ಟಿ. ನರಸೀಪುರ ಗಣೇಶೋತ್ಸವ ವಿವಾದ ಮತ್ತಷ್ಟು ತೀವ್ರ; ಸೆ.18ರಂದು ಶೋಭಾಯಾತ್ರೆಗೆ ಸಿದ್ಧತೆ
x

ಟಿ. ನರಸೀಪುರ ಗಣೇಶೋತ್ಸವ ವಿವಾದ ಮತ್ತಷ್ಟು ತೀವ್ರ; ಸೆ.18ರಂದು ಶೋಭಾಯಾತ್ರೆಗೆ ಸಿದ್ಧತೆ

ಶೋಭಾಯಾತ್ರೆಯಲ್ಲಿ ಸುಮಾರು 5 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಮೈಸೂರು ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.


Click the Play button to hear this message in audio format

ಟಿ. ನರಸೀಪುರದಲ್ಲಿ ಗಣೇಶೋತ್ಸವಕ್ಕೆ ಸಂಬಂಧಿಸಿದ ವಿವಾದ ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಅವರ ಹೇಳಿಕೆ ಹಾಗೂ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ನಿಯಮಗಳ ವಿಚಾರ ಇದೀಗ ರಾಜಕೀಯ ಹಾಗೂ ಸಂಘಟನೆಗಳ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ.

ಈ ನಡುವೆ ಹಿಂದೂ ಜಾಗರಣ ವೇದಿಕೆ ಪೊಲೀಸ್ ಠಾಣೆಯಿಂದ ಸುಮಾರು 200 ಮೀಟರ್ ಅಂತರದಲ್ಲೇ ಹಿಂದೂ ಮಹಾಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದೆ. ಇದಲ್ಲದೆ, ಸೆಪ್ಟೆಂಬರ್ 18ರಂದು ಲಿಂಕ್ ರಸ್ತೆಯಲ್ಲಿ ಹಿಂದೂ ಶೋಭಾಯಾತ್ರೆ ನಡೆಸಲು ಸಂಘಟನೆ ನಿರ್ಧರಿಸಿದೆ.

ಹಿಂದೂ ಜಾಗರಣ ವೇದಿಕೆಯ ಮಹೇಶ್ ಈ ಕುರಿತು ಮಾಹಿತಿ ನೀಡಿದ್ದು, ಶೋಭಾಯಾತ್ರೆಯಲ್ಲಿ ಸುಮಾರು 5 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಮೈಸೂರು ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಅವರ ಗಮನಕ್ಕೆ ಶೋಭಾಯಾತ್ರೆ ಬರಲಿ ಎಂಬ ರೀತಿಯಲ್ಲಿ ಸಂಘಟನೆ ಮುಖಂಡರು ಹೇಳಿಕೆ ನೀಡಿದ್ದು, ಸೆಪ್ಟೆಂಬರ್ 18ರ ಕಾರ್ಯಕ್ರಮದ ಕುರಿತು ಕುತೂಹಲ ಹೆಚ್ಚಾಗಿದೆ. ಮಸೀದಿ ಮುಂಭಾಗದಿಂದ ಗಣೇಶೋತ್ಸವ ಮೆರವಣಿಗೆ ಸಾಗಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಎಚ್ಚರಿಕೆ ನೀಡಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ವಿವಾದ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಗಣೇಶ ಭಕ್ತರಿಗೆ ಇನ್ಸ್‌ಪೆಕ್ಟರ್ ಎಚ್ಚರಿಕೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ಮುಂದುವರಿದಿವೆ. ಗಣೇಶೋತ್ಸವ ಮೆರವಣಿಗೆ ವಿಚಾರ ಇದೀಗ ಎರಡೂ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿರುವಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 18ರಂದು ನಡೆಯಲಿರುವ ಹಿಂದೂ ಶೋಭಾಯಾತ್ರೆ ಪ್ರಮುಖ ಬೆಳವಣಿಗೆಯಾಗಿ ಪರಿಣಮಿಸಿದ್ದು, ಅಂದು ಪೊಲೀಸರು ಕೈಗೊಳ್ಳುವ ಕ್ರಮಗಳು ಹಾಗೂ ಸಂಘಟನೆಗಳ ಮುಂದಿನ ನಡೆ ಇದೀಗ ಕುತೂಹಲ ಮೂಡಿಸಿದೆ.

Read More
Next Story