ತ.ನಾಡು ಉದ್ಯಮಿಗೆ ಬಿಐಎಎಲ್‌ ಬೋರ್ಡಿಂಗ್‌ ನಿರಾಕರಣೆ; ಡಚ್‌ ಏರ್‌ಲೈನ್ಸ್‌  ವಿರುದ್ಧ ಎಫ್ಐಆರ್
x
ರಾಯಲ್‌ ಡಚ್‌ ಏರ್‌ಲೈನ್ಸ್‌

ತ.ನಾಡು ಉದ್ಯಮಿಗೆ ಬಿಐಎಎಲ್‌ ಬೋರ್ಡಿಂಗ್‌ ನಿರಾಕರಣೆ; ಡಚ್‌ ಏರ್‌ಲೈನ್ಸ್‌ ವಿರುದ್ಧ ಎಫ್ಐಆರ್

ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯಾ ವೀಸಾ ಇದ್ದರೂ ಏರ್‌ಲೈನ್ಸ್‌ ಸಿಬ್ಬಂದಿ ಅದನ್ನು ಪರಿಗಣಿಸದೇ ತಾಂತ್ರಿಕ ನೆಪ ಹೇಳಿ ಪ್ರಯಾಣ ತಡೆದಿದ್ದರು. ಇದನ್ನು ಪ್ರಶ್ನಿಸಿದಕ್ಕಾಗಿ ಉದ್ಯಮಿ ಕುಟುಂಬವನ್ನು ರೆಡ್‌ಫ್ಲ್ಯಾಗ್‌ ಪಟ್ಟಿಗೆ ಸೇರಿಸಲಾಗಿತ್ತು.


ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೆರು ದೇಶದ ಪ್ರವಾಸ ಕೈಗೊಂಡಿದ್ದ ತಮಿಳುನಾಡಿನ ಉದ್ಯಮಿ ಕುಟುಂಬಕ್ಕೆ ಬೋರ್ಡಿಂಗ್ ನಿರಾಕರಿಸಿ, ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಕೆಎಲ್ಎಂ ರಾಯಲ್ ಡಚ್ ಏರ್‌ಲೈನ್ಸ್‌ ಸಂಸ್ಥೆಯ ಉನ್ನತ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ದೇವನಹಳ್ಳಿಯ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ.

ತಮಿಳುನಾಡಿನ ಸೇಲಂ ಮೂಲದ ವೈದ್ಯಕೀಯ ಸಂಸ್ಥೆಯೊಂದರ ಅಧ್ಯಕ್ಷ ಜೆ.ಎಸ್. ಸತೀಶ್ ಕುಮಾರ್ ಅವರು 2024 ಜೂನ್ 19 ರಂದು ಕುಟುಂಬದ 8 ಸದಸ್ಯರೊಂದಿಗೆ ಪೆರು ಪ್ರವಾಸಕ್ಕೆ ಸಜ್ಜಾಗಿದ್ದರು. ಇದಕ್ಕಾಗಿ 49 ಲಕ್ಷ ರೂ.ವೆಚ್ಚದಲ್ಲಿ ಬಿಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದರು. ಅಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಏರಲು ಬಂದಾಗ ಏರ್‌ಲೈನ್ಸ್ ಸಿಬ್ಬಂದಿ, ಪೆರು ವೀಸಾ ಇಲ್ಲವೆಂಬ ಕಾರಣ ನೀಡಿ ಪ್ರಯಾಣಕ್ಕೆ ತಡೆ ಒಡ್ಡಿದ್ದರು.

ಅಂತರಾಷ್ಟ್ರೀಯ ಪ್ರವಾಸೋದ್ಯಮ ನಿಯಮಗಳ ಪ್ರಕಾರ, ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಅಥವಾ ಷೆಂಗೆನ್ ದೇಶಗಳ ವೀಸಾ ಹೊಂದಿರುವ ಹೊಂದಿರುವ ಭಾರತೀಯರು, ಪೆರು ದೇಶಕ್ಕೆ ವೀಸಾಮುಕ್ತ ಪ್ರವೇಶ ಪಡೆಯಬಹುದಾಗಿದೆ. ಸತೀಶ್ ಕುಮಾರ್ ಕುಟುಂಬದ ಬಳಿ ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯಾ ವೀಸಾ ಇದ್ದರೂ ಏರ್‌ಲೈನ್ಸ್‌ ಸಿಬ್ಬಂದಿ ಅದನ್ನು ಪರಿಗಣಿಸದೇ ತಾಂತ್ರಿಕ ಕಾರಣ ಹೇಳಿ ಪ್ರಯಾಣ ತಡೆದಿದ್ದರು. ಇದನ್ನು ಪ್ರಶ್ನಿಸಿದ ಕುಟುಂಬದ ಸದಸ್ಯರನ್ನು ರೆಡ್‌ಫ್ಲ್ಯಾಗ್‌ ಪಟ್ಟಿಗೆ ಸೇರಿಸಲಾಗಿತ್ತು.

ರೆಡ್ ಫ್ಲ್ಯಾಗ್‌ನಿಂದ ಕುಟುಂಬಕ್ಕೆ ಕಿರುಕುಳ

ಕೆಎಲ್‌ಎಂ ಏರ್‌ಲೈನ್ಸ್‌ ಸಿಬ್ಬಂದಿಯ ಕ್ರಮ ಪ್ರಶ್ನಿಸಿದ ಕುಟುಂಬದವರ ಹೆಸರನ್ನು ಇಂಟರ್ನಲ್ ರೆಡ್ ಫ್ಲ್ಯಾಗ್ ಪಟ್ಟಿಗೆ ಸೇರಿಸಲಾಗಿತ್ತು. ಇದರಿಂದ ಸತೀಶ್‌ಕುಮಾರ್‌ ಅವರ ಪುತ್ರ ಸಿಂಗಾಪುರಕ್ಕೆ ತೆರಳಿದಾಗ ಪೆರುನಿಂದ ಗಡಿಪಾರು ಮಾಡಲಾಗಿದೆ ಎಂಬ ತಪ್ಪು ಮಾಹಿತಿ ಆಧಾರದ ಮೇಲೆ ವಿಚಾರಣೆಗೆ ಗುರಿಪಡಿಸಲಾಗಿತ್ತು. ಇದರಿಂದ ಮಾನಸಿಕವಾಗಿ ನೊಂದ ಆ ಕುಟುಂಬವು ದೇವನಹಳ್ಳಿ ಸಿವಿಲ್‌ ನ್ಯಾಯಾಲಯದ ಮೊರೆ ಹೋಗಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಕೆಎಲ್‌ಎಂ ಏರ್‌ಲೈನ್ಸ್‌ ಸಂಸ್ಥೆಯ ಸಿಇಒ ಹಾಗೂ ಸಿಒಒ ಸೇರಿ ಉನ್ನತಾಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿದೆ.

ಏನಿದು ರೆಡ್ ಫ್ಲ್ಯಾಗ್?

ಇದು ಅಂತರಾಷ್ಟ್ರೀಯ ವಲಸೆ ಡೇಟಾಬೇಸ್‌ನಲ್ಲಿ ಪ್ರಯಾಣಿಕನ ವಿರುದ್ಧ ನೀಡಲಾಗುವ ಡಿಜಿಟಲ್ ಎಚ್ಚರಿಕೆಯಾಗಿದೆ. ರೆಡ್‌ಫ್ಲ್ಯಾಗ್‌ ಪಟ್ಟಿಗೆ ಸೇರಿದ ವ್ಯಕ್ತಿಯನ್ನು ಅಪಾಯಕಾರಿ ಅಥವಾ ನಿಯಮ ಉಲ್ಲಂಘಿಸಿದವ ಎಂದು ಪರಿಗಣಿಸಲಾಗುತ್ತದೆ.

ತಮಿಳುನಾಡಿನ ಸತೀಶ್ ಕುಮಾರ್ ಕುಟುಂಬ ಸದಸ್ಯರನ್ನು ರೆಡ್‌ಫ್ಲ್ಯಾಗ್‌ ಪಟ್ಟಿಗೆ ಸೇರಿಸಿದ ಹಿನ್ನೆಲೆ ಅವರ ಮಗ ಸಿಂಗಾಪುರಕ್ಕೆ ತೆರಳಿದಾಗ ವಿಮಾನ ನಿಲ್ದಾಣದಲ್ಲಿ ವಿಚಾರಣೆ ನಡೆಸಿ ಅವಮಾನಿಸಲಾಗಿತ್ತು. ಇದರಿಂದ ತಮಗಾದ ಆರ್ಥಿಕ ನಷ್ಟ ಹಾಗೂ ಅವಮಾನದ ವಿರುದ್ಧ ಸತೀಶ್ ಕುಮಾರ್ ಅವರು ದೇವನಹಳ್ಳಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದರು.

ಪೆರು ವೀಸಾ ನಿಯಮ ಹೇಗಿದೆ?

ಭಾರತೀಯರು ಅಂತರಾಷ್ಟ್ರೀಯ ಪ್ರವಾಸ ಕೈಗೊಳ್ಳುವಾಗ ವೀಸಾ ನಿಯಮಗಳ ಅರಿವು ಮುಖ್ಯವಾಗುತ್ತದೆ. ಕನಿಷ್ಠ 6 ತಿಂಗಳ ಮಾನ್ಯತೆ ಇರುವ ಅಮೆರಿಕ, ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ ಅಥವಾ ಷೆಂಗೆನ್ ವಲಯದ ದೇಶಗಳ ವೀಸಾ ಹೊಂದಿದ್ದರೆ ಪೆರುಗೆ ವೀಸಾ ಅಗತ್ಯ ಇರುವುದಿಲ್ಲ.

ಅಲ್ಲದೇ ಈ ಮೇಲಿನ ದೇಶಗಳ ಅಥವಾ ಚಿಲಿ, ಕೊಲಂಬಿಯಾ, ಮೆಕ್ಸಿಕೋ ದೇಶಗಳ ಕಾಯಂ ನಿವಾಸಿ ಕಾರ್ಡ್ ಹೊಂದಿದ್ದರೂ ವೀಸಾ ಅಗತ್ಯ ಇರುವುದಿಲ್ಲ. ಈ ನಿಯಮದಡಿ ಭಾರತೀಯ ಪ್ರವಾಸಿಗರು ಗರಿಷ್ಠ 180 ದಿನಗಳವರೆಗೆ ಪೆರುನಲ್ಲಿ ಉಳಿಯಬಹುದಾಗಿದೆ.

Read More
Next Story