
ನಾಗೇಂದ್ರಗೌಡ ಜಾಡು ಹಿಡಿದ ಎಸ್‌ಐಟಿ : ಮಲೆನಾಡಿನಲ್ಲಿ ಶಸ್ತ್ರಾಸ್ತ್ರಗಳ ಜಾಲ ಪತ್ತೆ
ಉತ್ತರ ಕನ್ನಡ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಲಾಗಿದೆ. ನಾಗೇಂದ್ರಗೌಡನಿಗೆ ಬಾಂಬ್ ಪೂರೈಕೆಯಲ್ಲಿ,ಆತನ ಯೋಜನೆಗಳಲ್ಲಿ ಸಹಕರಿಸಿದ ಮೂವರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಇತ್ತೀಚೆಗೆ ತುಮಕೂರು ಬಳಿ ಕಾರೊಂದರಲ್ಲಿ ಬಾಂಬ್ ಸ್ಫೋಟಿಸಿಕೊಂಡು ಮೃತಪಟ್ಟ ಉತ್ತರ ಕನ್ನಡ ಮೂಲದ ನಾಗೇಂದ್ರಗೌಡ ಪ್ರಕರಣದ ಜಾಡು ಹಿಡಿದು ಹೊರಟ ವಿಶೇಷ ತನಿಖಾ ತಂಡ (ಎಸ್‌ಐಟಿ) ಈಗ ರಾಜ್ಯವನ್ನೇ ಬೆಚ್ಚಿಬೀಳಿಸುವಂತ ಸ್ಫೋಟಕ ಸತ್ಯಗಳನ್ನು ಹೊರಹಾಕಿದೆ. ಮಲೆನಾಡು ಮತ್ತು ಕರಾವಳಿಯ ದಟ್ಟ ಅರಣ್ಯದ ಮರೆಯಲ್ಲಿ ಅಡಗಿದ್ದ ನಾಡಬಾಂಬ್, ಪೆಟ್ರೋಲ್ ಬಾಂಬ್ ಮತ್ತು ಕಳ್ಳಬಂದೂಕುಗಳ ಬೃಹತ್ ಜಾಲವೊಂದು ಇದೀಗ ಪೊಲೀಸ್ ಇಲಾಖೆಯ ತನಿಖೆಯಲ್ಲಿ ಬಯಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ನಾಗೇಂದ್ರಗೌಡ ತನ್ನ ಪ್ರಿಯತಮೆಗೆ ಚಾಕುವಿನಿಂದ ಇರಿದು, ನಂತರ ತುಮಕೂರು ಬಳಿ ಕಾರಿನಲ್ಲಿ ಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ಘಟನೆಯ ತೀವ್ರತೆಯನ್ನು ಗಮನಿಸಿದ ಪೊಲೀಸರು, ಆತ ಈ ಬಾಂಬ್ ಎಲ್ಲಿಂದ ತಂದನು? ಇಂತಹ ಮಾರಣಾಂತಿಕ ಶಸ್ತ್ರಾಸ್ತ್ರಗಳು ಒಬ್ಬ ವ್ಯಕ್ತಿಗೆ ಅಷ್ಟು ಸುಲಭವಾಗಿ ಹೇಗೆ ಸಿಕ್ಕವು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದಾಗ, ಮಲೆನಾಡಿನ ಕಾಡುಗಳಲ್ಲಿ ನಡೆಯುತ್ತಿರುವ ಅಕ್ರಮ ಶಸ್ತ್ರಾಸ್ತ್ರ ತಯಾರಿಕೆಯ ಜಾಲದ ಅರಿವಾಯಿತು.
60 ಮಂದಿಯ ವಿಚಾರಣೆ, ಮೂವರ ಬಂಧನ
ಈ ಸ್ಫೋಟದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ಉತ್ತರ ಕನ್ನಡ ಜಿಲ್ಲೆಯಾದ್ಯಂತ ಇದುವರೆಗೆ 60ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದ್ದಾರೆ. ನಾಗೇಂದ್ರಗೌಡನಿಗೆ ಬಾಂಬ್ ಪೂರೈಕೆಯಲ್ಲಿ ಮತ್ತು ಆತನ ಯೋಜನೆಗಳಲ್ಲಿ ಸಹಕರಿಸಿದ ಮೂವರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಅಂಕೋಲಾ ತಾಲೂಕಿನ ಸರಳಬೈಲ್ ಗ್ರಾಮದ ಇಬ್ಬರು (ನಾಗೇಂದ್ರನ ಸಂಬಂಧಿ ಮತ್ತು ಆಪ್ತ ಸ್ನೇಹಿತ) ಹಾಗೂ ಹೊನ್ನಾವರ ತಾಲೂಕಿನ ಚಂದಾವರದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದ್ದು, ಅವರಿಂದ ರಹಸ್ಯ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಇವರ ಬಂಧನವು ಈ ಜಾಲದ ಬೇರುಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಿಕ್ಕ ದೊಡ್ಡ ಸುಳಿವಾಗಿದೆ.
ಈ ಅಕ್ರಮ ಚಟುವಟಿಕೆಯನ್ನು ಬುಡಸಮೇತ ಕಿತ್ತೊಗೆಯಲು ಪೊಲೀಸರು ಮೂರು ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ. ತುಮಕೂರು ಪೊಲೀಸ್ ತಂಡ, ಅಂಕೋಲಾ ಸಿಪಿಐ ತಂಡ ಹಾಗೂ ಗೋಕರ್ಣ ಸಿಪಿಐ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. ಈ ತಂಡಗಳು ದಟ್ಟ ಅರಣ್ಯ ಪ್ರದೇಶಗಳು, ಸಂಶಯಾಸ್ಪದ ಗೋದಾಮುಗಳು ಮತ್ತು ನಾಗೇಂದ್ರಗೌಡ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಮನೆಗಳ ಮೇಲೆ ನಿಗಾ ಇಟ್ಟಿವೆ.
ಡಿಜಿಟಲ್ ಸಾಕ್ಷ್ಯ ಸಿಗದಂತೆ ನಾಗೇಂದ್ರನ ಚಾಣಾಕ್ಷ ಪ್ಲಾನ್?
ಆರೋಪಿ ನಾಗೇಂದ್ರಗೌಡನಿಗೆ ತಾನು ಮಾಡುತ್ತಿರುವ ಕೆಲಸ ಅಪರಾಧ ಎಂಬ ಅರಿವಿತ್ತು ಎಂಬುದಕ್ಕೆ ಆತನ ವರ್ತನೆಯೇ ಸಾಕ್ಷಿ. ಬಾಂಬ್ ಡೀಲಿಂಗ್ ಮಾಡುವಾಗ ಆತ ಎಲ್ಲೂ ಮೊಬೈಲ್ ಫೋನ್ ಬಳಸಿಲ್ಲ. ಪೊಲೀಸರಿಗೆ ಆತನ ಕಾಲ್ ಲಿಸ್ಟ್ ಅಥವಾ ವಾಟ್ಸಾಪ್ ಸಂದೇಶಗಳು ಸಿಗದಂತೆ ತಡೆಯಲು, ತಾನೇ ಖುದ್ದು ಸ್ಥಳಕ್ಕೆ ತೆರಳಿ ನೇರ ಮಾತುಕತೆ ನಡೆಸುತ್ತಿದ್ದ. ಈ ರೀತಿಯ ಡಿಜಿಟಲ್ ಪುರಾವೆಗಳನ್ನು ಇಲ್ಲವಾಗಿಸುವ ಮೂಲಕ ಪೊಲೀಸರ ದಾರಿ ತಪ್ಪಿಸಲು ಆತ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದನು. ತನಿಖೆಯಲ್ಲಿ ಬಯಲಾಗಿರುವ ಅತಿ ಆಘಾತಕಾರಿ ವಿಷಯವೆಂದರೆ, ನಾಡಬಾಂಬ್‌ಗಳ ಲಭ್ಯತೆ ಮತ್ತು ಅವುಗಳ ಬೆಲೆ. ಯಲ್ಲಾಪುರ ಹಾಗೂ ಹಳಿಯಾಳದ ದಟ್ಟ ಕಾಡುಗಳಲ್ಲಿ ಇವುಗಳನ್ನು ಕೇವಲ 100 ರಿಂದ 300 ರೂಪಾಯಿಗೆ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಬಳಸುವ ನೈಟ್ರೇಟ್‌ನ ಪ್ರಮಾಣಕ್ಕೆ ಅನುಗುಣವಾಗಿ ಬಾಂಬ್‌ನ ತೀವ್ರತೆಯನ್ನು ನಿರ್ಧರಿಸಲಾಗುತ್ತದೆ. ಈ ಅಗ್ಗದ ಬೆಲೆಯ ಬಾಂಬ್‌ಗಳು ಇಂದು ಕಾಡಿನ ಪ್ರಾಣಿಗಳ ಪಾಲಿಗೆ ಯಮಪಾಶವಾಗಿವೆ ಎಂದು ಹೇಳಲಾಗಿದೆ.
ಮಾಂಸದ ಬಾಂಬ್: ವನ್ಯಜೀವಿಗಳ ಹಂತಕ
ಅಕ್ರಮ ಬೇಟೆಗಾರರು ಕೋಳಿಯ ಮಾಂಸದ ಒಳಗೆ ನಾಡಬಾಂಬ್ ಅಡಗಿಸಿ, ಕಾಡಿನ ಅಂಚಿನಲ್ಲಿ ಇಡುತ್ತಾರೆ. ಹಸಿವಿನಿಂದ ಬರುವ ಕಾಡುಹಂದಿಗಳು ಇದನ್ನು ಅಗಿಯುತ್ತಿದ್ದಂತೆ ಬಾಂಬ್ ಸ್ಫೋಟಗೊಂಡು ಹಂದಿಯ ಮುಖ ಛಿದ್ರವಾಗುತ್ತದೆ. ಇಂತಹ ಕ್ರೂರ ರೀತಿಯಲ್ಲಿ ಹಂದಿಗಳನ್ನು ಕೊಂದು, ಅವುಗಳನ್ನು ಕಳ್ಳಮಾರುಕಟ್ಟೆಯಲ್ಲಿ 7-8 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದು ಕೇವಲ ಪ್ರಾಣಿಗಳಿಗೆ ಮಾತ್ರವಲ್ಲದೆ, ಅಕಸ್ಮಾತ್ತಾಗಿ ಕಾಡಿನಲ್ಲಿ ಓಡಾಡುವ ಜನರಿಗೂ ಅಪಾಯಕಾರಿಯಾಗಿದೆ. ಇನ್ನು ನಾಡಬಂದೂಕುಗಳನ್ನು ಬಳಸಿ ಉಡಾ, ಕಾಡುಕೋಣ, ಕಡವೆಗಳನ್ನು ಬೇಟೆಯಾಡಲಾಗುತ್ತಿದೆ. ಪೊಲೀಸರ ದಾಳಿ ಹೆಚ್ಚಾದಾಗ ಇವುಗಳನ್ನು ಗದ್ದೆಗಳ ಮಣ್ಣಿನಲ್ಲಿ ಹೂತುಹಾಕುವ ಪದ್ಧತಿಯೂ ಇದೆ ಎಂಬುದು ಪೊಲೀಸ್ ಮೂಲಗಳ ಅಭಿಪ್ರಾಯವಾಗಿದೆ.

