ಬೆಂಗಳೂರಿನಾಚೆ ಡಿಜಿಟಲ್ ಕ್ರಾಂತಿ: ತುಮಕೂರಲ್ಲಿ ಸುಸ್ಥಿರ ‘ಗ್ರೀನ್ ಡೇಟಾ ಸೆಂಟರ್’
x

ಬೆಂಗಳೂರಿನಾಚೆ ಡಿಜಿಟಲ್ ಕ್ರಾಂತಿ: ತುಮಕೂರಲ್ಲಿ ಸುಸ್ಥಿರ ‘ಗ್ರೀನ್ ಡೇಟಾ ಸೆಂಟರ್’

ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಗೆ ಡೇಟಾ ಸೆಂಟರ್‌ಗಳ ಪಾತ್ರ ಅತ್ಯಗತ್ಯ. ಹೆಚ್ಚುವರಿಯಾಗಿ 1 ಗಿಗಾವ್ಯಾಟ್ ಡೇಟಾ ಸೆಂಟರ್ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ.


Click the Play button to hear this message in audio format

ರಾಜ್ಯದ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವ ಮತ್ತು ರಾಜ್ಯಾದ್ಯಂತ ತಂತ್ರಜ್ಞಾನಾಧಾರಿತ ಅಭಿವೃದ್ಧಿಯನ್ನು ವಿಕೇಂದ್ರೀಕರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರು ಲಕ್ಸೆಂಬರ್ಗ್ ಮೂಲದ ‘ಇನ್ನೋವೇಶನ್ ಪ್ಲಾಟ್‌ಫಾರ್ಮ್ ಕ್ಯಾಪಿಟಲ್’ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ತುಮಕೂರಿನಲ್ಲಿ ಸಂಯೋಜಿತ ‘ಗ್ರೀನ್ ಡೇಟಾ ಸೆಂಟರ್’ ಸ್ಥಾಪಿಸುವ ಪ್ರಸ್ತಾವನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆಯು ರಾಜ್ಯದ ಐಟಿ ವಲಯವನ್ನು ಬೆಂಗಳೂರಿನಿಂದ ಹೊರಭಾಗಕ್ಕೂ ವಿಸ್ತರಿಸುವ ಸರ್ಕಾರದ ದೂರದೃಷ್ಟಿಯ ಪ್ರತಿಬಿಂಬವಾಗಿದೆ.

ಪ್ರಸ್ತುತ ಜಾಗತಿಕವಾಗಿ ಡಿಜಿಟಲ್ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಗೆ ಡೇಟಾ ಸೆಂಟರ್‌ಗಳ ಪಾತ್ರ ಅತ್ಯಗತ್ಯ. ಕರ್ನಾಟಕ ಸರ್ಕಾರವು ಹೆಚ್ಚುವರಿಯಾಗಿ 1 ಗಿಗಾವ್ಯಾಟ್ ಡೇಟಾ ಸೆಂಟರ್ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಆದರೆ, ಈ ವಿಸ್ತರಣೆಯು ಕೇವಲ ತಾಂತ್ರಿಕ ಸಾಮರ್ಥ್ಯಕ್ಕೆ ಮಾತ್ರ ಸೀಮಿತವಾಗದೆ, ಪರಿಸರ ಕಾಳಜಿಯನ್ನೂ ಒಳಗೊಂಡಿದೆ. ಇದಕ್ಕಾಗಿ ಸರ್ಕಾರ ‘ಗ್ರೀನ್ ಡೇಟಾ ಸೆಂಟರ್’ ಪರಿಕಲ್ಪನೆಯನ್ನು ಮುಂದಿಟ್ಟಿದೆ.

ಈ ಸೆಂಟರ್‌ಗಳ ವಿಶೇಷತೆಗಳು

ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ. ತಂಪಾಗಿಸುವ ಪ್ರಕ್ರಿಯೆಯಲ್ಲಿ ನೀರಿನ ಬಳಕೆಯನ್ನು ಸಮರ್ಥವಾಗಿ ಮತ್ತು ಮಿತವಾಗಿ ಮಾಡುವುದು. ಇಂಗಾಲದ ಹೊರಸೂಸುವಿಕೆಯನ್ನು ಕನಿಷ್ಠ ಮಟ್ಟಕ್ಕೆ ತರುವ ಸುಸ್ಥಿರ ಮೂಲಸೌಕರ್ಯ ನಿರ್ಮಾಣ ಮಾಡುವುದಾಗಿದೆ. ಬೆಂಗಳೂರು ನಗರವು ಈಗಾಗಲೇ ಐಟಿ ಹಬ್ ಆಗಿ ಕಿಕ್ಕಿರಿದು ಹೋಗಿದೆ. ಡೇಟಾ ಸೆಂಟರ್‌ಗಳ ಅಭಿವೃದ್ಧಿಯನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೆ, ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸುವ ಮೂಲಕ ಪ್ರಾದೇಶಿಕವಾಗಿ ಸಮತೋಲಿತ ಡಿಜಿಟಲ್ ಅಭಿವೃದ್ಧಿಯನ್ನು ಸಾಧಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ತುಮಕೂರಿನಲ್ಲಿ ಈ ಯೋಜನೆ ಸ್ಥಾಪನೆಯಾಗುವುದರಿಂದ, ಆ ಭಾಗದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದಲ್ಲದೆ, ಮೂಲಸೌಕರ್ಯ ಅಭಿವೃದ್ಧಿಗೆ ವೇಗ ಸಿಗಲಿದೆ.

ಸಚಿವ ಪ್ರಿಯಾಂಕ್ ಖರ್ಗೆ ಅವರ ದೂರದೃಷ್ಟಿ

ಐಪಿಸಿ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, "ಬೆಂಗಳೂರಿನಾಚೆಗೂ ಕರ್ನಾಟಕದ ಡೇಟಾ ಸೆಂಟರ್ ವಲಯವನ್ನು ವಿಸ್ತರಿಸುವುದು ಸರ್ಕಾರದ ವಿಶಾಲ ಯೋಜನೆಯಾಗಿದೆ. ಸುಸ್ಥಿರ ಡಿಜಿಟಲ್ ಮೂಲಸೌಕರ್ಯ ನಿರ್ಮಿಸುವುದು ನಮ್ಮ ಆದ್ಯತೆ. ತುಮಕೂರಿನಂತಹ ನಗರಗಳು ಭವಿಷ್ಯದ ತಂತ್ರಜ್ಞಾನಾಧಾರಿತ ಹೂಡಿಕೆಗಳಿಗೆ ಸೂಕ್ತ ವೇದಿಕೆಯಾಗಲಿವೆ. ಭವಿಷ್ಯದ ಡಿಜಿಟಲ್ ಆರ್ಥಿಕತೆಯ ಅಗತ್ಯಗಳಿಗೆ ಅನುಗುಣವಾಗಿ, ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂಬುದು ಅವರ ನಿಲುವಾಗಿದೆ ಎಂದು ಹೇಳಿದರು.

ಐಪಿಸಿ ಸಂಸ್ಥೆಯ ಪಾತ್ರ ಮತ್ತು ಹೂಡಿಕೆ

ಲಕ್ಸೆಂಬರ್ಗ್ ಮೂಲದ 'ಇನ್ನೋವೇಶನ್ ಪ್ಲಾಟ್‌ಫಾರ್ಮ್ ಕ್ಯಾಪಿಟಲ್' (ಐಪಿಸಿ) ಸಂಸ್ಥೆಯು ಇಂತಹ ಸುಸ್ಥಿರ ಯೋಜನೆಗಳಲ್ಲಿ ಬಂಡವಾಳ ಹೂಡಲು ಮತ್ತು ತಾಂತ್ರಿಕ ನೆರವು ನೀಡಲು ಆಸಕ್ತಿ ತೋರಿದೆ. ಈ ಸಭೆಯು ಕೇವಲ ಆರಂಭಿಕ ಚರ್ಚೆಯಾಗಿದ್ದರೂ, ತುಮಕೂರಿನಲ್ಲಿ ಗ್ರೀನ್ ಡೇಟಾ ಸೆಂಟರ್ ಸ್ಥಾಪಿಸುವ ಸಾಧ್ಯತೆಗಳನ್ನು ಪರಿಶೀಲಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಸಹಭಾಗಿತ್ವವು ಜಾಗತಿಕ ಮಟ್ಟದ ಸುಸ್ಥಿರ ತಂತ್ರಜ್ಞಾನವನ್ನು ಕರ್ನಾಟಕಕ್ಕೆ ತರುವ ನಿರೀಕ್ಷೆಯಿದೆ. ತುಮಕೂರಿನಲ್ಲಿ ಈ ಯೋಜನೆ ಆರಂಭವಾದರೆ, ಆ ಪ್ರದೇಶವು ಐಟಿ ಕಂಪನಿಗಳು ಮತ್ತು ಡೇಟಾ ಆಧಾರಿತ ಉದ್ದಿಮೆಗಳ ಪಾಲಿನ ಆಕರ್ಷಣೀಯ ಕೇಂದ್ರವಾಗಿ ಪರಿವರ್ತನೆಗೊಳ್ಳಲಿದೆ. ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಸಾವಿರಾರು ಹೊಸ ಉದ್ಯೋಗಗಳು ಸ್ಥಳೀಯವಾಗಿ ಸೃಷ್ಟಿಯಾಗುತ್ತವೆ. ಸಾಂಪ್ರದಾಯಿಕ ಡೇಟಾ ಸೆಂಟರ್‌ಗಳು ಹೆಚ್ಚಿನ ವಿದ್ಯುತ್ ಮತ್ತು ನೀರನ್ನು ಬಳಸುತ್ತವೆ. ‘ಗ್ರೀನ್’ ಮಾದರಿಯ ಡೇಟಾ ಸೆಂಟರ್‌ಗಳು ಪರಿಸರದ ಮೇಲೆ ಬೀರುವ ಒತ್ತಡವನ್ನು ತಗ್ಗಿಸುತ್ತವೆ, ಇದು ಇಂದಿನ ಜಾಗತಿಕ ಅನಿವಾರ್ಯತೆ.

ಮುಂದಿನ ಸವಾಲುಗಳು - ಕಾರ್ಯಯೋಜನೆ

ಯೋಜನೆಯು ಆರಂಭಿಕ ಹಂತದಲ್ಲಿದ್ದು, ಜಮೀನು ಲಭ್ಯತೆ, ವಿದ್ಯುತ್ ಸಂಪರ್ಕ, ಮತ್ತು ಅತ್ಯಾಧುನಿಕ ತಂತ್ರಜ್ಞಾನದ ವರ್ಗಾವಣೆ ಕುರಿತಂತೆ ಸಮಗ್ರ ಅಧ್ಯಯನ ನಡೆಯಬೇಕಿದೆ. ಐಟಿ-ಬಿಟಿ ಇಲಾಖೆಯು ಇತರೆ ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಯೋಜನೆಯನ್ನು ಕಾಲಮಿತಿಯಲ್ಲಿ ಜಾರಿಗೆ ತರಬೇಕಿದೆ. ತುಮಕೂರಿನ ಭೌಗೋಳಿಕ ಅನುಕೂಲತೆಯನ್ನು ಬಳಸಿಕೊಂಡು, ಆ ಪ್ರದೇಶವನ್ನು 'ಡಿಜಿಟಲ್ ಕ್ಲಸ್ಟರ್' ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಸರ್ಕಾರವು ಗಂಭೀರವಾದ ಹೆಜ್ಜೆ ಇಡುತ್ತಿದೆ.

ಕರ್ನಾಟಕದ ಡಿಜಿಟಲ್ ಆಡಳಿತ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತುಮಕೂರಿನ ಗ್ರೀನ್ ಡೇಟಾ ಸೆಂಟರ್ ಯೋಜನೆ ಒಂದು ಹೊಸ ಮೈಲಿಗಲ್ಲಾಗಲಿದೆ. ಸುಸ್ಥಿರ ಅಭಿವೃದ್ಧಿ ಮತ್ತು ತಂತ್ರಜ್ಞಾನವನ್ನು ಬೆಸೆಯುವ ಮೂಲಕ ರಾಜ್ಯ ಸರ್ಕಾರವು ಸಮತೋಲಿತ ಬೆಳವಣಿಗೆಗೆ ಬದ್ಧತೆಯನ್ನು ಪ್ರದರ್ಶಿಸಿದೆ. ಬೆಂಗಳೂರಿನ ಹೊರಗೆ ಹೂಡಿಕೆಗಳನ್ನು ಉತ್ತೇಜಿಸುವ ಮೂಲಕ ಕರ್ನಾಟಕವನ್ನು ಜಾಗತಿಕ ತಾಂತ್ರಿಕ ಭೂಪಟದಲ್ಲಿ ಮತ್ತಷ್ಟು ಉನ್ನತ ಸ್ಥಾನದಲ್ಲಿ ಪ್ರತಿಷ್ಠಾಪಿಸಲು ಈ ಯೋಜನೆ ಪೂರಕವಾಗಿದೆ. ಮುಂಬರುವ ದಿನಗಳಲ್ಲಿ ಈ ಪ್ರಸ್ತಾವನೆ ಅಂತಿಮ ರೂಪ ಪಡೆಯುವ ಮೂಲಕ ರಾಜ್ಯಕ್ಕೆ ಬೃಹತ್ ಪ್ರಮಾಣದ ಹೂಡಿಕೆ ಹರಿದು ಬರುವ ನಿರೀಕ್ಷೆಯಿದೆ.

Read More
Next Story