
2027ಕ್ಕೆ ಪೂರ್ಣಗೊಳ್ಳಲಿದೆ ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ
ಸುಮಾರು 197 ಕಿ.ಮೀ ಉದ್ದದ ಈ ಮಾರ್ಗವು ಬೆಂಗಳೂರು ಮತ್ತು ದಾವಣಗೆರೆ ನಡುವಿನ ಅಂತರವನ್ನು ಗಣನೀಯವಾಗಿ ತಗ್ಗಿಸಲಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಬೆಂಗಳೂರಿಗೆ ತೆರಳಲು ಸುಲಭವಾಗುತ್ತದೆ.
ಮಧ್ಯ ಕರ್ನಾಟಕದ ಅಭಿವೃದ್ಧಿಯ ಕನಸಿನ ಯೋಜನೆ ಎಂದೇ ಕರೆಯಲ್ಪಡುವ 'ತುಮಕೂರು-ಚಿತ್ರದುರ್ಗ-ದಾವಣಗೆರೆ' ನೇರ ರೈಲು ಮಾರ್ಗವು ಇದೀಗ ಪೂರ್ಣಗೊಳ್ಳುವ ಹಂತದತ್ತ ದಾಪುಗಾಲು ಹಾಕುತ್ತಿದೆ. ದಶಕಗಳ ಬೇಡಿಕೆ ಮತ್ತು ಹಲವು ವರ್ಷಗಳ ವಿಳಂಬದ ನಂತರ, ಈ ರೈಲ್ವೆ ಮಾರ್ಗದ ಕಾಮಗಾರಿ ವೇಗ ಪಡೆದುಕೊಂಡಿದ್ದು, 2027ರ ಅಂತ್ಯಕ್ಕೆ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಇತ್ತೀಚೆಗೆ ದಾವಣಗೆರೆಯ ತೋಳಹುಣಸೆಯಿಂದ ಆನಗೋಡುವಿನವರೆಗೆ ಮೋಟಾರ್ ಟ್ರಾಲಿಯಲ್ಲಿ ಖುದ್ದು ಸಂಚರಿಸಿ ಕಾಮಗಾರಿಯ ಗುಣಮಟ್ಟ ಮತ್ತು ಪ್ರಗತಿಯನ್ನು ಪರಿಶೀಲಿಸಿದರು. ಸುಮಾರು 197 ಕಿಲೋಮೀಟರ್ ಉದ್ದದ ಈ ಬೃಹತ್ ಯೋಜನೆ ಕೇವಲ ಎರಡು ನಗರಗಳನ್ನು ಬೆಸೆಯುವ ಮಾರ್ಗವಲ್ಲ, ಇದು ಮಧ್ಯ ಕರ್ನಾಟಕದ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ರಾಂತಿಯ ಹಾದಿ. ಈವರೆಗೆ ದಾವಣಗೆರೆಯಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳಬೇಕೆಂದರೆ ಪ್ರಯಾಣಿಕರು ಅರಸೀಕೆರೆ ಅಥವಾ ಹುಬ್ಬಳ್ಳಿ ಮಾರ್ಗದ ಮೂಲಕ ಸುತ್ತು ಬಳಸಬೇಕಿತ್ತು. ಈ ಸುದೀರ್ಘ ಪ್ರಯಾಣದಿಂದಾಗಿ ಸಮಯ ವ್ಯರ್ಥವಾಗುತ್ತಿತ್ತು. ರಸ್ತೆ ಮಾರ್ಗವನ್ನೇ ಆಶ್ರಯಿಸಿದರೆ, ರಾಷ್ಟ್ರೀಯ ಹೆದ್ದಾರಿಯಲ್ಲಿನ ಟ್ರಾಫಿಕ್ ದಟ್ಟಣೆಯಿಂದಾಗಿ 4 ರಿಂದ 5 ಗಂಟೆಗಳ ಕಾಲ ಪ್ರಯಾಣಿಸುವುದು ಅನಿವಾರ್ಯವಾಗಿತ್ತು. ಸಣ್ಣಪುಟ್ಟ ಕೆಲಸಗಳಿಗೆ ಬೆಂಗಳೂರಿಗೆ ತೆರಳುವ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಈ ಪ್ರಯಾಣ ಒಂದು ದೊಡ್ಡ ಸವಾಲಾಗಿತ್ತು. ಅತಿಯಾದ ಸಮಯದ ವ್ಯಯ ಮತ್ತು ಆರ್ಥಿಕ ಹೊರೆಯಿಂದಾಗಿ ಹಲವರು ದೈನಂದಿನ ಪ್ರಯಾಣವನ್ನು ಕೈಬಿಡುತ್ತಿದ್ದರು.
ಪ್ರಯಾಣದ ಹೊಸ ಅನುಭವ
ಈ ನೂತನ ನೇರ ರೈಲು ಮಾರ್ಗವು ಜಾರಿಗೆ ಬಂದ ಬಳಿಕ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಲಿದೆ. ದಾವಣಗೆರೆಯಿಂದ ಬೆಂಗಳೂರಿಗೆ ಕೇವಲ ಎರಡೂವರೆ ಗಂಟೆಗಳಲ್ಲಿ ತಲುಪುವ ಗುರಿಯನ್ನು ಈ ಯೋಜನೆ ಹೊಂದಿದೆ. ಅಂದರೆ, ಅರ್ಧದಷ್ಟು ಪ್ರಯಾಣದ ಸಮಯ ಉಳಿತಾಯವಾಗಲಿದೆ. ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳು ನೇರವಾಗಿ ಬೆಂಗಳೂರಿನೊಂದಿಗೆ ಬೆಸೆದುಕೊಳ್ಳುವುದರಿಂದ, ಈ ಭಾಗದ ವ್ಯಾಪಾರ ವಹಿವಾಟುಗಳಿಗೆ ಹೊಸ ಚಾಲನೆ ಸಿಗಲಿದೆ.
ಸುಮಾರು 197 ಕಿ.ಮೀ ಉದ್ದದ ಈ ಮಾರ್ಗವು ಬೆಂಗಳೂರು ಮತ್ತು ದಾವಣಗೆರೆ ನಡುವಿನ ಅಂತರವನ್ನು ಗಣನೀಯವಾಗಿ ತಗ್ಗಿಸಲಿದೆ. ಭವಿಷ್ಯದ ಜನಸಂಖ್ಯೆ ಮತ್ತು ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ರೈಲ್ವೆ ನಿಲ್ದಾಣಗಳಲ್ಲಿನ ಪ್ಲಾಟ್‌ಫಾರ್ಮ್‌ಗಳನ್ನು ಕನಿಷ್ಠ 21 ಬೋಗಿಗಳು ನಿಲ್ಲುವಷ್ಟು ಉದ್ದಕ್ಕೆ ವಿಸ್ತರಿಸಲಾಗುತ್ತಿದೆ. ಇದು ಹೆಚ್ಚಿನ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ. ಕೇವಲ ರೈಲು ಮಾರ್ಗವಷ್ಟೇ ಅಲ್ಲದೆ, ಅತ್ಯಾಧುನಿಕ ಸಿಗ್ನಲಿಂಗ್ ವ್ಯವಸ್ಥೆ, ಆಧುನಿಕ ನಿಲ್ದಾಣಗಳು ಮತ್ತು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ಆರ್ಥಿಕ - ಸಾಮಾಜಿಕ ಪ್ರಭಾವ
ತುಮಕೂರು-ದಾವಣಗೆರೆ ನೇರ ಮಾರ್ಗವು ಮಧ್ಯ ಕರ್ನಾಟಕದ ಜಿಲ್ಲೆಗಳನ್ನು ಕೇವಲ ಬೆಂಗಳೂರಿಗೆ ಸಂಪರ್ಕಿಸುವುದಲ್ಲದೆ, ಅಂತರ-ಜಿಲ್ಲಾ ವ್ಯಾಪಾರವನ್ನೂ ಉತ್ತೇಜಿಸುತ್ತದೆ. ದಾವಣಗೆರೆ ಮತ್ತು ಚಿತ್ರದುರ್ಗದ ಸಾವಿರಾರು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಪ್ರತಿನಿತ್ಯ ಬೆಂಗಳೂರಿಗೆ ತೆರಳಲು ಸುಲಭವಾಗುತ್ತದೆ. ದಾವಣಗೆರೆಯ ಕೃಷಿ ಉತ್ಪನ್ನಗಳು ಮತ್ತು ಚಿತ್ರದುರ್ಗದ ಕೈಗಾರಿಕಾ ಉತ್ಪನ್ನಗಳು ಕಡಿಮೆ ವೆಚ್ಚದಲ್ಲಿ ಮತ್ತು ವೇಗವಾಗಿ ಮಾರುಕಟ್ಟೆ ತಲುಪಲು ಈ ಮಾರ್ಗ ಸಹಕಾರಿಯಾಗಲಿದೆ. ಚಿತ್ರದುರ್ಗದ ಐತಿಹಾಸಿಕ ಕೋಟೆ, ದಾವಣಗೆರೆಯ ಪ್ರವಾಸಿತಾಣಗಳು ಮತ್ತು ತುಮಕೂರಿನ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸಿಗರ ಭೇಟಿ ಹೆಚ್ಚಾಗಲಿದೆ.
ಸಚಿವ ವಿ. ಸೋಮಣ್ಣ ಅವರು ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆ ಮತ್ತು ಅರಣ್ಯ ಇಲಾಖೆಯ ಅನುಮತಿ ಸೇರಿದಂತೆ ಉಳಿದಿರುವ ಸಣ್ಣಪುಟ್ಟ ಅಡೆತಡೆಗಳನ್ನು ನಿವಾರಿಸಲು ಸರ್ಕಾರ ಆದ್ಯತೆ ನೀಡಿದೆ. 2027ರ ಡಿಸೆಂಬರ್ ಗಡುವನ್ನು ತಲುಪಲು ರೈಲ್ವೆ ಇಲಾಖೆಯು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ.

