
ತಿರುಪತಿ ಮೊದಲ ಆರತಿ ವಿವಾದ: ಡಿಕೆಶಿ ಪ್ರಸ್ತಾವನೆಗೆ ಟಿಟಿಡಿ ವಿರೋಧ
ತಿರುಪತಿಯ ಮೊದಲ ಆರತಿಯನ್ನು ಕರ್ನಾಟಕದ ಸಚಿವರು, ಶಾಸಕರಿಗೆ ವಿಸ್ತರಿಸುವ ಸಿಎಂ ಡಿ.ಕೆ. ಶಿವಕುಮಾರ್ ಪ್ರಸ್ತಾವನೆಗೆ TTD ತೀವ್ರ ವಿರೋಧ ವ್ಯಕ್ತಪಡಿಸಿದೆ. ಮೈಸೂರು ರಾಜರ ಐತಿಹಾಸಿಕ ಗೌರವದ ಹಿನ್ನೆಲೆ ಇಲ್ಲಿದೆ.
ತಿರುಮಲ ತಿರುಪತಿ ದೇವಸ್ಥಾನದಲ್ಲಿ (TTD) ನಿತ್ಯ ಶ್ರೀ ವೆಂಕಟೇಶ್ವರ ಸ್ವಾಮಿಗೆ ನಡೆಯುವ ಸುಪ್ರಭಾತ ಸೇವೆಯ ಮೊದಲ ಆರತಿಯಲ್ಲಿ ಕರ್ನಾಟಕದ ಗಣ್ಯರು ಭಾಗವಹಿಸುವ ವಿಚಾರವಾಗಿ ಭಾರಿ ಚರ್ಚೆ ಮತ್ತು ವಿವಾದ ಆರಂಭವಾಗಿದೆ. ಮೊದಲ ಆರತಿಯ ಗೌರವವನ್ನು ಕರ್ನಾಟಕದ ಸಚಿವರು, ಶಾಸಕರು ಮತ್ತು ಜನಪ್ರತಿನಿಧಿಗಳಿಗೂ ವಿಸ್ತರಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಮುಖ ಪ್ರಕಟಣೆ ನೀಡಿದ್ದರು. ಆದರೆ, ಸಿಎಂ ಡಿಕೆಶಿ ಅವರ ಈ ಮಾತಿಗೆ ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ನಾವು ಒಪ್ಪುವುದಿಲ್ಲ ಎಂದು ಖಡಕ್ ಆಗಿ ಹೇಳಿದೆ.
ಮೈಸೂರು ರಾಜರಿಗೆ ನೀಡುವ ಗೌರವ ಇತರರಿಗೆ ನೀಡಲು ಸಾಧ್ಯವಿಲ್ಲ
"ಮೈಸೂರು ಮಹಾರಾಜರಿಗೆ ನೀಡಲಾಗುತ್ತಿರುವ ಐತಿಹಾಸಿಕ ಗೌರವವನ್ನು ಇತರ ಯಾವುದೇ ರಾಜಕಾರಣಿಗಳು ಅಥವಾ ಗಣ್ಯರಿಗೆ ನೀಡಲು ಸಾಧ್ಯವಿಲ್ಲ" ಎಂದು ಟಿಟಿಡಿ ಸ್ಪಷ್ಟಪಡಿಸಿದೆ. ತಿರುಪತಿಯಲ್ಲಿ ನಡೆಯುವ ನಿತ್ಯದ ಮೊದಲ ಆರತಿಯನ್ನು ಕರ್ನಾಟಕದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಇತರೆ ಗಣ್ಯರಿಗೂ ವಿಸ್ತರಿಸಲು ಆದೇಶ ಹೊರಡಿಸಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ನೀಡಿದ್ದ ಹೇಳಿಕೆಯನ್ನು ಟಿಟಿಡಿ ತಳ್ಳಿಹಾಕಿದೆ.
ಈ ಕುರಿತು ಪ್ರತಿಕ್ರಿಯಿಸಿದ ಟಿಟಿಡಿ ಸದಸ್ಯ ಜಿ. ಭಾನುಪ್ರಕಾಶ್ ರೆಡ್ಡಿ, "ತಿರುಮಲಕ್ಕೆ ಮೈಸೂರು ಮಹಾರಾಜರು ನೀಡಿರುವ ಅಪಾರ ಕೊಡುಗೆಗಳು ಮತ್ತು ದಾನ-ಧರ್ಮಗಳಿಗೆ ಪ್ರತಿಯಾಗಿ ಅವರಿಗೆ ನಿತ್ಯ ಆರತಿಯ ವಿಶೇಷ ಗೌರವವನ್ನು ಅನಾದಿ ಕಾಲದಿಂದಲೂ ನೀಡಲಾಗಿದೆ. ನಂತರದ ದಿನಗಳಲ್ಲಿ ಇದನ್ನು ಅವರ ಅಧಿಕೃತ ಪ್ರತಿನಿಧಿಗಳಿಗೆ ಮಾತ್ರ ವರ್ಗಾಯಿಸಲಾಗಿದೆ. ಈಗ ಕರ್ನಾಟಕ ಸರ್ಕಾರ ಶಿಫಾರಸು ಮಾಡಿದರೂ ಸಹ, ಈ ಪರಂಪರೆಯನ್ನು ಬೇರೆ ಯಾರಿಗೂ ವಿಸ್ತರಿಸಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಡಿಕೆಶಿ ಅವರದ್ದು ಏಕಪಕ್ಷೀಯ ಮತ್ತು ಅಧಿಕಾರದ ಮಿತಿಮೀರಿದ ಹೇಳಿಕೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ವಿಷಯದಲ್ಲಿ ಏಕಪಕ್ಷೀಯವಾಗಿ ಹೇಳಿಕೆ ನೀಡಿದ್ದಾರೆ. ಇದು ಅವರ ಅಧಿಕಾರದ ಮಿತಿಮೀರಿದ ಹೇಳಿಕೆಯಾಗಿದೆ. ಕರ್ನಾಟಕದ ಇಂತಹ ನಿರ್ಧಾರದಿಂದಾಗಿ ಭವಿಷ್ಯದಲ್ಲಿ ಇತರ ರಾಜ್ಯಗಳಿಂದಲೂ ಇದೇ ರೀತಿಯ ಬೇಡಿಕೆಗಳು ಬರಬಹುದು ಎಂದು ಟಿಟಿಡಿ ಟ್ರಸ್ಟ್ ಸಭೆಯಲ್ಲಿ ಆತಂಕ ಮತ್ತು ಅಭಿಪ್ರಾಯ ವ್ಯಕ್ತವಾಗಿದೆ.
ಏನಿದು ತಿರುಪತಿ ಮೊದಲ ಆರತಿಯ ಐತಿಹಾಸಿಕ ಹಿನ್ನೆಲೆ?
ತಿರುಪತಿ ತಿಮ್ಮಪ್ಪನಿಗೆ ನಡೆಯುವ ಮೊದಲ ಆರತಿಯ ಹಕ್ಕು ನಮ್ಮ ಮೈಸೂರು ಮಹಾರಾಜರ ಕೊಡುಗೆ ಮತ್ತು ಒಂದು ಐತಿಹಾಸಿಕ ಒಪ್ಪಂದದ ಭಾಗವಾಗಿದೆ ಎನ್ನುವ ವಿಚಾರ ಅನೇಕರಿಗೆ ತಿಳಿದಿಲ್ಲ. ಈ ಪವಿತ್ರ ಹಕ್ಕಿನ ಹಿಂದೆ ಮೈಸೂರು ಸಂಸ್ಥಾನದ ಒಡೆಯರ್ ರಾಜವಂಶದ ಪರಮ ಭಕ್ತಿ ಹಾಗೂ ಕೊಡುಗೆಯ ಸುದೀರ್ಘ ಇತಿಹಾಸವಿದೆ.
• ಅಖಂಡ ದೀಪಕ್ಕೆ ತುಪ್ಪ ನೀಡೋ ಸಂಪ್ರದಾಯ: ಶ್ರೀ ವೆಂಕಟೇಶ್ವರನ ಗರ್ಭಗುಡಿಯಲ್ಲಿ ಸದಾ ಬೆಳಗುತ್ತಿರುವ ಪವಿತ್ರ ದೀಪಗಳಾದ ಬ್ರಹ್ಮದೀಪ, ಮಹಾರಾಜ ದೀಪ ಹಾಗೂ ಅಖಂಡ ದೀಪಗಳಿಗೆ ಪ್ರತಿದಿನ 5 ಕೆಜಿ ಪರಿಶುದ್ಧವಾದ ತುಪ್ಪವನ್ನು ಕಾಣಿಕೆಯಾಗಿ ನೀಡುವ ಸಂಪ್ರದಾಯವನ್ನು ಅಂದಿನ ಮೈಸೂರು ಮಹಾರಾಜರು ಆರಂಭಿಸಿದ್ದರು.
• ಮುಂದುವರಿದ ಪರಂಪರೆ: ಅಂದಿನಿಂದ ಇಂದಿನವರೆಗೂ ಈ ವಿಶೇಷ ಸಂಪ್ರದಾಯ ಮುಂದುವರಿದಿದೆ. ಪ್ರತಿದಿನ ಬೆಳಗ್ಗೆ ಕರ್ನಾಟಕ ಸರ್ಕಾರದ ವತಿಯಿಂದ ತಿರುಪತಿಯಲ್ಲಿ ನಿಯೋಜನೆಗೊಂಡಿರುವ ವಿಶೇಷ ಅಧಿಕಾರಿಯೊಬ್ಬರು (ಕರ್ನಾಟಕದ ಪರವಾಗಿ) ಮೊದಲ ಆರತಿಯಲ್ಲಿ ಪಾಲ್ಗೊಂಡು ಸ್ವಾಮಿಯ ಪ್ರಸಾದ ಮತ್ತು ಗೌರವವನ್ನು ಸ್ವೀಕರಿಸುತ್ತಾರೆ.
ಆದರೆ, ಇದೀಗ ಸಿಎಂ ಡಿ.ಕೆ. ಶಿವಕುಮಾರ್ ಅವರ ಆದೇಶದಂತೆ ತಿರುಪತಿ ತಿಮ್ಮಪ್ಪನ ಈ ಮೊದಲ ಆರತಿಯಲ್ಲಿ ಕರ್ನಾಟಕದ ಸಚಿವರು ಮತ್ತು ಶಾಸಕರು ಭಾಗಿಯಾಗಲು ಅವಕಾಶ ನೀಡಲು ಸರ್ಕಾರ ಮುಂದಾಗಿರುವುದು ಸದ್ಯ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

