Nature Guide| ನೇಚರ್ ಗೈಡ್ ಇಲ್ಲದೆ ಯಾರಿಗೂ ಚಾರಣಕ್ಕೆ ಅವಕಾಶವಿಲ್ಲ
x

ಚಾರಣಕ್ಕೆ ಹೊಸ ನಿಯಮಗಳು

Nature Guide| ನೇಚರ್ ಗೈಡ್ ಇಲ್ಲದೆ ಯಾರಿಗೂ ಚಾರಣಕ್ಕೆ ಅವಕಾಶವಿಲ್ಲ

ರಾಜ್ಯದ ಅರಣ್ಯ ಚಾರಣ ಪಥಗಳಲ್ಲಿ ಸುರಕ್ಷತೆಗಾಗಿ ಸಚಿವ ಈಶ್ವರ ಖಂಡ್ರೆ ಹೊಸ ಎಸ್‌ಒಪಿ ಬಿಡುಗಡೆ ಮಾಡಿದ್ದಾರೆ. ಇನ್ನು ಮುಂದೆ ನೇಚರ್ ಗೈಡ್ ಕಡ್ಡಾಯವಾಗಿದ್ದು, ಆನ್‌ಲೈನ್ ನೋಂದಣಿ ಮತ್ತು ಹೊಸ ನಿಯಮಗಳು ಜಾರಿಯಲ್ಲಿವೆ.


Click the Play button to hear this message in audio format

ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಚಾರಣಿಗರ ಸಂಖ್ಯೆ ಮತ್ತು ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು (SOP) ಪ್ರಕಟಿಸಿದೆ. ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಬಿಡುಗಡೆ ಮಾಡಿರುವ ಈ ನೂತನ ನಿಯಮಾವಳಿಯಂತೆ, ಚಾರಣ ಪಥಗಳಲ್ಲಿ ಸ್ಥಳೀಯ 'ನೇಚರ್ ಗೈಡ್'ಗಳ ಸಾಥ್ ಪಡೆಯುವುದು ಈಗ ಕಡ್ಡಾಯವಾಗಿದೆ. ಪರಿಸರದ ಮೇಲಿನ ಒತ್ತಡ ತಗ್ಗಿಸಲು ಪ್ರತಿ ಪಥದಲ್ಲಿ ದಿನಕ್ಕೆ ಗರಿಷ್ಠ 150 ಪ್ರವಾಸಿಗರಿಗೆ ಮಾತ್ರ ಸೀಮಿತಗೊಳಿಸಲಾಗಿದ್ದು, ಈ ಕ್ರಮವು ಚಾರಣಿಗರ ಸುರಕ್ಷತೆಯ ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವ ಉದ್ದೇಶವನ್ನೂ ಹೊಂದಿದೆ. ಈ ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಸ್ಥಳೀಯ ಪ್ರಕೃತಿ ಮಾರ್ಗದರ್ಶಕರು ಅಥವಾ ನೇಚರ್ ಗೈಡ್‌ಗಳಿಲ್ಲದೆ ಯಾರಿಗೂ ಚಾರಣ ಮಾಡಲು ಅನುಮತಿ ಇರುವುದಿಲ್ಲ. ಪ್ರತಿ ಹತ್ತು ಚಾರಣಿಗರಿಗೆ ಒಬ್ಬರು ಮಾರ್ಗದರ್ಶಕರು ಇರಲಿದ್ದು, ಒಂದು ಚಾರಣ ಪಥದಲ್ಲಿ ಒಂದು ದಿನಕ್ಕೆ ಗರಿಷ್ಠ 150 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ಇತ್ತೀಚೆಗೆ ಕೊಡಗಿನ ತಡಿಯಾಂಡಮೋಳ್ ಮತ್ತು ಚಿಕ್ಕಮಗಳೂರಿನ ಮಾಣಿಕ್ಯಧಾರಾ ಬಳಿ ನಡೆದ ಅಹಿತಕರ ಘಟನೆಗಳು ಮತ್ತು ಚಾರಣಿಗರು ನಾಪತ್ತೆಯಾದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಈ ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.

ಚಾರಣಕ್ಕೆ ಹೋಗುವ ಪ್ರತಿಯೊಬ್ಬ ಚಾರಣಿಗರು ತಮ್ಮ ಮೊಬೈಲ್‌ನಲ್ಲಿ ಚಾರಣ ಪಥದ ನಕ್ಷೆಯನ್ನೊಳಗೊಂಡ ಅಧಿಕೃತ ಆ್ಯಪ್ ಅನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಒಂದು ವೇಳೆ ಚಾರಣಿಗರು ದಾರಿ ತಪ್ಪಿದಲ್ಲಿ ಅವರನ್ನು ಪತ್ತೆಹಚ್ಚಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ. ಇದರೊಂದಿಗೆ ಮಾರ್ಗದರ್ಶಕರಿಗೆ ಜಿಪಿಎಸ್ ಆಧಾರಿತ ವಾಕಿ-ಟಾಕಿಗಳನ್ನು ಒದಗಿಸಲಾಗುತ್ತಿದ್ದು, ಅವರು ಪ್ರತಿ ಅರ್ಧ ಗಂಟೆಗೊಮ್ಮೆ ಬೇಸ್ ಕ್ಯಾಂಪ್‌ನೊಂದಿಗೆ ಸಂವಹನ ನಡೆಸಬೇಕಾಗುತ್ತದೆ.

ಚಾರಣಿಗರು ಅರಣ್ಯ ಇಲಾಖೆಯ ಅಧಿಕೃತ ಜಾಲತಾಣವಾದ 'ಅರಣ್ಯ ವಿಹಾರ' ಮೂಲಕ ಆನ್‌ಲೈನ್‌ನಲ್ಲಿ ಮುಂಗಡವಾಗಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಚಾರಣ ಆರಂಭಿಸುವ ಮುನ್ನ ಬೇಸ್ ಕ್ಯಾಂಪ್‌ನಲ್ಲಿ ಅರಣ್ಯದ ಪರಿಸ್ಥಿತಿ, ವನ್ಯಜೀವಿಗಳ ಎದುರಾದರೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಮೂಲ ನೆಲೆಯಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರಕೃತಿ ಮಾರ್ಗದರ್ಶಕರು ಚಾರಣಿಗರ ಎಣಿಕೆ ಮಾಡುವುದರ ಜೊತೆಗೆ ಅವರ ಸುರಕ್ಷತೆಯ ಸಂಪೂರ್ಣ ಜವಾಬ್ದಾರಿ ಹೊರಲಿದ್ದಾರೆ.

ಅಪ್ರಾಪ್ತ ವಯಸ್ಕರಿಗೆ ಪೋಷಕರ ಅನುಮತಿ ಅಗತ್ಯ

ಅಪ್ರಾಪ್ತ ವಯಸ್ಕರು ಚಾರಣಕ್ಕೆ ತೆರಳಲು ಅವರ ಪಾಲಕರ, ಪೋಷಕರ ಅನುಮತಿ ಪತ್ರ ಕಡ್ಡಾಯ. ಅದೇ ರೀತಿ ಹಿರಿಯ ನಾಗರಿಕರು ಚಾರಣ ಕೈಗೊಳ್ಳಲು ತಮ್ಮ ದೈಹಿಕ ಸಾಮರ್ಥ್ಯ ಮತ್ತು ಸದೃಢತೆಯ ಪ್ರಮಾಣ ಪತ್ರ ಒದಗಿಸಬೇಕಾಗುತ್ತದೆ ಎಂದರು. ಯಾವುದೇ ಚಾರಣಿಗರಿಗೆ ಆರೋಗ್ಯ ಸಮಸ್ಯೆ ಆದರೆ ಅವರ ಆರೈಕೆಗಾಗಿ ಗೈಡ್ ತಮ್ಮ ಜೊತೆ ಪ್ರಥಮ ಚಿಕಿತ್ಸಾ ಕಿಟ್ ಅನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ.

ಅರಣ್ಯ ಇಲಾಖೆ ವ್ಯಾಪ್ತಿಯ ಚಾರಣ ಪಥಗಳ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ಆಗುವಂತೆ ಎಲ್ಲ ಚಾರಣಪಥಗಳನ್ನೂ https://aranyavihaara.karnataka.gov.in/ ಅಂತರ್ಜಾಲ ತಾಣದಲ್ಲಿ ಸೇರ್ಪಡೆ ಮಾಡುವಂತೆ ಸೂಚನೆ ನೀಡಿರುವುದಾಗಿಯೂ ಅರಣ್ಯ ಸಚಿವ ಈಶ್ವರ ಖಂಡ್ರೆ ಇದೇ ಸಂದರ್ಭದಲ್ಲಿ ತಿಳಿಸಿದರು.

ಪರಿಸರ ರಕ್ಷಣೆಯ ದೃಷ್ಟಿಯಿಂದ ಚಾರಣ ಪಥಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್, ಫ್ಲಾಶ್ ಬಳಸಿ ಫೋಟೋ ತೆಗೆಯುವುದು ಮತ್ತು ಕ್ಯಾಂಪ್ ಫೈರ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಚಾರಣಿಗರು ತಂದ ತ್ಯಾಜ್ಯವನ್ನು ಮರಳಿ ಬೇಸ್ ಕ್ಯಾಂಪ್‌ಗೆ ತಂದು ವಿಲೇವಾರಿ ಮಾಡಬೇಕು. ಅಪ್ರಾಪ್ತ ವಯಸ್ಕರಿಗೆ ಪೋಷಕರ ಅನುಮತಿ ಪತ್ರ ಹಾಗೂ ಹಿರಿಯ ನಾಗರಿಕರಿಗೆ ದೈಹಿಕ ಸಾಮರ್ಥ್ಯದ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಅರಣ್ಯ ಇಲಾಖೆಯ ಈ ಎಲ್ಲ ಕ್ರಮಗಳು ಚಾರಣವನ್ನು ಸುರಕ್ಷಿತ ಮತ್ತು ಪರಿಸರ ಸ್ನೇಹಿಯಾಗಿಸುವ ಗುರಿಯನ್ನು ಹೊಂದಿವೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

Read More
Next Story