ತಿರುಪತಿ ತಿಮ್ಮಪ್ಪನ ಮೊದಲ ಆರತಿಯಲ್ಲಿ ಶಾಸಕ, ಸಚಿವರಿಗೂ ಅವಕಾಶ
ಮೈಸೂರು ಸಂಸ್ಥಾನವು ದೇವಸ್ಥಾನದ ದೈನಂದಿನ ಪೂಜಾ ವೆಚ್ಚಗಳನ್ನು ಭರಿಸುತ್ತಿದ್ದರಿಂದ ಮತ್ತು ಸಾಮಗ್ರಿಗಳನ್ನು ಪೂರೈಸಿದ್ದರಿಂದ ಪ್ರತಿದಿನ ಬೆಳಿಗ್ಗೆ ದೇವರಿಗೆ ಬೆಳಗುವ ಪ್ರಥಮ ಆರತಿಯನ್ನು ಸ್ವೀಕರಿಸುವ ಗೌರವ ಮತ್ತು ಹಕ್ಕು ಮೈಸೂರು ರಾಜರಿಗೆ ಲಭಿಸಿತ್ತು.
ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ನೆರವೇರುವ ಮೊದಲ ಆರತಿಯಲ್ಲಿ ಇನ್ನು ಮುಂದೆ ಕರ್ನಾಟಕದ ಸಚಿವರು, ಶಾಸಕರು, ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಅವಕಾಶ ಒದಗಿಸಲು ತೀರ್ಮಾನಿಸಲಾಗಿದೆ.
ಈ ಕುರಿತು ರಾಜ್ಯ ಸರ್ಕಾರ ಶೀಘ್ರದಲ್ಲೇ ಅಧಿಕೃತ ಪ್ರೋಟೋಕಾಲ್ ಆದೇಶ ಹೊರಡಿಸಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ಕರ್ನಾಟಕದ ಪರವಾಗಿ ಮೊದಲ ಆರತಿ ಮಾಡುವ ಸಂಪ್ರದಾಯ ಸುಮಾರು 400 ವರ್ಷಗಳಿಂದ ನಡೆದು ಬಂದಿದೆ. ಹಂಪಿಯ ವಿಜಯನಗರ ಸಾಮ್ರಾಜ್ಯದ ಅರಸರು ಹಾಗೂ ಅವರ ನಂತರ ಮೈಸೂರಿನ ರಾಜವಂಶಸ್ಥರು ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಅಪಾರ ಪ್ರಮಾಣದ ಚಿನ್ನಾಭರಣ, ಭೂಮಿ ಹಾಗೂ ನಿತ್ಯ ಪೂಜಾ ಕೈಂಕರ್ಯಗಳಿಗೆ ಬೇಕಾದ ಸಾಮಗ್ರಿಗಳನ್ನು ದಾನವಾಗಿ ನೀಡಿದ್ದರು.
ಮೈಸೂರು ಸಂಸ್ಥಾನವು ದೇವಸ್ಥಾನದ ದೈನಂದಿನ ಪೂಜಾ ವೆಚ್ಚಗಳನ್ನು ಭರಿಸುತ್ತಿದ್ದರಿಂದ ಮತ್ತು ಸಾಮಗ್ರಿಗಳನ್ನು ಪೂರೈಸಿದ್ದರಿಂದ ಪ್ರತಿದಿನ ಬೆಳಿಗ್ಗೆ ದೇವರಿಗೆ ಬೆಳಗುವ ಪ್ರಥಮ ಆರತಿಯನ್ನು ಸ್ವೀಕರಿಸುವ ಗೌರವ ಮತ್ತು ಹಕ್ಕು ಮೈಸೂರು ರಾಜರಿಗೆ ಲಭಿಸಿತ್ತು. ಸ್ವಾತಂತ್ರ್ಯಾನಂತರ ಈ ರಾಜಪ್ರಭುತ್ವದ ಹಕ್ಕನ್ನು ಕರ್ನಾಟಕ ಸರ್ಕಾರವು ಕಾನೂನುಬದ್ಧವಾಗಿ ಮುಂದುವರಿಸಿಕೊಂಡು ಬರುತ್ತಿದೆ.
ಶಿಷ್ಟಾಚಾರದ ಪ್ರಕಾರ ಪ್ರತಿ ಮುಂಜಾನೆ ಗರ್ಭಗುಡಿಯ ಮುಂಭಾಗ ನಿಂತು ಇಡೀ ಕರ್ನಾಟಕದ ಪರವಾಗಿ ಮೊದಲ ಆರತಿ ನಡೆಯಲಿದೆ. ದೇವರ ಪ್ರಸಾದವನ್ನು ಕರ್ನಾಟಕದ ಮುಖ್ಯಮಂತ್ರಿಗಳು ಸ್ವೀಕರಿಸಬೇಕು. ಅವರ ಅನುಪಸ್ಥಿತಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ನೇಮಕಗೊಂಡ ವಿಶೇಷ ಅಧಿಕಾರಿ ಸ್ವೀಕರಿಸುತ್ತಿದ್ದರು. ಈಗ ಹೊಸ ಶಿಷ್ಟಾಚಾರದ ಆದೇಶ ಹೊರಡಿಸಲಿದ್ದು, ಗಣ್ಯರಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ.

