ನ್ಯಾಯಾಧೀಶರ ದುರಾಸೆ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಬೇಸರ
x

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ 

ನ್ಯಾಯಾಧೀಶರ ದುರಾಸೆ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಬೇಸರ

ನ್ಯಾಯಾಧೀಶರು ಬಾಹ್ಯ ಒತ್ತಡಗಳಿಂದ ಅಥವಾ ತಮ್ಮದೇ ಸಹೋದ್ಯೋಗಿಗಳಿಂದಲೂ ಒತ್ತಡ ಎದುರಿಸಬಹುದು. ಆದರೆ, ಅಂತಹ ಯಾವುದೇ "ಬಾಹ್ಯ ಒತ್ತಡಗಳಿಂದ" ಮುಕ್ತರಾಗಿರಬೇಕು ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ತಿಳಿಸಿದ್ದಾರೆ.


Click the Play button to hear this message in audio format

ನ್ಯಾಯಾಧೀಶರು ದುರಾಸೆ ಮತ್ತು ಬಾಹ್ಯ ಒತ್ತಡಗಳಿಗೆ ಮಣಿಯಬಾರದು ಎಂದು ಎಚ್ಚರಿಸಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ಮತ್ತು ಜಿಲ್ಲಾ ನ್ಯಾಯಾಂಗಕ್ಕೆ ಹೈಕೋರ್ಟ್‌ನಿಂದ ಹೆಚ್ಚಿನ ಬೆಂಬಲ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ (ಏಪ್ರಿಲ್ 18) ನಡೆದ 'ಕೃತಕ ಬುದ್ಧಿಮತ್ತೆಯ (AI) ಯುಗದಲ್ಲಿ ನ್ಯಾಯಾಂಗದ ಮರುಕಲ್ಪನೆ' ಎಂಬ ವಿಷಯದ ಕುರಿತ 22ನೇ ದ್ವೈವಾರ್ಷಿಕ ರಾಜ್ಯಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ನ್ಯಾಯಾಧೀಶರು ತಮ್ಮ ಆದಾಯದ ಮೂಲದೊಳಗೆ ಜೀವಿಸಲು ಸಾಧ್ಯವಾಗದೆ ದುರಾಸೆ ಮತ್ತು ಪ್ರಲೋಭನೆಗೆ ಬಲಿಯಾದರೆ, ಅಂಥವರನ್ನು ವ್ಯವಸ್ಥೆಯಿಂದ "ಕಿತ್ತುಹಾಕಬೇಕು" ಎಂದು ಕಟ್ಟುನಿಟ್ಟಾಗಿ ಎಚ್ಚರಿಸಿದರು.

ಸಂಬಳ ಏರಿಕೆಯ ಬಳಿಕವೂ ದುರಾಸೆ ಸರಿಯಲ್ಲ

ಜಿಲ್ಲಾ ನ್ಯಾಯಾಂಗದ ನ್ಯಾಯಾಧೀಶರ ವೇತನ ಮತ್ತು ಭತ್ಯೆಗಳ ಹೆಚ್ಚಳದ ಕುರಿತ 2ನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗದ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಇದರ ಪರಿಣಾಮವಾಗಿ ವೇತನ ಮತ್ತು ಭತ್ಯೆಗಳಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಹೀಗಿದ್ದೂ, ನ್ಯಾಯಾಧೀಶರು ದುರಾಸೆಗೆ ಬಲಿಯಾಗುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಾಧೀಶರು ಬಾಹ್ಯ ಒತ್ತಡಗಳಿಂದ ಅಥವಾ ತಮ್ಮದೇ ಸಹೋದ್ಯೋಗಿಗಳಿಂದಲೂ ಒತ್ತಡ ಎದುರಿಸಬಹುದು. ಆದರೆ, ಅಂತಹ ಯಾವುದೇ "ಬಾಹ್ಯ ಒತ್ತಡಗಳಿಂದ" ಮುಕ್ತರಾಗಿರಬೇಕು. ನ್ಯಾಯಾಧೀಶರು ಧೈರ್ಯ ಮತ್ತು ಸ್ವಾತಂತ್ರ್ಯವನ್ನು ಮೈಗೂಡಿಸಿಕೊಳ್ಳಬೇಕು. ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಾವುದೇ "ಹೊಂದಾಣಿಕೆ" ಇರಬಾರದು. ನ್ಯಾಯಾಧೀಶರ ಕಳಂಕಿತ ನಿರ್ಧಾರವು ಆ ನ್ಯಾಯಾಧೀಶರಿಗೆ ಮತ್ತು ಇಡೀ ನ್ಯಾಯಾಂಗ ವ್ಯವಸ್ಥೆಗೇ ಅಂಟಿದ ಕಪ್ಪುಚುಕ್ಕೆಯಾಗುತ್ತದೆ ಎಂದು ಎಚ್ಚರಿಸಿದರು. ಹಾಗಾಗಿ, ದಾವೆ ಹೂಡುವ ಸಾರ್ವಜನಿಕರಿಗೆ ಮತ್ತು ರಾಷ್ಟ್ರಕ್ಕೆ ನಮ್ಮ ಕರ್ತವ್ಯದ ಅರಿವು ಮತ್ತು ಪ್ರಜ್ಞೆ ಇರಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ನ್ಯಾಯಾಂಗಕ್ಕೆ ಹೈಕೋರ್ಟ್ ಬೆಂಬಲ ಅಗತ್ಯ

ಸಂವಿಧಾನದ 235ನೇ ವಿಧಿಯ ಅಡಿಯಲ್ಲಿ ಸಾಂಸ್ಥಿಕ ನಿಯಂತ್ರಣದ ಬಗ್ಗೆ ಮಾತನಾಡಿದ ಅವರು, ಹೈಕೋರ್ಟ್‌ಗಳು ತಮ್ಮ ಆಡಳಿತಾತ್ಮಕ ಕಾರ್ಯಗಳಲ್ಲಿ ನ್ಯಾಯಸಮ್ಮತವಾಗಿರಬೇಕು ಎಂದರು. ಜಿಲ್ಲಾ ನ್ಯಾಯಾಂಗದಲ್ಲಿ ಬಡ್ತಿ, ಪೋಸ್ಟಿಂಗ್ ಮತ್ತು ವರ್ಗಾವಣೆಗಳನ್ನು ಹೈಕೋರ್ಟ್‌ಗಳು ನಿರ್ವಹಿಸುವ ರೀತಿಯಲ್ಲಿ ಸ್ಥಿರತೆಯ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಜಿಲ್ಲಾ ಮಟ್ಟದ ನ್ಯಾಯಾಧೀಶರ ಸ್ವಾತಂತ್ರ್ಯ ಮತ್ತು ನೈತಿಕ ಸ್ಥೈರ್ಯವನ್ನು ಕಾಪಾಡಲು ಹೈಕೋರ್ಟ್‌ಗಳಿಂದ ನ್ಯಾಯಸಮ್ಮತ, ಪಾರದರ್ಶಕ ಮತ್ತು ಸ್ಪಂದಿಸುವ ಆಡಳಿತ ಅತ್ಯಗತ್ಯ. ಹೈಕೋರ್ಟ್‌ನ ರಿಜಿಸ್ಟ್ರಿಯು ಜಿಲ್ಲಾ ನ್ಯಾಯಾಂಗದ ಕುರಿತು ತೆಗೆದುಕೊಳ್ಳುವ ನಿರ್ಧಾರಗಳು ಸಹ ನ್ಯಾಯಸಮ್ಮತವಾಗಿರಬೇಕು. ಹೈಕೋರ್ಟ್ ರಿಜಿಸ್ಟ್ರಿಯು ಸೂಕ್ತ ಸಮಯದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದ ಕಾರಣಕ್ಕೆ ಯಾವುದೇ ನ್ಯಾಯಾಂಗ ಅಧಿಕಾರಿ ತನಗೆ ಅನ್ಯಾಯವಾಗಿದೆ ಎಂದು ಭಾವಿಸಬಾರದು ಮತ್ತು ಹೈಕೋರ್ಟ್‌ಗಳು ಜಿಲ್ಲಾ ನ್ಯಾಯಾಧೀಶರ ರಕ್ಷಕರಂತೆ ಕಾರ್ಯನಿರ್ವಹಿಸಬೇಕು ಎಂದು ಅವರು ಪ್ರತಿಪಾದಿಸಿದರು.

Read More
Next Story