
ಶತಮಾನದ ಸುಗಂಧಕ್ಕೆ 'ಪ್ಯಾನ್ ಇಂಡಿಯಾ' ಗ್ಲಾಮರ್ ಸ್ಪರ್ಶ: ಮೈಸೂರು ಸ್ಯಾಂಡಲ್ ಕುಟುಂಬ ಸೇರಿದ ತಮನ್ನಾ
ಕನ್ನಡಿಗರ ವಿರೋಧದ ನಡುವೆಯೂ ನಟಿ ತಮನ್ನಾ ಭಾಟಿಯಾ ಮೈಸೂರು ಸ್ಯಾಂಡಲ್ ರಾಯಭಾರಿಯಾಗಿದ್ದು, ಇದೀಗ ಅಧಿಕೃತವಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. 28.3 ಮಿಲಿಯನ್ ಫಾಲೋರ್ಸ್ ಮಾನದಂಡದ ಮೇಲೆ ಆಯ್ಕೆಯಾಗಿದ್ದಾರೆ.
ಶತಮಾನದ ಇತಿಹಾಸ ಇರುವ ರಾಜ್ಯದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಇತರೆ ಉತ್ಪಾದಕಗಳು ಪಾರಂಪರಿಕ ಶೈಲಿಯ ಜತೆಗೆ ಆಧುನಿಕತೆಯ ಸ್ಪರ್ಶದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಪಾರಂಪರಿಕ ಬ್ರ್ಯಾಂಡ್ಗೆ ಹೊಸ ಕಳೆ ನೀಡಲು ಸರ್ಕಾರ ಮತ್ತು ಮಾರುಕಟ್ಟೆ ಪರಿಣಿತರ ಸಮಿತಿಯು ಕನ್ನಡಿಗರ ತೀವ್ರ ವಿರೋಧದ ನಡುವೆಯೂ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ. ಇದೀಗ ವಿದ್ಯುಕ್ತವಾಗಿ ಮೈಸೂರು ಸ್ಯಾಂಡಲ್ ಸೋಪ್ನ ರಾಯಭಾರಿಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅಧಿಕೃತವಾಗಿ ಜಾಹೀರಾತು ಪ್ರಕಟಗೊಂಡಿದೆ.
ಇಂದಿನ ಕಾಲದಲ್ಲಿ ಮಾರುಕಟ್ಟೆ ಕೇವಲ ಟಿವಿ ಜಾಹೀರಾತುಗಳಿಗೆ ಸೀಮಿತವಾಗಿಲ್ಲ. ಇನ್ಸ್ಟಾಗ್ರಾಮ್, ಫೇಸ್ಬುಕ್, ಟ್ವಿಟರ್ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಯಾರಿಗೆ ಹೆಚ್ಚಿನ ಪ್ರಭಾವವಿದೆ ಎಂಬುದು ಮುಖ್ಯವಾಗುತ್ತದೆ. ತಮನ್ನಾ ಭಾಟಿಯಾ ಸಾಮಾಜಿಕ ಜಾಲತಾಣದಲ್ಲಿ 28.3 ಮಿಲಿಯನ್ ಫಾಲೋರ್ಸ್ ಹೊಂದಿದ್ದಾರೆ. ಇದನ್ನು ಮಾನದಂಡವಾಗಿ ಪರಿಗಣಿಸಿ ಸರ್ಕಾರ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದೆ. ಅಲ್ಲದೇ, ಅವರ ಅಭಿಮಾನಿ ಬಳಗ ದಕ್ಷಿಣ ಭಾರತ ಮಾತ್ರವಲ್ಲದೆ, ಉತ್ತರ ಭಾರತದ ಹಿಂದಿ ಮಾರುಕಟ್ಟೆಯಲ್ಲೂ ವ್ಯಾಪಕವಾಗಿದೆ. ಯುವ ಪೀಳಿಗೆಯನ್ನು ತಲುಪಲು ಇಂತಹ 'ಪ್ಯಾನ್ ಇಂಡಿಯಾ' ಫೇಸ್ ಅವಶ್ಯಕ ಎಂಬುದು ಅಭಿಪ್ರಾಯವಾಗಿತ್ತು. ಹೀಗಾಗಿ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವ ಎಂ. ಬಿ ಪಾಟೀಲ್ ಅವರು ಹೇಳಿದ್ದಾರೆ. ಈ ಮೂಲಕ ಅವರು ಕರ್ನಾಟಕದ ನಟಿಯರನ್ನು ಆಯ್ಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
ಕರ್ನಾಟಕದ ಬ್ರ್ಯಾಂಡ್ ಆಗಿರುವ ಮೈಸೂರು ಸ್ಯಾಂಡಲ್ಗೆ ಕನ್ನಡದ ನಟಿಯನ್ನೇ ಯಾಕೆ ಆಯ್ಕೆ ಮಾಡಲಿಲ್ಲ ಎಂಬುದು ಪ್ರಮುಖ ಪ್ರಶ್ನೆಯಾಗಿತ್ತು. ಕೇವಲ ಎರಡು ವರ್ಷ ಮತ್ತು ಎರಡು ದಿನಗಳ ಅವಧಿಗೆ 6.20 ಕೋಟಿ ರೂ. ಸಂಭಾವನೆ ನೀಡುವುದು ಸಾರ್ವಜನಿಕ ಹಣದ ಪೋಲು ಎಂಬ ಟೀಕೆಗಳು ವ್ಯಾಪಕವಾಗಿ ಕೇಳಿಬಂದಿತ್ತು. ಆದರೆ, ಸರ್ಕಾರ ಮತ್ತು ಕೆ.ಎಸ್.ಡಿ.ಎಲ್ ವ್ಯವಸ್ಥಾಪಕ ಮಂಡಳಿಯು ಈ ಆಯ್ಕೆಯನ್ನು ಮಾರುಕಟ್ಟೆಯ ದೃಷ್ಟಿಕೋನದಿಂದ ಸಮರ್ಥಿಸಿಕೊಂಡಿದೆ. ಇದು ಕೇವಲ ಒಂದು ಪ್ರಾದೇಶಿಕ ಉತ್ಪನ್ನವಲ್ಲ, ಬದಲಿಗೆ ಜಾಗತಿಕ ಬ್ರ್ಯಾಂಡ್ ಆಗಿ ಬೆಳೆಯಬೇಕಾದ ಅವಶ್ಯಕತೆಯಿದೆ ಎಂಬುದಾಗಿ ಸರ್ಕಾರ ಸ್ಪಷ್ಟನೆ ನೀಡಿದೆ.
1,785 ಕೋಟಿ ರೂ. ವಹಿವಾಟು
ಕೆಎಸ್ಡಿಎಲ್ನ ವಹಿವಾಟಿನ ಅಂಕಿ-ಅಂಶಗಳ ಪ್ರಕಾರ 2024-25ನೇ ಸಾಲಿನಲ್ಲಿ ಸಂಸ್ಥೆಯು 1,785 ಕೋಟಿ ವಹಿವಾಟು ನಡೆಸಿದೆ. ಈ ವ್ಯವಹಾರದಲ್ಲಿ ಕರ್ನಾಟಕದ ಪಾಲು ಕೇವಲ ಶೇ. 18 ರಷ್ಟಿದೆ. ಸಂಸ್ಥೆಯ ಶೇ. 82ರಷ್ಟು ವ್ಯವಹಾರವು ಹೊರರಾಜ್ಯ ಮತ್ತು ವಿದೇಶಗಳಿಂದ ಬರುತ್ತಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದ ಹೊರಗಿನ ಮಾರುಕಟ್ಟೆಯನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸಲು ಹೊರರಾಜ್ಯಗಳಲ್ಲೂ ಜನಪ್ರಿಯವಾಗಿರುವ ನಟಿಯೊಬ್ಬರ ಅಗತ್ಯವಿತ್ತು ಎಂಬುದು ಸರ್ಕಾರದ ಸಮರ್ಥನೆ.
2030ರ ವೇಳೆಗೆ 5 ಸಾವಿರ ಕೋಟಿ ರು. ಗುರಿ
108 ವರ್ಷಗಳ ಇತಿಹಾಸವಿರುವ ಮೈಸೂರು ಸ್ಯಾಂಡಲ್ ಸೋಪ್ ಈಗ ತನ್ನ ಮುಂದಿನ ಗುರಿಯನ್ನು ಸ್ಪಷ್ಟಪಡಿಸಿಕೊಂಡಿದೆ. 2030ರ ವೇಳೆಗೆ ಸಂಸ್ಥೆಯ ವಹಿವಾಟನ್ನು 5 ಸಾವಿರ ಕೋಟಿ ರೂ.ಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ. ಈ ಗುರಿಯನ್ನು ತಲುಪಲು ಕೇವಲ ಹಳೆಯ ಸಾಬೂನು ಮಾದರಿಯಿಂದ ಸಾಧ್ಯವಿಲ್ಲ. ಇದಕ್ಕಾಗಿ ಸಂಸ್ಥೆಯು 'ಫೇಸ್ ವಾಶ್', ಹ್ಯಾಂಡ್ ವಾಶ್ ಮತ್ತು ಆಧುನಿಕ ಕಾಸ್ಮೆಟಿಕ್ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದೆ. ಆಧುನಿಕ ಉತ್ಪನ್ನಗಳಿಗೆ ಗ್ಲಾಮರ್ ಜಗತ್ತಿನ ಮುಖವೊಂದು ಬೇಕಿತ್ತು ಎಂಬುದು ವ್ಯವಹಾರದ ತಂತ್ರಗಾರಿಕೆ ಎಂದು ಹೇಳಲಾಗಿದೆ.
ಕಾರ್ಖಾನೆಗೆ ಭೇಟಿ
ಮಂಗಳವಾರ ಬೆಂಗಳೂರಿನಲ್ಲಿರುವ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿಗೆ ತಮನ್ನಾ ಭಾಟಿಯಾ ಭೇಟಿ ನೀಡುವ ಮೂಲಕ ತಮ್ಮ ಜವಾಬ್ದಾರಿಯನ್ನು ಅಧಿಕೃತವಾಗಿ ಆರಂಭಿಸಿದ್ದಾರೆ. ಕೇವಲ ಪರದೆಯ ಮೇಲೆ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ, ಉತ್ಪನ್ನದ ತಯಾರಿಕೆ ಮತ್ತು ಅದರ ಪಾರಂಪರಿಕ ಹಿನ್ನೆಲೆಯನ್ನು ಅರಿತುಕೊಳ್ಳುವುದು ಈ ಭೇಟಿಯ ಉದ್ದೇಶವಾಗಿತ್ತು. ಈ ಮೂಲಕ ಗ್ರಾಹಕರಲ್ಲಿ ಬ್ರ್ಯಾಂಡ್ ಬಗ್ಗೆ ನಂಬಿಕೆ ಮೂಡಿಸಲು ಸಂಸ್ಥೆ ಮುಂದಾಗಿದೆ.
57 ಹೊಸ ಉತ್ಪನ್ನಗಳಿಗೆ ಚಾಲನೆ
ಕೆಎಸ್ಡಿಎಲ್ ಕೇವಲ ಸೋಪ್ಗಳಿಗೆ ಮಾತ್ರ ಸೀಮಿತವಾಗಿದ್ದ ಕಾಲ ಕಳೆದುಹೋಗಿದೆ. ಸಂಸ್ಥೆಯು ಮಾರುಕಟ್ಟೆಯ ಬೇಡಿಕೆಯನ್ನು ಅರಿತು ಬರೋಬ್ಬರಿ 57 ಹೊಸ ಉತ್ಪನ್ನಗಳನ್ನು ಪರಿಚಯಿಸಿದೆ. ಈ ಹಿಂದೆ 32 ಉತ್ಪನ್ನಗಳಿದ್ದ ಪಟ್ಟಿಗೆ ಈಗ ಸೋಪ್, ಮಾರ್ಜಕ , ಬಾಡಿವಾಶ್, ವಿವಿಧ ಸೌಂದರ್ಯವರ್ಧಕಗಳು, ಟಾಲ್ಕಂ ಪೌಡರ್, ಅಗರಬತ್ತಿಗಳು, ಧೂಪ್ ಹಾಗೂ ಪರಿಶುದ್ಧ ಕೊಬ್ಬರಿ ಎಣ್ಣೆಯಂತಹ ಜೀವನಶೈಲಿಯ ಉತ್ಪನ್ನಗಳು ಸೇರ್ಪಡೆಯಾಗಿವೆ. ಇದು ಸಂಸ್ಥೆಯ ಮಾರುಕಟ್ಟೆ ವಿಸ್ತರಣೆಗೆ ಕೈಗೊಂಡಿರುವ ಕ್ರಮವನ್ನು ಬಿಂಬಿಸಿದೆ. 57 ಹೊಸ ಉತ್ಪನ್ನಗಳಿಗೆ ತಮನ್ನಾ ಭಾಟಿಯಾ ಚಾಲನೆ ನೀಡಿದರು. ಸಂಸ್ಥೆಯ ಉತ್ಪನ್ನವಾದ ಫೇಸ್ ವಾಶ್ ಮತ್ತು ಇತರ ಸೌಂದರ್ಯವರ್ಧಕಗಳ ಪ್ರಚಾರಕ್ಕಾಗಿ ತಮನ್ನಾ ಅವರನ್ನು ನಿಯೋಜಿಸಲಾಗಿದೆ. ಅವರ ಜನಪ್ರಿಯತೆಯ ಮೂಲಕ ಮೈಸೂರು ಸ್ಯಾಂಡಲ್ನ ಗುಣಮಟ್ಟವನ್ನು ವಿಶ್ವದಾದ್ಯಂತ ತಲುಪಿಸುವುದು ಮತ್ತು ಯುವ ಗ್ರಾಹಕರನ್ನು ಸಂಸ್ಥೆಯತ್ತ ಆಕರ್ಷಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಟಿ ತಮನ್ನಾ ಭಾಟಿಯಾ, ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಎಂದು ಹೇಳುವ ಮೂಲಕ ಮಾತು ಆರಂಭಿಸಿದರು. ಮೈಸೂರು ಸ್ಯಾಂಡಲ್ ಸೋಪ್ನ ನೂತನ ರಾಯಭಾರಿಯಾಗಿ ಆಯ್ಕೆಯಾಗಿರುವುದು ನನ್ನ ವೃತ್ತಿಜೀವನದ ಹೊಸ ಅಧ್ಯಾಯ. ಈ ಪಾರಂಪರಿಕ ಬ್ರ್ಯಾಂಡ್ನೊಂದಿಗೆ ಗುರುತಿಸಿಕೊಳ್ಳುತ್ತಿರುವುದು ತಮಗೆ ಸಂದ ಗೌರವ. ಕೆಎಸ್ಡಿಎಲ್ ಕುಟುಂಬದ ಭಾಗವಾಗಿರುವುದು ತಮಗೆ ಸಿಕ್ಕ ದೊಡ್ಡ ಗೌರವ ಮತ್ತು ಹೆಮ್ಮೆಯ ವಿಷಯವಾಗಿದೆ. ಚಿತ್ರರಂಗದಲ್ಲಿ ಕಳೆದ 20 ವರ್ಷಗಳ ಪಯಣವು ಪ್ರೇಕ್ಷಕರು, ದೇಶ ಮತ್ತು ಜಗತ್ತಿನಾದ್ಯಂತ ಇರುವ ಭಾರತೀಯರು ನೀಡಿದ ನಿರಂತರ ಬೆಂಬಲದಿಂದಲೇ ಸಾಧ್ಯವಾಗಿದೆ. ತಮ್ಮ ವೃತ್ತಿಜೀವನದಲ್ಲಿ ಇದು ಒಂದು ಹೊಸ ಅಧ್ಯಾಯವಾಗಿದ್ದು, ಹೊಸ ಜವಾಬ್ದಾರಿಗಳೊಂದಿಗೆ ಮೈಸೂರು ಸ್ಯಾಂಡಲ್ ಸೋಪ್ನ ರಾಯಭಾರಿಯಾಗಿ ಗುರುತಿಸಿಕೊಳ್ಳಲು ತುಂಬಾ ಸಂತೋಷವಾಗಿದೆ ಎಂದು ಹೇಳಿದರು.
ಮೈಸೂರು ಸ್ಯಾಂಡಲ್ ಸೋಪ್ ಮಾರುಕಟ್ಟೆಯಲ್ಲಿ ದಶಕಗಳಿಂದ ತನ್ನ ಪ್ರಾಬಲ್ಯ ಉಳಿಸಿಕೊಂಡು ಬಂದಿದೆ. ಸೋಪನ್ನು ಅತ್ಯಂತ ನೈಜತೆ ಮತ್ತು ಸತ್ಯದಿಂದ ತಯಾರಿಸಲಾಗಿದೆ. "ಸತ್ಯ" ಎಂಬುದು ಎಂದಿಗೂ ಬದಲಾಗದ ಸಂಗತಿ. ಇದೇ ಈ ಬ್ರ್ಯಾಂಡ್ನ ಮೂಲ ತತ್ವ ಮತ್ತು ಇದು ಮಾರುಕಟ್ಟೆಯಲ್ಲಿ ಶಾಶ್ವತವಾಗಿ ಉಳಿಯಲು ಕಾರಣ. ಎಷ್ಟೇ ಹೊಸ ತಂತ್ರಜ್ಞಾನ ಬರಲಿ ಅಥವಾ ಎಷ್ಟೇ ಹೊಸ ಬ್ರ್ಯಾಂಡ್ಗಳು ಮಾರುಕಟ್ಟೆಗೆ ಬರಲಿ, ಜನರ ಹೃದಯದಲ್ಲಿ ಮೈಸೂರು ಸ್ಯಾಂಡಲ್ ಸೋಪ್ಗೆ ಇರುವ ಸ್ಥಾನ ಬಹಳ ದೊಡ್ಡದು ಮತ್ತು ವಿಶೇಷವಾದುದು. ಸೋಪಿನ ಸುಗಂಧ ಮತ್ತು ಗುಣಮಟ್ಟ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಬಣ್ಣಿಸಿದರು.

