ತುಮಕೂರು-ಬೆಂಗಳೂರು ಮೆಟ್ರೋ: ಹೆದ್ದಾರಿ ಬಳಕೆಗೆ ಅನುಮತಿ ಕೋರಿದ ರಾಜ್ಯ ಸರ್ಕಾರ
x

ತುಮಕೂರು-ಬೆಂಗಳೂರು ಮೆಟ್ರೋ: ಹೆದ್ದಾರಿ ಬಳಕೆಗೆ ಅನುಮತಿ ಕೋರಿದ ರಾಜ್ಯ ಸರ್ಕಾರ

ಪ್ರಸ್ತಾವಿತ ತುಮಕೂರು ಮೆಟ್ರೋ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯ ಮಧ್ಯಭಾಗದಲ್ಲಿ ಎತ್ತರಿಸಿದ ಮಾರ್ಗವಾಗಿ ನಿರ್ಮಿಸಲು ನಿರ್ಧರಿಸಲಾಗಿದೆ.


ತುಮಕೂರು ಜಿಲ್ಲೆಯ ಜನರ ದಶಕಗಳ ಕನಸಾದ ತುಮಕೂರು-ಬೆಂಗಳೂರು ಮೆಟ್ರೋ ಸಂಪರ್ಕ ಯೋಜನೆ ಕೊನೆಗೂ ಸಾಕಾರಗೊಳ್ಳುವತ್ತ ಹೆಜ್ಜೆ ಇಟ್ಟಿದೆ. ವಿಸ್ತೃತ ಯೋಜನಾ ವರದಿ ಪೂರ್ಣಗೊಂಡ ಬೆನ್ನಲ್ಲೇ, ಮುಂದಿನ ಹಂತದ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ರಾಜ್ಯ ಸರ್ಕಾರವು ಡಿಪಿಆರ್‌ ಸಹಿತ ಕೇಂದ್ರ ಸರ್ಕಾರಕ್ಕೆ ಅಧಿಕೃತ ಪತ್ರ ಬರೆದು ರಾಷ್ಟ್ರೀಯ ಹೆದ್ದಾರಿ ಬಳಕೆಗೆ ಅನುಮತಿ ನೀಡುವಂತೆ ಕೋರಿದೆ.

ಪ್ರಸ್ತಾವಿತ ತುಮಕೂರು ಮೆಟ್ರೋ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯ ಮಧ್ಯಭಾಗದಲ್ಲಿ ಎತ್ತರಿಸಿದ ಮಾರ್ಗವಾಗಿ ನಿರ್ಮಿಸಲು ನಿರ್ಧರಿಸಲಾಗಿದೆ. ಹೆದ್ದಾರಿಯ ಮೇಲ್ಭಾಗದಲ್ಲಿ ಮೆಟ್ರೋ ಪಿಲ್ಲರ್‌ಗಳನ್ನು ನಿರ್ಮಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ 'ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರಾಕ್ಷೇಪಣಾ ಪತ್ರ ಮತ್ತು ಅನುಮತಿ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿಗೆ ಕಾಯುತ್ತಿದೆ.

ಕೇಂದ್ರದ ಅನುದಾನವಿಲ್ಲ; ಸಂಪೂರ್ಣ ಪಿಪಿಪಿ ಮಾಡೆಲ್

ಈ ಮೆಟ್ರೋ ಯೋಜನೆಯ ವಿಶೇಷತೆಯೆಂದರೆ, ಇದು ಕೇಂದ್ರ ಸರ್ಕಾರದ ನೇರ ಹಣಕಾಸಿನ ನೆರವನ್ನು ನೆಚ್ಚಿಕೊಳ್ಳದೆ ಸಂಪೂರ್ಣವಾಗಿ ಪಿಪಿಪಿ( ಸಾರ್ವಜನಿಕ-ಖಾಸಗಿ ಸಹಭಾಗಿತ್ವ ) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಯೋಜನೆಗೆ ಬಂಡವಾಳ ಹೂಡುವ ಖಾಸಗಿ ಸಂಸ್ಥೆಗಳಿಗೆ ಆದಾಯ ತರಲು ಅನುಕೂಲವಾಗುವಂತೆ ಮೆಟ್ರೋ ನಿಲ್ದಾಣಗಳು ಹಾಗೂ ಹೆದ್ದಾರಿಯ ಪಕ್ಕದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಭೂಮಿ ಒದಗಿಸಲು ನಿರ್ಧರಿಸಲಾಗಿದೆ.

ವಿಶೇಷವಾಗಿ ನೆಲಮಂಗಲ, ದಾಬಸ್‌ಪೇಟೆ ಹಾಗೂ ತುಮಕೂರು ಭಾಗಗಳಲ್ಲಿ ಮಾಲ್‌ಗಳು, ಟ್ರೇಡ್ ಸೆಂಟರ್‌ಗಳು ಸೇರಿದಂತೆ ಪ್ರಮುಖ ವಾಣಿಜ್ಯ ಸಂಕೀರ್ಣಗಳನ್ನು ಅಭಿವೃದ್ಧಿಪಡಿಸುವ ಮೂಲಕ ಹೂಡಿಕೆದಾರರು ಆದಾಯ ಕಂಡುಕೊಳ್ಳಲು ಬೃಹತ್ ಯೋಜನೆ ರೂಪಿಸಲಾಗಿದೆ.

ದೇಶ-ವಿದೇಶಿ ಕಂಪನಿಗಳಿಂದ ಆಸಕ್ತಿ

ಈಗಾಗಲೇ ದೇಶ ಹಾಗೂ ವಿದೇಶದ ಹಲವು ಪ್ರಮುಖ ಮೂಲಸೌಕರ್ಯ ಮತ್ತು ಹೂಡಿಕೆ ಕಂಪನಿಗಳು ಈ ಯೋಜನೆಯಲ್ಲಿ ಬಂಡವಾಳ ಹೂಡಲು ತೀವ್ರ ಆಸಕ್ತಿ ವ್ಯಕ್ತಪಡಿಸಿವೆ.

ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಹೆದ್ದಾರಿ ಬಳಕೆಯ ಅನುಮತಿ ಪತ್ರ ಸಿಕ್ಕ ತಕ್ಷಣವೇ, ರಾಜ್ಯ ಸರ್ಕಾರವು ತಾಂತ್ರಿಕ ಹಾಗೂ ಹಣಕಾಸಿನ ಪರಿಶೀಲನೆ ನಡೆಸಿ ಜಾಗತಿಕ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಸ್ಥಳದಲ್ಲಿ ಭೂಮಿ ಪೂಜೆ ನಡೆದು ಕಾಮಗಾರಿ ಆರಂಭವಾಗಲಿದೆ.

ಬೆಂಗಳೂರಿನ ಮಾದಾವರದಿಂದ ತುಮಕೂರಿನ ಸಿರಾ ಗೇಟ್‌ವರೆಗೆ 60 ಕಿಲೋಮೀಟರ್ ಪ್ರಯಾಣಕ್ಕೆ ರಸ್ತೆ ಸಾರಿಗೆಯಲ್ಲಿ 2-3 ಗಂಟೆ ಸಮಯ ತೆಗೆದುಕೊಳ್ಳಲಿದೆ. ಮೆಟ್ರೋ ಬಂದ ನಂತರ ಕೇವಲ 1 ಗಂಟೆಗೆ ಇಳಿಕೆಯಾಗಲಿದೆ.

ನೆಲಮಂಗಲ, ದಾಬಸ್‌ಪೇಟೆ, ಕ್ಯಾತಸಂದ್ರ, ತುಮಕೂರು ವಿಶ್ವವಿದ್ಯಾಲಯ, ಸಿದ್ಧಗಂಗಾ ಆಸ್ಪತ್ರೆ ಮತ್ತು ತುಮಕೂರು ಬಸ್ ನಿಲ್ದಾಣದಲ್ಲಿ ಮೆಟ್ರೊ ನಿಲುಗಡೆ ಇರಲಿದೆ.

ತುಮಕೂರು ಶೀಘ್ರದಲ್ಲೇ ಕೈಗಾರಿಕಾ ಹಬ್ ಹಾಗೂ ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿದ್ದು, ಈ ಮೆಟ್ರೋ ಸಂಪರ್ಕ ಜಾರಿಯಾದರೆ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ದಿನನಿತ್ಯ ಬೆಂಗಳೂರಿಗೆ ಪ್ರಯಾಣಿಸುವ ಲಕ್ಷಾಂತರ ಜನರಿಗೆ ವರವಾಗಲಿದೆ.

Read More
Next Story