
ಬೆಂಗಳೂರು ಮೆಟ್ರೋ ಪರ್ಪಲ್ ಲೈನ್ ವ್ಯತ್ಯಯಕ್ಕೆ ತೇಜಸ್ವಿ ಸೂರ್ಯ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು ಮೆಟ್ರೋ ವ್ಯತ್ಯಯ: ರಾಜ್ಯ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ತೀವ್ರ ವಾಗ್ದಾಳಿ
ಬೆಂಗಳೂರು ಮೆಟ್ರೋ ಪರ್ಪಲ್ ಲೈನ್ ವ್ಯತ್ಯಯಕ್ಕೆ ತೇಜಸ್ವಿ ಸೂರ್ಯ ಆಕ್ರೋಶ ಹೊರಹಾಕಿದ್ದು, ನಗರದಲ್ಲಿ ಪ್ರಥಮ ದರ್ಜೆ ತಂತ್ರಜ್ಞಾನ ಪ್ರತಿಭೆ ಮತ್ತು ತೃತೀಯ ದರ್ಜೆ ಆಡಳಿತವಿದೆ ಎಂದು ಸರಾಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಮ್ಮ ಮೆಟ್ರೋ ಸೇವೆಯಲ್ಲಿ ಉಂಟಾದ ತಾಂತ್ರಿಕ ವ್ಯತ್ಯಯ ಮತ್ತು ಸಾರ್ವಜನಿಕರಿಗಾದ ತೊಂದರೆಯನ್ನು ಖಂಡಿಸಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ಬೆಂಗಳೂರಿನ ಆಡಳಿತ ವೈಫಲ್ಯವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಜಾಗತಿಕ ಮಟ್ಟದ ಪ್ರಥಮ ದರ್ಜೆಯ ತಂತ್ರಜ್ಞಾನ ಪ್ರತಿಭೆಗಳಿದ್ದಾರೆ, ಆದರೆ ಇಲ್ಲಿನ ಆಡಳಿತ ಮಾತ್ರ ತೃತೀಯ ದರ್ಜೆಯದ್ದಾಗಿದೆ ಎಂದು ತೇಜಸ್ವಿ ಸೂರ್ಯ ವ್ಯಂಗ್ಯವಾಡಿದ್ದಾರೆ. ಮೆಟ್ರೋ ವ್ಯವಸ್ಥೆ ಹಳಿ ತಪ್ಪಿದಾಗಲೆಲ್ಲಾ ಇಡೀ ನಗರವೇ ಗೊಂದಲದ ಗೂಡಾಗುತ್ತದೆ. ಕ್ಯಾಬ್‌ಗಳು ಸಿಗುವುದಿಲ್ಲ, ಆಟೋ ಚಾಲಕರು ಬರಲು ನಿರಾಕರಿಸುತ್ತಾರೆ ಮತ್ತು ಸಾಮಾನ್ಯ ನಾಗರಿಕರು ರಸ್ತೆಗಳಲ್ಲೇ ಸಿಲುಕಿಕೊಳ್ಳುವಂತಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಪರ್ಪಲ್ ಲೈನ್‌ನ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಸಂಭವಿಸಿದ ತಾಂತ್ರಿಕ ದೋಷದಿಂದಾಗಿ ಮಂಗಳವಾರ ಸಂಜೆ ಸಾವಿರಾರು ಉದ್ಯೋಗಿಗಳು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸಬೇಕಾಯಿತು. ಈ ಪರಿಸ್ಥಿತಿಯನ್ನು ಉಲ್ಲೇಖಿಸಿದ ಸಂಸದರು, ಭಾರತದ ಸಿಲಿಕಾನ್ ವ್ಯಾಲಿಯ ಕಷ್ಟಪಟ್ಟು ದುಡಿಯುವ ವೃತ್ತಿಪರರು ಕೇವಲ ಮನೆ ತಲುಪಲು ಲಾರಿ ಮತ್ತು ಟ್ರಕ್‌ಗಳನ್ನು ಅವಲಂಬಿಸಬೇಕಾಯಿತು. ಇವರೆಲ್ಲರೂ ಮರುದಿನ ಬೆಳಗ್ಗೆ ಎದ್ದು, ಮತ್ತೆ ಕಚೇರಿಗೆ ಹೋಗಿ, ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿ ಇದೇ ಮುರಿದುಬಿದ್ದಿರುವ ವ್ಯವಸ್ಥೆಯನ್ನು ಸಹಿಸಿಕೊಳ್ಳಬೇಕಾದ ದುಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಬೆಂಗಳೂರಿನ ರಸ್ತೆಗಳ ಅಭಿವೃದ್ಧಿಗಾಗಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 5,500 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ನಗರದ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರಾಗಿದ್ದು, ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಸಾರ್ವಜನಿಕರ ತೆರಿಗೆ ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿರುವ ತೇಜಸ್ವಿ ಸೂರ್ಯ, ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮುಂದಿನ 30 ದಿನಗಳ ಒಳಗಾಗಿ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರತಿ ವಾರ್ಡ್ ಮತ್ತು ರಸ್ತೆವಾರು ಕಾಮಗಾರಿಗಳ ವಿವರ, ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮಾಹಿತಿ ಹಾಗೂ ಅದರಿಂದ ಆದ ಪ್ರಗತಿಯನ್ನು ಜನತೆಯ ಮುಂದೆ ಪಾರದರ್ಶಕವಾಗಿ ಇಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇನ್ನು ಈ ತಾಂತ್ರಿಕ ದೋಷದ ಕುರಿತು ಬಿಎಂಆರ್‌ಸಿಎಲ್ ಸ್ಪಷ್ಟನೆ ನೀಡಿದ್ದು, ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ರೈಲೊಂದರಲ್ಲಿ ಕಾಣಿಸಿಕೊಂಡಿದ್ದ ಸಮಸ್ಯೆಯನ್ನು ಬುಧವಾರ ಮುಂಜಾನೆ 4 ಗಂಟೆಯ ಸುಮಾರಿಗೆ ದುರಸ್ತಿ ಮಾಡಲಾಗಿದೆ ಎಂದು ತಿಳಿಸಿದೆ. ಜೊತೆಗೆ, ಈ ಅನಿವಾರ್ಯ ವ್ಯತ್ಯಯದಿಂದ ಪ್ರಯಾಣಿಕರಿಗಾದ ತಾತ್ಕಾಲಿಕ ಅನನುಕೂಲತೆಗೆ ಸಂಸ್ಥೆಯು ವಿಷಾದ ವ್ಯಕ್ತಪಡಿಸಿದೆ.

