‌ ಅಭಿವೃದ್ಧಿಯು ರಾಜ್ಯದ ಕೈಗಾರಿಕಾ ಭೂಪಟವನ್ನೇ ಬದಲಿಸಲಿದೆ. ಬೆಂಗಳೂರಿನ ಮೇಲಿನ ಕೈಗಾರಿಕಾ ಒತ್ತಡವನ್ನು ಕಡಿಮೆ ಮಾಡುವ ಜೊತೆಗೆ, ರಾಜ್ಯದ ಆರ್ಥಿಕತೆಗೆ ದೊಡ್ಡ ಮಟ್ಟದ ಶಕ್ತಿ ತುಂಬಲಿದೆ. 2027ರ ಗಡುವಿನೊಳಗೆ ಈ ಯೋಜನೆಯು ಪೂರ್ಣಗೊಂಡರೆ, ಕರ್ನಾಟಕವು ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದ್ದಾರೆ.

Read More
Next Story