
ನೇಕಾರರ ಸಾಲದ ಮಿತಿ ಹೆಚ್ಚಿಸುವ ಭರವಸೆ ನೀಡಿದ ಸಚಿವ ರುದ್ರಪ್ಪ ಲಮಾಣಿ
ಸಾಲದ ಮಿತಿಯನ್ನು 2 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಮತ್ತು 5 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಹೆಚ್ಚಿಸಬೇಕು. ಅಲ್ಲದೆ, ಶೂನ್ಬ ಬಡ್ಡಿ ದರಕ್ಕೆ ಜಿಎಸ್ಟಿ ವಿನಾಯಿತಿ ನೀಡುವಂತೆ ಎಂದು ಮನವಿ ಮಾಡಲಾಗಿದೆ.
ರಾಜ್ಯದ ನೇಕಾರರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ವಿಕಾಸಸೌಧದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಆಯೋಜಿಸಿದ್ದ ನೇಕಾರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಜವಳಿ ಸಚಿವ ರುದ್ರಪ್ಪ ಲಮಾಣಿ ಅವರು, "ನೇಕಾರರ ಬೇಡಿಕೆಗಳನ್ನು ಕ್ರೋಢೀಕರಿಸಿ, ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಹಂತ ಹಂತವಾಗಿ ಪರಿಹಾರ ಕಲ್ಪಿಸಲಾಗುವುದು" ಎಂದು ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ನೇಕಾರರು, ಕೈಮಗ್ಗ ಸಹಕಾರ ಸಂಘಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳೊಂದಿಗೆ ಸಚಿವರು ನೇರ ಸಂವಾದ ನಡೆಸಿದರು. ನೇಕಾರಿಕೆ ವಲಯವು ಕೇವಲ ವೃತ್ತಿಯಲ್ಲ, ಅದು ಕರ್ನಾಟಕದ ಸಾಂಸ್ಕೃತಿಕ ಪರಂಪರೆ. ಈ ವೃತ್ತಿಯನ್ನು ಉಳಿಸಿ ಬೆಳೆಸಲು, ನೇಕಾರರ ಜೀವನೋಪಾಯ, ಸಾಮಾಜಿಕ ಭದ್ರತೆ, ಹಣಕಾಸು ನೆರವು ಮತ್ತು ಮಾರುಕಟ್ಟೆ ಅವಕಾಶಗಳ ಕುರಿತು ಸಮಗ್ರ ಚರ್ಚೆ ನಡೆಯಿತು.
ನೇಕಾರರ ಪ್ರಮುಖ ಬೇಡಿಕೆಗಳು
ಸಂವಾದದಲ್ಲಿ ನೇಕಾರರು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ಸಚಿವರ ಮುಂದೆ ತೆರೆದಿಟ್ಟರು. ನೇಕಾರರಿಗೆ ಶೇ.0 ಹಾಗೂ ಶೇ.3 ಬಡ್ಡಿದರದಲ್ಲಿ ಸಿಗುವ ಸಾಲದ ಮಿತಿಯನ್ನು ಕ್ರಮವಾಗಿ 2 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಮತ್ತು 5 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಹೆಚ್ಚಿಸಬೇಕು. ಅಲ್ಲದೆ, ಶೇ.0 ಬಡ್ಡಿದರದ ಕ್ಲೇಮ್ಗಳಿಗೆ ಜಿಎಸ್ಟಿ ವಿನಾಯಿತಿ ನೀಡಬೇಕು ಎಂಬ ಬೇಡಿಕೆ ಪ್ರಮುಖವಾಗಿತ್ತು. ನೇಕಾರರ ಮಕ್ಕಳಿಗೆ ವಿದ್ಯಾರ್ಥಿವೇತನ, ನೇಕಾರ ಸಮ್ಮಾನ ಯೋಜನೆಯ ನೆರವು ಹೆಚ್ಚಳ, 60 ವರ್ಷ ಮೇಲ್ಪಟ್ಟವರಿಗೆ ಮಾಸಾಶನ ನೀಡುವಿಕೆ ಹಾಗೂ ಕಟ್ಟಡ ಕಾರ್ಮಿಕರಿಗೆ ಇರುವಂತೆ ನೇಕಾರರಿಗೂ ಕಾರ್ಮಿಕ ಕಲ್ಯಾಣ ಸೌಲಭ್ಯಗಳನ್ನು ಒದಗಿಸಬೇಕೆಂದು ಕೋರಲಾಯಿತು. ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಸ್ತಾವನೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಮನವಿ ಮಾಡಲಾಯಿತು. ರಾಜ್ಯ ಸರ್ಕಾರ ನೀಡುತ್ತಿರುವ 10 ಎಚ್ಪಿ ವಿದ್ಯುತ್ ಸಬ್ಸಿಡಿ ನೇಕಾರರಿಗೆ ವರದಾನವಾಗಿದೆ. ಆದರೆ, ಕಳೆದ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸುಮಾರು 9.50 ಕೋಟಿ ರೂಪಾಯಿ ವಿದ್ಯುತ್ ಸಬ್ಸಿಡಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ನೇಕಾರರು ಒತ್ತಾಯಿಸಿದರು. ರಾಜ್ಯದ ಪ್ರಮುಖ ನಗರಗಳಲ್ಲಿ ವರ್ಷಪೂರ್ತಿ ಕೈಮಗ್ಗ ಮೇಳಗಳನ್ನು ಆಯೋಜಿಸುವ ಮೂಲಕ ತಮ್ಮ ಉತ್ಪನ್ನಗಳಿಗೆ ನಿರಂತರ ಮಾರುಕಟ್ಟೆ ಕಲ್ಪಿಸಿಕೊಡಬೇಕೆಂದು ಪ್ರತಿನಿಧಿಗಳು ಮನವಿ ಮಾಡಿದರು.
ಸರ್ಕಾರದ ಸ್ಪಂದನೆ ಹಾಗೂ ಭರವಸೆ
ನೇಕಾರರ ಅಹವಾಲುಗಳನ್ನು ಆಲಿಸಿದ ಸಚಿವ ರುದ್ರಪ್ಪ ಲಮಾಣಿ, ಸರ್ಕಾರವು ನೇಕಾರರ ಹಿತಕಾಯಲು ಬದ್ಧವಾಗಿದೆ ಎಂದು ತಿಳಿಸಿದರು. ಬಾಕಿ ಇರುವ ವಿದ್ಯುತ್ ಬಿಲ್ ಮತ್ತು ಸಬ್ಸಿಡಿ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನೇಕಾರರ ಉತ್ಪನ್ನಗಳಿಗೆ ಸ್ಥಿರ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಗಳು ತಮ್ಮ ಸಮವಸ್ತ್ರ ಹಾಗೂ ಇತರೆ ಬಟ್ಟೆಗಳನ್ನು ಖರೀದಿಸುವಾಗ ಕೆಎಚ್ಡಿಸಿ, ಕೆಎಸ್ಟಿಐಡಿಸಿಎಲ್ ಮತ್ತು ಕಾವೇರಿ ಹ್ಯಾಂಡ್ಲೂಮ್ಸ್ಗೆ ಆದ್ಯತೆ ನೀಡುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಹೊಸ ಜವಳಿ ನೀತಿಯ ಮಹತ್ವ
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಜವಳಿ ನೀತಿಯು ನೇಕಾರರ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿದೆ. ಉತ್ಪಾದನೆ, ಮಾರುಕಟ್ಟೆ ಅವಕಾಶ, ಉದ್ಯಮ ವಿಸ್ತರಣೆ ಮತ್ತು ಇದೇ ಮೊದಲ ಬಾರಿಗೆ ರೇಷ್ಮೆ ವಲಯವನ್ನೂ ಈ ನೀತಿಯ ವ್ಯಾಪ್ತಿಗೆ ತರಲಾಗಿದೆ. "ನೇಕಾರರ ಅಭಿವೃದ್ಧಿ ಕೇವಲ ಸಾಲಕ್ಕೆ ಸೀಮಿತವಾಗಬಾರದು, ಶಿಕ್ಷಣ, ಆರೋಗ್ಯ ಮತ್ತು ಮಾರುಕಟ್ಟೆಯಂತಹ ಸಮಗ್ರ ಬೆಂಬಲ ಸಿಗಬೇಕು ಎಂಬುದು ಸರ್ಕಾರದ ದೃಷ್ಟಿಕೋನ ಎಂದು ವಿವರಿಸಿದರು.

