ಸುಪ್ರೀಂನಲ್ಲಿ ಬಾಕಿ ಇರುವ 400 ಪ್ರಕರಣಗಳ ಇತ್ಯರ್ಥಕ್ಕೆ ರಾಜ್ಯ ಸರ್ಕಾರದ ಸಿದ್ಧತೆ
x

ಸುಪ್ರೀಂನಲ್ಲಿ ಬಾಕಿ ಇರುವ 400 ಪ್ರಕರಣಗಳ ಇತ್ಯರ್ಥಕ್ಕೆ ರಾಜ್ಯ ಸರ್ಕಾರದ ಸಿದ್ಧತೆ

ಸರ್ವೋಚ್ಚ ನ್ಯಾಯಾಲಯವು ಆಗಸ್ಟ್ 21 ರಿಂದ 23 ರವರೆಗೆ ಮೂರು ದಿನಗಳ ಕಾಲ ಸಮಾಧಾನ ಸಮರೋಹ ಎಂಬ ವಿಶೇಷ ಲೋಕ್ ಅದಾಲತ್ ಅನ್ನು ಹಮ್ಮಿಕೊಂಡಿದೆ.


Click the Play button to hear this message in audio format

ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ದೀರ್ಘಕಾಲದವರೆಗೆ ಬಾಕಿ ಉಳಿದಿರುವ ಪ್ರಕರಣಗಳನ್ನು ಸ್ನೇಹಪೂರ್ಣವಾಗಿ ಮತ್ತು ತ್ವರಿತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಆಗಸ್ಟ್ 21 ರಿಂದ 23 ರವರೆಗೆ ಮೂರು ದಿನಗಳ ಕಾಲ ಸಮಾಧಾನ ಸಮರೋಹ ಎಂಬ ವಿಶೇಷ ಲೋಕ್ ಅದಾಲತ್ ಅನ್ನು ಹಮ್ಮಿಕೊಂಡಿದೆ. ಈ ಅವಕಾಶವನ್ನು ಬಳಸಿಕೊಂಡು ರಾಜ್ಯ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ತನ್ನ ಇಲಾಖೆಗಳಿಗೆ ಸಂಬಂಧಿಸಿದ ನೂರಾರು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದಾಗಿದೆ.

ಈ ಕುರಿತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು, ಈ ವಿಶೇಷ ಲೋಕ್ ಅದಾಲತ್ ಅನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವಂತೆ ಮತ್ತು ಬಾಕಿ ಇರುವ ಪ್ರಕರಣಗಳಿಗೆ ಮುಕ್ತಿ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಸರ್ವೋಚ್ಚ ನ್ಯಾಯಾಲಯದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪ್ರಕರಣಗಳನ್ನು ಕಾನೂನು ಹೋರಾಟದ ದಾರಿಗಿಂತ, ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದು ಎಲ್ಲರಿಗೂ ಹಿತಕರ. ಸಮಾಧಾನ ಸಮರೋಹವು ಸರ್ಕಾರ ಮತ್ತು ಸಾರ್ವಜನಿಕರಿಗೆ ಒಂದು ಸುವರ್ಣಾವಕಾಶವಾಗಿದೆ. ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಗುರುತಿಸಿ, ಅವುಗಳನ್ನು ಲೋಕ್ ಅದಾಲತ್‌ನಲ್ಲಿ ನೋಂದಾಯಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

ಪ್ರಕರಣಗಳ ವಿಶ್ಲೇಷಣೆ

ಸಭೆಯಲ್ಲಿ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಕರ್ನಾಟಕ ಸರ್ಕಾರಕ್ಕೆ ಸಂಬಂಧಿಸಿದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಇದರಲ್ಲಿ ಸುಮಾರು 400 ಪ್ರಕರಣಗಳನ್ನು ಈ ವಿಶೇಷ ಲೋಕ್ ಅದಾಲತ್ ಮೂಲಕ ಸುಲಭವಾಗಿ ಮತ್ತು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ಅವಕಾಶವಿದೆ ಎಂದು ಮುಖ್ಯ ಕಾರ್ಯದರ್ಶಿಗಳು ಅಭಿಪ್ರಾಯಪಟ್ಟರು. ನಿರ್ದಿಷ್ಟವಾಗಿ ಸರ್ಕಾರಿ ನೌಕರರ ವೇತನ, ಬಡ್ತಿ ವಿವಾದಗಳು ಹಾಗೂ ಭೂ ಸ್ವಾಧೀನ ಪರಿಹಾರಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಮೊದಲ ಆದ್ಯತೆಯ ಮೇಲೆ ಪರಿಶೀಲಿಸಲು ಅವರು ಸೂಚನೆ ನೀಡಿದರು.

ಜಾಗೃತಿ - ಸಮಾಲೋಚನೆಗೆ ಆದ್ಯತೆ

ಕೇವಲ ಸರ್ಕಾರಿ ಮಟ್ಟದಲ್ಲಿ ಚರ್ಚಿಸಿದರೆ ಸಾಲದು, ಪ್ರಕರಣಗಳನ್ನು ದಾಖಲಿಸಿರುವ ಸಾರ್ವಜನಿಕರಿಗೂ ಲೋಕ್ ಅದಾಲತ್‌ನ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಡಾ. ಶಾಲಿನಿ ರಜನೀಶ್ ಕರೆ ನೀಡಿದರು. ಪ್ರಕರಣಗಳಲ್ಲಿ ಭಾಗಿಯಾಗಿರುವ ಎರಡೂ ಕಡೆಯ ವಕೀಲರೊಂದಿಗೆ ಪ್ರಾಥಮಿಕ ಸಭೆಗಳನ್ನು ನಡೆಸಿ, ನ್ಯಾಯಾಲಯದ ಹೊರಗೆ ಪ್ರಕರಣ ಬಗೆಹರಿಸಿಕೊಳ್ಳುವುದರಿಂದ ಸಮಯ ಮತ್ತು ಹಣದ ಉಳಿತಾಯವಾಗಲಿದೆ ಎಂಬ ವಿಷಯವನ್ನು ವಾದಿಗಳ ಗಮನಕ್ಕೆ ತರಬೇಕು. ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣಗಳು ಅನಿವಾರ್ಯವಾಗಿ ದೀರ್ಘಕಾಲದವರೆಗೆ ಸಾಗುತ್ತವೆ, ಆದರೆ ಲೋಕ್ ಅದಾಲತ್ ಮೂಲಕ ಅವುಗಳಿಗೆ ತಕ್ಷಣದ ಪರಿಹಾರ ದೊರೆಯುತ್ತದೆ ಎಂದು ವಿವರಿಸಿದರು.

ಸಮನ್ವಯತೆ ಮತ್ತು ಕಾನೂನಾತ್ಮಕ ನೆರವು

ಪ್ರತಿಯೊಂದು ಇಲಾಖೆಯೂ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಬದಲು, ಕಾನೂನು ಸೇವೆಗಳ ಪ್ರಾಧಿಕಾರ, ಸಂಬಂಧಪಟ್ಟ ಇಲಾಖಾ ಸಚಿವರು, ಮುಖ್ಯಮಂತ್ರಿಗಳ ಕಚೇರಿ ಹಾಗೂ ಹಣಕಾಸು ಇಲಾಖೆಯೊಂದಿಗೆ ಸೂಕ್ತ ಸಮನ್ವಯ ಸಾಧಿಸಬೇಕೆಂದು ಮುಖ್ಯ ಕಾರ್ಯದರ್ಶಿ ತಿಳಿಸಿದರು. ಹಣಕಾಸಿನ ವಿಷಯಗಳೊಂದಿಗೆ ಸಂಬಂಧ ಹೊಂದಿರುವ ಪ್ರಕರಣಗಳಲ್ಲಿ ಯಾವುದೇ ತಪ್ಪು ನಿರ್ಧಾರಗಳಾಗದಂತೆ ಎಚ್ಚರ ವಹಿಸುವುದು ಮತ್ತು ಅಡ್ವೋಕೇಟ್ ಜನರಲ್ ಅವರ ಸಲಹೆಯನ್ನು ಪಡೆದು ಮುಂದುವರಿಯುವುದು ಮುಖ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಸರ್ವೋಚ್ಚ ನ್ಯಾಯಾಲಯವು ಈಗಾಗಲೇ ಇತ್ಯರ್ಥಪಡಿಸಬಹುದಾದ ಪ್ರಕರಣಗಳ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ. ಈ ಪಟ್ಟಿಯಲ್ಲಿ ಇಲ್ಲದಿದ್ದರೂ, ಯಾವುದಾದರೂ ಪ್ರಕರಣಗಳು ಸೌಹಾರ್ದಯುತವಾಗಿ ಬಗೆಹರಿಯುವಂತಿದ್ದರೆ ಅಂತಹವುಗಳನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಿ ಚರ್ಚಿಸಲು ಸಿದ್ಧರಾಗಿರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

Read More
Next Story