ಕುಸಿದ ತೆಂಗು ಬಳೆ, ದಾಖಲೆ ಬರೆದ ಉಂಡೆ ಕೊಬ್ಬರಿ ಬೆಲೆ!  ಆದರೂ...ರೈತರಿಗೆ ದಕ್ಕದ ಲಾಭ
x
ಕೊಬ್ಬರಿ ಆವಕ

ಕುಸಿದ ತೆಂಗು ಬಳೆ, ದಾಖಲೆ ಬರೆದ ಉಂಡೆ ಕೊಬ್ಬರಿ ಬೆಲೆ! ಆದರೂ...ರೈತರಿಗೆ ದಕ್ಕದ ಲಾಭ

ತೆಂಗಿನ ಗಿಡಗಳಲ್ಲಿ ಕಂಡು ಬರುವ ಕಾಂಡ ಸೋರುವ ಶಿಲೀಂಧ್ರ ರೋಗಕ್ಕೆ 30 ಹಿಂದಿನ ಔಷಧವನ್ನೇ ಶಿಫಾರಸು ಮಾಡಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ತೆಂಗಿನ ಬೆಳೆ ವಿಸ್ತೀರ್ಣ ಹೆಚ್ಚಳವಾದರೂ ರೋಗಭಾದೆ ಸಮಸ್ಯೆ ಬಗೆಹರಿದಿಲ್ಲ.


ತೆಂಗಿನಕಾಯಿ ಮತ್ತು ಕೊಬ್ಬರಿಗೆ ಪ್ರಸಿದ್ಧಿಯಾಗಿರುವ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ಬೆಲೆ ದಾಖಲೆ ಬರೆದಿದೆ. ಕ್ವಿಂಟಲ್‌ ಉಂಡೆ ಕೊಬ್ಬರಿ ಬೆಲೆ 38 ಸಾವಿರ ರೂ. ಗಡಿ ದಾಟಿದ್ದರೂ ರೈತರಲ್ಲಿ ಮಂದಹಾಸ ಇಲ್ಲ!

ತೆಂಗು ಬೆಳೆ ದಿನೇ ದಿನೇ ಕ್ಷೀಣಿಸುತ್ತಿರುವುದರಿಂದ ಕೊಬ್ಬರಿ ಉತ್ಪಾದನೆಯೂ ಕುಸಿತ ಕಂಡಿದೆ. ಪ್ರಸ್ತುತ, ಅತ್ಪಲ್ಪ ದಾಸ್ತಾನು ಮಾರುಕಟ್ಟೆಗೆ ಆವಕವಾಗುತ್ತಿರುವುದರಿಂದ ಬೆಲೆ 40 ಸಾವಿರ ರೂ.ಗಳ ಗಡಿ ಸಮೀಪಿಸುತ್ತಿದೆ. ಕೊಬ್ಬರಿ ಖರೀದಿಗಾಗಿ ವ್ಯಾಪಾರಿಗಳಲ್ಲಿ ಪೈಫೋಟಿ ಸೃಷ್ಟಿಯಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.

ಬಹಳಷ್ಟು ರೈತರು ಎಳನೀರು ಮತ್ತು ತೆಂಗಿನಕಾಯಿ ರೂಪದಲ್ಲೇ ಬೆಳೆ ಮಾರಾಟ ಮಾಡುತ್ತಿದ್ದು, ಇದರಿಂದ ಕೊಬ್ಬರಿ ದಾಸ್ತಾನು ಕಡಿಮೆಯಾಗಿದೆ. ಜತೆಗೆ ರೋಗಭಾದೆಯಿಂದ ಸಾಕಷ್ಟು ಬೆಳೆ ಹಾನಿಯಾಗಿದ್ದು, ರೈತರು ತೆಂಗಿಗೆ ಪರ್ಯಾಯವಾಗಿ ಅಡಕೆ ಬೆಳೆಯತ್ತ ಆಕರ್ಷಿತರಾಗುತ್ತಿರುವುದು ಕೂಡ ಕೊಬ್ಬರಿ ಇಳುವರಿ ಕ್ಷೀಣಿಸಿದೆ.

ಭಾರತದಲ್ಲಿ ಹೇಗಿದೆ ತೆಂಗು ಉತ್ಪಾದನೆ?

ವಿಶ್ವದ ತೆಂಗು ಉತ್ಪಾದನೆಯಲ್ಲಿ ಭಾರತ ಶೇ. 30.37 ತೆಂಗು ವಿಸ್ತೀರ್ಣ ಹೊಂದುವ ಮೂಲಕ ತೆಂಗಿನಕಾಯಿ ಉತ್ಪಾದನೆಯಲ್ಲಿ ಪಾರಮ್ಯ ಕಂಡಿದೆ. 2023-24 ರ ಅಂಕಿ ಅಂಶಗಳ ಪ್ರಕಾರ ಕರ್ನಾಟಕವು 726 ಕೋಟಿ ತೆಂಗಿನಕಾಯಿ ಉತ್ಪಾದನೆಯೊಂದಿಗೆ ಮೊದಲ ಸ್ಥಾನ ಕಾಯ್ದುಕೊಂಡರೆ, ತಮಿಳುನಾಡು 578 ಕೋಟಿ ತೆಂಗಿನ ಕಾಯಿಗಳ ಉತ್ಪಾದನೆಯಿಂದ ಎರಡನೇ ಸ್ಥಾನ, ಕೇರಳವು 564 ಕೋಟಿ ತೆಂಗಿನ ಕಾಯಿಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ತುಮಕೂರು, ಹಾಸನ ಮತ್ತು ಮಂಡ್ಯ ಜಿಲ್ಲೆಗಳು ರಾಜ್ಯದ ತೆಂಗಿನಕಾಯಿ ಉತ್ಪಾದನೆಗೆ ಶೇ 80 ಕ್ಕಿಂತ ಹೆಚ್ಚು ಕೊಡುಗೆ ನೀಡಿವೆ.

ಕೊಬ್ಬರಿ ಬೆಲೆ ದಿಢೀರ್‌ ಹೆಚ್ಚಳ ಕಾಣುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಬಂಪರ್‌ ಲಾಭ ಸಿಗುತ್ತಿದೆ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿವೆ. ಆದರೆ, ಕೊಬ್ಬರಿ ಬೆಲೆ ಏರಿಕೆಯು ರೈತರಿಗೆ ಲಾಭ ತಂದುಕೊಟ್ಟಿದೆಯೇ ಎಂಬುದೇ ಚರ್ಚಿತ ವಿಷಯವಾಗಿದೆ. ಬೆಲೆ ಏರಿಕೆ ವಿಚಾರದಲ್ಲಿ ರೈತರ ದಿಕ್ಕು ತಪ್ಪಿಸಲಾಗುತ್ತಿದೆ. ಎಲ್ಲರೂ ಬೆಲೆ ಏರಿಕೆಯತ್ತ ಬೊಟ್ಟು ಮಾಡುತ್ತಿದ್ದಾರೆಯೇ ವಿನಃ ರೈತರಿಗೆ ಸಿಗುವ ಆದಾಯದ ಕಡೆ ಯಾರೊಬ್ಬರೂ ಗಮನ ಹರಿಸುತ್ತಿಲ್ಲ. ರೈತರ ಬಳಿ ಕೊಬ್ಬರಿ ದಾಸ್ತಾನು ಪ್ರಮಾಣ ಕಡಿಮೆ ಆಗಿರುವುದರಿಂದ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಜಿಗಿದಿದೆ ಎಂಬುದು ಪ್ರಗತಿಪರ ಬೆಳೆಗಾರರ ವಿಶ್ಲೇಷಣೆಯಾಗಿದೆ.

“ಐದು ವರ್ಷದ ಹಿಂದೆ 10ಸಾವಿರ ರೂ.ಗಳಿದ್ದ ಕ್ವಿಂಟಾಲ್ ಕೊಬ್ಬರಿ ಬೆಲೆ ಈಗ 38 ಸಾವಿರಕ್ಕೆ ಏರಿದೆ. ರಾಜ್ಯದಲ್ಲಿ ತೆಂಗು ಉತ್ಪಾದನೆ ಕಡಿಮೆಯಾಗಿರುವ ಕಾರಣ ರೈತರಿಗೆ ಬೆಲೆ ಏರಿಕೆಯ ಲಾಭ ಸಿಗುತ್ತಿಲ್ಲ. ಬದಲಿಗೆ ಆಗುವ ನಷ್ಟದ ಪ್ರಮಾಣ ಕ್ಷೀಣಿಸುತ್ತಿದೆ ಎಂದು ತೆಂಗು ಬೆಳೆಗಾರ ನಾಗೇಶ್ ಬಳಗೆರೆ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

“ಈ ಹಿಂದೆ ನಾನೇ 90ಸಾವಿರದಿಂದ 1 ಲಕ್ಷ ಕಾಯಿಗಳನ್ನು ಮಾರುಕಟ್ಟೆಗೆ ತರುತ್ತಿದ್ದೆ. ಈಗ 25 ಸಾವಿರ ತೆಂಗಿನಕಾಯಿ ಉತ್ಪಾದನೆಯಾದರೆ ಹೆಚ್ಚೆಚ್ಚು. ಸದ್ಯ ಬೆಲೆ ಏರಿಕೆಯಿಂದ ರೈತರಿಗೆ ಯಾವುದೇ ಹೆಚ್ಚುವರಿ ಲಾಭ ಸಿಗದೇ ಹೋದರೂ ನಷ್ಟದ ಪ್ರಮಾಣ ಕಡಿಮೆಯಾಗುತ್ತಿದೆ. ಬೆಳೆ ಸಂರಕ್ಷಣೆ ವಿಚಾರದಲ್ಲಿ ತೋಟಗಾರಿಕೆ ಇಲಾಖೆ ವೈಫಲ್ಯವೂ ಬೆಳೆ ಕ್ಷೀಣಿಸಲು ಕಾರಣವಾಗಿದೆ. ಕೇವಲ ಸಬ್ಸಿಡಿ ಕಾರ್ಯಕ್ರಮಗಳನ್ನು ವಿಲೇವಾರಿ ಮಾಡುವುದಷ್ಟೇ ಇಲಾಖೆಯ ಕೆಲಸವಾಗಿದೆ. ತುಮಕೂರು ಜಿಲ್ಲೆಯಲ್ಲಿ ಶೇ 25ರಿಂದ 30 ರಷ್ಟು ತೆಂಗು ಬೆಳೆ ಕ್ಷೀಣಿಸಿದೆ. ಇನ್ನೂ ಶೇ 10ರಷ್ಟು ಬೆಳೆ ಕ್ಷೀಣಿಸುವ ಅಪಾಯವಿದೆ" ಎಂದು ಹೇಳಿದರು.

ಸಾವಯವ ಪದ್ಧತಿಯಲ್ಲಿ ತೆಂಗು ಬೆಳೆ ಬೆಳೆಯಲು ತೋಟಗಾರಿಕೆ ಇಲಾಖೆಯು ರೈತರಿಗೆ ಪ್ರೇರೇಪಿಸುತ್ತಿದೆ. ಕುರಿ, ಕೋಳಿ ಹಾಗೂ ದನದ ಗೊಬ್ಬರ ಹಾಕಲು ಸೂಚಿಸುತ್ತಿದೆ. ಆದರೆ, ಈ ಗೊಬ್ಬರಗಳಿಂದ ತೆಂಗಿಗೆ ಅಗತ್ಯ ಪ್ರಮಾಣದ ಪೊಟ್ಯಾಷ್ ಅಂಶ ಸಿಗುತ್ತಿಲ್ಲ. ಗೊಬ್ಬರದಲ್ಲಿ ಪೊಟ್ಯಾಷ್ ಅಂಶ ಕೇವಲ ಶೇ 1 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇರಲಿದೆ. ಇಲಾಖೆಯು ಮಣ್ಣಿನ ಆರೋಗ್ಯ ರಕ್ಷಣೆಗೆ ಹೆಚ್ಚು ಗಮನ ಹರಿಸುತ್ತಿದೆಯೇ ಹೊರತು ಗಿಡಗಳ ರಕ್ಷಣೆಗೆ ಆಸ್ಥೆ ವಹಿಸುತ್ತಿಲ್ಲ. ಪೊಟ್ಯಾಷ್ ಅಂಶದ ಕೊರತೆಯಿಂದ ಬಹಳಷ್ಟು ತೆಂಗಿನ ಗಿಡಗಳು ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುತ್ತಿವೆ ಎಂಬುದು ಪ್ರಗತಿಪರ ರೈತರ ಮಾತು.

ಸಂಶೋಧನೆ, ಅಭಿವೃದ್ಧಿಯೂ ಕ್ಷೀಣ

ತೆಂಗಿನ ಗಿಡಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಕಾಂಡ ಸೋರುವ ಶಿಲೀಂಧ್ರ ರೋಗಕ್ಕೆ ಮೂವತ್ತು ವರ್ಷಗಳ ಹಿಂದಿನ ಔಷಧವನ್ನೇ ಇಂದಿಗೂ ಶಿಫಾರಸು ಮಾಡಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ತೆಂಗ ಪುನರುಜ್ಜೀವನ ಕಾರ್ಯಕ್ರಮದ ಮೂಲಕ ತೆಂಗಿನ ಬೆಳೆ ವಿಸ್ತೀರ್ಣ ಹೆಚ್ಚಳವಾದರೂ ಮೂಲ ಸಮಸ್ಯೆ ಬಗೆಹರಿದಿಲ್ಲ. ದಾಳಿಂಬೆ, ಪಪ್ಪಾಯಿಗೆ ಇರುವ ವಿಮೆ ಸೌಲಭ್ಯ ತೆಂಗಿನ ಮರಗಳಿಗೆ ಇಲ್ಲ. ಹಾಗಾಗಿ , ರೈತರು ನಷ್ಟದ ಸುಳಿಗೆ ಸಿಲುಕುತ್ತಿದ್ದಾರೆ. ಸರ್ಕಾರ ಜಾರಿಗೆ ತರುವ ಯಾವುದೇ ಯೋಜನೆಗಳ ಲಾಭ ರೈತರಿಗೆ ಸಿಗದಂತಾಗಿದೆ ಎಂದು ನಾಗೇಶ್ ಹೇಳಿದರು.

ತೆಂಗಿನ ಬೆಳೆಯಲ್ಲಿ ಯಾವುದೇ ಸಂಶೋಧನೆ ಹಾಗೂ ಅಭಿವೃದ್ಧಿ ಕಾಣುತ್ತಿಲ್ಲ. ಹೊಸ ಔಷಧಗಳ ಸಂಶೋಧನೆ ಮಾಡದೇ ಕೇವಲ ಸಬ್ಸಿಡಿ ಕಾರ್ಯಕ್ರಮಗಳ ವಿಲೇವಾರಿಯಲ್ಲೇ ತೋಟಗಾರಿಕಾ ಇಲಾಖೆ ಕಾಲಹರಣ ಮಾಡುತ್ತಿದೆ ಎಂದರು.

ಮಾರುಕಟ್ಟೆಗೆ ಕಡಿಮೆ ಆವಕ

ತಿಪಟೂರು ಕೊಬ್ಬರಿ ಮಾರುಕಟ್ಟೆಗೆ ಏಪ್ರಿಲ್ ಮೊದಲ ವಾರದಿಂದ ಕೇವಲ ಮೂರು ಸಾವಿರ ಚೀಲ ಉಂಡೆ ಕೊಬ್ಬರಿ ಬರುತ್ತಿದೆ. ಏ.13 ರಂದು 3,989 ಕ್ವಿಂಟಾಲ್ ಉಂಡೆ ಕೊಬ್ಬರಿ ಮಾತ್ರ ಬಂದಿದೆ. ಕಡಿಮೆ ದಾಸ್ತಾನು ಬರುತ್ತಿರುವುದರಿಂದ ಸಹಜವಾಗಿ ಬೆಲೆ ಗಗನಮುಖಿಯಾಗಿದೆ. ಇದನ್ನೇ ಕೆಲವರು ರೈತರಿಗೆ ಲಾಭವಾಗಿದೆ ಎಂದು ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಚಿಕ್ಕಮಗಳೂರು, ಹಾಸನ ಹಾಗೂ ತುಮಕೂರು ಜಿಲ್ಲೆಯ 15 ತಾಲೂಕುಗಳಲ್ಲಿ ಮಾತ್ರ ಉಂಡೆ ಕೊಬ್ಬರಿ ಸಿಗುತ್ತಿದೆ. ಹಾಸನದ ಅರಸೀಕರೆ, ಚನ್ನರಾಯಪಟ್ಟಣ, ಶ್ರವಣಬೆಳೆಗೊಳ, ಚಿತ್ರದುರ್ಗದ ಹೊಸದುರ್ಗ, ಚಿಕ್ಕಮಗಳೂರಿನ ಕಡೂರು ತಾಲೂಕುಗಳಿಂದ ಮಾತ್ರ ಕೊಬ್ಬರಿ ಬರುತ್ತಿದೆ ಎಂದರು.

ಮಧ್ಯ ಏಷ್ಯಾದ ರಾಷ್ಟ್ರಗಳಿಗೆ ತುಮಕೂರು ಜಿಲ್ಲೆಯಿಂದ ತೆಂಗಿನ ಕಾಯಿ ರಫ್ತಾಗುತ್ತಿತ್ತು. ಈಗ ರಫ್ತು ಸ್ಥಗಿತವಾಗಿರುವುದರಿಂದ ತೆಂಗಿನ ಕಾಯಿ ಬೆಲೆ ಕಡಿಮೆಯಾಗಿದೆ. ಸ್ವಲ್ಪ ಪ್ರಮಾಣದ ಕೊಬ್ಬರಿಯು ಚೀನಾಗೂ ರಫ್ತಾಗುತ್ತಿದೆ. ಹಾಗಾಗಿ ರಾಜ್ಯದಲ್ಲಿ ಉಂಡೆ ಕೊಬ್ಬರಿ ದಾಸ್ತಾನು ಕಡಿಮೆಯಿದೆ ಎಂದು ವಿವರಿಸಿದರು.

ಕರ್ನಾಟಕದಲ್ಲಿ ಮಾತ್ರ ಉಂಡೆ ಕೊಬ್ಬರಿ

ಉಂಡೆ ಕೊಬ್ಬರಿ ಉತ್ಪಾದನೆಯಲ್ಲಿ ಕರ್ನಾಟಕಕ್ಕೆ ಸಾಟಿಯೇ ಇಲ್ಲ. ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ. 72.8 ರಷ್ಟು ಪಾಲು ಕರ್ನಾಟಕದ್ದಾಗಿದೆ. ವಿಶೇಷವಾಗಿ ತುಮಕೂರು ಜಿಲ್ಲೆಯ ತಿಪಟೂರು ಕೊಬ್ಬರಿಗೆ ರಾಷ್ಟ್ರಮಟ್ಟದಲ್ಲಿ ಭಾರೀ ಬೇಡಿಕೆಯಿದೆ. ಸಿಹಿತಿಂಡಿ ತಯಾರಿಕೆ ಮತ್ತು ಉತ್ತರ ಭಾರತದ ಧಾರ್ಮಿಕ ಆಚರಣೆಗಳಲ್ಲಿ ತಿಪಟೂರು ಕೊಬ್ಬರಿಯೇ ಪ್ರಧಾನವಾಗಿದೆ.

ಇನ್ನು ಉಂಡೆ ಕೊಬ್ಬರಿ ಕರ್ನಾಟಕದಲ್ಲಿ ಮಾತ್ರ ಸಿಗಲಿದೆ. ಕೇರಳದಲ್ಲಿ ರಾಜಾಪುರಿ( ಕಪ್ ಕೋಪ್ರಾ) ಸಿಗಲಿದೆ. ಕೇರಳದಲ್ಲಿ ತೆಂಗಿನಕಾಯಿಯ ನೀರು ಬತ್ತುತ್ತಿದ್ದಂತೆ ಕಾಯಿ ಹೋಳು ಮಾಡಿ, ಸಲ್ಫರ್ ಸಿಂಪಡಿಸಲಾಗುತ್ತಿದೆ. ಅದನ್ನು ಬಳಸಿಕೊಂಡು ಹೆಚ್ಚಾಗಿ ಎಣ್ಣೆ ತಯಾರಿಸಲಾಗುತ್ತದೆ. ತಮಿಳುನಾಡಿನಲ್ಲೂ ಹೆಚ್ಚು ತೆಂಗಿನ ಕಾಯಿಯನ್ನು ಎಳನೀರಿಗೆ ಬಳಸಲಾಗುತ್ತಿದೆ. ಇಳುವರಿಯ ಒಂದಿಷ್ಟು ಭಾಗವನ್ನು ತೆಂಗಿನಕಾಯಿ ಹಾಗೂ ಕೊಬ್ಬರಿಯಾಗಿ ಮಾರಾಟ ಮಾಡಲಾಗುತ್ತದೆ. ಕೊಬ್ಬರಿಯನ್ನು ಹೆಚ್ಚಾಗಿ ಮಹಾರಾಷ್ಟ್ರದ ಬೇಕರಿಗಳಿಗೆ ಮಾರಾಟ ಮಾಡಲಾಗುತ್ತಿದೆ.

ತಿಪಟೂರು ಉಂಡೆ ಕೊಬ್ಬರಿ ತನ್ನ ವಿಶಿಷ್ಟ ರುಚಿ ಮತ್ತು ಗುಣಮಟ್ಟಕ್ಕೆ ಹೆಸರಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಹಬ್ಬಗಳು ಮತ್ತು ಶುಭ ಸಮಾರಂಭಗಳ ಹಿನ್ನೆಲೆ ಕೊಬ್ಬರಿಗೆ ಭಾರೀ ಬೇಡಿಕೆ ಇದೆ.

ಕೇಂದ್ರದ ತೆಂಗು ಉತ್ತೇಜನ ಯೋಜನೆ

ತೆಂಗಿನ ಉತ್ಪಾದನೆಯಲ್ಲಿ ಎದುರಾಗಿರುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಕೇಂದ್ರ ಸರ್ಕಾರವು 2026-27ರ ಕೇಂದ್ರ ಬಜೆಟ್ನಲ್ಲಿ 350 ಕೋಟಿ ರೂ. ಮೊತ್ತದ ವಿಶೇಷ ಯೋಜನೆ ಘೋಷಿಸಿದೆ. ಹಳೆಯ ಮತ್ತು ಉತ್ಪಾದಕವಲ್ಲದ ಮರಗಳನ್ನು ತೆಗೆದು ಹೊಸ ತಳಿಗಳನ್ನು ನೆಡುವುದು ಈ ಯೋಜನೆಯ ಉದ್ದೇಶ. ಆದರೆ, ಇದರ ನಿಧಿ ಮಂಜೂರಾತಿ ಮತ್ತು ಬಳಕೆ ಇನ್ನೂ ಪ್ರಕ್ರಿಯೆ ಹಂತದಲ್ಲಿರುವ ಕಾರಣ ತೆಂಗು ಬೆಳೆಗಾರರಿಗೆ ಯಾವುದೇ ಪ್ರಯೋಜನ ಸಿಗುತ್ತಿಲ್ಲ.

ಕರ್ನಾಟಕದ ತೆಂಗು ಕೃಷಿಯು ಈಗ ವಾರಾಂತ್ಯದ ಕೃಷಿಯಾಗಿಯೂ ಬದಲಾಗುತ್ತಿದೆ. ತಂತ್ರಜ್ಞಾನದ ಅಳವಡಿಕೆಯಿಂದ ಹೊಸ ರೂಪ ಪಡೆಯುತ್ತಿದ್ದು, ತೆಂಗು ಉತ್ಪಾದನೆಯಲ್ಲಿ ನಂ.1 ಪಟ್ಟ ಉಳಿಸಿಕೊಳ್ಳಬೇಕಾದರೆ ಕೇವಲ ಸಬ್ಸಿಡಿಗಳಲ್ಲದೆ, ವೈಜ್ಞಾನಿಕ ಸಂಶೋಧನೆ, ಸಮರ್ಪಕ ವಿಮಾ ಸೌಲಭ್ಯ ಮತ್ತು ರಫ್ತು ಮಾರುಕಟ್ಟೆಯ ಉತ್ತೇಜನಕ್ಕೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂಬುದು ತೆಂಗು ಬೆಳೆಗಾರರ ಆಗ್ರಹವಾಗಿದೆ.

Read More
Next Story